ರಾಜಮೌಳಿಯನ್ನು ನಂಬಿ 300-400 ಕೋಟಿ ಸಾಲ, ತಿಂಗಳಿಗೆ 5 ಕೋಟಿಗೂ ಹೆಚ್ಚು ಬಡ್ಡಿ

|

Updated on: Jun 03, 2023 | 8:21 PM

Rana Daggubhati: ಬಾಹುಬಲಿ ಸಿನಿಮಾಕ್ಕೆ ಅಷ್ಟು ದೊಡ್ಡ ಬಂಡವಾಳ ತಂದಿದ್ದು ಹೇಗೆ? ಯಾವ ಮೊತ್ತದ ಬಡ್ಡಿ ತೆತ್ತು ಅಷ್ಟು ದೊಡ್ಡ ತರಲಾಗಿತ್ತು? ವಿವರಿಸಿದ್ದಾರೆ ಬಲ್ಲಾಳ ದೇವ ಪಾತ್ರಧಾರಿ ರಾಣಾ ದಗ್ಗುಬಾಟಿ.

ರಾಜಮೌಳಿಯನ್ನು ನಂಬಿ 300-400 ಕೋಟಿ ಸಾಲ, ತಿಂಗಳಿಗೆ 5 ಕೋಟಿಗೂ ಹೆಚ್ಚು ಬಡ್ಡಿ
ಬಾಹುಬಲಿ
Follow us on

ಭಾರತದಲ್ಲಿ ಈಗ ಬಿಗ್ ಬಜೆಟ್ (Big Budget) ಸಿನಿಮಾಗಳ ಜಮಾನಾ ನಡೆಯುತ್ತಿದೆ. ಬಾಹುಬಲಿ (Bahubali) ಸಿನಿಮಾದ ಬಳಿಕ ಹಲವು ನಿರ್ಮಾಪಕರಿಗೆ ದೊಡ್ಡ ಧೈರ್ಯವೊಂದು ಮೊಳೆತಿದ್ದು, ಭಾರಿ ಬಜೆಟ್ ಅನ್ನು ಸಿನಿಮಾದ ಮೇಲೆ ಹೂಡಿ ಭಾರಿ ಮೊತ್ತದ ಹಣ ಮರಳಿ ಪಡೆಯುವಬಹುದು ಎಂಬ ನಂಬಿಕೆ ಮೂಡಿದೆ. ಆದರೆ ಈ ಬಿಗ್ ಬಜೆಟ್ ಸಿನಿಮಾಗಳ ಹಿಂದೆ ನಿರ್ಮಾಪಕರು ಅನುಭವಿಸುವ ಕಷ್ಟ ಹೆಚ್ಚು ಮಂದಿಗೆ ತಿಳಿದಿರುವುದಿಲ್ಲ. 400-500 ಕೋಟಿ ಹಣವನ್ನು ಸಿನಿಮಾದ ಮೇಲೆ ಸುರಿವ ನಿರ್ಮಾಪಕರು ಆ ಹಣವನ್ನು ಎಲ್ಲಿಂದ ತಂದಿರುತ್ತಾರೆ ಎಂಬುದು ಪ್ರೇಕ್ಷಕನಿಗೆ ಅರಿವಿರುವುದಿಲ್ಲ. ಸ್ವತಃ ಬಾಹುಬಲಿ ಸಿನಿಮಾಕ್ಕೆ ಅಷ್ಟು ದೊಡ್ಡ ಮೊತ್ತವನ್ನು ಎಲ್ಲಿಂದ ಹೇಗೆ ತಂದರು ನಿರ್ಮಾಪಕರು? ಬಾಹುಬಲಿಯಲ್ಲಿ ಬಲ್ಲಾಳದೇವನಾಗಿ ಮಿಂಚಿರುವ ರಾಣಾ ದಗ್ಗುಬಾಟಿ (Rana Daggubhati) ಆ ಬಗ್ಗೆ ಮಾತನಾಡಿದ್ದಾರೆ.

ಇಂಡಿಯಾ ಟುಡೆ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಾಣಾ ದಗ್ಗುಬಾಟಿ, ”ಸಿನಿಮಾಕ್ಕೆ ಹಣವನ್ನು ನಿರ್ಮಾಪಕರು ಎಲ್ಲಿಂದ ತರುತ್ತಿದ್ದರು? ತಮ್ಮದೇ ಮನೆ, ಜಮೀನು ಅಡ ಇಟ್ಟು ಸಿನಿಮಾ ಮಾಡುತ್ತಿದ್ದರು. ಚಿತ್ರರಂಗದಲ್ಲಿ 24-28 ಪರ್ಸೆಂಟ್ ಬಡ್ಡಿದರ ನಡೆಯುತ್ತದೆ. ಸ್ವತಃ ಬಾಹುಬಲಿ ಸಿನಿಮಾಕ್ಕೆ 300-400 ಕೋಟಿ ಹಣವನ್ನು ಇದೇ ಬಡ್ಡಿದರದಲ್ಲಿ ಸುಮಾರು ಐದು ವರ್ಷಗಳ ಕಾಲ ತೆಗೆದುಕೊಳ್ಳಲಾಗಿತ್ತು” ಎಂದಿದ್ದಾರೆ ರಾಣಾ ದಗ್ಗುಬಾಟಿ.

ಇದನ್ನು ಇನ್ನಷ್ಟು ವಿವರವಾಗಿ ಹೇಳಿರುವ ರಾಣಾ ದಗ್ಗುಬಾಟಿ, ”ಬಾಹುಬಲಿ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಬಹಳ ಕಷ್ಟವಾಗಿತ್ತು. ತೆಲುಗಿನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾದ ಒಟ್ಟು ಕಲೆಕ್ಷನ್​ಗಿಂತಲೂ ಹೆಚ್ಚಿನ ಹಣವನ್ನು ನಾವು ಸಿನಿಮಾ ನಿರ್ಮಾಣಕ್ಕೆ ಖರ್ಚು ಮಾಡಿಬಿಟ್ಟಿದ್ದೆವು. ನಮಗೆಲ್ಲ ಬಹಳ ಆತಂಕವಾಗಿತ್ತು, ಸಿನಿಮಾಕ್ಕೆ ಹಾಕಿದ ಹಣ ವಾಪಸ್ಸು ಹೇಗೆ ಬರುತ್ತದೆ ಎಂಬುದೇ ನಮ್ಮ ಅನುಮಾನವಾಗಿತ್ತು. ಏಕೆಂದರೆ ಆಗ ನಮಗೆ ಭಾರತೀಯ ಸಿನಿಮಾ ಮಾರುಕಟ್ಟೆಯ ಒಟ್ಟು ಶಕ್ತಿಯೇ ಗೊತ್ತಿರಲಿಲ್ಲ” ಎಂದಿದ್ದಾರೆ ರಾಣಾ.

”ಬಾಹುಬಲಿ ಮೊದಲ ಭಾಗದ ಚಿತ್ರೀಕರಣದ ವೇಳೆ 180 ಕೋಟಿಗೂ ಹೆಚ್ಚು ಹಣವನ್ನು 24 ಪರ್ಸೆಂಟ್ ಬಡ್ಡಿಗೆ ತೆಗೆದುಕೊಳ್ಳಲಾಗಿತ್ತು. ನಾನು ಹಾಗೂ ಪ್ರಭಾಸ್ ಅದಾಗಲೇ ನಾಲ್ಕು ವರ್ಷಗಳ ಕಾಲ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಬಾಹುಬಲಿ 2 ಸಿನಿಮಾದ ಕೆಲವು ದೃಶ್ಯಗಳನ್ನು ಸಹ ನಾವು ಮೊದಲೇ ಚಿತ್ರೀಕರಣ ಮಾಡಿಬಿಟ್ಟಿದ್ದೆವು. ಒಂದೊಮ್ಮೆ ಈ ಸಿನಿಮಾ ಫ್ಲಾಪ್ ಆದರೆ ನಾವು ಬೀದಿಗೆ ಬರುತ್ತಿದ್ದೆವು. ಚಿತ್ರೀಕರಣ ಮಾಡಿರುವ ಎರಡನೇ ಭಾಗದ ದೃಶ್ಯಗಳನ್ನು ಏನು ಮಾಡಬೇಕು ಎಂಬುದು ಸಹ ನಮಗೆ ಅರಿವಿರಲಿಲ್ಲ. ಅದು ಅತ್ಯಂತ ಒತ್ತಡದ ಕ್ಷಣವಾಗಿತ್ತು” ಎಂದಿದ್ದಾರೆ ರಾಣಾ.

”ಸಿನಿಮಾದ ಬಿಡುಗಡೆ ವೇಳೆ ನಾವು ಬಹಳ ಒತ್ತಡದಲ್ಲಿದ್ದೆವು. ಅದೆಂಥಹಾ ಒತ್ತಡದ ಸನ್ನಿವೇಶವೆಂದರೆ ಆ ಒತ್ತಡ ಇನ್ಯಾರಿಗೂ ಜೀವಮಾನದಲ್ಲಿ ಬಾರದೇ ಇರಲಿ. ಬಿಡುಗಡೆಯ ಹಿಂದಿನ ದಿನ ಮುಂಬೈನಲ್ಲಿ ಪ್ರೀಮಿಯರ್ ಶೋ ಇತ್ತು. ದೆಹಲಿಯಲ್ಲಿ ಕೊನೆಯ ಪ್ರಚಾರ ಸಂದರ್ಶನ ಮುಗಿಸಿದ ನಮಗೆಲ್ಲ ಒತ್ತಡ, ಪ್ರಭಾಸ್ ಅಂತೂ ನಾನು ಪ್ರೀಮಿಯರ್​ಗೆ ಬರುವುದಿಲ್ಲ ನನಗೆ ಬಹಳ ಒತ್ತಡವಾಗುತ್ತಿದೆ ನಾನು ಇಲ್ಲೇ ದೆಹಲಿಯಲ್ಲಿದ್ದು ಇಲ್ಲಿನ ಕೆಲವು ಸ್ಥಳಗಳನ್ನು ನೋಡಿ ಒತ್ತಡ ಕಡಿಮೆ ಮಾಡಿಕೊಳ್ಳುತ್ತೇನೆ ಎಂದರು. ಇನ್ನು ರಾಜಮೌಳಿ, ನಮ್ಮ ಸಿನಿಮಾ ಬಿಡುಗಡೆ ದಿನ ನಾನು ಹೈದರಾಬಾದ್​ನಲ್ಲಿ ಇಲ್ಲದಿದ್ದರೆ ಸರಿ ಆಗುವುದಿಲ್ಲ ಎಂದು ಹೈದರಾಬಾದ್​ಗೆ ಹೊರಟುಬಿಟ್ಟರು. ನಾನೊಬ್ಬನೇ ಮುಂಬೈನಲ್ಲಿ ಪ್ರೀಮಿಯರ್ ಶೋ ನೋಡಿದೆ. ಅಂದು ನಾನು ಅನುಭವಿಸಿದ ಒತ್ತಡ ಸಾಮಾನ್ಯದ್ದಲ್ಲ” ಎಂದಿದ್ದಾರೆ ರಾಣಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ