ಸೌರವ್ ಗಂಗೂಲಿ ಜೀವನ ಆಧರಿಸಿದ ಸಿನಿಮಾಕ್ಕೆ ಕೊನೆಗೂ ಸಿಕ್ಕ ನಾಯಕ
Sourav Ganguly: ಭಾರತ ಕ್ರಿಕೆಟ್ ಇತಿಹಾಸದ ಪ್ರಮುಖ ನಾಯಕ ಸೌರವ್ ಗಂಗೂಲಿ. ಭಾರತ ಕ್ರಿಕೆಟ್ ತಂಡ ಯೋಚಿಸುತ್ತಿದ್ದ ರೀತಿಯನ್ನೇ ಬದಲಾಯಿಸಿದ ನಾಯಕ ಸೌರವ್ ಗಂಗೂಲಿ. ಸೌರವ್ ಗಂಗೂಲಿ ಬಯೋಪಿಕ್ ಬಗ್ಗೆ 2019 ರಿಂದಲೂ ಚರ್ಚೆಗಳು ನಡೆಯುತ್ತಿವೆ. ಇದೀಗ ಸೌರವ್ ಗಂಗೂಲಿ ಪಾತ್ರಕ್ಕೆ ನಟನ ಅಂತಿಮಗೊಳಿಸಲಾಗಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಚಾಲ್ತಿಯಲ್ಲಿದೆ.

ಸೌರವ್ ಗಂಗೂಲಿ (sourav ganguly) ಭಾರತ ಕ್ರಿಕೆಟ್ ಇತಿಹಾಸದ ಅತ್ಯಂತ ಪ್ರಮುಖ ನಾಯಕ. ಭಾರತ ಕ್ರಿಕೆಟ್ ತಂಡದ (Indian Cricket Team) ಆಟದ ವಿಧಾನಕ್ಕೆ ಪ್ರಮುಖ ತಿರುವು ನೀಡಿದ ನಾಯಕ ಸೌರವ್ ಗಂಗೂಲಿ. ಆಡಿದರೆ ಸಾಕು ಎಂಬ ಮನಸ್ಥಿತಿಯಿಂದ ಗೆಲ್ಲಲೇ ಬೇಕು ಎಂಬ ಮನಸ್ಥಿತಿಗೆ ತಂಡವನ್ನು ತಂದು ನಿಲ್ಲಿಸಿದ್ದು ನಾಯಕ ಸೌರವ್ ಗಂಗೂಲಿ. ಅಪ್ರತಿಮ ನಾಯಕನ ಜೀವನ ಸಿನಿಮಾ ಆಗಬೇಕು ಎಂಬ ಮಾತು 2019 ರಿಂದಲೂ ಕೇಳಿ ಬರುತ್ತಿದೆ. 2019ರಲ್ಲಿಯೇ ಸೌರವ್ ಗಂಗೂಲಿ ಜೀನವನ್ನು ಸಿನಿಮಾ ಮಾಡಲು ನಿರ್ಮಾಣ ಸಂಸ್ಥೆಯೊಂದು ಹಕ್ಕು ಖರೀದಿ ಮಾಡಿದೆ. ಆದರೆ ಈವರೆಗೆ ಸಿನಿಮಾ ಸೆಟ್ಟೇರಿಲ್ಲ. ಆದರೆ ಇತ್ತೀಚೆಗೆ ಮತ್ತೆ ಈ ಸಿನಿಮಾ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.
ಸೌರವ್ ಗಂಗೂಲಿ ಪಾತ್ರಕ್ಕೆ ನಟನ ಆಯ್ಕೆ ಬಗ್ಗೆ ಆಗಾಗ್ಗೆ ಸುದ್ದಿಗಳು ಹರಿದಾಡುತ್ತಲೇ ಇವೆ. ಮೊದಲಿಗೆ ರಣ್ಬೀರ್ ಕಪೂರ್ ಸೌರವ್ ಗಂಗೂಲಿ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗಿತ್ತು. ಅದಾದ ಬಳಿಕ ಇಲ್ಲ ಆಯುಷ್ಮಾನ್ ಖುರಾನಾ ಸೌರವ್ ಗಂಗೂಲಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂತು. ಆದರೆ ಈಗ ಹರಿದಾಡುತ್ತಿರುವ ಹೊಸ ಸುದ್ದಿಯಂತೆ ನಟ ರಾಜ್ಕುಮಾರ್ ರಾವ್ ಗಂಗೂಲಿ ಪಾತ್ರದಲ್ಲಿ ನಟಿಸಲಿದ್ದಾರಂತೆ. ರಾಜ್ಕುಮಾರ್ ರಾವ್ ಜೊತೆಗೆ ಕೆಲ ಬೆಂಗಾಲಿ ನಟರುಗಳು ಸಹ ಸಿನಿಮಾದ ಭಾಗ ಆಗಲಿದ್ದಾರಂತೆ.
ಇದನ್ನೂ ಓದಿ:ಸೌರವ್ ಗಂಗೂಲಿ ಬಯೋಪಿಕ್; ಮುಖ್ಯ ಪಾತ್ರ ಮಾಡಲಿರುವ ನಟ ರಾಜ್ಕುಮಾರ್ ರಾವ್
ಸೌರವ್ ಗಂಗೂಲಿ ಜೀವನ ಆಧರಿಸಿದ ಸಿನಿಮಾ ನಿರ್ದೇಶನ ಮಾಡಲಿರುವುದು ವಿಕ್ರಮಾದಿತ್ಯ ಮೋಟ್ವಾನಿ. ಸೌರವ್ ಗಂಗೂಲಿಯ ಆಪ್ತ ಹಾಗೂ ಈ ಸಿನಿಮಾದ ಸಹ ನಿರ್ಮಾಪಕರೂ ಆಗಿರುವ ಸಂಜಯ್ ದಾಸ್ ಹೇಳಿರುವಂತೆ ಸೌರವ್ ಸಿನಿಮಾದ ಚಿತ್ರಕತೆಯನ್ನು ಮೊದಲ ಡ್ರಾಫ್ಟ್ ಅನ್ನು ಓದಿ ಮುಗಿಸಿದ್ದು ಕೆಲ ಬದಲಾವಣೆಗಳನ್ನು ಸೂಚಿಸಿದ್ದಾರಂತೆ. ಚಿತ್ರಕತೆಯ ಅಂತಿಮ ಡ್ರಾಫ್ಟ್ ಮಾರ್ಚ್ ತಿಂಗಳಲ್ಲಿ ರೆಡಿಯಾಗಲಿದ್ದು, ಅದೇ ತಿಂಗಳು ನಟರು ಸಹ ಅಂತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಸೌರವ್ ಗಂಗೂಲಿ ಕುರಿತ ಸಿನಿಮಾ ಅವರ ಬಾಲ್ಯ, ಯೌವ್ವನ, ಕ್ರಿಕೆಟ್ ದಿನಗಳು, ಅವರ ನಾಯಕತ್ವದ ಜೊತೆಗೆ ಅವರ ಖಾಸಗಿ ವಿಷಯಗಳ ಮೇಲೂ ಬೆಳಕು ಚೆಲ್ಲಲಿದೆಯಂತೆ. ಗಂಗೂಲಿಯ ಜೀವನ ಚಿತ್ರದ ಜೊತೆಗೆ ಪಶ್ಚಿಮ ಬಂಗಾಳದ ಒಟ್ಟಾರೆ ಕತೆಯನ್ನೂ ಕಟ್ಟಿಕೊಡುವ ಪ್ರಯತ್ನ ಸಹ ಸಿನಿಮಾದಲ್ಲಿ ಇರಲಿದೆಯಂತೆ. ಅಂದಹಾಗೆ ಈ ಸಿನಿಮಾನಲ್ಲಿ ಗಂಗೂಲಿ ಸಹ ಅತಿಥಿ ಪಾತ್ರದಲ್ಲಿ ಬಂದು ಹೋಗಲಿದ್ದಾರಂತೆ.
ಕ್ರಿಕೆಟಿಗರಾದ ಕಪಿಲ್ ದೇವ್, ಎಂಎಸ್ ಧೋನಿ, ಮುತ್ತಯ್ಯ ಮುರಳೀಧರನ್, ಮಿಥಾಲಿ ರಾಜ್, ಪ್ರವೀಣ್ ತಾಂಬೆ, ಮೊಹಮ್ಮದ್ ಅಜರುದ್ಧೀನ್ ಅವರ ಜೀವನದ ಬಗ್ಗೆ ಸಿನಿಮಾಗಳು ಈಗಾಗಲೇ ತೆರೆಗೆ ಬಂದಿವೆ. ಯುವರಾಜ್ ಸಿಂಗ್ ಜೀವನ ಸಹ ಸಿನಿಮಾ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ