Daskath Movie Review: ತುಳುನಾಡಿನಲ್ಲೊಂದು ಒಳಿತು-ಕೆಡುಕಿನ ಸಂಘರ್ಷದ ಕಥೆ ‘ದಸ್ಕತ್’

ಸಾಕಷ್ಟು ಗಂಭೀರ ವಿಷಯಗಳನ್ನು ‘ದಸ್ಕತ್’ ಸಿನಿಮಾದಲ್ಲಿ ಹೇಳಲಾಗಿದೆ. ಅದರಲ್ಲಿ ತಿಳಿ ಹಾಸ್ಯ, ಪ್ರೇಮಕಥೆ ಕೂಡ ಬೆರೆಸಲಾಗಿದೆ. ಇದೊಂದು ಸಂಘರ್ಷದ ಕಥೆ. ಶುರುವಿನಿಂದ ಕೊನೆತನಕ ಸಂಘರ್ಷವೇ ಇದೆ. ಗ್ರಾಮೀಣ ಭಾಗದ ಕಹಾನಿಯನ್ನು ಈ ಸಿನಿಮಾ ತೆರೆದಿಡುತ್ತಿದೆ. ‘ದಸ್ಕತ್’ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

Daskath Movie Review: ತುಳುನಾಡಿನಲ್ಲೊಂದು ಒಳಿತು-ಕೆಡುಕಿನ ಸಂಘರ್ಷದ ಕಥೆ ‘ದಸ್ಕತ್’
Daskath Movie Poster

Updated on: May 09, 2025 | 6:23 PM

ಸಿನಿಮಾ: ದಸ್ಕತ್. ನಿರ್ಮಾಣ: ಜಗದೀಶ್ ಎನ್. ಅರೆಬಿನ್ನಮಂಗಲ. ನಿರ್ದೇಶನ: ಅನೀಶ್ ಪೂಜಾರಿ ವೇಣುರು. ಪಾತ್ರವರ್ಗ: ದೀಕ್ಷಿತ್ ಕೆ. ಅಂಡಿಂಜೆ, ಮೋಹನ್ ಶೇಣಿ, ಭವ್ಯಾ ಪೂಜಾರಿ, ಚಂದ್ರಹಾಸ್ ಉಲ್ಲಾಳ್ ಮುಂತಾದವರು. ಸ್ಟಾರ್: 3/5

ಗ್ರಾಮೀಣ ಭಾಗದಲ್ಲಿ ಇರುವ ಲೋಕವೇ ಬೇರೆ. ಪ್ರತಿ ಹಳ್ಳಿಯಲ್ಲೂ ರೋಚಕವಾದ ಕಥೆಗಳು ಇವೆ. ಅಂಥ ಒಂದು ಕಹಾನಿಯನ್ನು ಇಟ್ಟುಕೊಂಡು ‘ದಸ್ಕತ್’ ಸಿನಿಮಾ ಮಾಡಲಾಗಿದೆ. ಅನೀಶ್ ಪೂಜಾರಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ತುಳುನಾಡಿನ ಕಥೆಯನ್ನು ಅವರು ತೆರೆಗೆ ತಂದಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಘರ್ಷಣೆಯನ್ನೇ ಅವರು ಬೆಳ್ಳಿತೆರೆಯಲ್ಲಿ ತೋರಿಸಿದ್ದಾರೆ. ಅಲ್ಲಿನ ಜನರ ನಂಬಿಕೆ, ಆಚಾರ-ವಿಚಾರ, ಲಂಚಾವತಾರ, ಮೇಲು-ಕೀಳು ಸಮರ ಮುಂತಾದವುಗಳೇ ‘ದಸ್ಕತ್’ ಸಿನಿಮಾದಲ್ಲಿ ಹೈಲೈಟ್ ಆಗಿವೆ.

ಬಡವರ ಜೀವ ಹಿಂಡುವ ಅಧಿಕಾರಿಗಳು ಎಲ್ಲ ಕಡೆಗಳಲ್ಲೂ ಇರುತ್ತಾರೆ. ಅಂಥ ಒಬ್ಬ ಸರ್ಕಾರಿ ನೌಕರ ಗ್ರಾಮ ಪಂಚಾಯಿತಿಯಲ್ಲಿ ಇದ್ದರೆ ಅಲ್ಲಿನ ಜನರಿಗೆ ಹಲವು ಕಷ್ಟಗಳು ಎದುರಾಗುತ್ತವೆ. ಸರ್ಕಾರದಿಂದ ಸಿಗುವ ಸೌಕರ್ಯಗಳನ್ನು ಪಡೆಯಲು ಲಂಚ ಕೊಡದಿದ್ದರೆ ಯಾವ ಕೆಲಸವೂ ಆಗುವುದಿಲ್ಲ ಎಂಬ ವಾತಾವರಣ ನಿರ್ಮಾಣ ಆಗುತ್ತದೆ. ಅದರ ಜೊತೆಗೆ ಜಾತಿಯ ಕಾರಣಕ್ಕೆ ಜನರನ್ನು ಅವಮಾನಿಸಲಾಗುತ್ತದೆ. ಇಂಥ ಗಂಭೀರ ವಿಷಯಗಳನ್ನು ಇಟ್ಟುಕೊಂಡು ‘ದಸ್ಕತ್’ ಸಿನಿಮಾ ಮಾಡಲಾಗಿದೆ.

ಇದನ್ನೂ ಓದಿ
ಈಡೇರಲೇ ಇಲ್ಲ ಮುತ್ತಪ್ಪ ರೈ ಬಯೋಪಿಕ್ ಆಸೆ: ವಿವರಿಸಿದ ರವಿ ಶ್ರೀವತ್ಸ
ಸೌರವ್ ಗಂಗೂಲಿ ಜೀವನ ಆಧರಿಸಿದ ಸಿನಿಮಾಕ್ಕೆ ಕೊನೆಗೂ ಸಿಕ್ಕ ನಾಯಕ
ಬಹುನಿರೀಕ್ಷಿತ ಕ್ರಿಕೆಟಿಗನ ಬಯೋಪಿಕ್ ಘೋಷಣೆ, ಯಾರು ಆ ಆಟಗಾರ
ಬರಲಿದೆ ರಜನಿಕಾಂತ್ ಬಯೋಪಿಕ್; ಬಾಲಿವುಡ್ ನಿರ್ಮಾಪಕನ ಬಂಡವಾಳ

ತುಳುನಾಡಿನ ಶೈಲಿನ ಕನ್ನಡವನ್ನು ‘ದಸ್ಕತ್’ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಈ ಕಾರಣದಿಂದ ಚಿತ್ರಕ್ಕೆ ಬೇರೆಯದೇ ಫ್ಲೇವರ್ ಬಂದಿದೆ. ಯಾವುದೇ ಒಂದು ಪಾತ್ರವನ್ನು ಹೀರೋ ರೀತಿ ಬಿಂಬಿಸದೇ ಎಲ್ಲ ಪಾತ್ರಕ್ಕೂ ಅಗತ್ಯವಿರುವ ಮಹತ್ವವನ್ನು ನೀಡಲಾಗಿದೆ. ಆರಂಭದಿಂದ ಕ್ಲೈಮ್ಯಾಕ್ಸ್ ತನಕ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷದ ರೀತಿ ಈ ಸಿನಿಮಾ ಮೂಡಿಬಂದಿದೆ. ಅಂತಿಮವಾಗಿ ಯಾವುದು ಗೆಲ್ಲುತ್ತದೆ ಎಂಬುದನ್ನು ನೋಡಲು ಪೂರ್ತಿ ಸಿನಿಮಾ ನೋಡಬೇಕು.

‘ದಸ್ಕತ್’ ಸಿನಿಮಾದಲ್ಲಿ ಗಂಭೀರವಾದ ವಿಷಯವನ್ನೇ ಹೇಳಲಾಗಿದೆಯಾದರೂ ಅದನ್ನು ಸಾಧ್ಯವಾದಷ್ಟು ಲವಲವಿಕೆಯಿಂದ ಪ್ರಸ್ತುತಪಡಿಸಲು ಪ್ರಯತ್ನಿಸಲಾಗಿದೆ. ತಿಳಿಯಾದ ಹಾಸ್ಯವನ್ನು ಬೆರೆಸುವ ಮೂಲಕ ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ನಡೆದಿದೆ. ಈ ನಡುವೆ ಚಿಕ್ಕದೊಂದು ಪ್ರೇಮ್ ಕಹಾನಿ ಕೂಡ ಇದೆ. ಉಳಿದಂತೆ ಇಡೀ ಸಿನಿಮಾವನ್ನು ರಿಯಲಿಸ್ಟಿಕ್ ಆಗಿ ಕಟ್ಟಿಕೊಡಲಾಗಿದೆ. ಯಾವ ಅತಿರೇಕಗಳೂ ಇಲ್ಲದೇ ತುಂಬ ಸಹಜವಾಗಿ ದೃಶ್ಯಗಳನ್ನು ಪ್ರೇಕ್ಷಕರ ಮುಂದೆ ಇಡಲಾಗಿದೆ.

ಈ ಸಿನಿಮಾದಲ್ಲಿ ತೋರಿಸಿರುವ ಬಡವ ಮತ್ತು ದಣಿ ನಡುವಿನ ಸಂಘರ್ಷವನ್ನು ನೋಡಿದಾಗ ‘ಕಾಂತಾರ’, ‘ಭೂತಯ್ಯನ ಮಗ ಅಯ್ಯು’ ಮುಂತಾದ ಸಿನಿಮಾಗಳು ನೆನಪಿಗೆ ಬರುತ್ತವೆ. ಆದರೆ ಆರಂಭದಿಂದ ಕೊನೇ ತನಕ ಈ ಸಂಘರ್ಷವೇ ಮುಂದುವರಿಯುತ್ತದೆ. ದೊಡ್ಡ ಟ್ವಿಸ್ಟ್​ಗಳನ್ನು ಇಲ್ಲಿ ನಿರೀಕ್ಷಿಸಲಾಗದು. ಸರಣಿ ಸಂಘರ್ಷಗಳನ್ನು ಮೀರಿ ಈ ಕಥೆ ಹೆಚ್ಚಿನದ್ದನ್ನು ಸಾಧಿಸುವ ಪ್ರಯತ್ನ ಮಾಡಿದ್ದರೆ ಚಿತ್ರದ ತೂಕ ಹೆಚ್ಚುತ್ತಿತ್ತು.

ದೀಕ್ಷಿತ್ ಕೆ. ಅಂಡಿಂಜೆ, ಭವ್ಯಾ ಪೂಜಾರಿ, ಚಂದ್ರಹಾಸ್ ಉಲ್ಲಾಳ್, ಮೋಹನ್ ಶೇಣಿ, ಯೋಗಿಶ್ ಶೆಟ್ಟಿ, ಯುವ ಶೆಟ್ಟಿ, ನೀರಜ್ ಮುಂತಾದ ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.