
ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ಲಾಲ್ (Mohanlal) ಅವರಿಗೆ ಈ ವರ್ಷದ ಕೊನೆಯಲ್ಲಿ ನೋವಿನ ಸಂದರ್ಭ ಎದುರಾಗಿದೆ. ಅವರ ತಾಯಿ ಶಾಂತಕುಮಾರಿ ನಿಧನರಾಗಿದ್ದಾರೆ. ಮಂಗಳವಾರ (ಡಿಸೆಂಬರ್ 30) ಶಾಂತಕುಮಾರಿ (Shanthakumari) ಅವರು ಎರ್ನಾಕಲಮ್ ನಿವಾಸದಲ್ಲಿ ಕೊನೆಯುಸಿರು ಎಳೆದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಶಾಂತಕುಮಾರಿ ಅವರು ನಿಧನರಾಗುವ ವೇಳೆಗೆ ಮೋಹನ್ಲಾಲ್ ಅವರು ಮನೆಯಲ್ಲಿ ಇರಲಿಲ್ಲ. ಚಿತ್ರೀಕರಣದ ಸಲುವಾಗಿ ಅವರು ಹೊರಗಡೆ ಹೋಗಿದ್ದರು. ತಾಯಿಯ ನಿಧನದ (Mohanlal Mother Death) ಸುದ್ದಿ ತಿಳಿದು ಕೂಡಲೇ ಮನೆಗೆ ವಾಪಸ್ಸಾದರು.
ಶಾಂತಕುಮಾರಿ ಅವರ ನಿಧನದಿಂದಾಗಿ ಮೋಹನ್ಲಾಲ್ ಅವರ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಸ್ನೇಹಿತರು ಮತ್ತು ಆಪ್ತರು ಬಂದು ಸಂತಾಪ ಸೂಚಿಸುತ್ತಿದ್ದಾರೆ. ಖ್ಯಾತ ನಟ ಮಮ್ಮುಟಿ ಅವರು ಆಗಮಿಸಿ ಶಾಂತಕುಮಾರಿ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಶಾಂತಕುಮಾರಿ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.
ಹಲವು ವರ್ಷಗಳಿಂದ ಶಾಂತಕುಮಾರಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ತಿರುವನಂತಪುರಂನಲ್ಲಿ ಅವರು ಹೆಚ್ಚು ಕಾಲ ವಾಸವಾಗಿದ್ದರು. ಆದರೆ ಸ್ಟ್ರೋಕ್ ಆದ ಬಳಿಕ ಅವರನ್ನು ಕೊಚ್ಚಿಗೆ ಕರೆದುಕೊಂದು ಬಂದು ಮೋಹನ್ಲಾಲ್ ಚಿಕಿತ್ಸೆ ಕೊಡಿಸುತ್ತಿದ್ದರು. ಕಳೆದ 10 ವರ್ಷಗಳಿಂದ ಶಾಂತಕುಮಾರಿ ಅವರು ಹಾಸಿಗೆ ಹಿಡಿದಿದ್ದರು. ಎರ್ನಾಕುಲಂ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು.
ಮೋಹನ್ಲಾಲ್ ಅವರ ಸಾಧನೆಗೆ ತಾಯಿ ಶಾಂತಕುಮಾರಿ ಅವರು ಪ್ರೇರಣೆ ಆಗಿದ್ದರು. ಈ ವರ್ಷ ಮೋಹನ್ಲಾಲ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂತು. ಪ್ರಶಸ್ತಿ ಸ್ವೀಕರಿಸಿ ಕೊಚ್ಚಿಗೆ ಮರಳಿದ ಬಳಿಕ ಅವರು ಮೊದಲು ಭೇಟಿ ಆಗಿದ್ದೇ ತಮ್ಮ ತಾಯಿಯನ್ನು. ‘ಅಮ್ಮಂದಿರ ದಿನ’ದ ಪ್ರಯುಕ್ತ ಮೋಹನ್ಲಾಲ್ ಅವರು ತಾಯಿಯ ಫೋಟೋವನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಗೌರವ ಪಡೆದ ಮಲಯಾಳಂ ನಟ ಮೋಹನ್ಲಾಲ್
ಶಾಂತಕುಮಾರಿ ಅವರ ಪತಿ ವಿಶ್ವನಾಥ್ ನಾಯರ್ ಅವರು ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಅವರು ಕೂಡ ಅನಾರೋಗ್ಯದಿಂದ ಮೃತರಾಗಿದ್ದರು. ಹಿರಿಯ ಮಗ ಪ್ಯಾರೆಲಾಲ್ ಅವರು 2000ನೇ ಇಸವಿಯಲ್ಲಿ ಮರಣಹೊಂದಿದ್ದರು. ಮೋಹನ್ಲಾಲ್ ಅವರು ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ತಾಯಿಗಾಗಿ ಸಮಯ ನೀಡುತ್ತಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.