‘ಅಡ್ಡಾದಿಡ್ಡಿ ಓಡಿಸಿದರೆ ಸಹಿಸಿಕೊಳ್ಳಿ’; ದುಬಾರಿ BMW ಬೈಕ್ ಖರೀದಿಸಿ ವಿಶೇಷ ಮನವಿ ಮಾಡಿದ ನಟಿ ಮಂಜು ವಾರಿಯರ್

ಅಜಿತ್ ಕುಮಾರ್ ಅವರು ಆಗಾಗ ಬೈಕ್​ನಲ್ಲಿ ರೋಡ್​ಟ್ರಿಪ್ ತೆರಳುತ್ತಾರೆ. ಕಳೆದ ವರ್ಷ ಅವರು ಲೇಹ್​-ಲಡಾಕ್ ಭಾಗಕ್ಕೆ ಬೈಕ್​ನಲ್ಲಿ ಪ್ರವಾಸ ತೆರಳಿದ್ದರು. ಇವರ ಗುಂಪಿನಲ್ಲಿ ನಟಿ ಮಂಜು ವಾರಿಯರ್ ಕೂಡ ಇದ್ದರು.

‘ಅಡ್ಡಾದಿಡ್ಡಿ ಓಡಿಸಿದರೆ ಸಹಿಸಿಕೊಳ್ಳಿ’; ದುಬಾರಿ BMW ಬೈಕ್ ಖರೀದಿಸಿ ವಿಶೇಷ ಮನವಿ ಮಾಡಿದ ನಟಿ ಮಂಜು ವಾರಿಯರ್
ಮಂಜು ವಾರಿಯರ್
Follow us
ರಾಜೇಶ್ ದುಗ್ಗುಮನೆ
|

Updated on: Feb 20, 2023 | 12:30 PM

ನಟ ಅಜಿತ್ ಕುಮಾರ್ (Ajith Kumar) ಅವರ ಟ್ಯಾಲೆಂಟ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ನಟನೆಯ ಜೊತೆಗೆ ಸಮಯ ಸಿಕ್ಕಾಗ ಬೈಕ್ ರೈಡಿಂಗ್ ಮಾಡುತ್ತಾರೆ. ಪೈಲಟ್ ಲೈಸೆನ್ಸ್ ಹೊಂದಿರುವ ಭಾರತದ ಏಕೈಕ ಹೀರೋ ಎನ್ನುವ ಖ್ಯಾತಿ ಅವರಿಗೆ ಇದೆ. ಅಷ್ಟೇ ಅಲ್ಲ ಅವರು ಶೂಟಿಂಗ್ ಸ್ಪರ್ಧೆಯಲ್ಲೂ ಪಾಲ್ಗೊಂಡು ಚಿನ್ನದ ಪದಕ ಗೆದ್ದಿದ್ದಾರೆ. ಅವರಿಂದ ಸ್ಫೂರ್ತಿ ಪಡೆದ ನಟಿ ಮಂಜು ವಾರಿಯರ್ (Manju Warrier) ಅವರು ಬೈಕ್​ನ ಖರೀದಿ ಮಾಡಿದ್ದಾರೆ. ಬಿಎಂಡಬ್ಲ್ಯೂ ಜಿಎಸ್​1250 ಬೈಕ್ ಇದಾಗಿದ್ದು, ಭಾರತದಲ್ಲಿ ಇದರ ಬೆಲೆ 25 ಲಕ್ಷ ರೂಪಾಯಿ ಇದೆ.

ಅಜಿತ್ ಕುಮಾರ್ ಅವರು ಆಗಾಗ ಬೈಕ್​ನಲ್ಲಿ ರೋಡ್​ಟ್ರಿಪ್ ತೆರಳುತ್ತಾರೆ. ಕಳೆದ ವರ್ಷ ಅವರು ಲೇಹ್​-ಲಡಾಕ್ ಭಾಗಕ್ಕೆ ಬೈಕ್​ನಲ್ಲಿ ಪ್ರವಾಸ ತೆರಳಿದ್ದರು. ಇವರ ಗುಂಪಿನಲ್ಲಿ ನಟಿ ಮಂಜು ವಾರಿಯರ್ ಕೂಡ ಇದ್ದರು. ಆಗ ಅವರಿಗೆ ಬೈಕ್​ ಬಗ್ಗೆ ಕ್ರೇಜ್ ಸೃಷ್ಟಿಯಾಗಿತ್ತು. ಈಗ ‘ತುನಿವು’ ಗೆದ್ದ ಖುಷಿಯಲ್ಲಿ ಅವರು ಬಿಎಂಡಬ್ಲ್ಯೂ ಜಿಎಸ್​1250 ಬೈಕ್ ಖರೀದಿ ಮಾಡಿದ್ದಾರೆ.

ಬೈಕ್ ಖರೀದಿ ಮಾಡಿದ ವಿಡಿಯೋನ ಪೋಸ್ಟ್ ಮಾಡಿರುವ ಮಂಜು ವಾರಿಯರ್ ಅವರು ವಿಶೇಷ ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ಒಳ್ಳೆಯ ರೈಡರ್ ಆಗೋಕೆ ಇನ್ನೂ ಸಾಕಷ್ಟು ಸಮಯ ಬೇಕಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್ ಓಡಿಸಿದರೆ ದಯವಿಟ್ಟು ಸಹಿಸಿಕೊಳ್ಳಿ. ನನ್ನಂತೆ ಅನೇಕರಿಗೆ ಸ್ಫೂರ್ತಿಯಾದ ಅಜಿತ್ ಕುಮಾರ್​ ಅವರಿಗೆ ಧನ್ಯವಾದ’ ಎಂದು ಮಂಜು ಬರೆದುಕೊಂಡಿದ್ದಾರೆ.

ಅಜಿತ್ ಕುಮಾರ್ ಹಾಗೂ ಮಂಜು ವಾರಿಯರ್ ನಟನೆಯ ‘ತುನಿವು’ ಸಿನಿಮಾ ಈ ವರ್ಷ ಸಂಕ್ರಾಂತಿಗೆ ತೆರೆಗೆ ಬಂತು. ಜನವರಿ 11ರಂದು ರಿಲೀಸ್ ಆದ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್ ಮಾಡಿತು. ಅಜಿತ್ ಕುಮಾರ್ ಹಾಗೂ ಎಚ್​. ವಿನೋದ್ ಕಾಂಬಿನೇಷನ್​ನಲ್ಲಿ ‘ತುನಿವು’ ಸಿನಿಮಾ ಮೂಡಿಬಂತು. ಇವರ ಕಾಂಬಿನೇಷನ್​ನಲ್ಲಿ ಮೂಡಿಬಂದ ಮೂರನೇ ಚಿತ್ರ ಇದಾಗಿದೆ. ಈ ಚಿತ್ರ ಫೆಬ್ರವರಿ 8ಕ್ಕೆ ಒಟಿಟಿಗೆ ಕಾಲಿಟ್ಟು ಸದ್ದು ಮಾಡಿದೆ. ನೆಟ್​ಫ್ಲಿಕ್ಸ್​​ನಲ್ಲಿ ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಪ್ರಸಾರ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ