ರಾಜಕೀಯದ ಹಿನ್ನೆಲೆಯನ್ನು ಆಧರಿಸಿ ಸಿನಿಮಾ ಮಾಡಿದಾಗಲೆಲ್ಲ ವಿವಾದ ಭುಗಿಲೇಳುವುದು ಸಹಜ. ಆಕ್ಷೇಪಾರ್ಹ ಅಂಶಗಳಿರುವ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೂಡ ಕೆಲವೊಮ್ಮೆ ಕೇಳಿಬರುತ್ತದೆ. ಈಗ ‘Why I killed Gandhi’ (ನಾನೇಕೆ ಗಾಂಧಿಯನ್ನು ಕೊಂದೆ) ಸಿನಿಮಾಗೂ ಅದೇ ಪರಿಸ್ಥಿತಿ ಬಂದಿದೆ. ಈ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಈ ಚಿತ್ರದ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಯೇಷನ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಪತ್ರ ಬರೆಯಲಾಗಿದೆ. ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಈ ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ‘Why I killed Gandhi’ ಸಿನಿಮಾವನ್ನು ಒಟಿಟಿ ಮೂಲಕ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಈ ಸಿನಿಮಾದ ಪರವಾಗಿ ಮಾತನಾಡುತ್ತಿದ್ದಾರೆ. ಇನ್ನೂ ಕೆಲವರು ಈ ಚಿತ್ರವನ್ನು ನಿಷೇಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಸಂಸದ ಅಮೋಲ್ ಕೋಹ್ಲೆ (Amol Kolhe) ಅವರು ಈ ಸಿನಿಮಾದಲ್ಲಿ ನಾಥೂರಾಮ್ ಗೋಡ್ಸೆಯ (Nathuram Godse) ಪಾತ್ರನ್ನು ಮಾಡಿದ್ದಾರೆ.
1948ರ ಜ.30ರಂದು ಗಾಂಧೀಜಿ ಹತ್ಯೆ ಆಯಿತು. ನಾಥೂರಾಮ್ ಗೋಡ್ಸೆಯ ಗುಂಡೇಟಿಗೆ ಗಾಂಧಿ ಬಲಿಯಾದರು. ಆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಗೋಡ್ಸೆ ನೀಡಿದ ಹೇಳಿಕೆಗಳನ್ನೇ ಆಧರಿಸಿ ಈ ಸಿನಿಮಾ ತಯಾರಾಗಿದೆ. ‘ಗಾಂಧಿಯನ್ನು ಕೊಂದಿದ್ದು ನಾಥೂರಾಮ್ ಗೋಡ್ಸೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಹತ್ಯೆ ಮಾಡಿದ್ದಕ್ಕೆ ಕಾರಣ ಏನೆಂಬದು ಅನೇಕರಿಗೆ ತಿಳಿದಿಲ್ಲ. ಆ ಕುರಿತು ಈ ಸಿನಿಮಾದಲ್ಲಿ ಹೇಳಲಾಗಿದೆ’ ಎಂದು ‘Why I killed Gandhi’ ಚಿತ್ರತಂಡ ಹೇಳಿಕೊಂಡಿದೆ.
‘ಗಾಂಧೀಜಿ ಅವರನ್ನು ಇಡೀ ದೇಶ ಮತ್ತು ಪ್ರಪಂಚವೇ ಗೌರವಿಸುತ್ತದೆ. ಅವರ ಆದರ್ಶಗಳು ಪ್ರೀತಿ ಮತ್ತು ತ್ಯಾಗದ ಪ್ರತೀಕಗಳಾಗಿವೆ. ಅಂಥವರನ್ನು ಕೊಂದ ಗೋಡ್ಸೆಯನ್ನು ಹೀರೋ ರೀತಿಯಲ್ಲಿ ಬಿಂಬಿಸುವ ಈ ಸಿನಿಮಾವನ್ನು ನಿಷೇಧಿಸಬೇಕು. ಈ ದೇಶದಲ್ಲಿ ಗೋಡ್ಸೆಗೆ ಕಿಂಚಿತ್ತೂ ಗೌರವ ಸಲ್ಲಬೇಕಾಗಿಲ್ಲ. ಸಂವಿಧಾನದ ಪ್ರತಿಜ್ಞೆ ಮಾಡಿ ಸಂಸದ ಆಗಿರುವ ವ್ಯಕ್ತಿಯೇ ನಾಥೂರಾಮ್ ಗೋಡ್ಸೆಯ ಪಾತ್ರ ಮಾಡಿದ್ದಾರೆ. ಒಂದು ವೇಳೆ ಈ ಸಿನಿಮಾ ಬಿಡುಗಡೆಯಾದರೆ ಇಡೀ ದೇಶಕ್ಕೆ ಆಘಾತ ಆಗಲಿದೆ’ ಎಂದು ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಯೇಷನ್ ಕಡೆಯಿಂದ ಪ್ರಧಾನಿಗೆ ಬರೆಯಲಾದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಾಥೂರಾಮ್ ಗೋಡ್ಸೆ ಪಾತ್ರ ಮಾಡಿರುವ ಅಮೋಲ್ ಕೋಹ್ಲೆ ಅವರಿಗೆ ಅನೇಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಮರಾಠಿ ಚಿತ್ರರಂಗದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಹಿರಿಯ ಮುಂಖಡರು ಸಹ ಅವರನ್ನು ಟೀಕಿಸಿದ್ದಾರೆ. ಆದರೆ ಅವರು ಈ ಪಾತ್ರ ಮಾಡಿದ್ದರಲ್ಲಿ ತಪ್ಪಿಲ್ಲ ಎಂಬುದಾಗಿಯೂ ಕೆಲವರು ಹೇಳುತ್ತಿದ್ದಾರೆ. ಬಾಲಿವುಡ್ ನಟ ನಾನಾ ಪಾಟೇಕರ್ ಅವರು ಅಮೋಲ್ ಕೋಹ್ಲೆ ಪರವಾಗಿ ಮಾತನಾಡಿದ್ದಾರೆ. ಯಾವ ಪಾತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ ಎಂದು ನಾನಾ ಪಾಟೇಕರ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ‘Why I killed Gandhi’ ಚಿತ್ರಕ್ಕೆ ಹೆಚ್ಚು ವಿರೋಧ ವ್ಯಕ್ತವಾಗಿದೆ. ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮನವಿ ಸಲ್ಲಿಸುವುದಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.
ಇದನ್ನೂ ಓದಿ:
ಗಾಂಧಿ ಹತ್ಯೆಗೆ ಸ್ಕೆಚ್ ಹಾಕಿದ್ದೇ ವೀರ ಸಾವರ್ಕರ್ ಅಂತೆ! ವಿವಾದ ಎಬ್ಬಿಸಿದ ಸಿದ್ದು
ರಾಜೀವ್ ಗಾಂಧಿ ಗುಂಪು ಹತ್ಯೆಯ ಪಿತಾಮಹ; ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು