
ದಕ್ಷಿಣ ಭಾರತದಲ್ಲಿ ಚಿತ್ರರಂಗ ಮತ್ತು ರಾಜಕೀಯಕ್ಕೆ ದಶಕಗಳ ಕಾಲದ ಅವಿನಾಭಾವ ಸಂಬಂಧವಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಂತೂ ಸಿನಿ ತಾರೆಗಳು ಕೇವಲ ನಟರಾಗಿ ಉಳಿಯದೆ, ಜನರ ಆಶಾಕಿರಣವಾಗಿ, ರಾಜಕೀಯ ಶಕ್ತಿಯಾಗಿ ಬೆಳೆದ ಇತಿಹಾಸವಿದೆ. 2026ರಲ್ಲಿ ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಅವರ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಜುಲೈ 23 ರಂದು ತೆರೆಗೆ ಬರುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಪಟ್ಟಕ್ಕೇರಿದ ಎಂ.ಜಿ.ಆರ್, ಎನ್‌ಟಿಆರ್ ಮತ್ತು ಜಯಲಲಿತಾ ಅವರ ಜೀವನದಲ್ಲೂ ಸಿಎಂ ಆದ ಬಳಿಕ ಅಥವಾ ಆ ಸಂಕ್ರಮಣ ಅವಧಿಯಲ್ಲಿ ಸಿನಿಮಾಗಳು ರಿಲೀಸ್ ಆದ ಸ್ವಾರಸ್ಯಕರ ಇತಿಹಾಸವಿದೆ.
ಈ ವರ್ಷ ನಡೆದ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’. 2024ರ ಸೆಪ್ಟೆಂಬರ್‌ನಲ್ಲಿ ಅಧಿಕೃತವಾಗಿ ಘೋಷಣೆಯಾಗಿದ್ದ ಈ ಚಿತ್ರವು ಸೆನ್ಸಾರ್ ಮಂಡಳಿಯ ಸಮಸ್ಯೆಗಳು ಹಾಗೂ ಲೀಕ್ಸ್ ಕಾರಣದಿಂದ ತಡವಾಗಿತ್ತು. ಇದೀಗ ವಿಜಯ್ ಅವರು ಮುಖ್ಯಮಂತ್ರಿಯಾದ ಬಳಿಕ ಜುಲೈ 23ರಂದು ಈ ಚಿತ್ರ ಅದ್ಧೂರಿಯಾಗಿ ತೆರೆಕಾಣುತ್ತಿದ್ದು, ರಾಜಕೀಯವಾಗಿ ಮತ್ತು ಸಿನಿಮೀಯವಾಗಿ ಭಾರಿ ಸಂಚಲನ ಮೂಡಿಸಿದೆ.
ಭಾರತೀಯ ರಾಜಕಾರಣದಲ್ಲಿ ಸಿನಿಮಾ ವರ್ಚಸ್ಸನ್ನು ಯಶಸ್ವಿಯಾಗಿ ಬಳಸಿ ಸಿಎಂ ಆದ ಮೊದಲ ಸೂಪರ್‌ಸ್ಟಾರ್ ಎಂ.ಜಿ.ಆರ್. 1977ರಲ್ಲಿ ಅವರು ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ತೆರೆಕಂಡ ಮೊದಲ ಸಿನಿಮಾ ಎಂದರೆ ಅದು ‘ಇಂದ್ರು ಪೋಲ್ ಎಂದ್ರು ವಾಳಗ. 1978ರಲ್ಲಿ ‘ಮಧುರೈಯೈ ಮೀಟ್ಟ ಸುಂದರಪಾಂಡಿಯನ್’ ಚಿತ್ರ ಬಿಡುಗಡೆಯಾಯಿತು. ಈ ಚಿತ್ರದ ಬಹುತೇಕ ಚಿತ್ರೀಕರಣ ಅವರು ಸಿಎಂ ಆಗುವ ಮುನ್ನವೇ ಮುಕ್ತಾಯಗೊಂಡಿತ್ತು. ಸಿಎಂ ಆದ ಬಳಿಕ ಅವರು ಸಿನಿಮಾ ಮಾಡಿಲ್ಲ.
ತೆಲುಗು ಆತ್ಮಗೌರವದ ಮುಖವಾಡವಾಗಿ ಮೂಡಿಬಂದವರು ಎನ್‌ಟಿಆರ್. 1984ರಲ್ಲಿ ಅವರು ಸಿಎಂ ಆದರು. ಅವರು ಮುಖ್ಯಮಂತ್ರಿಯಾದ ಬಳಿಕ ‘ಶ್ರೀಮದ್ವಿರಾಟ್ ವೀರಬ್ರಹ್ಮೇಂದ್ರ ಸ್ವಾಮಿ ಚರಿತ್ರೆ’ ಸಿನಿಮಾ ತೆರೆಗೆ ಬಂತು. ಸಿಎಂ ಆಗುವ ಮುನ್ನವೇ ಈ ಚಿತ್ರದ ಶೂಟಿಂಗ್ ಆರಂಭಿಸಿದ್ದರೂ, ಚಿತ್ರ ಸಂಪೂರ್ಣವಾಗಿ ಪ್ರೇಕ್ಷಕರ ಮುಂದೆ ಬಂದದ್ದು ಅವರು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆಯೇ ಎಂಬುದು ವಿಶೇಷ.
ಇದನ್ನೂ ಓದಿ: ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ದೊಡ್ಡ ಸೀಕ್ರೆಟ್ ರಿವೀಲ್
ನಟನೆಯಿಂದ ರಾಜಕೀಯಕ್ಕೆ ಬಂದು ತಮಿಳುನಾಡಿನ ಜನರ ‘ಅಮ್ಮ’ ಆಗಿ ಗುರುತಿಸಿಕೊಂಡವರು ಜಯಲಲಿತಾ. ಇವರು 1980ರ ಸುಮಾರಿಗೆ ತಮ್ಮ ಪೂರ್ಣಾವಧಿ ನಟನಾ ವೃತ್ತಿಗೆ ಬ್ರೇಕ್ ಹಾಕಿದ್ದರು. ಅವರು ರಾಜಕೀಯ ನಾಯಕಿಯಾಗಿ, ಮುಖ್ಯಮಂತ್ರಿಯಾದ ಬಳಿಕ ‘ನೀಂಗ ನಲ್ಲ ಇರುಕ್ಕನುಮ್’ ಎಂಬ ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಸಿಎಂ ಪಾತ್ರವನ್ನೇ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.