‘ಜೈಲರ್’ ಸಿನಿಮಾದ ವಿರುದ್ಧ ‘ಜೈಲರ್’ ಸಿನಿಮಾ ನಿರ್ದೇಶಕ ಪ್ರತಿಭಟನೆ

Jailer: ರಜನೀಕಾಂತ್ ನಟನೆಯ 'ಜೈಲರ್' ಸಿನಿಮಾ ಆಗಸ್ಟ್ 10ರಂದು ಬಿಡುಗಡೆ ಆಗಲಿದೆ. ಆದರೆ ಸಿನಿಮಾದ ವಿರುದ್ಧ ಮಲಯಾಳಂ ಸಿನಿಮಾ ನಿರ್ದೇಶಕರೊಬ್ಬರು ಪ್ರತಿಭಟನೆ ಮಾಡಿದ್ದಾರೆ. ಸಿನಿಮಾದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಜೈಲರ್ ಸಿನಿಮಾದ ವಿರುದ್ಧ ಜೈಲರ್ ಸಿನಿಮಾ ನಿರ್ದೇಶಕ ಪ್ರತಿಭಟನೆ
ಜೈಲರ್

Updated on: Aug 04, 2023 | 7:51 PM

ರಜನೀಕಾಂತ್ (Rajinikanth) ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಜೈಲರ್‘ (Jailer) ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟೀಸರ್, ಟ್ರೈಲರ್, ಹಾಡುಗಳು ಈಗಾಗಲೇ ಬಿಡುಗಡೆ ಆಗಿ ವೈರಲ್ ಆಗಿವೆ. ಅದರಲ್ಲಿಯೂ ಸಿನಿಮಾದ ‘ಕಾವಾಲಯ್ಯ’ ಹಾಡಂತೂ ಸಖತ್ ಹಿಟ್ ಆಗಿ ರೀಲಿಗರ ಫೇವರೇಟ್ ಆಗಿದೆ. ‘ಜೈಲರ್’ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ತಮಿಳು, ಕನ್ನಡ, ತೆಲುಗು, ಮಲಯಾಳಂ (Malayalam), ಹಿಂದಿ ಭಾಷೆಗಳಲ್ಲಿ ಆಗಸ್ಟ್ 10 ರಂದು ಬಿಡುಗಡೆ ಆಗುತ್ತಿದೆ. ಆದರೆ ಸಿನಿಮಾವನ್ನು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲು ಅಲ್ಲಿನ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಮಲಯಾಳಂ ಸಿನಿಮಾ ನಿರ್ದೇಶಕರೊಬ್ಬರು ರಜನೀಕಾಂತ್​ರ ‘ಜೈಲರ್’ ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

ಮಲಯಾಳಂ ಸಿನಿಮಾ ನಿರ್ದೇಶಕ ಸಕ್ಕಿರ್ ಮದತ್ತಿಲ್ ಎಂಬುವರು ಕೇರಳ ಫಿಲಂ ಚೇಂಬರ್ ಆಫ್ ಕಾಮರ್ಸ್ ಎದುರು ಒಂದು ದಿನದ ಪ್ರತಿಭಟನೆ ನಡೆಸಿದ್ದಾರೆ. ಸಕ್ಕಿರ್ ಮದತ್ತಿಲ್ ಸಹ ‘ಜೈಲರ್’ ಹೆಸರಿನ ಮಲಯಾಳಂ ಸಿನಿಮಾ ನಿರ್ದೇಶಿಸಿದ್ದು, ಆ ಸಿನಿಮಾ ಸಹ ತಮಿಳಿನ ‘ಜೈಲರ್’ ಸಿನಿಮಾದೊಟ್ಟಿಗೆ ಬಿಡುಗಡೆ ಆಗುತ್ತಿದೆ. ಆದರೆ ಕೇರಳದಲ್ಲಿ ಮಲಯಾಳಂ ‘ಜೈಲರ್’ ಸಿನಿಮಾದ ಬಿಡುಗಡೆಗೆ ಚಿತ್ರಮಂದಿರ ನೀಡುತ್ತಿಲ್ಲವೆಂದು ಆರೋಪಿಸಿ ನಿರ್ದೇಶಕ ಸಕ್ಕಿರ್ ಮದತ್ತಿಲ್ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ವೇಳೆ ಮಾತನಾಡಿರುವ ಸಕ್ಕಿರ್ ಮದತ್ತಿಲ್, ”ಕೇರಳದ ಸಿನಿಮಾ ವಿತರಕರು, ಪ್ರದರ್ಶಕರು ತಮ್ಮ ನಿರ್ದೇಶನದ ಮಲಯಾಳಂ ‘ಜೈಲರ್’ ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿಲ್ಲ. ಅವರು ರಜನೀಕಾಂತ್​ರ ‘ಜೈಲರ್’ ಸಿನಿಮಾವನ್ನು ಬಿಡುಗಡೆ ಮತ್ತು ಪ್ರಚಾರ ಮಾಡುತ್ತಿದ್ದಾರೆ” ಎಂದಿದ್ದಾರೆ. ಅಲ್ಲದೆ, ತಮ್ಮ ‘ಜೈಲರ್’ ಸಿನಿಮಾಕ್ಕಾಗಿ 75 ದಿನಗಳ ಚಿತ್ರಮಂದಿರ ಅವಧಿಯನ್ನು ಕೇಳಿದ್ದೆ ಆದರೆ ಸಿನಿಮಾ ವಿತರಕರು 42 ದಿನಗಳ ಅವಧಿಯನ್ನಷ್ಟೆ ನೀಡುತ್ತಿದ್ದಾರೆ. ಹೀಗಾದರೆ ಮಲಯಾಳಂ ಸಿನಿಮಾಗಳು ಬೆಳೆಯುವುದು ಹೇಗೆ” ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:Rajinikanth: ‘ಜೈಲರ್’ ಟ್ರೈಲರ್ ಬಿಡುಗಡೆ: ರಜನೀ ಖದರ್ ಸೂಪರ್, ಆದರೆ ಶಿವಣ್ಣ ನಾಪತ್ತೆ

”ತಮಿಳು ಸಿನಿಮಾಗಳು ಕೇರಳದಲ್ಲಿ ಬಿಡುಗಡೆ ಆಗುವ ಬಗ್ಗೆ ನನಗೆ ಬೇಸರವಿಲ್ಲ, ಆದರೆ ಪರಭಾಷೆಯ ಬಿಗ್ ಬಜೆಟ್ ಸಿನಿಮಾಗಳು ಮಲಯಾಳಂ ಸಿನಿಮಾಗಳನ್ನು ನುಂಗಿ ಹಾಕಬಾರದು ಎಂಬುದು ನನ್ನ ಕಾಳಜಿ. ಹಾಗಾಗಿ ಕೂಡಲೇ ಕೇರಳ ಫಿಲಂ ಚೇಂಬರ್ ಆಫ್ ಕಾಮರ್ಸ್ ಮಧ್ಯ ಪ್ರವೇಶಿಸಿ ನಮಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಸಕ್ಕಿರ್ ಮದತ್ತಿಲ್ ಸಹ ‘ಜೈಲರ್’ ಹೆಸರಿನ ಮಲಯಾಳಂ ಸಿನಿಮಾ ನಿರ್ದೇಶನ ಮಾಡಿ ಬಿಡುಗಡೆಗೆ ತಯಾರಾಗಿದ್ದಾರೆ. ಈ ಮುಂಚೆ ಅವರು ತಮಿಳಿನ ‘ಜೈಲರ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್​ ಬಳಿ ಕನಿಷ್ಟ ಕೇರಳದಲ್ಲಿ ಮಾತ್ರವಾದರೂ ಸಿನಿಮಾದ ಹೆಸರು ಬದಲಿಸಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಆದರೆ ಸನ್ ಪಿಕ್ಚರ್ಸ್ ಇದಕ್ಕೆ ಒಪ್ಪಿರಲಿಲ್ಲ. ಕೊನೆಗೆ ಸಕ್ಕಿರ್ ಮದತ್ತಿಲ್, ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.

ರಜನೀಕಾಂತ್​ರ ‘ಜೈಲರ್’ ಸಿನಿಮಾದಲ್ಲಿ ಮಲಯಾಳಂನ ಸ್ಟಾರ್ ನಟ ಮೋಹನ್​ಲಾಲ್ ಸಹ ನಟಿಸಿದ್ದಾರೆ. ಹಾಗಾಗಿ ‘ಜೈಲರ್’ ಸಿನಿಮಾದ ಮಲಯಾಳಂ ಆವೃತ್ತಿ ಬಿಡುಗಡೆಗೆ ಕೇರಳ ಸಿನಿಮಾ ವಿತರಕರು ಆಸಕ್ತಿ ತೋರುತ್ತಿದ್ದಾರೆ. ಅಂದಹಾಗೆ ‘ಜೈಲರ್’ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us