‘ಸಿಕಂದರ್’ ಸಿನಿಮಾ ಲೀಕ್ ಮಾಡಿದ್ದು ಯಾರು? ಶಾರುಖ್ ಸಂಸ್ಥೆ ಮೇಲೆ ಅನುಮಾನ
ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾಗೆ ಸೋಲು ಉಂಟಾಗಿದೆ. ಚಿತ್ರದ ಸೋಲಿಗೆ ಪೈರಸಿ ಕೂಡ ಪ್ರಮುಖ ಕಾರಣ ಆಗಿದೆ. ಈ ಕೃತ್ಯದ ಹಿಂದಿರುವ ವ್ಯಕ್ತಿಗಳು ಯಾರು ಎಂದು ಹುಡುಕಾಟ ನಡೆಸಲಾಗುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಿದವರಲ್ಲಿ ಯಾರೋ ಪೈರಸಿಗೆ ಕಾರಣ ಆಗಿದ್ದಾರೆ ಎಂಬ ಶಂಕೆ ಮೂಡಿದೆ.

ಬಹುಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ‘ಸಿಕಂದರ್’ (Sikandar) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತಿದೆ. ಅಂದುಕೊಂಡ ಮಟ್ಟಕ್ಕೆ ಈ ಸಿನಿಮಾ ಕಲೆಕ್ಷನ್ ಮಾಡಿಲ್ಲ. ನಟ ಸಲ್ಮಾನ್ ಖಾನ್ (Salman Khan) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಕೂಡ ಸ್ಟಾರ್ ಕಲಾವಿದರು ಇದ್ದಾರೆ. ನಿರ್ದೇಶನ ಮಾಡಿರುವುದು ಹಿರಿಯ ನಿರ್ದೇಶಕ ಎ.ಆರ್. ಮುರುಗದಾಸ್. ಇಂಥ ಘಟಾನುಘಟಿಗಳು ಇದ್ದರೂ ಕೂಡ ‘ಸಿಕಂದರ್’ ಸಿನಿಮಾಗೆ ಸೋಲು ಉಂಟಾಗಿದೆ. ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ತಗ್ಗಲು ಪೈರಸಿ ಕೂಡ ಕಾರಣ. ಹಾಗಾದ್ರೆ ಈ ಪೈರಸಿ ಹಿಂದೆ ಇರುವ ವ್ಯಕ್ತಿಗಳು ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಶಾರುಖ್ ಖಾನ್ (Shah Rukh Khan) ಒಡೆತನದ ‘ರೆಡ್ ಚಿಲ್ಲೀಸ್ ವಿಎಫ್ಎಕ್ಸ್’ ಸಂಸ್ಥೆಯ ಮೇಲೂ ಅನುಮಾನ ಮೂಡಿದೆ.
ಸಾಮಾನ್ಯವಾಗಿ ಇಂಥ ಸಿನಿಮಾಗಳು ವಿದೇಶದಲ್ಲಿ ಬಿಡುಗಡೆ ಆದಾಗ ಅಲ್ಲಿಂದಲೇ ಲೀಕ್ ಆಗುವ ಸಾಧ್ಯತೆ ಇರುತ್ತದೆ. ಆದರೆ ‘ಸಿಕಂದರ್’ ವಿಚಾರದಲ್ಲಿ ಆ ರೀತಿ ಆಗಿಲ್ಲ. ಯಾಕೆಂದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಸಿಕಂದರ್’ ಸಿನಿಮಾಗೂ ಪೈರಸಿ ಕಾಪಿಗೂ ಕೆಲವು ವ್ಯತ್ಯಾಸ ಇದೆ. ಥಿಯೆಟ್ರಿಕಲ್ ರಿಲೀಸ್ನಲ್ಲಿ ಇಲ್ಲದ ಕೆಲವು ದೃಶ್ಯಗಳು ಕೂಡ ಪೈರಸಿ ವರ್ಷನ್ನಲ್ಲಿ ಇವೆ! ಹಾಗಾಗಿ ಇದು ಪೋಸ್ಟ್ ಪ್ರೊಡಕ್ಷನ್ ತಂಡದಲ್ಲಿರುವವರಿಂದ ಆಗಿರುವ ಲೀಕ್ ಎಂದು ಶಂಕೆ ವ್ಯಕ್ತಪಡಿಸಲಾಗುತ್ತಿದೆ.
ಶಾರುಖ್ ಖಾನ್ ಅವರ ಒಡೆತನದ ‘ರೆಡ್ ಚಿಲ್ಲೀಸ್ ವಿಎಫ್ಎಕ್ಸ್’ ಸಂಸ್ಥೆಯಲ್ಲಿ ‘ಸಿಕಂದರ್’ ಸಿನಿಮಾದ ಕೆಲಸ ಮಾಡಿಸಲಾಗಿದೆ. ಈ ಸಂಸ್ಥೆಯಲ್ಲಿನ ಸೆಕ್ಯುರಿಟಿ ಲೋಪದಿಂದಲೇ ಸಿನಿಮಾ ಲೀಕ್ ಆಗಿರುವ ಸಾಧ್ಯತೆ ಇದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಆದರೆ ಸಂಸ್ಥೆಯ ಕಡೆಯಿಂದ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಒಟ್ಟಿನಲ್ಲಿ, ಸಲ್ಮಾನ್ ಖಾನ್ ಅವರಿಗೆ ಪೈರಸಿಯಿಂದ ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಇದನ್ನೂ ಓದಿ: ಕೊರಿಯನ್ ಹಾರ್ಟ್ ಮಾಡಲು ರಶ್ಮಿಕಾ ಒತ್ತಾಯ; ಮುಲಾಜಿಲ್ಲದೇ ನಿರಾಕರಿಸಿದ ಸಲ್ಮಾನ್
ಮಾರ್ಚ್ 30ರಂದು ‘ಸಿಕಂದರ್’ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನ ಈ ಚಿತ್ರಕ್ಕೆ 30 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. 2ನೇ ದಿನ 33.36 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನ 18.75 ಕೋಟಿ ರೂಪಾಯಿಗೆ ಕುಸಿಯಿತು. 4ನೇ ದಿನ ಕೇವಲ 8.50 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಪೈರಸಿ ಆಗಿದ್ದರಿಂದಲೇ ಈ ಸಿನಿಮಾಗೆ ಇಂಥ ಹೀನಾಯ ಸ್ಥಿತಿ ಬಂದಿದೆ. ಅಲ್ಲದೇ, ಜನರಿಂದ ನೆಗೆಟಿವ್ ಪ್ರತಿಕ್ರಿಯೆ ಸಿಕ್ಕಿದ್ದು ಕೂಡ ಸಿನಿಮಾ ಸೋಲಿಗೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.