ಮೋಹನ್ಲಾಲ್ ನಟನೆಯ ‘ತುಡರುಂ’ ಸಿನಿಮಾ ಮೇಲೆ ಚಿತ್ರಕತೆ ಕದ್ದ ಆರೋಪ
Thudarum movie: ಮೋಹನ್ಲಾಲ್ ನಟನೆಯ ‘ತುಡರುಂ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಯಶಸ್ಸು ಗಳಿಸಿದೆ. ಒಟಿಟಿಯಲ್ಲಿಯೂ ಅಬ್ಬರಿಸುತ್ತಿದೆ. ಆದರೆ ಇದೀಗ ಮಲಯಾಳಂನ ಸಿನಿಮಾ ನಿರ್ದೇಶಕನೊಬ್ಬ ಕೃತಿಚೌರ್ಯದ ಆರೋಪ ಮಾಡಿದ್ದಾರೆ. ‘ತುಡರುಂ’ ಸಿನಿಮಾ ಅನ್ನು ತನ್ನ ಚಿತ್ರಕತೆ ಕದ್ದು ನಿರ್ಮಿಸಲಾಗಿದೆ ಎಂದಿದ್ದಾರೆ.

ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್ (Mohanlal) ನಟನೆಯ ‘ತುಡರುಂ’ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಏಪ್ರಿಲ್ 25 ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಕಲೆಕ್ಷನ್ ಮಾಡಿತ್ತು. ಒಟಿಟಿಗೆ ಬಂದ ಬಳಿಕವೂ ಸಹ ದೊಡ್ಡ ಸಂಖ್ಯೆಯ ವೀಕ್ಷಣೆಯನ್ನು ಪಡೆದುಕೊಂಡಿದೆ. ಸಿನಿಮಾ ಅನ್ನು ಮತ್ತೊಂದು ‘ದೃಶ್ಯಂ’ ಎಂದೇ ಬಣ್ಣಿಸಲಾಗಿತ್ತು. ಆದರೆ ಇದೀಗ, ಸಿನಿಮಾ ವಿರುದ್ಧ ಕೃತಿಚೌರ್ಯದ ಆರೋಪ ಕೇಳಿಬಂದಿದೆ. ಮಲಯಾಳಂನ ನಿರ್ದೇಶಕನೊಬ್ಬ ‘ತುಡರುಂ’ ಸಿನಿಮಾ ನನ್ನದೇ ಚಿತ್ರಕತೆಯನ್ನು ಕದ್ದು ಮಾಡಲಾಗಿರುವ ಸಿನಿಮಾ ಎಂದಿದ್ದಾರೆ.
ನಿರ್ದೇಶಕ ಸನಲ್ ಕುಮಾರ್ ಸಸಿಧರನ್ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ತನ್ನ ‘ಥಿಯಟ್ಟಮ್’ ಸಿನಿಮಾದ ಚಿತ್ರಕತೆಯನ್ನು ಕದ್ದು ‘ತುಡರುಂ’ ಸಿನಿಮಾ ಮಾಡಲಾಗಿದೆ ಎಂದಿದ್ದಾರೆ. ಸನಲ್ ಕುಮಾರ್ ಸಸಿಧರನ್, ಹೇಳಿರುವಂತೆ ಅವರು ‘ಥಿಯಟ್ಟಮ್’ ಸಿನಿಮಾದ ಕತೆಯನ್ನು 2020 ರಲ್ಲಿ ಬರೆದಿದ್ದರಂತೆ. ಆದರೆ ಅನಿವಾರ್ಯ ಕಾರಣಗಳಿಂದ ಇನ್ನೂ ಸಿನಿಮಾ ಮಾಡಿಲ್ಲವಂತೆ.
ಸನಲ್ ಕುಮಾರ್ ಸಸಿಧರನ್ ಬರೆದುಕೊಂಡಿರುವಂತೆ, ‘ತುಡರುಂ’ ಸಿನಿಮಾದ ಮೂಲ ಕತೆ, ಐಡಿಯಾ ತನ್ನ ಚಿತ್ರಕತೆಯನ್ನು ಹೋಲುತ್ತದೆ. ಆದರೆ ಕದ್ದಿರುವುದು ಗೊತ್ತಾಗಬಾರದೆಂದು ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ನನ್ನ ಸಿನಿಮಾನ ಮೂಲ ಭಾವವನ್ನು ಕದಿಯಲು ಅವರು ವಿಫಲರಾಗಿದ್ದಾರೆ. ಅವರಿಗೆ ಅಷ್ಟು ಬುದ್ಧಿವಂತಿಕೆ ಇಲ್ಲ ಅನಿಸುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ:ಮೋಹನ್ಲಾಲ್ ಸಿನಿಮಾ ಚಿತ್ರಮಂದಿರದಲ್ಲಿ ಸೂಪರ್ ಹಿಟ್, ಒಟಿಟಿಯಲ್ಲಿ ಫ್ಲಾಪ್
‘ಚಿತ್ರಕತೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದರೂ ಸಹ ಕೆಲವು ಪ್ರಮುಖ ಡೈಲಾಗ್ಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ನಾನು ಬರೆದ ಚಿತ್ರಕತೆಯಲ್ಲಿ ‘ಕೊನ್ನಾಲ್ ಪಾಪಂ ತಿನ್ನಾಲ್ ತೀರುಂ’ ಡೈಲಾಗ್ ಅತ್ಯಂತ ಮಹತ್ವದ್ದಾಗಿದೆ. ಅದೇ ಡೈಲಾಗ್ ಅನ್ನು ‘ತುಡರುಂ’ ಸಿನಿಮಾನಲ್ಲಿಯೂ ಉಳಿಸಿಕೊಳ್ಳಲಾಗಿದೆ. ಎಷ್ಟೇ ಬುದ್ಧಿವಂತ ಕಳ್ಳನಾದರೂ ಸಾಕ್ಷಿ ಉಳಿಸುತ್ತಾನೆ. ಹಾಗೆಯೇ ಇಲ್ಲೂ ಸಹ ಆ ಒಂದು ಡೈಲಾಗ್ನಿಂದ ಅವರು ಸಿಕ್ಕಿಹಾಕಿಕೊಂಡಿದ್ದಾರೆ’ ಎಂದಿದ್ದಾರೆ ಸನಲ್ ಕುಮಾರ್ ಸಸಿಧರನ್.
ಟ್ಯಾಕ್ಸಿ ಡ್ರೈವರ್ ಒಬ್ಬ ತನ್ನ ಕುಟುಂಬಕ್ಕಾಗಿ ದುರುಳ ಪೊಲೀಸ್ ಅಧಿಕಾರಿಗಳ ವಿರುದ್ಧ ಹೋರಾಡುವ ಕತೆ ‘ತುಡರುಂ’ ಸಿನಿಮಾನಲ್ಲಿದೆ. ಸಿನಿಮಾ ಅನ್ನು ತರುಣ್ ಮೂರ್ತಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಚಿತ್ರಕತೆಯನ್ನು ಕೆಆರ್ ಸುನಿಲ್ ಮತ್ತು ತರುಣ್ ಮೂರ್ತಿ ಬರೆದಿದ್ದಾರೆ. ಸುಮಾರು 28 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 300 ಕೋಟಿಗೂ ಹೆಚ್ಚು ಹಣ ಗಳಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




