ಸೌರವ್ ಗಂಗೂಲಿ ಬಯೋಪಿಕ್; ಮುಖ್ಯ ಪಾತ್ರ ಮಾಡಲಿರುವ ನಟ ರಾಜ್ಕುಮಾರ್ ರಾವ್
ಬಯೋಪಿಕ್ನಲ್ಲಿ ಸೌರವ್ ಗಂಗೂಲಿ ಪಾತ್ರವನ್ನು ಯಾರು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾಜ್ಕುಮಾರ್ ರಾವ್ ಅವರಿಗೆ ಆ ಅವಕಾಶ ಒಲಿದಿದೆ. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಸಿನಿಮಾದ ಕೆಲಸಗಳು ವಿಳಂಬ ಆಗುತ್ತಿವೆ. ಈ ಕುರಿತು ಸೌರವ್ ಗಂಗೂಲಿ ಅವರು ಗುರುವಾರ (ಫೆ.20) ಮಾಹಿತಿ ನೀಡಿದ್ದಾರೆ.

ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿ, ಕಪಿಲ್ ದೇವ್ ಮುಂತಾದ ಸಾಧಕರ ಬಗ್ಗೆ ಈಗಾಗಲೇ ಸಿನಿಮಾಗಳು ಬಂದಿವೆ. ಅದೇ ರೀತಿ ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ಬಯೋಪಿಕ್ ನೋಡಲು ಅಭಿಮಾನಿಗಳು ಕಾದಿದ್ದಾರೆ. ಈ ಬಹುನಿರೀಕ್ಷಿತ ಪ್ರಾಜೆಕ್ಟ್ ಬಗ್ಗೆ ಬಹಳ ಹಿಂದಿನಿಂದಲೂ ಸುದ್ದಿ ಕೇಳಿಬರುತ್ತಲೇ ಇವೆ. ಆದರೆ ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರುವುದು ತಡವಾಗುತ್ತಿದೆ. ಈಗ ತಮ್ಮ ಬಯೋಪಿಕ್ ಬಗ್ಗೆ ಸ್ವತಃ ಸೌರವ್ ಗಂಗೂಲಿ ಅವರು ಒಂದು ಸುದ್ದಿ ನೀಡಿದ್ದಾರೆ. ತಮ್ಮ ಪಾತ್ರದಲ್ಲಿ ಬಾಲಿವುಡ್ ನಟ ರಾಜ್ಕುಮಾರ್ ರಾವ್ ನಟಿಸಲಿದ್ದಾರೆ ಎಂಬುದನ್ನು ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಬುರ್ದ್ವಾನ್‌ನಲ್ಲಿ ಸೌರವ್ ಗಂಗೂಲಿ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ‘ನನಗೆ ತಿಳಿದಿರುವಂತೆ ನಟ ರಾಜ್ಕುಮಾರ್ ರಾವ್ ಅವರು ನನ್ನ ಪಾತ್ರ ಮಾಡಲಿದ್ದಾರೆ. ಆದರೆ ಡೇಟ್ಸ್ ಸಮಸ್ಯೆ ಎದುರಾಗಿದೆ. ಹಾಗಾಗಿ ಆ ಸಿನಿಮಾ ಬಿಡುಗಡೆ ಆಗಲು ಒಂದು ವರ್ಷಕ್ಕಿಂತಲೂ ಅಧಿಕ ಸಮಯ ಬೇಕಾಗಲಿದೆ’ ಎಂದು ಸೌರವ್ ಗಂಗೂಲಿ ಅವರು ಹೇಳಿದ್ದಾರೆ.
ಬಾಲಿವುಡ್ನಲ್ಲಿ ನಟ ರಾಜ್ಕುಮಾರ್ ರಾವ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ನಟನೆ ಬಗ್ಗೆ ಯಾರಿಗೂ ಅನುಮಾನ ಇಲ್ಲ. ಯಾವ ಪಾತ್ರ ಕೊಟ್ಟರೂ ಅವರು ಅತ್ಯುತ್ತಮವಾಗಿ ನಿಭಾಯಿಸುತ್ತಾರೆ. ಅವರ ಖಾತೆಯಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಿವೆ. ಈಗ ಅವರು ಸೌರವ್ ಗಂಗೂಲಿ ಪಾತ್ರವನ್ನು ಹೇಗೆ ಮಾಡಲಿದ್ದಾರೆ ಎಂದು ತಿಳಿಯುವ ಕೌತುಕ ಎಲ್ಲರಲ್ಲೂ ಮೂಡಿದೆ.
ಇದನ್ನೂ ಓದಿ: ಸೌರವ್ ಗಂಗೂಲಿ ಕಾರು ಭೀಕರ ಅಪಘಾತ: ಎಕ್ಸ್‌ಪ್ರೆಸ್‌ವೇಯಲ್ಲಿ ಲಾರಿ, ಬೆಂಗಾವಲು ಪಡೆ ವಾನಹಗಳು ಡಿಕ್ಕಿ
ಭಾರತೀಯ ಕ್ರಿಕೆಟ್ಗೆ ಸೌರವ್ ಗಂಗೂಲಿ ನೀಡಿದ ಕೊಡುಗೆ ಅಪಾರ. ಟೀಮ್ ಇಂಡಿಯಾವನ್ನು ವಿಶ್ವಮಟ್ಟದಲ್ಲಿ ಮಿಂಚುವಂತೆ ಮಾಡಿದವರಲ್ಲಿ ಗಂಗೂಲಿ ಕೂಡ ಪ್ರಮುಖರು. ಅವರ ಬಯೋಪಿಕ್ನಲ್ಲಿ ಆ ಎಲ್ಲ ವಿವರಗಳನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ಜೊತೆಗೆ ಸೌರವ್ ಗಂಗೂಲಿ ಅವರ ವೈಯಕ್ತಿಕ ಬದುಕಿನ ಬಗ್ಗೆಯೂ ಬಯೋಪಿಕ್ನಲ್ಲಿ ತೋರಿಸಲಾಗುವುದು. ಆದರೆ ಈ ಸಿನಿಮಾ ಬರಲು ಇನ್ನೂ ಬಹಳ ಸಮಯ ಹಿಡಿಯಲಿದೆ. ಇನ್ನುಳಿದ ಪಾತ್ರವರ್ಗ ಮತ್ತು ತಾಂತ್ರಿಕ ಬಳಗದ ಬಗ್ಗೆ ಕೂಡ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.