ಚಿತ್ರ: ಧರಣಿ ಮಂಡಲ ಮಧ್ಯದೊಳಗೆ
ನಿರ್ಮಾಣ: ಓಂಕಾರ್
ನಿರ್ದೇಶನ: ಶ್ರೀಧರ್ ಶಿಕಾರಿಪುರ
ಪಾತ್ರವರ್ಗ: ನವೀನ್ ಶಂಕರ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಬಾಲ ರಾಜವಾಡಿ ಮುಂತಾದವರು.
ಸ್ಟಾರ್: 3/5
ಕಥೆ ಮತ್ತು ಅದನ್ನು ಕಟ್ಟಿಕೊಟ್ಟಿರುವ ವಿಚಾರದಲ್ಲಿ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ಒಂದು ಭಿನ್ನ ಪ್ರಯತ್ನವಾಗಿ ಕಾಣುತ್ತದೆ. ಇದನ್ನು ಒಂದು ಹೈಪರ್ ಲಿಂಕ್ ಸಿನಿಮಾ ಎಂದು ಚಿತ್ರತಂಡವೇ ಕರೆದುಕೊಂಡಿದೆ. ಹೈಪರ್ ಲಿಂಕ್ ಎಂದರೆ ಒಂದರೊಳಗೆ ಇನ್ನೊಂದು ಬೆಸದುಕೊಂಡಿರುವುದು ಎಂದರ್ಥ. ಇದು ಕೇವಲ ಕಥೆಗೆ ಸೀಮಿತವಾಗಿಲ್ಲ. ಎಲ್ಲರ ಬದುಕಿಗೂ ಅನ್ವಯ ಆಗುವಂತಹ ವಿಚಾರ ಎಂಬುದನ್ನು ಈ ಸಿನಿಮಾದಲ್ಲಿ ಮೂಲಕ ತೋರಿಸಲಾಗಿದೆ. ಹೊಸ ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರು ಎಲ್ಲವನ್ನೂ ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ.
ನಾಲ್ಕು ಡಿಫರೆಂಟ್ ಕಥೆಗಳು ಈ ಸಿನಿಮಾದ ಆರಂಭದಲ್ಲಿ ತೆರೆದುಕೊಳ್ಳುತ್ತವೆ. ಪ್ರಾರಂಭದಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲದ ಕಥೆಗಳು ನಂತರದಲ್ಲಿ ನಿಧಾನವಾಗಿ ಬೆಸೆದುಕೊಳ್ಳಲು ಆರಂಭಿಸುತ್ತವೆ. ಕೆಲವೇ ಗಂಟೆಗಳಲ್ಲಿ ನಡೆಯುವ ಒಂದಷ್ಟು ಘಟನೆಗಳನ್ನು ಇಟ್ಟುಕೊಂಡು ನಿರ್ದೇಶಕರು ಒಂದು ರೋಚಕ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಅದೇ ಈ ಸಿನಿಮಾದ ಪ್ಲಸ್ ಪಾಯಿಂಟ್.
ನಾವು ಒಬ್ಬರಿಗೆ ಸಹಾಯ ಮಾಡಿದರೆ, ಇನ್ನೊಬ್ಬರು ನಮಗೆ ಸಹಾಯ ಮಾಡುತ್ತಾರೆ ಎಂಬ ಕಾನ್ಸೆಪ್ಟ್ನಲ್ಲಿ ಈ ಚಿತ್ರ ಮೂಡಿಬಂದಿದೆ. ಈ ಹಿಂದೆ ‘ಗುಳ್ಟು’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟ ನವೀನ್ ಶಂಕರ್ ಅವರು ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಹಾಗಂತ ಇಡೀ ಕಥೆಯಲ್ಲಿ ಕೇವಲ ಅವರು ಮಾತ್ರ ಹೈಲೈಟ್ ಆಗಿಲ್ಲ. ಇನ್ನುಳಿದ ಪಾತ್ರಗಳು ಕೂಡ ಶೈನ್ ಆಗಿವೆ.
ಇದನ್ನೂ ಓದಿ: ಧರಣಿ ಮಂಡಲ ಮಧ್ಯದೊಳಗೆ: ನವೀನ್ ಶಂಕರ್-ಐಶಾನಿ ಶೆಟ್ಟಿಯ ‘ಮಾತು ಮಾತಲ್ಲೇ..’ ಗೀತೆಗೆ ವಿಜಯ್ ಪ್ರಕಾಶ್ ಧ್ವನಿ
ನವೀನ್ ಶಂಕರ್ ಅವರಿಗೆ ಜೋಡಿಯಾಗಿ ಐಶಾನಿ ಶೆಟ್ಟಿ ನಟಿಸಿದ್ದಾರೆ. ಮಾದಕ ವಸ್ತುಗಳಿಗೆ ಅಡಿಕ್ಟ್ ಆಗಿರುವ ಹುಡುಗಿಯ ಪಾತ್ರದಲ್ಲಿ ಅವರು ಗಮನಾರ್ಹವಾಗಿ ನಟಿಸಿದ್ದಾರೆ. ಸಿದ್ದು ಮೂಲಿಮನೆ, ಯಶ್ ಶೆಟ್ಟಿ ನಿಭಾಯಿಸಿರುವ ಪಾತ್ರಗಳು ಪ್ರೇಕ್ಷಕರಿಗೆ ಅಚ್ಚರಿ ನೀಡುತ್ತವೆ. ಬೇರೆಲ್ಲ ಚಿತ್ರಗಳಲ್ಲಿ ಖಳನಾಗಿ ಅಬ್ಬರಿಸುತ್ತಿದ್ದ ಯಶ್ ಶೆಟ್ಟಿ ಅವರಿಗೆ ಇಲ್ಲಿ ಬೇರೆಯದೇ ಶೇಡ್ ಇರುವ ಪಾತ್ರವಿದೆ. ಕಾಮಿಡಿ ಟ್ರ್ಯಾಕ್ನಲ್ಲಿ ಪ್ರಕಾಶ್ ತುಮ್ಮಿನಾಡ್ ಅವರು ‘ಮರ್ಯಾದೆ ರಾಮಣ್ಣ’ನಾಗಿ ಭರ್ಜರಿ ನಗು ಉಕ್ಕಿಸುತ್ತಾರೆ.
ಪ್ರೇಕ್ಷಕರಿಂದ ಹೆಚ್ಚು ಗಮನವನ್ನು ಬೇಡುವಂತಹ ಸಿನಿಮಾ ಇದು. ಗಮನವನ್ನು ಬೇರೆಡೆಗೆ ಹರಿಸಿದರೆ ಕೆಲವೊಂದು ದೃಶ್ಯಗಳು ಗೊಂದಲಮಯ ಎನಿಸಬಹುದು. ಕೆಲವೇ ಗಂಟೆಗಳಲ್ಲಿ ನಡೆಯುವ ಘಟನೆಗಳು ಕಾಕತಾಳೀಯವಾಗಿ ಒಂದಕ್ಕೊಂದು ಬೆಸದುಕೊಳ್ಳುವ ರೀತಿಯೇ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುತ್ತದೆ. ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ, ರೋನಾಡ್ ಬಕ್ಕೇಶ್ ಹಾಗೂ ಕಾರ್ತಿಕ್ ಚನ್ನೋಜಿ ರಾವ್ ಅವರು ಸಂಗೀತ ಕೂಡ ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರ ಪರಿಕಲ್ಪನೆಗೆ ಸೂಕ್ತವಾಗಿ ಸಾಥ್ ನೀಡಿವೆ.
ಕೆಲವು ದೃಶ್ಯಗಳನ್ನು ಒಂಚೂರು ಮೊನಚುಗೊಳಿಸಿದ್ದರೆ ಈ ಚಿತ್ರ ಇನ್ನಷ್ಟು ಆಪ್ತವಾಗುತ್ತಿತ್ತು. ಕಥೆ ಗಂಭೀರ ಸ್ವರೂಪ ಪಡೆದುಕೊಂಡ ನಂತರವೂ ಆಗಾಗ ನುಗ್ಗಿ ಬರುವ ಕಾಮಿಡಿ ದೃಶ್ಯಗಳಿಂದಾಗಿ ಕ್ಲೈಮ್ಯಾಕ್ಸ್ನ ತೀವ್ರತೆ ಕಡಿಮೆ ಆದಂತೆ ಅನಿಸುತ್ತದೆ. ಈ ರೀತಿಯ ವಿಚಾರಗಳ ಬಗ್ಗೆ ನಿರ್ದೇಶಕರು ಗಮನ ಹರಿಸಬಹುದಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.