AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಹುಬಲಿ’ ದಾಖಲೆಯನ್ನೇ ಮುರಿದ ‘ಮಹಾರಾಜ’

Maharaja Movie: ಕಡಿಮೆ ಬಜೆಟ್​ನಲ್ಲಿ ನಿರ್ಮಾಣ ಮಾಡಿದ ಸಿನಿಮಾ ‘ಮಹಾರಾಜ’ ಸಿನಿಮಾ ‘ಬಾಹುಬಲಿ 2’ ಸಿನಿಮಾದ ದಾಖಲೆಯನ್ನೇ ಮುರಿದು ಬಿಸಾಡಿದೆ. ‘ಪುಷ್ಪ 2’, ‘ಕೆಜಿಎಫ್ 2’ ಸಿನಿಮಾಗಳಿಗೂ ಸಾಧ್ಯವಾಗದ ದಾಖಲೆಯೊಂದನ್ನು ‘ಮಹಾರಾಜ’ ಸಿನಿಮಾ ಮಾಡಿದೆ. ‘ಮಹಾರಾಜ’ ಸಿನಿಮಾ ಮಾಡಿರುವ ದಾಖಲೆ ಏನು? ಇಲ್ಲಿದೆ ಮಾಹಿತಿ

‘ಬಾಹುಬಲಿ’ ದಾಖಲೆಯನ್ನೇ ಮುರಿದ ‘ಮಹಾರಾಜ’
Maharaja Bahubali 2
ಮಂಜುನಾಥ ಸಿ.
|

Updated on:Dec 20, 2024 | 5:15 PM

Share

ಕೋವಿಡ್ ಬಳಿಕ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ಹಲವು ಸಿನಿಮಾಗಳು ಸಾವಿರ ಕೋಟಿಗೂ ದೊಡ್ಡ ಕಲೆಕ್ಷನ್ ಮಾಡಿವೆ. ಇತ್ತೀಚೆಗೆ ಬಿಡುಗಡೆ ಆದ ‘ಪುಷ್ಪ 2’ ಸಿನಿಮಾ ಕೇವಲ ಐದು ದಿನದಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡಿದೆ. ಕೊವಿಡ್ ಬಳಿಕ ಸಿನಿಮಾಗಳ ಗಳಿಕೆಯಲ್ಲಿ ಹೆಚ್ಚಳವಾಗಿದೆ. ಸಿನಿಮಾ ಟಿಕೆಟ್ ದರಗಳು ಸಹ ಹೆಚ್ಚಾಗಿವೆ. ಏನೇ ಆದರೂ ಸಹ ಭಾರತದಲ್ಲಿ ಅತಿಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ‘ದಂಗಲ್’ ಎರಡನೇ ಸ್ಥಾನದಲ್ಲಿ ‘ಬಾಹುಬಲಿ 2’ ಸಿನಿಮಾಗಳಿವೆ. ಈ ಸಿನಿಮಾಗಳು ಬಿಡುಗಡೆ ಆಗಿ ವರ್ಷಗಳಾಗಿದ್ದರೂ ಸಹ ಈಗಲೂ ಈ ಸಿನಿಮಾದ ದಾಖಲೆಯನ್ನು ಯಾವ ಸಿನಿಮಾಗಳಿಗೂ ಮುರಿಯಲು ಸಾಧ್ಯವಾಗಿಲ್ಲ. ಆದರೆ ಇದೀಗ ತೀರ ಸಣ್ಣ ಬಜೆಟ್​ನ ಸಿನಿಮಾ ಒಂದು ‘ಬಾಹುಬಲಿ’ ಸಿನಿಮಾದ ದಾಖಲೆ ಮುರಿದಿದೆ.

ಕೇವಲ 20 ಕೋಟಿ ಬಜೆಟ್​ನಲ್ಲಿ ನಿರ್ಮಾಣ ಮಾಡಲಾಗಿರುವ ತಮಿಳಿನ ‘ಮಹಾರಾಜ’ ಸಿನಿಮಾ ಇದೀಗ ‘ಬಾಹುಬಲಿ’ ಸಿನಿಮಾದ ದಾಖಲೆಯನ್ನೇ ಮುರಿದು ಹಾಕಿದೆ. ಹಾಗೆಂದು ಈ ಸಿನಿಮಾ ‘ಬಾಹುಬಲಿ 2’ ಸಿನಿಮಾದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆ ಮುರಿದಿಲ್ಲ. ಬದಲಿಗೆ ವಿದೇಶದಲ್ಲಿ ವಿಶೇಷವಾಗಿ ಒಂದು ನಿಗದಿತ ದೇಶದಲ್ಲಿ ‘ಬಾಹುಬಲಿ 2’ ಸಿನಿಮಾದ ಕಲೆಕ್ಷನ್ ಅನ್ನು ಮೀರಿಸಿದೆ.

‘ಮಹಾರಾಜ’ ಸಿನಿಮಾ ಇದೇ ವರ್ಷ ಜೂನ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ತನ್ನ ಅತ್ಯುತ್ತಮ ಕತೆ, ನಿರೂಪಣಾ ವಿಧಾನ ಮತ್ತು ನಟರ ಅಭಿನಯದಿಂದ ಸೆಳೆದಿತ್ತು. ಭಾರತದಲ್ಲಿ ಈ ಸಿನಿಮಾ 180 ಕೋಟಿಗೂ ಹೆಚ್ಚು ಹಣ ಆಗಲೇ ಗಳಿಸಿತ್ತು. ಈ ಸಿನಿಮಾ ಕೆಲ ದಿನಗಳ ಹಿಂದೆಯಷ್ಟೆ ಚೀನಾದಲ್ಲಿ ಬಿಡುಗಡೆ ಆಗಿದ್ದು, ಅಲ್ಲಿಯೂ ಸಹ ಅದ್ಭುತ ಪ್ರದರ್ಶನ ಕಾಣುತ್ತಿದೆ. ಚೀನಾದಲ್ಲಿ ಪ್ರೇಕ್ಷಕರಿಗೆ ‘ಮಹಾರಾಜ’ ಸಿನಿಮಾ ಬಹಳ ಇಷ್ಟವಾಗಿದೆ. ಸಿನಿಮಾ ಚೀನಾದಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ:ಚೀನಾದಲ್ಲೂ ‘ಮಹಾರಾಜ’ ಸಿನಿಮಾಗೆ ಜನರು ಫಿದಾ; ವಿಜಯ್ ಸೇತುಪತಿ ಚಿತ್ರಕ್ಕೆ ಭಾರಿ ಕಲೆಕ್ಷನ್​

ಚೀನಾ ಬಾಕ್ಸ್ ಆಫೀಸ್​ನಲ್ಲಿ ‘ಮಹಾರಾಜ’ ಸಿನಿಮಾ ಕೆಲವೇ ದಿನಗಳಲ್ಲಿ 76.50 ಕೋಟಿ ರೂಪಾಯಿ ಹಣ ಗಳಿಸಿದೆ. ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಸಿನಿಮಾ ಚೀನಾ ಮಾರುಕಟ್ಟೆಯಲ್ಲಿ 64 ಕೋಟಿ ರೂಪಾಯಿ ಹಣ ಗಳಿಸಿತ್ತು. ಇದೀಗ ‘ಬಾಹುಬಲಿ 2’ ಸಿನಿಮಾದ ದಾಖಲೆ ಮುರಿದಿರುವ ‘ಮಹಾರಾಜ’ ಸಿನಿಮಾ ಚೀನಾ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿ ಹಣ ಗಳಿಸುವ ಭರವಸೆ ಮೂಡಿಸಿದೆ. ಮಾತ್ರವಲ್ಲದೆ ‘ದಂಗಲ್’ ಸಿನಿಮಾದ ದಾಖಲೆಯನ್ನು ಸಹ ಮುರಿಯುವ ಸುಳಿವು ನೀಡಿದೆ.

‘ಮಹಾರಾಜ’ ಸಿನಿಮಾದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಾನು ಬಹಳ ಇಷ್ಟಪಟ್ಟಿದ್ದ ಕಸ ಹಾಕುವ ಡಬ್ಬ ಕಳೆದುಕೊಂಡು ಅದನ್ನು ಹುಡುಕಾಡುವ ವ್ಯಕ್ತಿಯ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದಾರೆ. ಸಿನಿಮಾದ ವಿಲನ್ ಅಗಿ ಬಾಲಿವುಡ್​ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ನಿತಿಲನ್ ಸ್ವಾಮಿನಾಥನ್. ಕೇವಲ 20 ಕೋಟಿ ಬಜೆಟ್​ನಲ್ಲಿ ನಿರ್ಮಿಸಲಾದ ಈ ಸಿನಿಮಾ ಈಗಾಗಲೇ 250 ಕೋಟಿಗೂ ಹೆಚ್ಚು ಹಣ ಗಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Fri, 20 December 24