‘ವಲವಾರ’ ಸಿನಿಮಾ ವಿಮರ್ಶೆ; ಹಾಸ್ಯ, ಭಾವನೆಗಳ ಮಿಶ್ರಣ; ಬಾಲ್ಯ ನೆನಪಿಸೋ ಪಯಣ

- Time - 113 Minutes
- Language - ಕನ್ನಡ
- Genre - ಫ್ಯಾಮಿಲಿ ಡ್ರಾಮಾ
‘ವಲವಾರ’ ಸಿನಿಮಾ (Valavaara Movie) ಟ್ರೇಲರ್ ನೋಡಿದ ಅನೇಕರಿಗೆ ಕಳೆದು ಹೋದ ದನ ಹುಡುಕೋ ‘ಒಂದಲ್ಲ ಎರಡಲ್ಲ’ ಸಿನಿಮಾ ನೆನಪಾಗಿತ್ತು. ಆದರೆ, ಸಿನಿಮಾ ನೋಡಿದ ಬಳಿಕ ಇದೊಂದು ಬೇರೆಯದೇ ಸಿನಿಮಾ ಎಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಮಕ್ಕಳೇ ಹೀರೋಗಳು. ಕಮರ್ಷಿಯಲ್ ಸಿನಿಮಾಗಳ ಸಿದ್ಧ ಸೂತ್ರಗಳು ಇಲ್ಲಿ ಇಲ್ಲ. ಆದರೆ, ಭಾವನಾತ್ಮಕವಾಗಿ ‘ವಲವಾರ’ ಹೆಚ್ಚು ಇಷ್ಟ ಆಗುತ್ತದೆ. ಆ ಚಿತ್ರದ ವಿಮರ್ಶೆ ಇಲ್ಲಿದೆ.
ಕುಂಡೇಸಿ (ಮಾಸ್ಟರ್ ವೇದಿಕ್ ಕುಶಾಲ್) ಹಾಗೂ ಕೊಸುಡಿ (ಮಾಸ್ಟರ್ ಶಯನ್) ಅಣ್ಣ-ತಮ್ಮಂದಿರು. ಇವರ ತಂದೆ (ಮಾಲತೇಶ್ ಎಚ್ವಿ) ಕಡು ಬಡವ. ಇರೋ ಒಂದು ತೋಟದ ದಾಖಲೆಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಬೇಕು ಎಂಬ ಒದ್ದಾಟದಲ್ಲಿ ಇದ್ದಾನೆ. ಆತನಿಗೆ ಸಣ್ಣ ಮಗ ಎಂದರೆ ಎಲ್ಲಿಲ್ಲದ ಪ್ರೀತಿ. ಕುಂಡೇಸಿ ಕಂಡರೆ ಆತನಿಗೆ ಸ್ವಲ್ಪವೂ ಇಷ್ಟ ಇಲ್ಲ. ಆದರೆ ತಾಯಿಗೆ (ಹರ್ಷಿತಾ ಗೌಡ) ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಮಾಡುವುದು ಇಷ್ಟವೇ ಇಲ್ಲ. ಇವರ ಕುಂಟಬದಲ್ಲಿ ಗೌರಿ (ಹಸು), ಜಡೇಜಾ (ಹುಂಜ) ಕೂಡ ಸದಸ್ಯರೇ, ಇವರ ಜೀವನದಲ್ಲಿ ಆ ಒಂದು ದಿನ ಎಲ್ಲವನ್ನೂ ಬದಲಾಯಿಸುತ್ತದೆ. ನಂತರ ಏನೆಲ್ಲ ಆಗುತ್ತದೆ ಎಂಬುದೇ ಚಿತ್ರದ ಕಥೆ.
ಕನ್ನಡದಲ್ಲಿ ಸಾಕಷ್ಟು ರೊಮ್ಯಾಂಟಿಕ್, ಆ್ಯಕ್ಷನ್ ಚಿತ್ರಗಳು ಬಂದಿವೆ. ಆದರೆ, ಹೃದಯದ ಅಂತರಾಳಕ್ಕೆ ಕಥೆ ಇಳಿದು, ನಿಮ್ಮ ಭಾವನೆಗಳನ್ನು ಕದಡಿದ ಸಿನಿಮಾಗಳು ಕಡಿಮೆ. ಸುತನ್ ಗೌಡ ಅವರು ಆ ಪ್ರಯತ್ನದಲ್ಲಿ ಬಹುತೇಕವಾಗಿ ಗೆದ್ದಿದ್ದಾರೆ. ಹಸಿರ ಮಧ್ಯೆ ಭಾವನೆಗಳ ಪಯಣ ಸಾಗುತ್ತದೆ. ಆ ಹಳ್ಳಿ ಹಾದಿಯ ಪ್ರತಿ ತಿರುವಿನಲ್ಲೂ ನಿರ್ದೇಶಕರು ಒಂದೊಂದು ಭಾವನೆಗಳ ಮೂಟೆಯನ್ನು ನಿಮ್ಮ ಹೆಗಲಿಗೆ ಹಾಕುತ್ತಾ ಸಾಗುತ್ತಾರೆ. ಜೊತೆಗೆ ಅಲ್ಲಲ್ಲಿ ನಗು. ತೆರೆಮೇಲೆ ಬರುತ್ತಿರುವುದು ನಿಮ್ಮದೇ ಬಾಲ್ಯದ ಘಟನೆ ಎಂದು ನಿಮಗೆ ಅನಿಸಬಹುದು.
ಸುತನ್ ಗೌಡ ಹೇಳಿರುವ ಕಥೆ ಸರಳ. ಇಲ್ಲಿ ಹೆಚ್ಚಿನ ತಿರುವುಗಳೂ ಇಲ್ಲ. ಮುಂದೇನಾಗುತ್ತದೆ ಎಂಬುದನ್ನು ಸುಲಭದಲ್ಲಿ ಊಹಿಸಬಹುದು. ಆದರೆ, ಸಿನಿಮಾನ ಕಟ್ಟಿಕೊಟ್ಟ ರೀತಿ ಇಷ್ಟ ಆಗುತ್ತದೆ. ಸಿನಿಮಾ ನಿಧಾನವಾಗಿ ಆವರಿಸಿಕೊಳ್ಳುತ್ತದೆ.
ಇಡೀ ಸಿನಿಮಾದಲ್ಲಿ ಕುಂಡೇಸಿ ಪಾತ್ರ ನಿಮಗೆ ತುಂಬಾನೇ ಆಪ್ತವಾಗುತ್ತದೆ. ಸಿನಿಮಾ ಸಾಗಿದಂತೆ ಆತನ ನೋವು ನಿಮದು ಎನಿಸಲು ಆರಂಭ ಆಗುತ್ತದೆ. ನೀವು ಕೂಡ ಆತನ ಪ್ರಯಾಣದಲ್ಲಿ ಸಹ ಪಯಣಿಗ ಆಗುತ್ತೀರಿ. ವೇದಿಕ್ ಅವರು ಕುಂಡೇಸಿ ಪಾತ್ರವನ್ನು ಪ್ರಬುದ್ಧವಾಗಿ ನಿರ್ವಹಿಸಿದ್ದಾರೆ. ವಯಸ್ಸಿಗೂ ಮೀರಿದ ನಟನೆ ಅವರದ್ದು ಎಂದರೂ ಅತಿಶಯೋಕ್ತಿ ಅಲ್ಲ. ಮಾಸ್ಟರ್ ಶಯನ್ ಕೂಡ ತಮ್ಮನ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ತಾಯಿ ಆಗಿ ಹರ್ಷಿತಾ ಕರುಳನ್ನು ಚುರುಕ್ ಎನಿಸುತ್ತಾರೆ. ಮಾಲತೇಶ್ ನಟನೆಯಲ್ಲಿ ಒಳ್ಳೆಯ ಮಾರ್ಕ್ಸ್ ಪಡೆಯುತ್ತಾರೆ.
ಅಭಯ್ ಪಾತ್ರದಲ್ಲಿ ಕಾಣಿಸೋ ಯಧು ಕುಮಾರ್ ನಟನೆ ಚಿತ್ರವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗುತ್ತದೆ. ಈ ರೋಮಿಯೋ ಮಾಡೋ ಕೆಲಸಗಳು ನಗು ತರಿಸುತ್ತವೆ. ಯದು ಪಾತ್ರಕ್ಕೆ ಅಭಯ್ ಆಯ್ಕೆ ನಿರ್ದೇಶಕರ ಬೆಸ್ಟ್ ಚಾಯ್ಸ್.
ಇದನ್ನೂ ಓದಿ: ಈ ವಾರ ಕನ್ನಡ ಸಿನಿಮಾಗಳ ನಡುವೆ ಭರ್ಜರಿ ಪೈಪೋಟಿ: ಯಾವ ಚಿತ್ರಗಳು ರಿಲೀಸ್?
‘ಜೀವಿಸಬೇಕು, ಜೀವಿಸಿ ತೋರಿಸಬೇಕು’ ಎಂಬ ಸಂದೇಶ ಕೂಡ ಸಿನಿಮಾದಲ್ಲಿ ಇದೆ. ಇದು ಕೇವಲ ಮಕ್ಕಳಿಗೆ ಮಾತ್ರವಲ್ಲದೆ, ಎಲ್ಲಾ ವರ್ಗದವರಿಗೂ ಇಷ್ಟ ಆಗುವ ಸಿನಿಮಾ. ನೀವು ಭಾವನಾತ್ಮಕ ಜೀವಿ ಆಗಿದ್ದರೆ ಸಿನಿಮಾ ನಿಮ್ಮನ್ನು ಮತ್ತಷ್ಟು ಸೆಳೆದುಕೊಳ್ಳಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:04 pm, Fri, 30 January 26




