Anshu Movie Review: ಕಿರುತೆರೆಯಿಂದ ಹಿರಿತೆರೆಗೆ ಬಂದು ಪ್ರಯೋಗ ಮಾಡಿದ ನಿಶಾ ರವಿಕೃಷ್ಣನ್

|

Updated on: Nov 22, 2024 | 6:19 PM

ಕಿರುತೆರೆಯಲ್ಲಿ ನಟಿ ನಿಶಾ ರವಿಕೃಷ್ಣನ್ ಅವರು ‘ಗಟ್ಟಿಮೇಳ’ ಧಾರಾವಾಹಿ ಮೂಲಕ ಗಮನ ಸೆಳೆದಿದ್ದರು. ಸಿನಿಮಾಗಳಿಂದಲೂ ಅವರಿಗೆ ಅವಕಾಶ ಸಿಗುತ್ತಿದೆ. ನಿಶಾ ನಟಿಸಿದ ‘ಅಂಶು’ ಸಿನಿಮಾ ಬಿಡುಗಡೆ ಆಗಿದ್ದು, ಒಂದು ಭಿನ್ನ ಪ್ರಯೋಗದ ರೀತಿ ಈ ಚಿತ್ರ ಮೂಡಿಬಂದಿದೆ. ಮಹಿಳಾ ಪ್ರಧಾನ ಕಥೆ ಈ ಸಿನಿಮಾದಲ್ಲಿದೆ. ನಿಶಾ ಪಾತ್ರವೇ ಹೈಲೈಟ್ ಆಗಿದೆ.

Anshu Movie Review: ಕಿರುತೆರೆಯಿಂದ ಹಿರಿತೆರೆಗೆ ಬಂದು ಪ್ರಯೋಗ ಮಾಡಿದ ನಿಶಾ ರವಿಕೃಷ್ಣನ್
ನಿಶಾ ರವಿಕೃಷ್ಣನ್
Follow us on

ಸಿನಿಮಾ: ಅಂಶು. ನಿರ್ಮಾಣ: ಗ್ರಹಣ ಎಲ್​ಎಲ್​ಪಿ. ನಿರ್ದೇಶನ: ಎಂ.ಸಿ. ಚೆನ್ನಕೇಶವ. ಮುಖ್ಯ ಭೂಮಿಕೆ: ನಿಶಾ ರವಿಕೃಷ್ಣನ್. ಸ್ಟಾರ್​: 3/5

ಸಿನಿಮಾ ಎಂದರೆ ಹೀಗೆಯೇ ಇರಬೇಕು ಎಂಬ ಯಾವ ನಿಯಮವೂ ಇಲ್ಲ. ಈ ಕ್ಷೇತ್ರದ ಸಾಧ್ಯತೆಗಳ ವಿಸ್ತಾರ ಮುಗಿಲಗಲ ಎನ್ನಬಹುದು. ಆ ಕಾರಣದಿಂದಲೇ ಹೊಸ ಹೊಸ ರೀತಿಯ ಪ್ರಯೋಗಗಳು ಚಿತ್ರರಂಗದಲ್ಲಿ ನಡೆಯುತ್ತವೆ. ನಿಶಾ ರವಿಕೃಷ್ಣನ್ ನಟಿಸಿರುವ ‘ಅಂಶು’ ಸಿನಿಮಾದಲ್ಲಿ ಕೂಡ ಒಂದು ಪ್ರಯೋಗ ಮಾಡಲಾಗಿದೆ. ಆ ಕಾರಣದಿಂದ ಈ ಸಿನಿಮಾ ತುಸು ಡಿಫರೆಂಟ್​ ಎನಿಸಿಕೊಳ್ಳುತ್ತದೆ. ಮಾಮೂಲಿ ಸಿನಿಮಾಗಳನ್ನು ನೋಡಿ ಬೇಸರ ಆಗಿರುವವರು ‘ಅಂಶು’ ಸಿನಿಮಾ ನೋಡಿದರೆ ಬೇರೆ ರೀತಿಯ ಫೀಲ್​ ನೀಡುತ್ತದೆ. ಯಾಕೆಂದರೆ, ಈ ಸಿನಿಮಾದಲ್ಲಿ ಕಾಣಿಸುವುದು ಒಂದೇ ಪಾತ್ರ!

ಹೌದು, ಒಂದೇ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ‘ಅಂಶು’ ಸಿನಿಮಾದ ಕಥೆಯನ್ನು ನಿರೂಪಿಸಲಾಗಿದೆ. ನಿಶಾ ರವಿಕೃಷ್ಣನ್​ ಅವರು ಆ ಪಾತ್ರವನ್ನು ಮಾಡಿದ್ದಾರೆ. ಹಾಗಂತ ಬೇರೆ ಪಾತ್ರಗಳು ಇಲ್ಲ ಅಂತೇನೂ ಅಲ್ಲ. ಆದರೆ ಆ ಪಾತ್ರಗಳ ಮುಖ ಕಾಣಿಸುವುದಿಲ್ಲ. ಇಡೀ ಸಿನಿಮಾದಲ್ಲಿ ನಿಶಾ ರವಿಕೃಷ್ಣನ್ ಮಾತ್ರ ಪ್ರೇಕ್ಷಕರಿಗೆ ಕಾಣಿಸುತ್ತಾರೆ. ಉಳಿದ ಪಾತ್ರಧಾರಿಗಳು ಧ್ವನಿಗಷ್ಟೇ ಸೀಮಿತ.

ಅಷ್ಟಕ್ಕೂ ನಿರ್ದೇಶಕರು ಈ ರೀತಿ ಕ್ಲಿಷ್ಟಕರವಾಗಿ ಸಿನಿಮಾವನ್ನು ಕಟ್ಟಿಕೊಡುವ ಅವಶ್ಯಕತೆ ಏನಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದು ಸೈಕಾಲಾಜಿಕಲ್ ಕಥಾವಸ್ತು ಇರುವ ಸಿನಿಮಾ. ಕಥೆಯ ಕೊನೆಯಲ್ಲಿ ಒಂದು ಟ್ವಿಸ್ಟ್​ ಕೂಡ ಇದೆ. ಆ ಕಾರಣದಿಂದಾಗಿ ಡಿಫರೆಂಟ್​ ಆದಂತಹ ಮಾರ್ಗವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ಒಟ್ಟಾರೆ ಸಿನಿಮಾದ ಕಥೆ ಗಂಭೀರವಾಗಿದೆ. ಯಾವುದೇ ಕಾಮಿಡಿ, ರೊಮ್ಯಾನ್ಸ್ ಇತ್ಯಾದಿ ಅಂಶಗಳನ್ನು ಈ ಸಿನಿಮಾದಲ್ಲಿ ನಿರೀಕ್ಷಿಸುವಂತಿಲ್ಲ.

ಪ್ರೇಕ್ಷಕರ ತಲೆಗೆ ಕೆಲಸ ಕೊಡುವಂತಹ ಸಿನಿಮಾಗಳ ಸಾಲಿಗೆ ‘ಅಂಶು’ ಸೇರುತ್ತದೆ. ತುಂಬ ಗಮನ ಇಟ್ಟು ನೋಡಿದರೆ ಮಾತ್ರ ಈ ಸಿನಿಮಾ ಹಿಡಿಸುತ್ತದೆ. ಮಾಮೂಲಿ ಕಮರ್ಶಿಯಲ್ ಸಿನಿಮಾಗಳ ರೀತಿ ನೋಡಿಕೊಂಡು ಹೋದರೆ ಕಥೆಯ ಲಿಂಕ್​ಗಳು ಮಿಸ್ ಆಗುವ ಸಂಭವ ಇರುತ್ತದೆ. ಹಾಗಾಗಿ, ಅತ್ತಿತ್ತ ನೋಡದೇ ಗಮನವಿಟ್ಟು ಸಿನಿಮಾವನ್ನು ವೀಕ್ಷಿಸುವ ಪ್ರೇಕ್ಷಕರಿಗೆ ‘ಅಂಶು’ ಇಷ್ಟ ಆಗಬಹುದು. ಮೊದಲ ಬಾರಿ ನೋಡಿದಾಗ ಒಂದಷ್ಟು ಗೊಂದಲ ಮೂಡಿಸುವ ಈ ಸಿನಿಮಾ ಎರಡನೇ ಬಾರಿಗೆ ಚೆನ್ನಾಗಿ ಅರ್ಥ ಆಗುತ್ತದೆ. ಒಂದೇ ಪಾತ್ರ ಇರುವುದರಿಂದ ನೋಡುಗರಿಗೆ ಏಕತಾನತೆ ಕಾಡಬಹುದು.

ಇದನ್ನೂ ಓದಿ: Zebra Movie Review: ಕಲರ್ ಕಲರ್​ ನೋಟಿನ ಹಿಂದಿರುವ ಕಪ್ಪು-ಬಿಳಿ ಪಾತ್ರಗಳ ಕಹಾನಿ

ಈ ಕಥೆಯ ಮೂಲಕ ಕೆಲವು ಸಂದೇಶಗಳನ್ನು ನೀಡಲು ಕೂಡ ನಿರ್ದೇಶಕರು ಪ್ರಯತ್ನಿಸಿದ್ದಾರೆ. ಜಾತಿ ಪಿಡುಗು, ಹೆಣ್ಣು ಭ್ರೂಣ ಹತ್ಯೆ ಮುಂತಾದ ವಿಷಯಗಳನ್ನು ಕೂಡ ಕಥೆಯಲ್ಲಿ ತರಲಾಗಿದೆ. ಆ್ಯಕ್ಷನ್​ ಹೊರತುಪಡಿಸಿ, ಒಂದು ಥ್ರಿಲ್ಲರ್​ ಸಿನಿಮಾದಲ್ಲಿ ಇರಬಹುದಾದ ಎಲ್ಲ ಅಂಶಗಳು ಈ ಸಿನಿಮಾದಲ್ಲಿದೆ. ಕೊನೆಯವರೆಗೂ ಸಸ್ಪೆನ್ಸ್ ಕಾಯ್ದುಕೊಂಡಿದೆ. ನಿಶಾ ರವಿಕೃಷ್ಣನ್ ಅವರು ನಾಯಕಿಪ್ರಧಾನ ಕಥೆಯಲ್ಲಿ ತಮಗೆ ಸಿಕ್ಕ ಪಾತ್ರವನ್ನು ಚೆನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ. ನಟನೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಅವರಿಗೆ ಈ ಸಿನಿಮಾ ಉತ್ತಮ ವೇದಿಕೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.