ಜನವರಿ 15ಕ್ಕೆ ಬಿಡುಗಡೆ ಆಗಲಿದೆ ಅಜಯ್ ರಾವ್ ನಟನೆಯ ‘ಪಾರ್ಟ್ನರ್’ ಸಿನಿಮಾ
2027ರ ಆರಂಭದಲ್ಲಿ ಒಂದಷ್ಟು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗಲಿವೆ. ಕನ್ನಡದಲ್ಲಿ ಕೂಡ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಆ ಪೈಕಿ ‘ಪಾರ್ಟ್ನರ್’ ಸಿನಿಮಾ ಕೂಡ ಮುಂಚೂಣಿಯಲ್ಲಿದೆ. ಈ ಸಿನಿಮಾದಲ್ಲಿ ಕೃಷ್ಣ ಅಜಯ್ ರಾವ್ ಮತ್ತು ಬೃಂದಾ ಆಚಾರ್ಯ ಅವರು ಜೋಡಿಯಾಗಿ ನಟಿಸಿದ್ದಾರೆ.

ನಟ ಕೃಷ್ಣ ಅಜಯ್ ರಾವ್ ಅವರ ಸಿನಿಮಾಗಳನ್ನು ಫ್ಯಾಮಿಲಿ ಪ್ರೇಕ್ಷಕರು ಇಷ್ಟಪಡುತ್ತಾರೆ. ‘ಎಕ್ಸ್ಕ್ಯೂಸ್ ಮೀ’ ಕಾಲದಿಂದಲೂ ಅವರು ಅಂತಹ ಭರವಸೆಯನ್ನು ಕಾಯ್ದುಕೊಂಡು ಬಂದಿದ್ದಾರೆ. ಇನ್ನು, ಅವರ ಸಿನಿಮಾಗಳಲ್ಲಿ ಹಾಡುಗಳು ಕೂಡ ಸುಮಧುರವಾಗಿರುತ್ತವೆ. ಈಗ ಕೃಷ್ಣ ಅಜಯ್ ರಾವ್ ಅವರು ನಟಿಸಿರುವ ‘ಪಾರ್ಟ್ನರ್’ ಸಿನಿಮಾ ಕೂಡ ಅದೇ ಕಾರಣಕ್ಕೆ ಸದ್ದು ಮಾಡುತ್ತಿದೆ. ಈ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. 2027ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 15ರಂದು ಚಿತ್ರ ತೆರೆಕಾಣಲಿದೆ.
ಶಿವತೇಜಸ್ ಅವರು ‘ಪಾರ್ಟ್ನರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕೃಷ್ಣ ಅಜಯ್ ರಾವ್ ಜೊತೆ ಬೃಂದಾ ಆಚಾರ್ಯ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅಲ್ಲದೇ, ಸುಷ್ಮಿತಾ ಗೌಡ, ರಂಗಾಯಣ ರಘು, ಗಿರಿ, ಗೌರವ್ ಶೆಟ್ಟಿ, ಮನೋಹರಾ, ಅರವಿಂದ್ ರಾವ್, ಚಿತ್ಕಲಾ, ಶ್ರೀಭವ್ಯಾ, ಮಧುಮಿತಾ, ಸಾತ್ವಿಕಾ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
View this post on Instagram
‘ಪಾರ್ಟ್ನರ್’ ಚಿತ್ರಕ್ಕೆ ನಕುಲ್ ಅಭ್ಯಂಕರ್ ಅವರು ಸಂಗೀತ ಸಂಯೋಜಿಸಿದ್ದಾರೆ. ‘ಅಮೋರಾ ಅಮೋರಾ..’ ಹಾಡಿನ ಮೂಲಕ ಅವರು ಕ್ರೇಜ್ ಹೆಚ್ಚಿಸಿದ್ದಾರೆ. ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಈಗಾಗಲೇ ಟ್ರೆಂಡ್ ಆಗಿದೆ. ಇದರಲ್ಲಿ ಅಜಯ್ ರಾವ್ ಮತ್ತು ಬೃಂದಾ ಆಚಾರ್ಯಾ ಅವರ ಕಾಂಬಿನೇಷನ್ ನೋಡಿ ಜನರು ಇಷ್ಟಪಟ್ಟಿದ್ದಾರೆ.
‘ಅಮೋರಾ ಅಮೋರಾ..’ ಹಾಡು ವೈರಲ್ ಆದ ಬಳಿಕ ‘ಪಾರ್ಟ್ನರ್’ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡುವಂತಾಗಿದೆ. ಕುನಾಲ್ ಗಾಂಜಾವಾಲಾ ಅವರ ಮ್ಯಾಜಿಕಲ್ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಮುರಳಿ ಮಾಸ್ಟರ್ ಅವರ ಕೋರಿಯೋಗ್ರಫಿ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಹಾಡಿಗೆ ಡ್ಯಾನ್ಸ್ ಮಾಡಿ ಖುಷಿಪಡುತ್ತಿದ್ದಾರೆ. ಸಿನಿಮಾ ಬಿಡುಗಡೆ ಆದಾಗ ಚಿತ್ರಮಂದಿರದಲ್ಲಿ ಈ ಹಾಡಿನ ಕ್ರೇಜ್ ಇನ್ನಷ್ಟು ಹೆಚ್ಚಲಿದೆ.
ಇದನ್ನೂ ಓದಿ: ‘ಪಾರ್ಟ್ನರ್’ ಚಿತ್ರದ ‘ಅಮೋರಾ’ ಹಾಡಿನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ಅಜಯ್ ರಾವ್, ಬೃಂದಾ
ಈ ಸಿನಿಮಾವನ್ನು ಹರೀಶ್ ದೇವಿತಂದ್ರೆ ಅವರು ನಿರ್ಮಾಣ ಮಾಡಿದ್ದಾರೆ. ‘ಅಮೋರಾ ಅಮೋರಾ..’ ಹಾಡು 3.4 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆ ಕಂಡಿರುವುದು ಚಿತ್ರತಂಡದ ಭರವಸೆಯನ್ನು ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಜೆನ್-ಝಿ ಯುವಕ-ಯುವತಿಯರ ಜೀವನ ಶೈಲಿ, ಲವ್, ಬ್ರೇಕಪ್, ಲಿವ್-ಇನ್-ರಿಲೇಶನ್ಶಿಪ್ ಸುತ್ತ ಸಾಗುವ ಕಥೆಯನ್ನು ತೋರಿಸಲಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




