ಮಹೇಶ್ ಬಾಬು ಫ್ಯಾಮಿಲಿ ಟ್ರೀ: ಸ್ಟಾರ್ ನಟನ ಕುಟುಂಬದ ಬಗ್ಗೆ ನಿಮಗೆಷ್ಟು ಗೊತ್ತು?
ಮಹೇಶ್ ಬಾಬು ಅವರು ನಮ್ರತಾ ಶಿರೋಡ್ಕರ್ ಅವರನ್ನು 2005ರಲ್ಲಿ ಮದುವೆ ಆದರು. ಇವರಿಗೆ ಸಿತಾರಾ ಹಾಗೂ ಗೌತಮ್ ಹೆಸರಿನ ಮಕ್ಕಳಿದ್ದಾರೆ. ಸಿತಾರಾ ಚಿತ್ರರಂಗದ ಜೊತೆ ನಂಟು ಬೆಳೆಸಿಕೊಂಡಿದ್ದಾರೆ. ಮಹೇಶ್ ಬಾಬು ಅವರ ಕುಟುಂಬದ ಹಿನ್ನೆಲೆಯ ಬಗ್ಗೆ ಇಲ್ಲಿದೆ ವಿವರ.
ಮಹೇಶ್ ಬಾಬು (Mahesh Babu) ಅವರಿಗೆ ಇಂದು (ಆಗಸ್ಟ್ 9) ಜನ್ಮದಿನದ ಸಂಭ್ರಮ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲಿಕೆ ಆಗುತ್ತದೆ. ಟಾಲಿವುಡ್ ಚಿತ್ರರಂಗಕ್ಕೆ ಮಹೇಶ್ ಬಾಬು ಅವರ ಕೊಡುಗೆ ತುಂಬಾನೇ ದೊಡ್ಡದು. ಅವರ ತಂದೆ ಕೃಷ್ಣ ಅವರು ಟಾಲಿವುಡ್ ಖ್ಯಾತ ಸೂಪರ್‌ಸ್ಟಾರ್ ಆಗಿದ್ದರು. ಅವರ ಪೂರ್ಣ ಹೆಸರು ಕೃಷ್ಣ ಘಟ್ಟಮನೇನಿ. ಅವರು 350 ಚಿತ್ರಗಳಲ್ಲಿ ನಟಿಸಿದ್ದಾರೆ. ಮಹೇಶ್ ಬಾಬು ಅವರ ತಂದೆ ಆ ಕಾಲದ ಟಾಪ್ ನಟರಲ್ಲಿ ಒಬ್ಬರಾಗಿದ್ದರು. ಇದಲ್ಲದೆ, ಅವರು ಯಶಸ್ವಿ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. 2009ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದಿದ್ದರು. ಕಳೆದ ವರ್ಷ ಅವರು ಮೃತಪಟ್ಟರು.
ಮಹೇಶ್ ಬಾಬು ಅವರು ಆಗಸ್ಟ್ 9, 1975ರಂದು ಚೆನ್ನೈನಲ್ಲಿ ಜನಿಸಿದರು. ಕೇವಲ 4ನೇ ವಯಸ್ಸಿಗೆ ನಟನೆಗೆ ಕಾಲಿಟ್ಟರು ಮಹೇಶ್ ಬಾಬು ನಂತರ ಹೀರೋ ಆಗಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಹೇಶ್ ಬಾಬು ಅವರು ನಮ್ರತಾ ಶಿರೋಡ್ಕರ್ ಅವರನ್ನು 2005ರಲ್ಲಿ ಮದುವೆ ಆದರು. ಇವರಿಗೆ ಸಿತಾರಾ ಹಾಗೂ ಗೌತಮ್ ಹೆಸರಿನ ಮಕ್ಕಳಿದ್ದಾರೆ. ಸಿತಾರಾ ಚಿತ್ರರಂಗದ ಜೊತೆ ನಂಟು ಬೆಳೆಸಿಕೊಂಡಿದ್ದಾರೆ. ಬ್ರ್ಯಾಂಡ್ ಪ್ರಮೋಷನ್ಗೆ 1 ಕೋಟಿ ರೂಪಾಯಿ ಪಡೆದು ಸುದ್ದಿ ಆಗಿದ್ದರು.
ಮಹೇಶ್ ಬಾಬು ಅವರ ತಂದೆ ಕೃಷ್ಣ ಎರಡು ಮದುವೆಯಾಗಿದ್ದರು. ಮೊದಲ ಪತ್ನಿ ಇಂದಿರಾ ದೇವಿ ಅವರಿಗೆ 5 ಮಕ್ಕಳು. ಮಹೇಶ್ ಬಾಬು, ರಮೇಶ್ ಬಾಬು, ಪದ್ಮಾವತಿ, ಮಂಜುಳಾ, ಪ್ರಿಯದರ್ಶಿನಿ. ಕೃಷ್ಣ ಅವರ ಎರಡನೇ ಪತ್ನಿಯ ಹೆಸರು ವಿಜಯಾ ನಿರ್ಮಲಾ. ಇವರು ವೃತ್ತಿಯಲ್ಲಿ ನಟಿ ಆಗಿದ್ದರು.
ರಮೇಶ್ ಬಾಬು ಚಲನಚಿತ್ರ ನಿರ್ಮಾಪಕ, ನಟ. ಅವರು ಜನವರಿ 8, 2022ರಂದು ನಿಧನರಾದರು. ಅವರು ತೆಲುಗು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ಅವರು ಯಕೃತ್ತಿನ ಕಾಯಿಲೆಯಿಂದ 56ನೇ ವಯಸ್ಸಿನಲ್ಲಿ ನಿಧನರಾದರು.
ಮಹೇಶ್ ಬಾಬು ಅವರ ಸಹೋದರಿ ಪದ್ಮಾವತಿಯನ್ನು ಗಲ್ಲಾ ಜಯದೇವ್ ವಿವಾಹವಾಗಿದ್ದರು. ಜಯದೇವ್ ಒಬ್ಬ ಪ್ರಸಿದ್ಧ ರಾಜಕಾರಣಿ ಮತ್ತು ಉದ್ಯಮಿ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸಿದ್ದಾರ್ಥ್ ಗಲ್ಲಾ ರಾಜಕಾರಣಿ, ಮತ್ತೋರ್ವ ಮಗ ಅಶೋಕ್ ಗಲ್ಲಾ ನಟ.
ಮಂಜುಳಾ ವೃತ್ತಿಯಲ್ಲಿ ನಟಿ, ನಿರ್ಮಾಪಕಿ ಮತ್ತು ನಿರ್ದೇಶಕಿ. ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮಂಜುಳಾ ನಿರ್ಮಾಪಕ ಮತ್ತು ನಟ ಸಂಜಯ್ ಸ್ವರೂಪ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಓರ್ವ ಮಗಳಿದ್ದಾಳೆ. ಮಹೇಶ್ ಬಾಬು ಅವರ ತಂಗಿ ಪ್ರಿಯದರ್ಶಿನಿ ಚಿತ್ರರಂಗದಲ್ಲಿ ಸಕ್ರಿಯವಾಗಿಲ್ಲ. ಆದರೆ ಅವರು ನಟ-ನಿರ್ಮಾಪಕ ಸುಧೀರ್ ಬಾಬು ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಇದನ್ನೂ ಓದಿ: ನೂರಾರು ಕೋಟಿ ರೂಪಾಯಿಗಳ ಒಡೆಯ ಮಹೇಶ್ ಬಾಬು; ಬರ್ತ್ಡೇ ಬಾಯ್ ಐಷಾರಾಮಿ ಜೀವನ ಹೇಗಿದೆ ನೋಡಿ
ಕೃಷ್ಣ ಅವರ ತಂದೆಯ ಎರಡನೇ ಪತ್ನಿ ವಿಜಯಾ ನಿರ್ಮಲಾ. ವಿಜಯ ವೃತ್ತಿಯಲ್ಲಿ ನಟಿ, ನಿರ್ದೇಶಕಿ, ನಿರ್ಮಾಪಕಿ. ಆರು ದಶಕಗಳ ವೃತ್ತಿಜೀವನದಲ್ಲಿ ಅವರು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಮೊದಲ ಮದುವೆ ಕೃಷ್ಣ ಮೂರ್ತಿ ಅವರೊಂದಿಗೆ ನಡೆದಿತ್ತು. ಈ ಮದುವೆಯಿಂದ ಅವರಿಗೆ ನಟ ನರೇಶ್ ಹೆಸರಿನ ಮಗನಿದ್ದಾನೆ. ನಂತರ ವಿಜಯಾ ಮತ್ತು ಕೃಷ್ಣ ವಿವಾಹವಾದರು. ವಿಜಯಾ ಅವರು 2019 ರಲ್ಲಿ ತಮ್ಮ 73 ನೇ ವಯಸ್ಸಿನಲ್ಲಿ ನಿಧನರಾದರು. ಮಹೇಶ್ ಬಾಬು ಅವರ ಮಲ ಸಹೋದರ ನರೇಶ್ ಬಾಬು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ನಾಲ್ಕನೇ ಮದುವೆಗೆ ಸಂಬಂಧಿಸಿದಂತೆ ಅವರು ಭರ್ಜರಿ ಸುದ್ದಿ ಆಗಿದ್ದರು. ಅವರು ಪವಿತ್ರಾ ಲೋಕೇಶ್ ಅವರನ್ನು ಮದುವೆ ಆಗಿದ್ದಾರೆ.
ಮಹೇಶ್ ಬಾಬು ಅವರು ತ್ರಿವಿಕ್ರಮ್ ಶ್ರೀನಿವಾಸ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ‘ಗುಂಟೂರು ಖಾರಂ’ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ 2024ರ ಜನವರಿ 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ