ತೆಲುಗು ಚಿತ್ರರಂಗದಲ್ಲಿ (Tollywood) ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಪ್ರಾಧಾನ್ಯತೆ. ಸಂಕ್ರಾಂತಿ ಹಬ್ಬವನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾದ ಮುಹೂರ್ತಗಳು, ಚಿತ್ರೀಕರಣಗಳು ನಡೆಯುತ್ತವೆ. ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡುವುದು ಹೆಮ್ಮೆಯ ಸಂಗತಿಯಾಗಿ ಪರಿಗಣಿಸಲಾಗುತ್ತವೆ. ಸಾಮಾನ್ಯ ಬಾಕ್ಸ್ ಆಫೀಸ್ ಫೈಟ್ಗಳು ಒಂದೆಡೆಯಾದರೆ ಸಂಕ್ರಾಂತಿ ಫೈಟ್ ಅದರ ದುಪ್ಪಟ್ಟು. ಪ್ರತಿ ಬಾರಿಯೂ ಸ್ಟಾರ್ ನಟರ ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗುತ್ತವೆ. ಈ ಬಾರಿಯೂ ಸಹ ಹಲವು ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗುತ್ತಿವೆ. ಆದರೆ ಇದು ಕೆಲವು ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸಂಕ್ರಾಂತಿ ಹಬ್ಬಕ್ಕೆ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಬಿಡುಗಡೆ ಆಗಲಿದೆ. ಅದರ ಜೊತೆಗೆ ವೆಂಕಟೇಶ್ ನಟನೆಯ ‘ಸೈಂಧವ’ ಸಿನಿಮಾ ತೆರೆಗೆ ಬರಲಿದೆ. ರವಿತೇಜ ನಟನೆಯ ‘ಈಗಲ್’, ಭಾರಿ ಬಜೆಟ್ ಹಾಕಿ ನಿರ್ಮಿಸಲಾಗಿರುವ ‘ಹನುಮಾನ್’ ಸಿನಿಮಾ. ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’, ವಿಜಯ್ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾಗಳು ಸೇರಿದಂತೆ ಪ್ರಥಮ ದರ್ಜೆ ಸ್ಟಾರ್ಗಳಲ್ಲದ ಇನ್ನೂ ಕೆಲವು ನಟರ ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಲಿವೆ. ಒಟ್ಟಿಗೆ ಸುಮಾರು 14ಕ್ಕೂ ಹೆಚ್ಚು ತೆಲುಗು ಸಿನಿಮಾಗಳು ಸಂಕ್ರಾಂತಿಗೆ ತೆರೆಗೆ ಬರಲಿವೆ.
ಇದನ್ನೂ ಓದಿ:ನಿಗಮ ಮಂಡಳಿ: ಶಾಸಕರ ಸಂಖ್ಯೆಯಷ್ಟೇ ಕಾರ್ಯಕರ್ತರಿಗೂ ಸ್ಥಾನಮಾನ; ಸಂಕ್ರಾಂತಿಯೊಳಗೆ ನೇಮಕ- ಡಿಕೆ ಶಿವಕುಮಾರ್
ಇಷ್ಟೋಂದು ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿರುವುದು ತೆಲುಗು ಚಿತ್ರರಂಗದಲ್ಲಿ ಕೆಲವು ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲಿಯೂ ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಪಕ ಎನಿಸಿಕೊಂಡಿರುವ ದಿಲ್ ರಾಜು, ಇಂದಷ್ಟೆ ಸುದ್ದಿಗೋಷ್ಠಿ ನಡೆಸಿ, ‘ಎಲ್ಲ ನಿರ್ಮಾಪಕರಿಗೂ ಲಾಭ ಆಗಬೇಕು, ಈ ರೀತಿ ಅಕಾರಣವಾಗಿ ನಮ್ಮಲ್ಲಿ ನಾವೇ ಸ್ಪರ್ಧೆ ಸೃಷ್ಟಿಮಾಡಿಕೊಳ್ಳಬಾರದು. ನಿರ್ಮಾಪಕರು ಸ್ವಯಂಪ್ರೇರಿತವಾಗಿ ಸಂಕ್ರಾಂತಿ ರೇಸ್ನಿಂದ ಹಿಂದೆ ಸರಿದು, ಸರತಿಯಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.
ರವಿತೇಜ ನಟನೆಯ ‘ಈಗಲ್’ ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗುವುದಾಗಿ ಈ ಹಿಂದೆ ಘೋಷಿಸಲಾಗಿತ್ತು. ಇದೀಗ ಸಂಕ್ರಾಂತಿಗೆ ಹಲವು ಸಿನಿಮಾಗಳು ಬಿಡುಗಡೆ ಆಗುತ್ತಿರುವ ಕಾರಣ, ಅವರು ರೇಸ್ನಿಂದ ಹಿಂದೆ ಸರಿದಿದ್ದು, ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ. ಆದರೆ ಈಗಲೂ ಸಹ ಹಲವು ಸಿನಿಮಾಗಳು ಸಂಕ್ರಾಂತಿ ರೇಸ್ನಲ್ಲಿದ್ದು ಪರಸ್ಪರ ಸ್ಪರ್ಧೆಯಿಂದ ಹಲವು ಸಿನಿಮಾಗಳಿಗೆ ನಷ್ಟವಾಗುವುದು ಖಾಯಂ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ