SSMB 29: ರಾಜಮೌಳಿ ಜೊತೆಗಿನ ಚಿತ್ರಕ್ಕೆ ಮಹೇಶ್ ಬಾಬು ಪಡೆಯುತ್ತಿರೋ ಸಂಭಾವನೆ ಎಷ್ಟು?

ಮಹೇಶ್ ಬಾಬು ಸಂಭಾವನೆ ಬೇಡ ಎಂದು ಹೇಳಲೂ ಒಂದು ಕಾರಣವೂ ಇದೆ. ರಾಜಮೌಳಿ ಸಿನಿಮಾ ಎಂದಾಗ ಅದು ಹಿಟ್ ಆಗಿಯೇ ಆಗುತ್ತದೆ ಎನ್ನುವ ನಂಬಿಕೆ ಅವರದ್ದು. ಹೀಗಾಗಿ, ತಮ್ಮ ಸಂಭಾವನೆ ಪಡೆಯುವ ಬದಲು ಅದನ್ನು ಹೂಡಿಕೆ ಎಂದು ಪರಿಗಣಿಸಲು ಮಹೇಶ್ ಬಾಬು ನಿರ್ಮಾಪಕರಿಗೆ ಸೂಚಿಸಿದ್ದಾರಂತೆ.

SSMB 29: ರಾಜಮೌಳಿ ಜೊತೆಗಿನ ಚಿತ್ರಕ್ಕೆ ಮಹೇಶ್ ಬಾಬು ಪಡೆಯುತ್ತಿರೋ ಸಂಭಾವನೆ ಎಷ್ಟು?
ರಾಜಮೌಳಿ-ಮಹೇಶ್ ಬಾಬು
Edited By:

Updated on: Jan 30, 2024 | 10:08 AM

ಮಹೇಶ್ ಬಾಬು (Mahesh Babu) ಅವರು ‘ಗುಂಟೂರು ಖಾರಂ’ ಸಿನಿಮಾ ಬಿಡುಗಡೆ ಬಳಿಕ ರಿಲೀಫ್ ಆಗಿದ್ದಾರೆ. ಕೊನೆಯ ಹಂತದವರೆಗೂ ಈ ಚಿತ್ರದ ಶೂಟಿಂಗ್ ನಡೆಯುತ್ತಲೇ ಇತ್ತು. ಈಗ ಅವರು ನಿರ್ದೇಶಕ ಎಸ್​ಎಸ್ ರಾಜಮೌಳಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘SSMB 29’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಕಥೆ ಬಗ್ಗೆ, ಶೂಟಿಂಗ್ ಎಲ್ಲಿ ನಡೆಯಲಿದೆ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ರಿವೀಲ್ ಆಗಬೇಕಿದೆ. ಈ ಮಧ್ಯೆ ಮಹೇಶ್ ಬಾಬು ಅವರ ಸಂಭಾವನೆ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ.

ಮಹೇಶ್ ಬಾಬು ಅವರು ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಒಂದು ಮೂಲಗಳ ಪ್ರಕಾರ ಮಹೇಶ್ ಬಾಬು ಪ್ರತಿ ಚಿತ್ರಕ್ಕೆ ಪಡೆಯೋದು 60ರಿಂದ 80 ಕೋಟಿ ರೂಪಾಯಿ. ಈಗ ಅವರು ಒಪ್ಪಿಕೊಂಡಿರುವುದು ರಾಜಮೌಳಿ ಸಿನಿಮಾ. ಹೀಗಾಗಿ ಸಹಜವಾಗಿಯೇ ಹೆಚ್ಚು ಡೇಟ್ಸ್ ನೀಡಬೇಕು. ಇದಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಸಂಭಾವನೆ ಬೇಡ ಎಂದಿದ್ದಾರೆ!

ಮಹೇಶ್ ಬಾಬು ಸಂಭಾವನೆ ಬೇಡ ಎಂದು ಹೇಳಲೂ ಒಂದು ಕಾರಣ ಇದೆ. ರಾಜಮೌಳಿ ಸಿನಿಮಾ ಎಂದಾಗ ಅದು ಹಿಟ್ ಆಗಿಯೇ ಆಗುತ್ತದೆ ಎನ್ನುವ ನಂಬಿಕೆ ಅನೇಕರದ್ದು. ಅವರ ಸಿನಿಮಾಗಳು ದೊಡ್ಡ ಮೊತ್ತದ ಗಳಿಕೆ ಮಾಡುತ್ತವೆ. ಹೀಗಾಗಿ, ಸಂಭಾವನೆ ಪಡೆಯುವ ಬದಲು ಅದನ್ನು ಹೂಡಿಕೆ ಎಂದು ಪರಿಗಣಿಸಲು ಮಹೇಶ್ ಬಾಬು ನಿರ್ಮಾಪಕರಿಗೆ ಸೂಚಿಸಿದ್ದಾರಂತೆ. ಹೀಗಾಗಿ ಬಂದ ಲಾಭದಲ್ಲಿ ಅವರು ಪಾಲು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಮೌಳಿ ಕೂಡ ಇದೇ ತಂತ್ರ ಉಪಯೋಗಿಸುತ್ತಿದ್ದಾರೆ.

ಇತ್ತೀಚೆಗೆ ಮಹೇಶ್ ಬಾಬು ಅವರಿಗೆ ರಾಜಮೌಳಿ ಅವರು ಒಂದು ಕಿವಿಮಾತು ಹೇಳಿದ್ದರು ಎನ್ನುವ ಸುದ್ದಿ ಹರಿದಾಡಿತ್ತು. ಈ ಚಿತ್ರಕ್ಕೆ ಹಣ ಹೂಡುವ ಮೂಲಕ ಸಹ ನಿರ್ಮಾಪಕರಾಗಲು ಮಹೇಶ್ ಬಾಬುಗೆ ರಾಜಮೌಳಿ ಸೂಚನೆ ನೀಡಿದ್ದರು ಎಂದು ಹೇಳಲಾಗಿತ್ತು. ಇದನ್ನು ಮಹೇಶ್ ಬಾಬು ಒಪ್ಪಿಕೊಂಡಿದ್ದಾರಂತೆ.

‘SSMB 29’ ಈಗಾಗಲೇ ಸದ್ದು ಮಾಡುತ್ತಿದೆ. ಹನುಮಂತನಿಂದ ಕಥೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಈ ಚಿತ್ರದಲ್ಲಿ ಹಾಲಿವುಡ್​ ಕಲಾವಿದರೂ ನಟಿಸುವ ಸಾಧ್ಯತೆ ಇದೆ. ಸಿನಿಮಾದ ಶೂಟಿಂಗ್ ಆಫ್ರಿಕಾದಲ್ಲಿ ನಡೆಯಲಿದೆ.

ಇದನ್ನೂ ಓದಿ: ಮಹೇಶ್ ಬಾಬು ಸಿನಿಮಾ ಎದುರು ‘ಹನುಮಾನ್’ ರಿಲೀಸ್ ಮಾಡಿದ್ದೇಕೆ? ಕಾರಣ ನೀಡಿದ ನಿರ್ದೇಶಕ

ಮಹೇಶ್ ಬಾಬು ಈಗಾಗಲೇ ಇದಕ್ಕೆ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಆ್ಯಕ್ಷನ್ ಸಿನಿಮಾಗೆ ಸಿದ್ಧತೆ ಮಾಡಿಕೊಳ್ಳಲು ಜರ್ಮನಿಗೆ ತೆರಳಿದ್ದಾರೆ. ಅಲ್ಲಿ ಅವರು ಸಾಕಷ್ಟು ಸಿದ್ಧತೆ ಮಾಡಿಕೊಂಡು ಭಾರತಕ್ಕೆ ಮರಳಲಿದ್ದಾರೆ. ಸಿನಿಮಾದ ಶೂಟಿಂಗ್ ಯಾವಾಗ ಆರಂಭ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. 2025ರಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಮಹೇಶ್ ಬಾಬು ಈ ಸಿನಿಮಾ ಹೊರತುಪಡಿಸಿ ಬೇರೆ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:03 am, Tue, 30 January 24