ರಾಜಮೌಳಿ ಅಲ್ಲ ಆ ಒಬ್ಬ ವ್ಯಕ್ತಿಗಾಗಿ ಆಸ್ಕರ್, ಆದರೆ ಗೆದ್ದಾಗ ಭಾವುಕಗೊಳ್ಳಲಿಲ್ಲ ಏಕೆ? ಕೀರವಾಣಿ ಭಾವುಕ ಮಾತು

|

Updated on: Apr 14, 2023 | 6:30 PM

MM Keeravani: ತಮಗೆ ಆಸ್ಕರ್ ದೊರೆತ ಅನುಭವದ ಬಗ್ಗೆ ಮಾತನಾಡಿದ ಎಂಎಂ ಕೀರವಾಣಿ, ಆಸ್ಕರ್ ಗೆದ್ದಾಗ ತಾವೇಕೆ ಭಾವುಕಗೊಳ್ಳಲಿಲ್ಲವೆಂದು ಹೇಳಿದ್ದಾರೆ.

ರಾಜಮೌಳಿ ಅಲ್ಲ ಆ ಒಬ್ಬ ವ್ಯಕ್ತಿಗಾಗಿ ಆಸ್ಕರ್, ಆದರೆ ಗೆದ್ದಾಗ ಭಾವುಕಗೊಳ್ಳಲಿಲ್ಲ ಏಕೆ? ಕೀರವಾಣಿ ಭಾವುಕ ಮಾತು
ಎಂಎಂ ಕೀರವಾಣಿ
Follow us on

ಆರ್​ಆರ್​ಆರ್ (RRR) ಸಿನಿಮಾದ ಹಾಡಿಗೆ ಆಸ್ಕರ್ (Oscar) ಗೆದ್ದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಇತಿಹಾಸ ಬರೆದಿದ್ದಾರೆ. ಭಾರತೀಯ ನಿರ್ಮಾಣದ ಸಿನಿಮಾ ಒಂದಕ್ಕೆ ಒದಗಿಬಂದ ಮೊದಲ ಆಸ್ಕರ್ ಅನ್ನು ಎತ್ತಿಹಿಡಿದ ಶ್ರೇಯ ಎಂಎಂ ಕೀರವಾಣಿ ಹಾಗೂ ಗೀತ ರಚನೆಕಾರ ಚಂದ್ರ ಭೋಸ್ (Chandra Bose) ಅವರದ್ದಾಗಿದೆ. ಆಸ್ಕರ್ ಗೆದ್ದ ಬಳಿಕ ಆರ್​ಆರ್​ಆರ್ ತಂಡವನ್ನು ಹಾಗೂ ಎಂಎಂ ಕೀರವಾಣಿ ಹಾಗೂ ಇನ್ನಿತರರನ್ನು ಬಹುವಾಗಿ ಪ್ರಶಂಸಿಸಲಾಗಿದೆ, ಹಲವು ಸನ್ಮಾಗಳನ್ನು ಮಾಡಲಾಗಿದೆ. ಇತ್ತೀಚೆಗೆ ತೆಲುಗು ಚಿತ್ರರಂಗದ ಎಲ್ಲ ವಿಭಾಗಗಳವರೂ ಒಟ್ಟು ಸೇರಿ ಆಸ್ಕರ್ ಗೆದ್ದ ಮಹನೀಯರಿಗೆ ಸನ್ಮಾನ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಎಂಎಂ ಕೀರವಾಣಿ ತುಸು ಮನಸುಬಿಚ್ಚಿ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಉತ್ಸವ ಮೂರ್ತಿಗಳನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಲಾಗುತ್ತದೆ. ನಾನು ಹಾಗೂ ಗಾಯಕ ಚಂದ್ರ ಭೋಸ್ ಉತ್ಸವ ಮೂರ್ತಿಗಳು ಆದರೆ ಮೂಲದೇವರು ರಾಜಮೌಳಿ ಹಾಗೂ ಪ್ರೇಮ್ ರಕ್ಷಿತ್ ಎಂದಿದ್ದಾರೆ. ಮುಂದುವರೆದು, ಆಸ್ಕರ್ ಗೆದ್ದಾಗ ಎಲ್ಲರೂ ಭಾವುಕರಾಗುತ್ತಾರೆ, ಅದೊಂದು ಅದ್ಭುತವಾದ ಕ್ಷಣ ಆದರೆ ನೀವೇಕೆ ಭಾವುಕರಾಗಲಿಲ್ಲ ಎಂದು ಕಾರ್ತಿಕೇಯ ಪತ್ನಿ ನನ್ನನ್ನು ಕೇಳಿದರು. ಹೌದು ನಾನು ಭಾವುಕಗೊಳ್ಳಲಿಲ್ಲ, ಒಂದು ಒಳ್ಳೆಯ ರಸಗುಲ್ಲ ತಿಂದ ಬಳಿಕ ನಿಮಗೆ ಎಷ್ಟೆ ರುಚಿಯಾದ ಟೀ ಕುಡಿದರು ಅದರ ರುಚಿ ಹತ್ತುವುದಿಲ್ಲ ಹಾಗೆಯೇ ನಾನು ನನ್ನ ಮೊದಲ ಹಾಡು ರೆಕಾರ್ಡ್ ಮಾಡಿದ್ದು ನನ್ನ ಪಾಲಿಗೆ ಅತ್ಯದ್ಭುತ ಅನುಭವ, ಅಂದು ನನ್ನ ಹಾಡಿಗೆ ದೇವಾಲಯದಂಥಹಾ ಪ್ರಸಾದ್ 70 ಎಂಎಂ ಲ್ಯಾಬ್​ ನೀಡಿ ರೆಕಾರ್ಡ್ ಮಾಡಿಸಿದ್ದರು ಅದು ನನ್ನ ಪಾಲಿಗೆ ಅತ್ಯಂತ ಮಹತ್ವದ್ದು, ಅದು ನನಗೆ ಭಾವುಕ ಅನುಭವ, ಹಾಗಾಗಿ ಆಸ್ಕರ್ ಗೆದ್ದಾಗ ನಾನು ಭಾವುಕ ಆಗಲಿಲ್ಲ ಎಂದಿದ್ದಾರೆ ಕೀರವಾಣಿ.

ಮಾತು ಮುಂದುವರೆಸಿ, ”ನನಗೆ ಆಸ್ಕರ್​ನ ಮಹತ್ವದ ಬಗ್ಗೆ ಗೊತ್ತಿತ್ತು, ಆದರೆ ಅದರ ಬಗ್ಗೆ ತೀರ ಆಸಕ್ತಿ ಇರಲಿಲ್ಲ. ಅದೂ ಒಂದು ಪ್ರಶಸ್ತಿ ಅಷ್ಟೆ ಎಂಬಂಥಹಾ ಭಾವವಿತ್ತು. ಆದರೆ ಆಸ್ಕರ್​ಗೆ ತೆರಳುವ ಮುಂಚೆ ಒಮ್ಮೆ ಹೀಗೆ ಮಾತನಾಡುವಾಗ ನನ್ನ ಪತ್ನಿ ಹೇಳಿದರು ಬದುಕಿದರೆ ಒಂದು ದಿನವಾದರೂ ರಾಮೋಜಿ ರಾವ್ ಅವರ ರೀತಿ ಬದುಕಬೇಕು ಎಂದು. ಬಳಿಕ ಆಸ್ಕರ್​ಗೆ ಹೊರಡುವ ಮುನ್ನ ನಾವು ಅವರನ್ನು ಭೇಟಿಯಾಗಲು ಹೋದೆವು. ಅವರು, ಆಸ್ಕರ್ ಅನ್ನು ಮನೆಗೆ ತಂದು ತೋರಿಸು ಎಂದರು. ರಾಮೋಜಿ ರಾವ್, ಆಸ್ಕರ್​ಗೆ ಇಷ್ಟೋಂದು ಮಹತ್ವ ನೀಡುತ್ತಿದ್ದಾರೆ ಎಂದರೆ ಅದು ಖಂಡಿತ ಮಹತ್ವದ್ದೇ ಎನಿಸಿತು. ಆಗ ನನಗೆ ರಾಮೋಜಿ ರಾವ್ ಅವರಿಗಾಗಿ ಆದರೂ ಆಸ್ಕರ್ ನಮಗೆ ಬರಬೇಕು ಎಂದುಕೊಂಡೆ, ಅದಕ್ಕಾಗಿ ನಾನೂ ಸಹ ಪ್ರಾರ್ಥಿಸಲು ಆರಂಭಿಸಿದೆ” ಎಂದಿದ್ದಾರೆ ಕೀರವಾಣಿ.

ಇದನ್ನೂ ಓದಿ: MM Keeravani: ‘ನನಗೆ ಆಸ್ಕರ್​ ಸಿಕ್ಕಿದ್ದು ಇದೇ ಮೊದಲೇನಲ್ಲ’: 30 ವರ್ಷದ ಹಿಂದಿನ ವಿಷಯ ತೆರೆದಿಟ್ಟ ಎಂಎಂ ಕೀರವಾಣಿ

ಇನ್ನು ನಮಗೆ ಪ್ರಶಸ್ತಿ ಘೋಷಿಸುವ ಕ್ಷಣ ಹತ್ತಿರ ಬರುತ್ತಾ ತುಸು ಟೆನ್ಷನ್ ಆಗಿದ್ದು ನಿಜ. ಆದರೆ ಒಮ್ಮೆ ಆಸ್ಕರ್ ಗೆದ್ದ ಬಳಿಕ ಎಲ್ಲವೂ ಮಾಮೂಲು. ಎವರೆಸ್ಟ್ ಶಿಖರ ಏರುವವರೆಗೆ ಶ್ರಮ, ಮೇಲೇರಬೇಕೆಂಬ ತಪನ ಎಲ್ಲವೂ ಇರುತ್ತದೆ ಒಮ್ಮೆ ಏರಿದ ಬಳಿಕ ಇಷ್ಟೇನಾ ಎಂಬಂತಾಗುತ್ತದೆ. ನನ್ನ ಪರಿಸ್ಥಿತಿಯೂ ಅದೆ. ಒಂದೈದು ನಿಮಿಷ ಬಹಳ ಎಗ್ಸೈಟ್​ಮೆಂಟ್ ಎನಿಸಿತು. ಈ ಹಾಡಿನ ಮೂಲ ಕಾರಣಕರ್ತರಾದ ರಾಜಮೌಳಿ, ಪ್ರೇಮ್ ರಕ್ಷಿತ್, ಚೆನ್ನಾಗಿ ಡ್ಯಾನ್ಸ್ ಮಾಡಿದ ಇಬ್ಬರು ಹೀರೋಗಳು, ಅವರ ಜೊತೆಗೆ ಕುಣಿದ ಸಹನೃತ್ಯಗಾರರು ಎಲ್ಲರಿಂದಾಗಿ ಈ ಹಾಡು ಜನಪ್ರಿಯಗೊಂಡಿತು ಎಂದಿದ್ದಾರೆ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ