ಟಾಯ್ಲೆಟ್ ತೊಳೆಯುತ್ತಿದ್ದ ವ್ಯಕ್ತಿ ಈಗ ದೇಶವೇ ತಿರುಗಿ ನೋಡುವಂಥಹಾ ಸಿನಿಮಾ ಮಾಡಿದ್ದಾರೆ
Director Laxman Utekar: ಜೀವನ ನಡೆಸಲಿಕ್ಕೆಂದು ಕಚೇರಿಯಲ್ಲಿ ಟಾಯ್ಲೆಟ್ ತೊಳೆಯುತ್ತಿದ್ದ, ಇರಲು ಮನೆ ಇರದೆ ರಸ್ತೆಯಲ್ಲಿ ಮಲಗುತ್ತಿದ್ದ, ಜೀವನ ನಡೆಸಲು ಜನರಿಂದ ಬೇಡಿ ಹಣ ಪಡೆಯುತ್ತಿದ್ದ ವ್ಯಕ್ತಿ ಇಂದು ಇಡೀ ದೇಶವೇ ತಿರುಗಿ ನೋಡುವಂಥಹಾ ಸಿನಿಮಾ ಮಾಡಿದ್ದಾರೆ. 25 ಪೈಸೆಗೂ ಕಷ್ಟ ಪಡುತ್ತಿದ್ದ ವ್ಯಕ್ತಿ ಸಿನಿಮಾ ಇಂದು ಪ್ರತಿ ದಿನ 30 ಕೋಟಿ ಬಾಚುತ್ತಿದೆ.

ಲಕ್ಷ್ಮಣ್ ಉಠೇಕರ್ ಎಂದರೆ ಹೆಚ್ಚು ಜನರಿಗೆ ಗೊತ್ತಾಗುವುದಿಲ್ಲ ಅದೇ ‘ಛಾವಾ’ ಸಿನಿಮಾದ ನಿರ್ದೇಶಕ ಎಂದರೆ ಕೂಡಲೇ ಗೊತ್ತಾಗುತ್ತದೆ. ಶಿವಾಜಿ ಮಹಾರಾಜರ ಪುತ್ರ ಸಾಂಬಾಜಿ ಮಹಾರಾಜರ ಕತೆಯನ್ನು ಲಕ್ಷ್ಮಣ್ ಉಠೇಕರ್ ಅದ್ಭುತವಾಗಿ ತೆರೆಗೆ ತಂದಿದ್ದಾರೆ. ಸಿನಿಮಾ ಬಿಡುಗಡೆ ಆಗಿ ಒಂದು ವಾರವಾಗಿದ್ದು ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಬಿಡುಗಡೆ ಆದ ಕೇವಲ ಒಂದು ವಾರದಲ್ಲಿ 230 ಕೋಟಿಗೂ ಹೆಚ್ಚು ಹಣವನ್ನು ಬಾಚಿಕೊಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ನಿರ್ದೇಶಕನ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಛತ್ರಪತಿ ಶಿವಾಜಿ, ಸಾಂಬಾಜಿ ಮಹಾರಾಜರ ಘೋಷಣೆಗಳನ್ನು ಕೂಗಲಾಗುತ್ತಿದೆ.
ಇಂಥಹಾ ಅದ್ಧೂರಿ ಸಿನಿಮಾ ನೀಡಿರುವ ನಿರ್ದೇಶಕ ಲಕ್ಷ್ಮಣ್ ಉಠೇಕರ್ ಅವರ ಜೀವನವೇ ಒಂದು ಸಿನಿಮಾ ಮಾಡಬಹುದಾದಷ್ಟು ಸರಕು ಹೊಂದಿದೆ ಎಂಬುದು ನಿಮಗೆ ಗೊತ್ತೆ. ನೂರಾರು ಕೋಟಿ ಕಲೆಕ್ಷನ್ ಮಾಡುತ್ತಿರುವ ಸಿನಿಮಾ ಮಾಡಿರುವ ನಿರ್ದೇಶಕ ಒಂದು ಕಾಲದಲ್ಲಿ ಟಾಯ್ಲೆಟ್ ತೊಳೆಯುತ್ತಿದ್ದರು, ಒಂದು ಹೊತ್ತಿನ ಊಟಕ್ಕೂ ಬೇಡುವ ಸ್ಥಿತಿಯಲ್ಲಿದ್ದರು. ಭಾರಿ ಕಷ್ಟದ ಜೀವನ ನಡೆಸಿ ಸ್ವಪರಿಶ್ರಮದಿಂದ, ಉನ್ನತವಾದ ಕನಸು ಕಂಡು ಅದನ್ನು ನನಸು ಮಾಡಿಕೊಂಡಿದ್ದಾರೆ.
ಲಕ್ಷ್ಮಣ್ ಉಠೇಕರ್ ಅವರದ್ದು ಬಡ ಕುಟುಂಬ, ಅದಕ್ಕೆ ತಕ್ಕಂತೆ ಓದಿನಲ್ಲಿಯೂ ಅವರಿಗೆ ಹೆಚ್ಚು ಆಸಕ್ತಿ ಇರಲಿಲ್ಲ. ಹತ್ತನೇ ತರಗತಿಯನ್ನು ಎರಡು ಬಾರಿ ಪರೀಕ್ಷೆ ಬರೆದು ಪಾಸಾದರು. ಓದಿನಿಂದ ಏನೂ ಆಗದು ಎಂದು ತಿಳಿದ ಲಕ್ಷ್ಮಣ್, ಕೆಲಸ ಹುಡುಕಿಕೊಂಡು ಮುಂಬೈಗೆ ಬಂದರು. ಜೇಬಲ್ಲಿ ತುಸು ಹಣವೂ ಇತ್ತು. ಮುಂಬೈನ ಜನಪ್ರಿಯ ಶಿವಾಜಿ ಪಾರ್ಕ್ ಎದುರು ಪಾಪ್ಕಾರ್ನ್ ಪಾರಾಟ ಮಾಡಲು ಪ್ರಾರಂಭಿಸಿದರು. ಪಾಪ್ಕಾರ್ನ್ ಮಾರಾಟದಿಂದ ಒಮದು ಪ್ಯಾಕೆಟ್ಗೆ 25 ಪೈಸೆ ಲಾಭ ಸಿಗುತ್ತಿತ್ತಂತೆ. ಆದರೆ ಅದು ಅವರ ಜೀವನ ನಡೆಸಲು ಸಾಕಾಗುತ್ತಿರಲಿಲ್ಲ.
ಇದನ್ನೂ ಓದಿ:‘ಅನಿಮಲ್’, ‘ಪುಷ್ಪ 2’ ದಾಖಲೆಯನ್ನೂ ಮುರಿದು ಹಾಕಿದ ‘ಛಾವಾ’
ಗಣೇಶೋತ್ಸವ ಸಂದರ್ಭದಲ್ಲಿ ಗಣೇಶ ಪೆಂಡಾಲ್ಗಳ ಬಳಿ ಪಾಪ್ಕಾರ್ನ್ ಮಾರುವುದು, ಗಣೇಶ ವಿಸರ್ಜನೆ ಸಮಯದಲ್ಲಿ ಸಾರ್ವಜನಿಕರಿಂದ ಗಣೇಶ ಪಡೆದು ಸಮುದ್ರದಲ್ಲಿ ವಿಸರ್ಜನೆ ಮಾಡಿ ಅವರಿಂದ ಹಣ ಪಡೆಯುವುದು ಮಾಡುತ್ತಿದ್ದರಂತೆ. ಗಣೇಶೋತ್ಸವ ಮುಗಿವ ವೇಳೆಗೆ ತುಸು ಹಣ ಮಾಡಿಕೊಂಡಿದ್ದ ಲಕ್ಷ್ಮಣ್, ದಾದರ್ನ ಜನಪ್ರಿಯ ಚಾಟ್ ಸ್ಟ್ರೀಟ್ನಲ್ಲಿ ವಡಾಪಾವ್ ಅಂಗಡಿ ತೆರೆದಿದ್ದಾರೆ. ಅಲ್ಲಿ ಅವರಿಗೆ ಒಳ್ಳೆಯ ವ್ಯಾಪಾರ ಆಗುತ್ತಿತ್ತಂತೆ. ಜೀವನಕ್ಕೆ ತುಸು ಹಣವೂ ಸಿಗುತ್ತಿತ್ತಂತೆ. ಅಂಗಡಿ ಮೇಲೆ ಒಳ್ಳೆಯ ಬಂಡವಾಳ ಹಾಕಿ ವ್ಯಾಪಾರ ಮಾಡುತ್ತಿದ್ದ ವೇಳೆಗೆ ಬಿಎಂಸಿಯವರು ಲಕ್ಷ್ಮಣ್ ಅವರ ಅಂಗಡಿಯನ್ನು ಅಕ್ರಮ ನಿರ್ಮಾಣ ಎಂದು ಒಡೆದು ಹಾಕಿದರಂತೆ.
ವ್ಯಾಪಾರ, ಹಣ ಎರಡನ್ನೂ ಕಳೆದುಕೊಂಡ ಲಕ್ಷ್ಮಣ್, ಆ ನಂತರ ಬದುಕಲು ಯಾವುದಾದರೂ ಉದ್ಯೋಗ ಹುಡುಕಲು ಮುಂದಾಗಿದ್ದಾರೆ. ಆಗ ಅವರ ಕಣ್ಣಿಗೆ ಕಚೇರಿಯೊಂದರಲ್ಲಿ ಪಿವನ್ (ಸಹಾಯಕ) ಹುದ್ದೆ ಇರುವುದು ತಿಳಿದು ಕೆಲಸಕ್ಕೆ ಸೇರಿಕೊಂಡರಂತೆ. ಅಲ್ಲಿ ಅವರಿಗೆ ಚಹಾ ತಂದುಕೊಡುವುದರಿಂದ ಹಿಡಿದು, ಟಾಯ್ಲೆಟ್ ತೊಳೆಯುವವರೆಗೆ ಎಲ್ಲ ಕೆಲಸ ಮಾಡಬೇಕಿತ್ತಂತೆ. ಆ ನಂತರ ಸಿನಿಮಾ ಎಡಿಟಿಂಗ್ ಸ್ಟುಡಿಯೋ ಹೊಂದಿದ್ದ ಅಶೋಕ್ ಜೈನ್ ಅವರ ಸ್ಟುಡಿಯೋನಲ್ಲಿ ಕಸ ಗುಡಿಸಲು ಪಾರ್ಟ್ ಟೈಮ್ ಕೆಲಸಕ್ಕೆ ಸೇರಿಕೊಂಡರಂತೆ.
ಇದನ್ನೂ ಓದಿ:‘ಅನಿಮಲ್’, ‘ಪುಷ್ಪ 2’ ದಾಖಲೆಯನ್ನೂ ಮುರಿದು ಹಾಕಿದ ‘ಛಾವಾ’
ಹಾಗೆಯೇ ಅಲ್ಲಿ ಕೆಲಸ ಮಾಡುತ್ತಾ ಅಶೋಕ್ ಜೈನ್, ಸಿನಿಮಾಟೊಪ್ರಾಫರ್ ಪ್ರದೀಪ್ ಜೈನ್ ಅವರುಗಳ ಕಾರು ತೊಳೆಯುವುದು, ಅವರ ಸಿನಿಮಾ ಎಡಿಟಿಂಗ್ ಸೆಟಪ್ ಸ್ವಚ್ಛ ಮಾಡುವುದು, ಕ್ಯಾಮೆರಾ ಅದರ ಲೆನ್ಸ್ಗಳನ್ನು ಸ್ವಚ್ಛ ಮಾಡುವುದು ಮಾಡುತ್ತಿದ್ದರಂತೆ. ಹೀಗೆಯೇ ಸಿನಿಮಾ ಹೇಗೆ ತಯಾರಾಗುತ್ತದೆ ಎಂಬ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಉಮೇಶ್, ತಮ್ಮ ಹೆಚ್ಚಿನ ಸಮಯವನ್ನು ಸ್ಟುಡಿಯೋನಲ್ಲಿ ಕಳೆಯಲು ಆರಂಭಿಸಿದರಂತೆ. ಒಮ್ಮೆ ಪ್ರದೀಪ್ ಜೈನ್ ಅವರಿಗೆ ಕ್ಯಾಮೆರಾ ಅಸಿಸ್ಟೆಂಟ್ ಅವಶ್ಯಕತೆ ಬಿತ್ತಂತೆ. ಅಂದು ಅವರು ಲಕ್ಷ್ಮಣ್ ಅವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಲಕ್ಷ್ಮನ್ ಜೀವನ ಬದಲಾಗಿ ಹೋಯ್ತು.
ಆರಂಭದಲ್ಲಿ ಕ್ಯಾಮೆರಾ ಅಸಿಸ್ಟೆಂಟ್ ಆಗಿ ದುಡಿದ ಲಕ್ಷ್ಮಣ್, ಆ ಪ್ರಾಜೆಕ್ಟ್ ಮುಗಿದ ಮೇಲೆ ಸಿನಿಮಾ ಸೆಟ್ನಲ್ಲಿ ಸ್ಪಾಟ್ ಬಾಯ್ ಕೆಲಸ ಸಹ ಮಾಡಿದರಂತೆ. ಸಿನಿಮಾಟೊಗ್ರಫಿ ಮೇಲೆ ಸೆಳೆತ ಹೆಚ್ಚಾಗಿ ಮತ್ತೆ ಕ್ಯಾಮೆರಾ ಅಸಿಸ್ಟೆಂಟ್ ಆದ ಲಕ್ಷ್ಮಣ್ ಆ ನಂತರ ‘ಖನ್ನಾ ಆಂಡ್ ಐಯ್ಯರ್’ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವತಂತ್ಯ್ರ ಸಿನಿಮಾಟೊಗ್ರಾಫರ್ ಆದರು. ಆ ನಂತರ ಅಕ್ಷಯ್ ಕುಮಾರ್, ಸಂಜಯ್ ದತ್ ಇನ್ನಿತರ ದೊಡ್ಡ ತಾರಾಗಣ ಇದ್ದ ಭಾರಿ ಬಜೆಟ್ ಸಿನಿಮಾ ‘ಬ್ಲೂ’ ಸಿನಿಮಾಕ್ಕೆ ಕ್ಯಾಮೆರಾ ಕೆಲಸ ಮಾಡಿದರು. ಆ ನಂತರ ಬ್ಲಾಕ್ ಬಸ್ಟರ್ ಸಿನಿಮಾ ‘ಇಂಗ್ಲೀಷ್-ವಿಂಗ್ಲೀಷ್’ಗೆ ಕ್ಯಾಮೆರಾ ಹಿಡಿದರು.
ಆ ವೇಳೆಗಾಗಲೇ ಬಾಲಿವುಡ್ನ ನಿಪುಣ ಕ್ಯಾಮೆರಾಮ್ಯಾನ್ ಎನಿಸಿಕೊಂಡಿದ್ದ ಉಮೇಶ್, 2014 ರಲ್ಲಿ ಮೊದಲ ಬಾರಿಗೆ ‘ಟಪಾಲ್’ ಹೆಸರಿನ ಮರಾಠಿ ಸಿನಿಮಾ ನಿರ್ದೇಶನ ಮಾಡಿದರು. ಸಿನಿಮಾ ಸಾಮಾನ್ಯ ಹಿಟ್ ಎನಿಸಿಕೊಂಡಿತು. 2016 ರಲ್ಲಿ ಶಾರುಖ್ ಖಾನ್, ಆಲಿಯಾ ಭಟ್ ನಟನೆಯ ‘ಡಿಯರ್ ಜಿಂದಗಿ’ ಸಿನಿಮಾಕ್ಕೆ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡಿ ಪ್ರಶಸ್ತಿ ಸಹ ಗಿಟ್ಟಿಸಿಕೊಂಡರು. ಬಳಿಕ ಮತ್ತೆ ನಿರ್ದೇಶಕರ ಟೊಪ್ಪಿ ತೊಟ್ಟು ‘ಲಾಲ್ಬುಗ್ಚಾ ರಾಣಿ’ ಹೆಸರಿನ ಮರಾಠಿ ಸಿನಿಮಾ ನಿರ್ದೇಶನ ಮಾಡಿದರು. ಆ ಸಿನಿಮಾ ಸಹ ಹಿಟ್ ಎನಿಸಿಕೊಂಡಿತು. ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿತು.
2019 ರಲ್ಲಿ ಮೊದಲ ಬಾರಿಗೆ ‘ಲುಕಾಚುಪಿ’ ಹೆಸರಿನ ಹಿಂದಿ ಸಿನಿಮಾ ನಿರ್ದೇಶನ ಮಾಡಿದ ಲಕ್ಷ್ಮಣ್ ಈ ವರೆಗೆ ಸಿನಿಮಾ ನಿರ್ದೇಶನದಲ್ಲಿಯೇ ತೊಡಗಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್, ಕೃತಿ ಸನೊನ್ ನಟಿಸಿದ್ದ ‘ಲುಕಾ ಚುಪಿ’ ಹಿಟ್ ಎನಿಸಿಕೊಂಡಿತು. ಆ ಬಳಿಕ ಮರಾಠಿ ಸಿನಿಮಾದಿಂದ ಸ್ಪೂರ್ತಿ ಪಡೆದು ‘ಮೀಮಿ’ ಸಿನಿಮಾ ಮಾಡಿದರು. ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಸಹ ಬಂತು. ಆ ನಂತರ ವಿಕ್ಕಿ ಕೌಶಲ್ ಜೊತೆಗೆ ‘ಜರಾ ಹಟ್ಕೆ ಜರಾ ಬಚ್ಚಕೇ’ ಸಿನಿಮಾ ಮಾಡಿದರು ಅದು ಫ್ಲಾಪ್ ಆಯ್ತು. ಆದರೆ ವಿಕ್ಕಿ ಕೌಶಲ್ ಅಂಥಹಾ ಪ್ರತಿಭಾವಂತ ನಟನ ಗೆಳೆತನ ಧಕ್ಕಿತು. ಈಗ ‘ಛಾವಾ’ ಸಿನಿಮಾ ಅನ್ನು ಲಕ್ಷ್ಮಣ್ ನಿರ್ದೇಶನ ಮಾಡಿದ್ದು, ಇಡೀ ದೇಶವೇ ಸಿನಿಮಾ ಅನ್ನು ಕೊಂಡಾಡುತ್ತಿದೆ. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರು ಲಕ್ಷ್ಮಣ್ ಅವರ ಪ್ರತಿಭೆಯನ್ನು ಕೊಂಡಾಡಿರುವುದಲ್ಲದೆ ವಿಶೇಷ ಸನ್ಮಾನವನ್ನು ಸಹ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ