ಸ್ಪಂದನಾ ನಿಧನದ ಬಳಿಕ ಚಿತ್ರರಂಗಕ್ಕೆ ಮತ್ತೊಂದು ಶಾಕ್; ಹೃದಯಾಘಾತದಿಂದ ಖ್ಯಾತ ನಿರ್ದೇಶಕ ಸಿದ್ಧಿಕಿ ಸ್ಥಿತಿ ಗಂಭೀರ
Siddique Ismail: ‘ಗಾಡ್ಫಾದರ್’, ‘ಕಾಬೂಲಿವಾಲಾ’ ಸೇರಿದಂತೆ ಅನೇಕ ಗಮನಾರ್ಹ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಸಿದ್ಧಿಕಿ ಅವರಿಗೆ ಸೋಮವಾರ (ಆ.7) ಹೃದಯಾಘಾತ ಆಗಿದೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು, ಹೆಲ್ತ್ ಅಪ್ಡೇಟ್ಗಾಗಿ ನಿರೀಕ್ಷಿಸಲಾಗುತ್ತಿದೆ.
ಹೃದಯಾಘಾತ ಪ್ರಕರಣಗಳು ಪದೇಪದೇ ವರದಿ ಆಗುತ್ತಿರುವುದು ಆತಂಕಕ್ಕೆ ಕಾರಣ ಆಗಿದೆ. ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana Vijay Raghavendra) ಅವರು ಹೃದಯಾಘಾತದಿಂದ ಮೃತಪಟ್ಟ ವಿಚಾರ ಎಲ್ಲರಿಗೂ ನೋವುಂಟು ಮಾಡಿದೆ. ಅದರ ಬೆನ್ನಲ್ಲೇ ಚಿತ್ರರಂಗಕ್ಕೆ ಮತ್ತೊಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ. ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಸಿದ್ಧಿಕಿ (Malayalam Director Siddique) ಅವರಿಗೂ ಇಂದು (ಆಗಸ್ಟ್ 07) ಹೃದಯಾಘಾತ (Heart Attack) ಆಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅನೇಕ ಗಮನಾರ್ಹ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಖ್ಯಾತಿ ಸಿದ್ಧಿಕಿ ಅವರಿಗೆ ಇದೆ. ಈಗ ಅವರಿಗೆ 69 ವರ್ಷ ವಯಸ್ಸಾಗಿದ್ದು, ಹೃದಯಾಘಾತದ ಬಳಿಕ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿ ಆಗಿದೆ.
ಹಲವು ವರ್ಷಗಳಿಂದ ಸಿದ್ಧಿಕಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಗೆಳೆಯ ಲಾಲ್ ಜೊತೆ ಸೇರಿ ಅವರು ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಸಿದ್ಧಿಕಿ-ಲಾಲ್ ಎಂದೇ ಖ್ಯಾತರಾದ ಅವರಿಬ್ಬರು ಜಂಟಿಯಾಗಿ ಅನೇಕ ಸಿನಿಮಾಗಳಿಗೆ ಕಥೆ-ಚಿತ್ರಕಥೆಯನ್ನೂ ಬರೆದಿದ್ದಾರೆ. ಸಿದ್ಧಿಕಿ ಅವರಿಗೆ ಹೃದಯಾಘಾತ ಆಗಿರುವ ಸುದ್ದಿ ತಿಳಿದು ಅವರ ಅಭಿಮಾನಿಗಳಿಗೆ ಆತಂಕ ಆಗಿದೆ. ಅವರ ಹೆಲ್ತ್ ಅಪ್ಡೇಟ್ ತಿಳಿಯಲು ಎಲ್ಲರೂ ಕಾಯುತ್ತಿದ್ದಾರೆ. ಸಿದ್ಧಿಕಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಆಪ್ತರು ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ: ರಿಲೇ ಓಟದಲ್ಲಿ ದ್ವಿತೀಯ ಸ್ಥಾನ ಗೆದ್ದ ಕೆಲವೇ ನಿಮಿಷಗಳಲ್ಲಿ 15 ವರ್ಷದ ಬಾಲಕ ಹೃದಯಾಘಾತಕ್ಕೆ ಬಲಿ
ಕೊಚ್ಚಿಯ ಆಸ್ಪತ್ರೆಯಲ್ಲಿ ಸಿದ್ಧಿಕಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಲಯಾಳಂನ ‘ರಾಮ್ಜಿ ರಾವ್ ಸ್ಪೀಕಿಂಗ್’, ‘ಇನ್ ಹರಿಹರ್ ನಗರ್’, ‘ಗಾಡ್ಫಾದರ್’, ‘ವಿಯಾಟ್ನಾಂ ಕಾಲೋನಿ’, ‘ಕಾಬೂಲಿವಾಲಾ’ ಮುಂತಾದ ಸಿನಿಮಾಗಳಿಗೆ ಸಿದ್ಧಿಕಿ ನಿರ್ದೇಶನ ಮಾಡಿದ್ದಾರೆ. ಸಿದ್ಧಿಕಿ ಇಸ್ಮಾಯಿಲ್ ಎಂಬುದು ಅವರ ಪೂರ್ಣ ಹೆಸರು. ನಿರ್ದೇಶನದ ಜೊತೆಗೆ ಕೆಲವು ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರ ಮಾಡುವ ಮೂಲಕವೂ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ.
ಇದನ್ನೂ ಓದಿ: Spandana Passed Away: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ
ಕಿರುತೆರೆಯಲ್ಲೂ ಸಿದ್ಧಿಕಿ ಅವರು ಸಕ್ರಿಯರಾಗಿದ್ದರು. ಅನೇಕ ರಿಯಾಲಿಟಿ ಶೋಗಳಲ್ಲಿ ಅವರು ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆ ಮೂಲಕ ಟಿವಿ ಪ್ರೇಕ್ಷಕರಿಗೂ ಅವರು ಹೆಚ್ಚು ಕನೆಕ್ಟ್ ಆಗಿದ್ದಾರೆ. ಸಿದ್ಧಿಕಿ ಅವರು ಕೊನೆಯದಾಗಿ ನಿರ್ದೇಶನ ಮಾಡಿದ್ದು ಮೋಹನ್ಲಾಲ್ ನಟನೆಯ ‘ಬಿಗ್ ಬ್ರದರ್’ ಚಿತ್ರಕ್ಕೆ. ಆ ಸಿನಿಮಾ 2020ರಲ್ಲಿ ತೆರೆಕಂಡಿತ್ತು. ಈಗ ಸಿದ್ಧಿಕಿ ಅವರಿಗೆ ಹೃದಯಾಘಾತವಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಅವರ ಆರೋಗ್ಯಕ್ಕಾಗಿ ಸೆಲೆಬ್ರಿಟಿಗಳು, ಆಪ್ತರು, ಅಭಿಮಾನಿಗಳು ಮತ್ತು ಕುಟುಂಬದವರು ಪ್ರಾರ್ಥಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.