
‘ಮಹಾರಾಜ’ ಸಿನಿಮಾ ನೋಡಿ ಫಿದಾ ಆದ ಆಸ್ಕರ್ ವಿಜೇತ ಹಾಲಿವುಡ್ ಸ್ಟಾರ್ಒಳ್ಳೆಯ ಕಥೆಗೆ ದೇಶ, ಭಾಷೆ, ಸಮುದಾಯ ಯಾವುದರ ಗಡಿಯೂ ಇಲ್ಲ ಎಂಬುದು ‘ಮಹಾರಾಜ’ ಸಿನಿಮಾ ಮೂಲಕ ಮತ್ತೆ ಸಾಬೀತಾಗಿದೆ. ಚೆನ್ನೈನ ಒಬ್ಬ ಕ್ಷೌರಿಕನ ಕಥೆಯುಳ್ಳ ತಮಿಳು ಸಿನಿಮಾ ‘ಮಹಾರಾಜ’ ಗಡಿಗಳನ್ನು ದಾಟಿ ವಿದೇಶಗಳಲ್ಲೂ ಭಾರಿ ಜನಪ್ರಿಯತೆ ಗಳಿಸಿದೆ. ಅದ್ಯಾವ ಮಟ್ಟಿಗೆ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದಿದೆ ಎಂದರೆ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದು ಹಾಲಿವುಡ್ನ ಸ್ಟಾರ್ ನಟ ಎನಿಸಿಕೊಂಡಿರುವ ಟಾಮ್ ಹ್ಯಾಂಕ್ಸ್ ಸಹ ‘ಮಹಾರಾಜ’ ಸಿನಿಮಾ ನೋಡಿ ಫಿದಾ ಆಗಿಬಿಟ್ಟಿದ್ದಾರೆ.
‘ಫಾರೆಸ್ಟ್ ಗಂಪ್’, ‘ದಿ ಗ್ರೀನ್ ಮೈಲ್’, ‘ಕಾಸ್ಟ್ ಅವೇ’, ‘ಸೇವಿಂಗ್ ಪ್ರೈವೇಟ್ ರಿಯಾನ್’, ‘ದಿ ಟರ್ಮಿನಲ್’, ‘ಎ ಮ್ಯಾನ್ ಕಾಲ್ಡ್ ಒಟ್ಟೊ’, ‘ಫಿಲಡೆಲ್ಫಿಯಾ’, ‘ಕ್ಯಾಪ್ಟನ್ ಫಿಲಿಪ್ಸ್’, ‘ಸಲ್ಲಿ’ ಹೀಗೆ ಹಲವಾರು ಹಾಲಿವುಡ್ ಬ್ಲಾಕ್ ಬಸ್ಟರ್ ಮತ್ತು ಆಸ್ಕರ್ ವಿಜೇತ ಸಿನಿಮಾಗಳಲ್ಲಿ ನಟನೆ ಮಾಡಿರುವ ಟಾಮ್ ಹ್ಯಾಂಕ್ಸ್ ಇದೀಗ ತಮಿಳು ಸಿನಿಮಾ ‘ಮಹಾರಾಜ’ ವೀಕ್ಷಿಸಿ ಕೊಂಡಾಡಿದ್ದಾರೆ. ಯಾವ ಮಟ್ಟಿಗೆಂದರೆ ಸಿನಿಮಾ ನೋಡಿದ ಬಳಿಕ ನನಗೆ ಅದರ ಪ್ರಭಾವದಿಂದ ಹೊರಬರಲು ಆಗುತ್ತಿಲ್ಲ ಎಂದಿದ್ದಾರೆ ನಟ.
ಇಂಟರ್‌ನ್ಯಾಷನಲ್ ಅಕಾಡೆಮಿ ಆಫ್ ಟೆಲಿವಿಷನ್ ಆರ್ಟ್ಸ್ ಅಂಡ್ ಸೈನ್ಸಸ್‌ನ (ಎಮ್ಮಿ ಪ್ರಶಸ್ತಿ ಸಮಿತಿ) ಸದಸ್ಯೆ ಕವಿತಾ ಗುಪ್ತಾ ಈ ಸ್ವಾರಸ್ಯಕರ ಘಟನೆಯನ್ನು ಹಂಚಿಕೊಂಡಿದ್ದಾರೆ. ನವೆಂಬರ್ 24ರಂದು ನಡೆದ ಇಂಟರ್‌ನ್ಯಾಷನಲ್ ಎಮ್ಮಿ ಪ್ರಶಸ್ತಿ ಸಮಾರಂಭದಲ್ಲಿ ವಿಜಯ್ ಸೇತುಪತಿ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ, ಅವರೊಂದಿಗೆ ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ಕವಿತಾ ಈ ವಿಷಯ ಬಹಿರಂಗಪಡಿಸಿದರು. ಸೇತುಪತಿ ಅವರನ್ನು ಸಮಾರಂಭಕ್ಕೆ ಆಹ್ವಾನಿಸುವಲ್ಲಿಯೂ ಕವಿತಾ ಪಾತ್ರ ವಹಿಸಿದ್ದರು. ‘ಮಹಾರಾಜ’ ಬಗ್ಗೆ ಹಾಲಿವುಡ್ ದಿಗ್ಗಜ ಟಾಮ್ ಹ್ಯಾಂಕ್ಸ್ ಕೂಡ ಮಾತನಾಡಿದ್ದು, ಸಚನಾ ನಮಿದಾಸ್ ಅವರನ್ನು ‘ಅದ್ಭುತ ನಟಿ’ ಎಂದು ಹೊಗಳಿದ್ದಾರೆ ಎಂದಿದ್ದಾರೆ.
ಈ ವರ್ಷದ ಆರಂಭದಲ್ಲಿ LACMA ಗಾಲಾ ಕಾರ್ಯಕ್ರಮವೊಂದರಲ್ಲಿ ಟಾಮ್ ಹ್ಯಾಂಕ್ಸ್ ಅವರನ್ನು ಭೇಟಿಯಾದಾಗ, ನೋಡಬೇಕಾದ ಮೂರು ಭಾರತೀಯ ಸಿನಿಮಾಗಳನ್ನು ಸೂಚಿಸುವಂತೆ ಹ್ಯಾಂಕ್ಸ್ ಕವಿತಾ ಅವರನ್ನು ಕೇಳಿದ್ದರಂತೆ. ಆ ಪಟ್ಟಿಯಲ್ಲಿ ಕವಿತಾ ‘ಮಹಾರಾಜ’ ಅನ್ನೂ ಸೇರಿಸಿದ್ದರು. ಕೆಲವು ವಾರಗಳ ನಂತರ, ನವೆಂಬರ್ 7ರಂದು ನಡೆದ ಎರಡನೇ LACMA ಆರ್ಟ್ ಅಂಡ್ ಫಿಲ್ಮ್ ಗಾಲಾದಲ್ಲಿ ಮತ್ತೆ ಭೇಟಿಯಾದಾಗ, ಹ್ಯಾಂಕ್ಸ್ ತಾವಾಗಿಯೇ ಕವಿತಾ ಅವರ ಬಳಿ ‘ಮಹಾರಾಜ’ ಸಿನಿಮಾ ಬಗ್ಗೆ ಮಾತು ಆರಂಭಿಸಿದರು.
‘ನನ್ನನ್ನು ನೋಡಿದ ತಕ್ಷಣ ಅವರು ಹೇಳಿದ ಮೊದಲ ಮಾತು – ‘ಆ ಹುಡುಗಿಯನ್ನು ನಾನು ಇನ್ನೂ ಮರೆಯಲು ಆಗುತ್ತಿಲ್ಲ… ಎಂಥಾ ಅದ್ಭುತ ನಟಿ! ಆ ಜಾಗದಲ್ಲಿ ನಾನಿದ್ದರೆ ತಡೆದುಕೊಳ್ಳುತ್ತಿರಲಿಲ್ಲ, ಆ ವ್ಯಕ್ತಿಯನ್ನು ಕೊಂದೇ ಬಿಡುತ್ತಿದ್ದೆ’ ಎಂದು ಹ್ಯಾಂಕ್ಸ್ ಹೇಳಿದ್ದನ್ನು ಕವಿತಾ ನೆನಪಿಸಿಕೊಂಡಿದ್ದಾರೆ.
ಇದೀಗ ‘ಮಹಾರಾಜ’ ಸಿನಿಮಾ ಹಾಲಿವುಡ್ಗೆ ರೀಮೇಕ್ ಆಗುತ್ತಿದೆ. ಆಸ್ಕರ್ ವಿಜೇತ ನಟ ಮ್ಯಾಥ್ಯೂ ಮೆಕಾನ್ಹೇ ರೀಮೇಕ್ನಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರುವ ನಟ ವಿಜಯ್ ಸೇತುಪತಿ, ‘ಹಾಲಿವುಡ್ ರೀಮೇಕ್ನಲ್ಲಿ ಯಾವುದಾದರೂ ಒಂದು ಪಾತ್ರದಲ್ಲಿ ನಟನೆ ಮಾಡುವ ಆಸೆ ನನಗೆ ಇದೆ. ಈ ಬಗ್ಗೆ ನಾನು ನಿರ್ಮಾಪಕರಿಗೆ ಹೇಳಿದ್ದೇನೆ’ ಎಂದಿದ್ದಾರೆ.
ನಿಥಿಲನ್ ಸಾಮಿನಾಥನ್ ನಿರ್ದೇಶನ ಮಾಡಿದ ‘ಮಹಾರಾಜ’ ಸಿನಿಮಾ 2024ರಲ್ಲಿ ರಿಲೀಸ್ ಆಗಿತ್ತು. ಸಿನಿಮಾದಲ್ಲಿ ವಿಜಯ್ ಸೇತುಪತಿ ನಾಯಕ, ಬಾಲಿವುಡ್ ನಟ ಅನುರಾಗ್ ಕಶ್ಯಪ್ ವಿಲನ್. ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಭಾರತದಲ್ಲಿ ಮಾತ್ರವೇ ಅಲ್ಲದೆ ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ