ಮಹೇಶ್ ಬಾಬು (Mahesh Babu) ಅವರು ಒಂದರಮೇಲೆ ಒಂದರಂತೆ ಟ್ರಿಪ್ ಮಾಡುತ್ತಿದ್ದಾರೆ. ‘ಸರ್ಕಾರು ವಾರಿ ಪಾಟ’ ಸಿನಿಮಾ ತೆರೆಕಂಡ ಬಳಿಕ ಜರ್ಮನಿಗೆ ತೆರಳಿದ್ದ ಮಹೇಶ್ ಬಾಬು ಆ್ಯಂಡ್ ಫ್ಯಾಮಿಲಿ ನಂತರ ನ್ಯೂಯಾರ್ಕ್ಗೆ ಪ್ರಯಾಣ ಬೆಳೆಸಿತ್ತು. ಈಗ ಮಹೇಶ್ ಬಾಬು ಫ್ಯಾಮಿಲಿ ಸ್ವಿಜರ್ಲ್ಯಾಂಡ್ನಲ್ಲಿ ಇದ್ದಾರೆ. ಪತ್ನಿ ನಮ್ರತಾ, ಮಗಳು ಸಿತಾರಾ (Sitara Ghattamaneni ) ಹಾಗೂ ಮಗ ಗೌತಮ್ ಜತೆ ಅವರು ಸಮಯ ಕಳೆಯುತ್ತಿದ್ದಾರೆ. ಈ ಫೋಟೋಗಳನ್ನು ನಮ್ರತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ನಾನಾ ರೀತಿಯಲ್ಲಿ ಕಮೆಂಟ್ಗಳು ಬರುತ್ತಿವೆ. ಮಹೇಶ್ ಬಾಬು ಅವರ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಪ್ರತಿ ಸಿನಿಮಾ ತೆರೆಗೆ ಬಂದ ಬಳಿಕ ಮಹೇಶ್ ಬಾಬು ಅವರು ಕುಟುಂಬದ ಜತೆ ವಿದೇಶಕ್ಕೆ ತೆರಳುವುದು ವಾಡಿಕೆ. ಈ ಮೊದಲಿನಿಂದಲೂ ಅವರು ಇದನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿ ಅವರ ಟ್ರಿಪ್ ಸ್ವಲ್ಪ ಜೋರಾಗಿಯೇ ಇದೆ. ಹೊಸ ಸಿನಿಮಾ ಕೆಲಸಕ್ಕೂ ಮುನ್ನ ಅವರು ಮೂರನೇ ದೇಶ ಸುತ್ತುತ್ತಿದ್ದಾರೆ.
ಮಹೇಶ್ ಬಾಬು ಹಾಗೂ ಸಿತಾರಾ ರಸ್ತೆಯೊಂದರಲ್ಲಿ ನಿಂತಿದ್ದಾರೆ. ಈ ಫೋಟೋವನ್ನು ಮಹೇಶ್ ಬಾಬು ಅವರ ಮಗ ಗೌತಮ್ ಕ್ಲಿಕ್ಕಿಸಿದ್ದಾರೆ. ಈ ಫೋಟೋವನ್ನು ಹಂಚಿಕೊಂಡಿರುವ ನಮ್ರತಾ ಅವರು, ‘ನಮ್ಮ ಕುಟುಂಬದ ಪಾಪರಾಜಿ’ ಎಂದು ಬರೆದುಕೊಂಡಿದ್ದಾರೆ. ಸೆಲೆಬ್ರಿಟಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಎದುರಾದರೆ ಅವರ ಫೋಟೋ ಕ್ಲಿಕ್ಕಿಸೋಕೆ ಒಂದಷ್ಟು ಮಂದಿ ಸಾಲುಗಟ್ಟಿ ನಿಲ್ಲುತ್ತಾರೆ. ಅವರನ್ನು ಪಾಪರಾಜಿಗಳು ಎಂದು ಕರೆಯಲಾಗುತ್ತದೆ. ಈ ರೀತಿಯಲ್ಲಿ ಕ್ಲಿಕ್ ಮಾಡಿದ ಫೋಟೋಗಳನ್ನು ಪಾಪರಾಜಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅದೇ ರೀತಿ ಕೆಲಸವನ್ನು ಗೌತಮ್ ಕೂಡ ಮಾಡಿದ್ದಾರೆ. ಈ ಕಾರಣಕ್ಕೆ ಗೌತಮ್ಗೆ ಪಾಪರಾಜಿ ಎಂಬ ಟ್ಯಾಗ್ ನೀಡಿದ್ದಾರೆ ನಮ್ರತಾ.
ಇದನ್ನೂ ಓದಿ: ಸ್ವಿಜರ್ಲ್ಯಾಂಡ್ನಲ್ಲಿ ಕುಟುಂಬದ ಜತೆ ಸಮಯ ಕಳೆದ ಸಿತಾರಾ, ನಮ್ರತಾ; ಮಹೇಶ್ ಬಾಬು ಎಲ್ಲಿ ಎಂದ ಫ್ಯಾನ್ಸ್
ಮಹೇಶ್ ಬಾಬು ‘ಸರ್ಕಾರು ವಾರಿ ಪಾಟ’ ಚಿತ್ರದ ಗೆಲುವಿನ ಬಳಿಕ ತ್ರಿವಿಕ್ರಂ ಶ್ರೀನಿವಾಸ್ ಜತೆ ಕೈ ಜೋಡಿಸಿದ್ದಾರೆ. ಈ ಚಿತ್ರ ಈಗಾಗಲೇ ಸೆಟ್ಟೇರಿದೆ. ಇತ್ತೀಚೆಗೆ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿತ್ತು. ಈ ಸಿನಿಮಾ ತೆರೆಕಂಡ ಬಳಿಕ ಎಸ್.ಎಸ್. ರಾಜಮೌಳಿ ಜತೆ ಮಹೇಶ್ ಬಾಬು ಕೈ ಜೋಡಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ.