ಸ್ಟಾರ್ ನಟರ ಚಿತ್ರಗಳಲ್ಲಿ ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಸಿನಿಮಾ ದೊಡ್ಡ ಮೊತ್ತದಲ್ಲಿ ಹಣ ಗಳಿಕೆ ಮಾಡಬೇಕು ಎಂದರೆ ಪ್ರಚಾರ ಅತಿ ಮುಖ್ಯ. ಈ ಕಾರಣಕ್ಕೆ ನಿರ್ಮಾಪಕರು ಪ್ರಮೋಷನ್ಗೂ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಟಾಲಿವುಡ್ನಲ್ಲಿ ಸಿದ್ಧವಾಗಿರುವ ‘ಆರ್‌ಆರ್‌ಆರ್’ ಚಿತ್ರದ ಪ್ರಚಾರಕ್ಕೂ ನಿರ್ಮಾಪಕರು ದೊಡ್ಡ ಮೊತ್ತದ ಹಣವನ್ನು ಖಾಲಿ ಮಾಡಿದ್ದಾರೆ. ಆದರೆ, ಸಿನಿಮಾ ರಿಲೀಸ್ ದಿನಾಂಕ ಮುಂದೆ ಹೋಗಿರುವುದರಿಂದ ಎಲ್ಲವೂ ವ್ಯರ್ಥವಾಗಿದೆ.
‘ಆರ್‌ಆರ್‌ಆರ್’ ತಂಡ ನಾನಾ ನಗರಗಳಿಗೆ ತೆರಳಿ ಸುದ್ದಿಗೋಷ್ಠಿ ನಡೆಸಿತ್ತು. ಮುಂಬೈ ಹಾಗೂ ಚೆನ್ನೈನಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ-ರಿಲೀಸ್ ಇವೆಂಟ್ ನಡೆಸಲಾಗಿತ್ತು. ಆನ್ಲೈನ್ನಲ್ಲೂ ಚಿತ್ರಕ್ಕೆ ಪ್ರಚಾರ ನೀಡುವ ಕೆಲಸ ನಡೆದಿತ್ತು. ಹೀಗಾಗಿ, ಈ ಸಿನಿಮಾ ಪ್ರಮೋಷನ್ಗೆ ನಿರ್ಮಾಪಕರು 20 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಈ ಹಣವೆಲ್ಲವೂ ಈಗ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.
ಬಾಲಿವುಡ್ನ ಖ್ಯಾತ ನಿರ್ದೇಶಕ ಅನೀಸ್ ಬಾಜ್ಮೀ ಈ ಬಗ್ಗೆ ಮಾತನಾಡಿದ್ದಾರೆ. ‘ಆರ್‌ಆರ್‌ಆರ್, ‘ಜೆರ್ಸಿ’ಯಂತಹ ಚಿತ್ರಗಳ ಉದಾಹರಣೆ ತೆಗೆದುಕೊಳ್ಳಿ. ಅವರು ತಮ್ಮ ಚಿತ್ರಗಳಿಗೆ ಸಾಕಷ್ಟು ಪ್ರಚಾರಗಳನ್ನು ಮಾಡಿದ್ದಾರೆ. ಈ ಹಣ ವ್ಯರ್ಥವಾಗಿದೆ. ಅವರು ಚಿತ್ರವನ್ನು ಬಿಡುಗಡೆ ಮಾಡಲು ಮತ್ತೆ ದಿನಾಂಕ ಘೋಷಣೆ ಮಾಡಿದಾಗ ಪ್ರಚಾರ ಮಾಡಲೇಬೇಕು. ಒಟ್ಟಾರೆ ಇದೊಂದು ದೊಡ್ಡ ನಷ್ಟ’ ಎಂದಿದ್ದಾರೆ ಅವರು.
‘ಆರ್‌ಆರ್‌ಆರ್’ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ. ಈ ಸಿನಿಮಾ ಬರೋಬ್ಬರಿ 400 ಕೋಟಿ ರೂಪಾಯಿ ವೆಚ್ಛದಲ್ಲಿ ಸಿದ್ಧವಾಗಿದೆ. ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್ ಹಾಗೂ ಟೀಸರ್ ಸಾಕ್ಷ್ಯ ನೀಡಿದೆ. ಪ್ರತಿ ದೃಶ್ಯಕ್ಕೂ ಹೆಚ್ಚು ಹಣ ಸುರಿಯಲಾಗಿದೆ. ಕೇವಲ ಭಾರತದ ಸೆಟ್ಗಳಲ್ಲಿ ಮಾತ್ರವಲ್ಲದೆ, ವಿದೇಶದಲ್ಲೂ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಇನ್ನು, ಸ್ಟಾರ್ ನಟರ ದಂಡೇ ಚಿತ್ರದಲ್ಲಿದೆ. ಜ್ಯೂ.ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಇವರು ಕೂಡ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಈ ಎಲ್ಲಾ ಕಾರಣದಿಂದ ಸಿನಿಮಾದ ಬಜೆಟ್ 400 ಕೋಟಿ ರೂಪಾಯಿ ಮೀರಿದೆ.
ಇದನ್ನೂ ಓದಿ: ಮತ್ತೆ ಸದ್ದು ಮಾಡಿದ ಸಮಂತಾ; ಒಂದು ಗಂಟೆಯಲ್ಲಿ 20 ಲಕ್ಷ ವೀಕ್ಷಣೆ ಕಂಡ ವಿಡಿಯೋ ಸಾಂಗ್
ಸಿನಿಪ್ರಿಯರಿಗೆ ನಿರಾಸೆ ಮೂಡಿಸಿದ ‘ಆರ್‌ಆರ್‌ಆರ್’; ಅಧಿಕೃತವಾಗಿ ಚಿತ್ರದ ರಿಲೀಸ್ ಡೇಟ್ ಮುಂದೂಡಿಕೆ