Nedumudi Venu ಮಲಯಾಳಂ ಚಿತ್ರರಂಗದ ಹಿರಿಯ ನಟ ನೆಡುಮುಡಿ ವೇಣು ನಿಧನ

| Updated By: ರಶ್ಮಿ ಕಲ್ಲಕಟ್ಟ

Updated on: Oct 11, 2021 | 2:32 PM

Nedumudi Venu ನೆಡುಮುಡಿ ವೇಣು ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟ. ಇವರು ನಾಟಕ ಮತ್ತು 500 ಕ್ಕೂ ಹೆಚ್ಚುಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕ, ಖಳನಾಯಕ ಮತ್ತು ಪಾತ್ರ ನಟನಾಗಿ ತೆರೆಯಲ್ಲಿ ಮಿಂಚಿದ್ದ ವೇಣು, ಗಂಭೀರ ಮತ್ತು ತಮಾಷೆಯ ಪಾತ್ರಗಳಲ್ಲಿ ಸೈ ಎನಿಸಿಕೊಂಡವರು.

Nedumudi Venu ಮಲಯಾಳಂ ಚಿತ್ರರಂಗದ ಹಿರಿಯ ನಟ ನೆಡುಮುಡಿ ವೇಣು ನಿಧನ
ನೆಡುಮುಡಿ ವೇಣು
Follow us on

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಟ ನೆಡುಮುಡಿ ವೇಣು (73) (Nedumudi Venu) ಸೋಮವಾರ ನಿಧನರಾದರು. ವೇಣು ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟ. ಇವರು ನಾಟಕ ಮತ್ತು 500 ಕ್ಕೂ ಹೆಚ್ಚುಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕ, ಖಳನಾಯಕ ಮತ್ತು ಪಾತ್ರ ನಟನಾಗಿ ತೆರೆಯಲ್ಲಿ ಮಿಂಚಿದ್ದ ವೇಣು, ಗಂಭೀರ ಮತ್ತು ತಮಾಷೆಯ ಪಾತ್ರಗಳಲ್ಲಿ ಸೈ ಎನಿಸಿಕೊಂಡವರು. ತಮ್ಮ ವಿಶಿಷ್ಟ ನಟನಾ ಶೈಲಿ ಮತ್ತು ಪ್ರತಿಭೆಯಿಂದ ವೇಣು ಭಾರತೀಯ ಚಿತ್ರರಂಗದ ನಂಬರ್ ಒನ್ ನಟರಲ್ಲಿ ಒಬ್ಬರಾಗಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಆರು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾಗಿರುವ ವೇಣು ಕೂಡ ಚಿತ್ರಕಥೆಗಳನ್ನೂ ಬರೆದಿದ್ದಾರೆ. ಪತ್ನಿ: ಟಿ.ಆರ್. ಸುಶೀಲ. ಮಕ್ಕಳು: ಉಣ್ಣಿ ಗೋಪಾಲ್ ಮತ್ತು ಕಣ್ಣನ್ ಗೋಪಾಲ್.

ವೇಣು ಮೇ 22, 1948 ರಂದು ಆಲಪ್ಪುಳ ಜಿಲ್ಲೆಯ ನೆಡುಮುಡಿಯಲ್ಲಿ ಶಿಕ್ಷಕರಾಗಿದ್ದ ಪಿ ಕೆ ಕೇಶವನ್ ಪಿಳ್ಳೈ ಮತ್ತು ಕುಂಜಿಕುಟ್ಟಿಯಮ್ಮ ದಂಪತಿಯ ಮಗನಾಗಿ ಜನಿಸಿದರು. ಕೆ. ವೇಣುಗೋಪಾಲ್ ಇವರ ಪೂರ್ಣ ಹೆಸರು. ನೆಡುಮುಡಿ ಎನ್ ಎಸ್ ಎಸ್ ಹೈಯರ್ ಸೆಕೆಂಡರಿ ಶಾಲೆ, ಚಂಬಕ್ಕುಳಂ ಸೇಂಟ್ ಮೇರಿಸ್ ಹೈಯರ್ ಸೆಕೆಂಡರಿ ಶಾಲೆ ಮತ್ತು ಆಲಪ್ಪುಳ ಎಸ್ ಡಿ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಮತ್ತು ಕಲಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಕೆಲವು ವರ್ಷಗಳ ಕಾಲ ಸಮಾನಾಂತರ ಕಾಲೇಜು ಶಿಕ್ಷಕರಾಗಿ ಕೆಲಸ ಮಾಡಿದ್ದರು. ಕಾಲೇಜಿನ ಸಹಪಾಠಿಯಾಗಿದ್ದ ಖ್ಯಾತ ನಿರ್ದೇಶಕ ಫಾಸಿಲ್ ಜೊತೆ ಮಿಮಿಕ್ರಿ ಮತ್ತು ನಾಟಕಗಳನ್ನು ಪ್ರದರ್ಶಿಸುವ ಮೂಲಕ ಕಲಾ ಜಗತ್ತಿಗೆ ಪ್ರವೇಶಿಸಿದ್ದರು.


ಕಾಲೇಜು ದಿನಗಳಲ್ಲಿ ತೊಪ್ಪಿಲ್ ಭಾಸಿಯವರ ‘ಒಂದು ಸುಂದರಿಯುಡೆ ಕಥಾ’ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಹೊತ್ತಲ್ಲಿ ಕಾವಲಂ ನಾರಾಯಣ ಪಣಿಕ್ಕರ್ ಅವರನ್ನು ಭೇಟಿಯಾದ ವೇಣು, ಅವರ ರಂಗ ತಂಡವನ್ನು ಸೇರಿಕೊಂಡರು. ಹಾಗಾಗಿಯೇ ಭರತ್ ಗೋಪಿ ಸೇರಿದಂತೆ ಹಲವಾರು ಜನರ ಪರಿಚಯವಾಯಿತು. ನಂತರ ಕೆಲಕಾಲ ಜವಾಹರ್ ಬಾಲ ಭವನದಲ್ಲಿ ನಾಟಕ ಶಿಕ್ಷಕರಾಗಿಯೂ ಕೆಲಸ ಮಾಡಿದರು. ನಂತರ ಕರ್ಮಭೂಮಿ ತಿರುವನಂತಪುರಂ ಆಯಿತು. ಅವನವನ್ ಕಡಂಬ ಸೇರಿದಂತೆ ಕಾವಲಂನ ಪ್ರಸಿದ್ಧ ನಾಟಕಗಳಲ್ಲಿ ನಟಿಸಿದರು. ಆ ಸಮಯದಲ್ಲಿ ಅವರು ಕಲಾಕೌಮುದಿಯಲ್ಲಿ ಪತ್ರಕರ್ತರಾಗಿಯೂ ಕೆಲಸ ಮಾಡಿದರು.

ಅರವಿಂದನ್, ಪದ್ಮರಾಜನ್, ಭರತನ್ ಮತ್ತು ಜಾನ್ ಅಬ್ರಹಾಂ ಮೊದಲಾದವರ ಸ್ನೇಹ ಸಂಪಾದಿಸಿದ ವೇಣು 1978 ರಲ್ಲಿ ಅರವಿಂದನ್ ಅವರ ‘ತಂಬಿ’ ಸಿನಿಮಾ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಆರಂಭಿಸಿದರು. ಭರತನ್ ಅವರ ಆರವಂ ಮತ್ತು ತಕರ ಸಿನಿಮಾದಲ್ಲಿ ವೇಣು ಅವರ ನಟನೆ ಗಮನಿಸಲ್ಪಟ್ಟಿತು. ತಿರುವನಂತಪುರಂ ದೂರದರ್ಶನ ಆರಂಭದ ದಿನಗಳಲ್ಲಿ ವೇಣು ಹಲವು ಧಾರಾವಾಹಿಗಳಲ್ಲಿ ನಟಿಸಿದರು. ವೇಣು ನಿರ್ದೇಶಿಸಿದ ಕೈರಳಿವಿಲಾಸಂ ಲಾಡ್ಜ್ ಧಾರಾವಾಹಿಗೆ ಉತ್ತಮ ಪ್ರತಿಕ್ರಿಯೆ ಬಂದಿತ್ತು.

ಚಾಮರಂ, ಒರಿಡತ್ತೊರು ಫೈಲ್‌ಮ್ಯಾನ್, ಕಳ್ಳ ಪಲಿತ್ರನ್, ವಿಡ ಪರಯುಂ ಮುಂಬೇ, ಯವನಿಕಾ, ಎನಿಕ್ಕು ವಿಷಕುನ್ನು,ಅಚ್ಚುವೇಟ್ಟನ್ಡೆ ವೀಡ್, ಅಪ್ಪುಣ್ಮಿ, ಗುರೂಜಿ ಒರು ವಾಕ್, ಪಂಚವಡಿಪ್ಪಾಲಂ, ಹಿಸ್ ಹೈನೆಸ್ ಅಬ್ದುಲ್ಲಾ, ಭರತಂ, ಸೈರಾ ಮೊದಲಾದ ಸಿನಿಮಾಗಳಲ್ಲಿ ವೇಣು ನಟಿಸಿದ್ದಾರೆ. ಇಂಡಿಯನ್, ಅನ್ಯನ್ ತಮಿಳು ಸಿನಿಮಾಗಳಲ್ಲಿಯೂ ಇವರು ನಟಿಸಿದ್ದಾರೆ. ಕಾಟ್ಟತ್ತೆ ಕಿಳಿಕ್ಕೂಡ್ , ಒರು ಕಥ ಒಂದು ನುಣಕ್ಕಥ, ಸವಿದಂ, ತೀರ್ಥಂ ಮತ್ತು ಅಂಬಡ ಞಾನೇ ಮುಂತಾದ ಸಿನಿಮಾಗಳಿಗೆ ಕಥೆ ಬರೆದಿದ್ದು ಪೂರಂ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮತ್ತು ಅವರ ಕೋಟ್ಯಾಧಿಪತಿ ಗೆಳೆಯರು ಮಾತ್ರ ದೇಶದಲ್ಲಿ ಸುರಕ್ಷಿತರು: ಪ್ರಿಯಾಂಕಾ ಗಾಂಧಿ ವಾದ್ರಾ

Published On - 2:07 pm, Mon, 11 October 21