
ತೆಲುಗಿನ ಖ್ಯಾತ ನಟ ಮಹೇಶ್ ಬಾಬು (Mahesh Babu) ಅವರ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಅವರ ತಾಯಿ ಇಂದಿರಾ ದೇವಿ (Indira Devi) ನಿಧನರಾಗಿದ್ದಾರೆ. ಈ ಸುದ್ದಿ ಕೇಳಿ ಮಹೇಶ್ ಬಾಬು ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಕಳೆದ ಕೆಲವು ದಿನಗಳಿಂದ ಇಂದಿರಾ ದೇವಿ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ ತ್ಯಜಿಸಿದ್ದಾರೆ. ಬುಧವಾರ (ಸೆ.28) ನಸುಕಿನ 4 ಗಂಟೆಗೆ ಇಂದಿರಾ ದೇವಿ ನಿಧನರಾದರು (Indira Devi Death) ಎಂದು ಮಹೇಶ್ ಬಾಬು ಕುಟುಂಬದವರು ತಿಳಿಸಿದ್ದಾರೆ.
ಮಹೇಶ್ ಬಾಬು ಅವರದ್ದು ಸಿನಿಮಾ ಹಿನ್ನೆಲೆಯ ಕುಟುಂಬ. ಮಹೇಶ್ ಬಾಬು ತಂದೆ ಕೃಷ್ಣ ಅವರು ಟಾಲಿವುಡ್ನಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದರು. ಅವರ ಪುತ್ರ ರಮೇಶ್ ಬಾಬು ಅವರು ಈ ವರ್ಷ ಆರಂಭದಲ್ಲಿ ಕೊನೆಯುಸಿರು ಎಳೆದಿದರು. ಈಗ ಕೃಷ್ಣ ಪತ್ನಿ ಇಂದಿರಾ ದೇವಿ ನಿಧನದಿಂದ ಇಡೀ ಕುಟುಂಬದಲ್ಲಿ ಶೋಕ ಆವರಿಸಿದೆ. ಆಪ್ತರು, ಅಭಿಮಾನಿಗಳು, ಸೆಲೆಬ್ರಿಟಿಗಳು ಮಹೇಶ್ ಬಾಬು ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.
ಇಂದಿರಾ ದೇವಿ ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಗಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಅಭಿಮಾನಿಗಳು ಅಂತಿಮ ನಮನ ಸಲ್ಲಿಸಲು ಅನುಕೂಲ ಆಗಲಿ ಎಂದು ಇಂದಿರಾ ದೇವಿ ಅವರ ಮೃತದೇಹವನ್ನು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪದ್ಮಾಲಯ ಸ್ಡುಡಿಯೋಸ್ನಲ್ಲಿ ಇರಿಸಲಾಗುವುದು. ನಂತರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಹೇಶ್ ಬಾಬು ಅವರು ಕುಟುಂಬಕ್ಕೆ ಹೆಚ್ಚು ಸಮಯ ಮೀಸಲಿಡುತ್ತಾರೆ. ಕೆಲವೇ ದಿನಗಳ ಹಿಂದೆ ಅವರು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಹೊಸ ಚಿತ್ರದ ಶೂಟಿಂಗ್ ಆರಂಭಿಸಿದ್ದರು. ಮಹೇಶ್ ಬಾಬು ಅವರ ಹೊಸ ಲುಕ್ ಕೂಡ ವೈರಲ್ ಆಗಿತ್ತು. ಶೂಟಿಂಗ್ ಸೆಟ್ನಲ್ಲಿ ಅವರು ಕಾಣಿಸಿಕೊಂಡ ಫೋಟೋ ಗಮನ ಸೆಳೆದಿತ್ತು. ಈಗ ತಾಯಿಯ ನಿಧನದಿಂದ ಅವರಿಗೆ ತೀವ್ರ ನೋವುಂಟಾಗಿದೆ. ಹಾಗಾಗಿ ಒಂದಷ್ಟು ದಿನಗಳ ಕಾಲ ಸಿನಿಮಾ ಚಟುವಟಿಕೆಗಳಿಗೆ ಅವರು ಬ್ರೇಕ್ ನೀಡಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:46 am, Wed, 28 September 22