
ತಮಿಳಿನಲ್ಲಿ ಕಮಲ್ ಹಾಸನ್ರ (Kamal Haasan) ‘ವಿಕ್ರಂ’, ರಜನೀಕಾಂತ್ರ (Rajinikanth) ‘ಜೈಲರ್’, ಕನ್ನಡದಲ್ಲಿ ಶಿವಣ್ಣನ ಸಿನಿಮಾ ‘ಘೋಸ್ಟ್’, ತೆಲುಗಿನಲ್ಲಿ ಬಾಲಕೃಷ್ಣದ ‘ಭಗವಂತ್ ಕೇಸರಿ’ ಎಲ್ಲವೂ ಸೂಪರ್ ಹಿಟ್ ಆಗಿವೆ. ಗಮನಸಿಬೇಕಾದದ್ದೆಂದರೆ ಆಯಾ ಚಿತ್ರರಂಗದ ಹಿರಿಯ ನಟರು ಸೂಪರ್-ಡೂಪರ್ ಹಿಟ್ಗಳನ್ನು ನೀಡುತ್ತಿದ್ದಾರೆ. ಆದರೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಮಾತ್ರ ಕಳೆದ ಕೆಲವು ವರ್ಷಗಳಿಂದಲೂ ಒಂದೇ-ಒಂದು ಸರಿಯಾದ ಹಿಟ್ ಸಿನಿಮಾ ಕೊಡಲು ಸಾಧ್ಯವಾಗಿಲ್ಲ.
ಅದೇ ಮಾಸ್-ಮಸಾಲಾ ಸಿನಿಮಾಗಳು, ರೀಮೇಕ್ಗಳನ್ನು ನಂಬಿ ಒಂದರ ಹಿಂದೊಂದು ಫ್ಲಾಪ್ಗಳನ್ನೇ ಕಳೆದ ಕೆಲವು ವರ್ಷಗಳಿಂದಲೂ ನೀಡುತ್ತಾ ಬಂದಿದ್ದಾರೆ ಮೆಗಾಸ್ಟಾರ್ ಚಿರಂಜೀವಿ. ಮೆಗಾಸ್ಟಾರ್ ನಟಿಸಿದ್ದ ಈ ಹಿಂದಿನ ಸಿನಿಮಾ ‘ಭೋಲಾ ಶಂಕರ್’ ಬಾಕ್ಸ್ ಆಫೀಸ್ನಲ್ಲಿ ಇನ್ನಿಲ್ಲದಂತೆ ಸೋಲು ಕಂಡಿತು. ಅದರ ಹಿಂದೆ ಬಿಡುಗಡೆ ಆಗಿದ್ದ ‘ವಾಲ್ತೇರು ವೀರಯ್ಯ’, ‘ಗಾಡ್ ಫಾದರ್’, ‘ಆಚಾರ್ಯ’ ಸಿನಿಮಾಗಳು ಸಹ ಸೋಲು ಕಂಡಿದ್ದವು.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಮೆಗಾಸ್ಟಾರ್ ಚಿರಂಜೀವಿ ಈಗ ಬುದ್ಧಿಕಲಿತಂತಿದ್ದು, ಸಿನಿಮಾ ಆಯ್ಕೆ ವಿಧಾನವನ್ನು ಬದಲು ಮಾಡಿಕೊಂಡಿದ್ದಾರೆ. ಅದೇ ಹಳೆ ಮಾದರಿ ಕಮರ್ಶಿಯಲ್, ಮಾಸ್ ಮಸಾಲಾ ಸಿನಿಮಾ ಅಥವಾ ರೀಮೇಕ್ ಸಿನಿಮಾದ ಬದಲಿಗೆ ಹೊಸ ಕತೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಚಿರಂಜೀವಿ ತಮ್ಮ 156ನೇ ಸಿನಿಮಾಕ್ಕೆ ಭಿನ್ನ ಕತೆಯನ್ನು ಆಯ್ದುಕೊಂಡಿದ್ದು, ಈ ಸಿನಿಮಾದಲ್ಲಿ ದಿಗ್ಗಜರ ಸಮಾಗಮ ಆಗುತ್ತಿರುವುದು ವಿಶೇಷ.
ಇದನ್ನೂ ಓದಿ:ಬಾಲ್ಯದ ಗೆಳೆಯನಿಗೆ ಅನಾರೋಗ್ಯ, ಕೂಡಲೇ ಸಹಾಯಕ್ಕೆ ಧಾವಿಸಿದ ಮೆಗಾಸ್ಟಾರ್ ಚಿರಂಜೀವಿ
ಅಧ್ಯಾತ್ಮ, ಅದ್ಭುತ, ಪಂಚಭೂತ ಇನ್ನೂ ಅನೇಕ ವಿಷಯಗಳನ್ನು ಒಳಗೊಂಡ ಒಂದು ಫ್ಯಾಂಟಸಿ ಕತೆಯ ಸಿನಿಮಾದಲ್ಲಿ ಚಿರಂಜೀವಿ ನಟಿಸಲಿದ್ದಾರೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲವಾದರೂ ಒಂದು ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಪೋಸ್ಟರ್ನಲ್ಲಿ ಬೆಂಕಿ, ನೀರು, ಪರಿಸರ, ಯಾವು, ಆಕಾಶ ಹೀಗೆ ಪಂಚಭೂತಗಳ ಚಿತ್ರಗಳಿದ್ದು, ಅವಷ್ಟಕ್ಕೂ ಮಧ್ಯಭಾಗದಲ್ಲಿ ಶಿವನ ತ್ರಿಶೂಲ ಇರುವಂತೆ ಡಿಸೈನ್ ಮಾಡಲಾಗಿದೆ.
ಈ ಸಿನಿಮಾದಲ್ಲಿ ತೆಲುಗು ಚಿತ್ರರಂಗದ ಕೆಲವು ದಿಗ್ಗಜರು ಒಂದಾಗುತ್ತಿರುವುದು ಮತ್ತೊಂದು ವಿಶೇಷ. ಸಿನಿಮಾಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಗೀತ ನೀಡಲಿದ್ದಾರೆ. ಹಾಡುಗಳನ್ನು ಮತ್ತೊಬ್ಬ ಆಸ್ಕರ್ ವಿಜೇತ ಚಂದ್ರಭೋಸ್ ರಚಿಸಲಿದ್ದಾರೆ. ಸಿನಿಮಾವನ್ನು ಯುವ ನಿರ್ದೇಶಕ ವಶಿಷ್ಠ ನಿರ್ದೇಶನ ಮಾಡಲಿದ್ದು, ಕೆಲವು ದಿಗ್ಗಜ ನಟರು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವನ್ನು ಯುವಿ ಕ್ರಿಯೇಷನ್ಸ್ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ.
ಸತತ ಫ್ಲಾಪ್ ಸಿನಿಮಾಗಳನ್ನು ನೀಡಿದ್ದರೂ ಸಹ ಚಿರಂಜೀವಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿಲ್ಲ. ತಮ್ಮ 156ನೇ ಸಿನಿಮಾದ ಬಳಿಕ ಮಗಳು ಸುಶ್ಮಿತಾ ಕೋನಿಡೇಲ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ಚಿರಂಜೀವಿ ನಟಿಸಲಿದ್ದಾರೆ. ಆ ಸಿನಿಮಾವನ್ನು ಚಿರಂಜೀವಿ ಮಗ, ನಟ ರಾಮ್ ಚರಣ್ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅದಾದ ಬಳಿಕ ಬೋಯಪಾಟಿ ಸೀನು ನಿರ್ದೇಶನದ ಹೊಸ ಸಿನಿಮಾದಲ್ಲಿ ಚಿರಂಜೀವಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ