
ಪೃಥ್ವಿ ಅಂಬಾರ್, ಸಾಯಿ ಕುಮಾರ್ (Sai Kumar), ಸುಧಾರಾಣಿ, ಶ್ವೇತಾ ವಿನೋಧಿನಿ ಮುಂತಾದವರು ನಟಿಸಿರುವ ‘ಚೌಕಿದಾರ್’ ಸಿನಿಮಾ ರಿಲೀಸ್ (ಜನವರಿ 30) ಆಗಿದೆ. ಈ ಸಿನಿಮಾದಲ್ಲಿ ತಂದೆ-ಮಗನ ಬಾಂಧವ್ಯದ ಕಥೆ ಇದೆ. ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಡಾ. ಕಲ್ಲಹಳ್ಳಿ ಚಂದ್ರಶೇಖರ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಇಷ್ಟಪಡುವ ರೀತಿಯಲ್ಲಿ ‘ಚೌಕಿದಾರ್’ ಸಿನಿಮಾ ಮೂಡಿಬಂದಿದೆ. ಸಿನಿಮಾದ ವಿಮರ್ಶೆ (Chowkidar Review) ಇಲ್ಲಿದೆ..
ಸಾಯಿ ಕುಮಾರ್ ಅವರು ಒಂದೇ ರೀತಿಯ ಪಾತ್ರಕ್ಕೆ ಗಂಟುಬಿದ್ದವರಲ್ಲ. ಚಿತ್ರರಂಗದಲ್ಲಿ ಅವರು 50 ವರ್ಷಗಳ ಅನುಭವ ಹೊಂದಿದ್ದಾರೆ. ‘ಚೌಕಿದಾರ್’ ಸಿನಿಮಾದಲ್ಲಿ ಅವರದ್ದೇ ಪ್ರಮುಖ ಪಾತ್ರ. ಹೀರೋ ತಂದೆಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅಪ್ಪ ಎಂದರೆ ಇಡೀ ಕುಟುಂಬವನ್ನು ಕಾಯುವ ಚೌಕಿದಾರ ಎಂಬುದು ಗೊತ್ತೇ ಇದೆ. ಆ ಎಳೆಯನ್ನೇ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ. ಮಗನ ಪಾತ್ರದಲ್ಲಿ ಪೃಥ್ವಿ ಅಂಬಾರ್ ನಟಿಸಿದ್ದಾರೆ.
ಸಾಯಿ ಕುಮಾರ್ ಅವರಿಗೆ ಹೀರೋ ತಂದೆಯ ಪಾತ್ರ ಹೊಸದಲ್ಲ. ಆದರೆ ‘ಚೌಕಿದಾರ್’ ಸಿನಿಮಾದಲ್ಲಿ ಇರುವ ಅಪ್ಪನ ಪಾತ್ರ ಸ್ವಲ್ಪ ಡಿಫರೆಂಟ್. ಮಗನ ಮೇಲೆ ಈತನಿಗೆ ವಿಪರೀತ ಪ್ರೀತಿ. ಬಾಲ್ಯದಲ್ಲಿ ನಡೆಯಲು ಕಲಿಯುವಾಗ ಮಗ ಬಿದ್ದರೂ ಕೂಡ ಈತನಿಗೆ ವಿಪರೀತ ಸಂಕಟ ಆಗುತ್ತದೆ. ಮಗ ದೊಡ್ಡವನಾಗಿ ಮದುವೆಯ ವಯಸ್ಸಿಗೆ ಬಂದರೂ ತಂದೆಯ ಪ್ರೀತಿ ಕಡಿಮೆ ಆಗಲ್ಲ. ಅಪ್ಪನ ಅತಿಯಾಗಿ ಪ್ರೀತಿಯಿಂದ ಕೆಲವು ಅನಾಹುತಗಳು ನಡೆದುಹೋಗುತ್ತವೆ. ಆ ಸಂಗತಿಗಳು ಏನು? ಅದರಿಂದ ಹೀರೋ ಹೇಗೆ ಹೊರಬರುತ್ತಾನೆ ಎಂಬುದೇ ಈ ಸಿನಿಮಾದ ಕಥೆಯ ತಿರುಳು.
ಪೃಥ್ವಿ ಅಂಬಾರ್ ಅವರು ‘ಚೌಕಿದಾರ್’ ಸಿನಿಮಾದಲ್ಲಿ ಕಿಂಚಿತ್ತೂ ಜವಾಬ್ದಾರಿ ಇಲ್ಲದ ಮಗನಾಗಿ ಕಾಣಿಸಿಕೊಂಡಿದ್ದಾರೆ. ಅತಿಯಾದ ಪ್ರೀತಿಯಿಂದ ಬೆಳೆದ ಮಕ್ಕಳು ಹೇಗಿರುತ್ತಾರೆ ಎಂಬುದನ್ನು ಅವರು ಈ ಪಾತ್ರದ ಮೂಲಕ ಕಣ್ಣಿಗೆ ಕಟ್ಟುವಂತೆ ಪ್ರೇಕ್ಷಕರಿಗೆ ತೋರಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ಈ ಪಾತ್ರದ ನೆಗೆಟಿವ್ ಶೇಡ್ ಹೆಚ್ಚಾಗಿ ಕಾಣಿಸುತ್ತದೆ. ಪೃಥ್ವಿ ಅಂಬಾರ್ ಅವರು ಇಮೇಜ್ ಬದಿಗಿಟ್ಟು ಅಂಥ ಪಾತ್ರವನ್ನು ಮಾಡಿದ್ದಾರೆ.
ಒಟ್ಟಾರೆಯಾಗಿ ನೋಡಿದರೆ ಈ ಸಿನಿಮಾದ ಕಥೆಯಲ್ಲಿ ಸಂಪೂರ್ಣ ಹೊಸತನವನ್ನು ನಿರೀಕ್ಷಿಸಲಾಗದು. ಕೆಲವು ದೃಶ್ಯಗಳನ್ನು ಮೊದಲೇ ಊಹಿಸಬಹುದು. ಹಾಗಿದ್ದರೂ ಕೂಡ ಈ ಕಾಲಕ್ಕೆ ಪ್ರಸ್ತುತ ಎಂಬಂತೆ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಮೊಬೈಲ್ನಲ್ಲಿ ಮುಳುಗಿದ್ದು, ಜವಾಬ್ದಾರಿ ನಿಭಾಯಿಸದೇ, ಅಪ್ಪ-ಅಮ್ಮನ ಕಷ್ಟ ಅರ್ಥ ಮಾಡಿಕೊಳ್ಳದೇ ತಿರುಗಾಡುವ ಮಕ್ಕಳಿಗೆ ಈ ಸಿನಿಮಾದಲ್ಲಿ ಅಗತ್ಯವಾದ ಸಂದೇಶ ನೀಡಲಾಗಿದೆ.
ಪೃಥ್ವಿ ಅಂಬಾರ್ ಅವರು ಲುಕ್ ಮತ್ತು ನಟನೆಯ ಮೂಲಕ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಡೀ ಸಿನಿಮಾದಲ್ಲಿ ಸಾಯಿ ಕುಮಾರ್ ಮತ್ತು ಪೃಥ್ವಿ ಅಂಬಾರ್ ಅವರ ಕಾಂಬಿನೇಷನ್ ಇಷ್ಟ ಆಗುತ್ತದೆ. ತಾಯಿ ಪಾತ್ರದಲ್ಲಿ ಶ್ವೇತಾ ವಿನೋಧಿನಿ ಅವರು ಮೆಚ್ಚುಗೆ ಗಳಿಸುತ್ತಾರೆ. ಸುಧಾರಾಣಿ, ಧನ್ಯಾ ರಾಮ್ಕುಮಾರ್ ಅವರು ಕೆಲವು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ನಟರಾದ ಮುನಿ ಮತ್ತು ಧರ್ಮ ಅವರಿಗೆ ಕಡಿಮೆ ಸ್ಕ್ರೀನ್ ಸ್ಪೇಸ್ ಇದ್ದರೂ ಕೂಡ ಗಮನ ಸೆಳೆಯುತ್ತಾರೆ. ಕೇವಲ ಒಂದು ದೃಶ್ಯದಲ್ಲಿ ಗಿಲ್ಲಿ ನಟ ಬಂದು ಹೋಗುತ್ತಾರೆ.
ಇದನ್ನೂ ಓದಿ: ‘ವಲವಾರ’ ಸಿನಿಮಾ ವಿಮರ್ಶೆ; ಹಾಸ್ಯ, ಭಾವನೆಗಳ ಮಿಶ್ರಣ; ಬಾಲ್ಯ ನೆನಪಿಸೋ ಪಯಣ
ತಾಂತ್ರಿಕವಾಗಿ ಈ ಸಿನಿಮಾ ಅಚ್ಚುಕಟ್ಟಾಗಿದೆ. ಅಪ್ಪನ ಕಷ್ಟವನ್ನು ತೋರಿಸಲು ಇಡೀ ಸಿನಿಮಾದಲ್ಲಿ ಹೆಚ್ಚು ಸಮಯ ಮೀಸಲಿಡಲಾಗಿದೆ. ಆದರೆ ತುಂಬಾ ಗಡಿಬಿಡಿಯಲ್ಲಿ ಕ್ಲೈಮ್ಯಾಕ್ಸ್ ತೋರಿಸಲಾಗಿದೆ. ಆ ಬಗ್ಗೆ ನಿರ್ದೇಶಕರು ಒಂದಷ್ಟು ಗಮನ ಹರಿಸುವ ಅಗತ್ಯವಿತ್ತು ಎನಿಸುತ್ತದೆ. ಉಳಿದಂತೆ, ಒಂದು ಫ್ಯಾಮಿಲಿ ಎಂಟರ್ಟೇನರ್ ಚಿತ್ರವಾಗಿ ‘ಚೌಕಿದಾರ್’ ನೋಡಿಸಿಕೊಳ್ಳುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:19 pm, Fri, 30 January 26