ಮೊಮ್ಮಗ ಮಾಡಿದ ಸಾಲದಿಂದ ಹರಾಜಿಗೆ ಬಂತು ಶಿವಾಜಿ ಗಣೇಶನ್ ಮನೆ
Shivaji Ganeshan: ನಟ ಶಿವಾಜಿ ಗಣೇಶನ್ ಭಾರತೀಯ ಚಿತ್ರರಂಗದ ಮೇರು ನಟರಲ್ಲೊಬ್ಬರು. ತಮಿಳು ಚಿತ್ರರಂಗದ ದಂತಕತೆ ಎನಿಸಿಕೊಂಡಿರುವ ಶಿವಾಜಿ ಗಣೇಶನ್, ತಮಿಳಿನ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದವರು. ಶಿವಾಜಿ ಗಣೇಶನ್ ಅವರಿಗೆ ಚೆನ್ನೈನಲ್ಲಿ ಬೃಹತ್ ಆದ ಮನೆಯೊಂದಿದೆ. ಆದರೆ ಅವರ ಮೊಮ್ಮಗ ಮಾಡಿದ ಸಾಲಕ್ಕೆ ಈಗ ಅದು ಹರಾಜಾಗುತ್ತಿದೆ. ಏನಿದು ಸುದ್ದಿ? ಇಲ್ಲಿದೆ ಪೂರ್ಣ ಮಾಹಿತಿ.

ಶಿವಾಜಿ ಗಣೇಶನ್, ಭಾರತೀಯ ಚಿತ್ರರಂಗದ ಮೇರು ನಟರಲ್ಲಿ ಒಬ್ಬರು. ತಮಿಳು ಚಿತ್ರರಂಗದ ದಂತಕತೆಯಾಗಿರುವ ಶಿವಾಜಿ ಗಣೇಶನ್, ತಮಿಳು ಚಿತ್ರರಂಗದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದವರು. ಆದರೆ ಈಗ ಅವರ ಮೊಮ್ಮಗ ಮಾಡಿದ ಸಾಲಕ್ಕೆ ಶಿವಾಜಿ ಗಣೇಶನ್ ನಿರ್ಮಿಸಿದ್ದ ಬೃಹತ್ ಮನೆ ಹರಾಜಿಗೆ ಬಂದಿದೆ. ಶಿವಾಜಿ ಗಣೇಶನ್ ಅವರಿಗೆ ಸೇರಿದ ಚೆನ್ನೈನ ಬೃಹತ್ ಮನೆಯ ಭಾಗವನ್ನು ಸಾರ್ವಜನಿಕವಾಗಿ ಹರಾಜು ಹಾಕುವಂತೆ ನ್ಯಾಯಾಲಯ ಆದೇಶ ನೀಡಿದೆ.
ಶಿವಾಜಿ ಗಣೇಶನ್ ಮೊಮ್ಮಗ ದುಶ್ಯಂತ್ ಮತ್ತು ಅವರ ಪತ್ನಿ ಅಭಿರಾಮಿ ಕೆಲ ವರ್ಷಗಳ ಹಿಂದೆ ಸಿನಿಮಾ ನಿರ್ಮಾಣಕ್ಕಾಗಿ ಖಾಸಗಿ ಫೈನ್ಯಾನ್ಸ್ ಸಂಸ್ಥೆಯೊಂದರಿಂದ 3.74 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಈ ಮೊತ್ತವನ್ನು 30% ಬಡ್ಡಿ ಸಮೇತ ತೀರಿಸುವುದಾಗಿ ಒಪ್ಪಂದ ಬರೆದುಕೊಟ್ಟಿದ್ದರು. ಆದರೆ ಪಡೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ತೀರಿಸಲಿಲ್ಲ ದುಶ್ಯಂತ್ ಮತ್ತು ಆತನ ಪತ್ನಿ.
ಫೈನ್ಯಾನ್ಸ್ ಸಂಸ್ಥೆಯು ನ್ಯಾಯಾಲಯದ ಮೆಟ್ಟಿಲೇರಿತು. ವಿಚಾರಣೆ ನಡೆಸಿದ ನ್ಯಾಯಾಲಯವು ಬಡ್ಡಿ ಎಲ್ಲವೂ ಸೇರಿ 9.20 ಕೋಟಿ ರೂಪಾಯಿ ಹಣವನ್ನು ದುಶ್ಯಂತ್, ಫೈನ್ಯಾನ್ಸ್ ಸಂಸ್ಥೆಗೆ ನೀಡಬೇಕಿದೆ. ಸಾಲ ತೀರಿಸಲು ದುಶ್ಯಂತ್ ನಿರ್ಮಾಣ ಮಾಡುತ್ತಿರುವ ಸಿನಿಮಾದ ಎಲ್ಲ ಹಕ್ಕುಗಳನ್ನು ಫೈನ್ಯಾನ್ಸ್ ಸಂಸ್ಥೆಗೆ ಕೊಡಬೇಕು ಎಂದು ಆದೇಶ ಮಾಡಿತು. ಆದರೆ ಇದಕ್ಕೆ ಒಪ್ಪಂದ ದುಶ್ಯಂತ್, ಸಿನಿಮಾದ ನಿರ್ಮಾಣ ಇನ್ನೂ ಪೂರ್ಣವಾಗಿಲ್ಲ. ಸಿನಿಮಾ ಪೂರ್ಣವಾಗದೆ ಹಕ್ಕು ನೀಡಲು ಆಗುವುದಿಲ್ಲ ಎಂದು ವಾದಿಸಿದರು.
ಇದನ್ನೂ ಓದಿ:ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹಾಟ್ ಬೆಡಗಿ ನೋರಾ ಫತೇಹಿ
ಬಳಿಕ ಫೈನ್ಯಾನ್ಸ್ ಸಂಸ್ಥೆಯು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ದುಶ್ಯಂತ್ ಅಡಮಾನವಿಟ್ಟಿದ್ದ ಶಿವಾಜಿ ಗಣೇಶನ್ ಅವರಿಗೆ ಸೇರಿದ ಬೃಹತ್ ಮನೆಯ ಒಂದು ಭಾಗವನ್ನು ಸಾರ್ವಜನಿಕ ಹರಾಜಿಗೆ ಇರಿಸಿ, ಅದರಿಂದ ಬಂದ ಹಣವನ್ನು ಸಾಲಕ್ಕೆ ವಜಾ ಮಾಡಿಕೊಳ್ಳುವಂತೆ ಆದೇಶ ನೀಡಿದೆ. ಮದ್ರಾಸ್ ಹೈಕೋರ್ಟ್ ಅನ್ನು ಪ್ರಶ್ನಿಸಿ ದುಶ್ಯಂತ್ ಅವರು ಯಾವುದೇ ಅರ್ಜಿ ಹಾಕಿಲ್ಲ, ಹಾಗಾಗಿ ಶಿವಾಜಿ ಗಣೇಶನ್ ಅವರ ಮನೆಯ ಹರಾಜು ಪಕ್ಕಾ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ