Gatha Vaibhava Review: ನಾಲ್ಕು ಸಿಂಪಲ್ ಕಥೆಗಳಿಗೆ ವೈಭವ ತುಂಬಿದ ಸುನಿ

- Time - 142 Minutes
- Released - November 14, 2025
- Language - Kannada
- Genre - Drama, Fantasy, Period, Romantic
ಹೀರೋ ಹೊಸ ಹುಡುಗನೇ ಆಗಲಿ ಅಥವಾ ಸ್ಟಾರ್ ನಟನೇ ಆಗಲಿ, ಕಥೆಗೆ ಪ್ರಾಮುಖ್ಯತೆ ಕೊಟ್ಟು ಸಿನಿಮಾ ಮಾಡುವುದು ಸಿಂಪಲ್ ಸುನಿ (Simple Suni) ಶೈಲಿ. ‘ಚಮಕ್’, ‘ಆಪರೇಷನ್ ಅಲಮೇಲಮ್ಮ’, ‘ಒಂದು ಸರಳ ಪ್ರೇಮಕಥೆ’ ಮುಂತಾದ ಸಿನಿಮಾಗಳಲ್ಲಿ ಅವರು ಅದನ್ನು ಸಾಬೀತು ಮಾಡಿದ್ದಾರೆ. ಈಗ ಅವರು ನಿರ್ದೇಶನ ಮಾಡಿರುವ ‘ಗತವೈಭವ’ ಸಿನಿಮಾ (Gatha Vaibhava Movie) ಬಿಡುಗಡೆ ಆಗಿದೆ. ದೀಪಕ್ ತಿಮ್ಮಪ್ಪ ಮತ್ತು ಸುನಿ ಅವರು ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಹೊಸ ಹೀರೋ ದುಷ್ಯಂತ್ (Dushyanth) ಅವರು ಅಭಿನಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ನವೆಂಬರ್ 14ರಂದು ತೆರೆಕಂಡ ಈ ಸಿನಿಮಾದ ಪ್ಲಸ್ ಏನು? ಮೈನಸ್ ಏನು ತಿಳಿಯಲು ಈ ವಿಮರ್ಶೆ ಓದಿ..
ಎಂದಿನಂತೆ ಈ ಬಾರಿ ‘ಗತವೈಭವ’ ಸಿನಿಮಾದಲ್ಲಿ ಕೂಡ ನಿರ್ದೇಶಕ ಸಿಂಪಲ್ ಸುನಿ ಅವರು ಕಥೆಗೆ ಮಹತ್ವ ನೀಡಿದ್ದಾರೆ. ಡಿಫರೆಂಟ್ ಏನೆಂದರೆ, ಈ ಸಿನಿಮಾದಲ್ಲಿ ಒಂದಲ್ಲ.. 4 ಕಥೆಗಳು ಇವೆ. ಪ್ರತಿ ಕಥೆ ಕೂಡ ಒಂದಕ್ಕೊಂದು ಬೆಸೆದುಕೊಂಡಿವೆ. ಆದರೆ ನಾಲ್ಕೂ ಕಥೆಗಳು ಬೇರೆ ಬೇರೆ ಫ್ಲೇವರ್ನಲ್ಲಿ ಇವೆ. ಪುರಾಣದಿಂದ ಶುರುವಾಗುವ ಕಥೆ ಈಗಿನ ಮಾಡರ್ನ್ ಕಾಲಕ್ಕೆ ಬಂದು ನಿಲ್ಲುತ್ತದೆ. ಆ ಮೂಲಕ ಪ್ರೇಕ್ಷಕರಿಗೆ 4 ಡಿಫರೆಂಟ್ ಶೆಡ್ಗಳನ್ನು ಸಿಂಪಲ್ ಸುನಿ ಅವರು ಪರಿಚಯಿಸಿದ್ದಾರೆ.
ಪುರಾಣದಲ್ಲಿ ರಾಕ್ಷಸ ಕುಲದ ಯುವಕನಿಗೂ, ದೇವಕುಲದ ರಾಜಕುಮಾರಿಗೂ ಪ್ರೀತಿ ಮೂಡುತ್ತದೆ. ಆದರೆ ಶಾಪಕ್ಕೆ ಗುರಿಯಾಗಿ ಇಬ್ಬರೂ ಸಾಯುತ್ತಾರೆ. ಯಾವುದೇ ಜನ್ಮದಲ್ಲೂ ನೀವಿಬ್ಬರು ಒಂದಾಗಲೇ ಬಾರದು ಎಂಬುದೇ ಆ ಶಾಪ. ನಂತರದ ಜನ್ಮಗಳಲ್ಲೂ ಅವರಿಬ್ಬರು ಭೇಟಿ ಆಗುತ್ತಾರೆ. ಆದರೆ ಒಂದಾಗುತ್ತಾರಾ ಅಥವಾ ಇಲ್ಲವಾ? ಅವರ ಶಾಪ ವಿಮೋಚನೆ ಆಗುತ್ತಾ ಅಥವಾ ಇಲ್ಲವಾ ಎಂಬುದನ್ನು ಸಿನಿಮಾ ನೋಡಿಯೇ ತಿಳಿದರೆ ಚೆನ್ನ.
ಪುನರ್ಜನ್ಮದ ಕಾನ್ಸೆಪ್ಟ್ ಇರುವ ಸಿನಿಮಾಗಳ ಸಾಲಿಗೆ ‘ಗತವೈಭವ’ ಹೊಸ ಸೇರ್ಪಡೆ. ಸಿಂಪಲ್ ಸುನಿ ಅವರು ತಮ್ಮದೇ ಫ್ಲೇವರ್ನಲ್ಲಿ ಈ ಸಿನಿಮಾ ಮಾಡಿದ್ದಾರೆ. ಆರಂಭದಿಂದ ಕೊನೆವರೆಗೂ ತೆಳು ಹಾಸ್ಯದಿಂದಲೇ ಅವರು ಕಥೆಯನ್ನು ನಿರೂಪಿಸಿದ್ದಾರೆ. ಬೇಕಾದ ಕಡೆಯಲ್ಲಿ ಸಾಕಷ್ಟು ಎಮೋಷನ್ ಕೂಡ ಬೆರೆಸಿದ್ದಾರೆ. ಜೊತೆಗೆ ಆ್ಯಕ್ಷನ್, ಸಸ್ಪೆನ್ಸ್ ಕೂಡ ಇದೆ. ಒಟ್ಟಿನಲ್ಲಿ ಮನರಂಜನೆಗೆ ಬೇಕಾದ ಎಲ್ಲ ಅಂಶಗಳನ್ನು ಇಟ್ಟುಕೊಂಡು ಸುನಿ ಅವರು ಈ ಸಿನಿಮಾ ಮಾಡಿದ್ದಾರೆ.
ಹೊಸ ನಟ ದುಷ್ಯಂತ್ ಅವರಿಗೆ ಇದೊಂದು ಚಾಲೆಂಜಿಂಗ್ ಸಿನಿಮಾ. ಯಾಕೆಂದರೆ, ಇಲ್ಲಿ ಅವರಿಗೆ 4 ಶೇಡ್ ಇರುವ ಪಾತ್ರ ಇದೆ. ರಾಕ್ಷಕನಾಗಿ, ಪೋರ್ಚುಗೀಸ್ ಪ್ರಜೆಯಾಗಿ, ಕಂಬಳದ ಪಟುವಾಗಿ ಹಾಗೂ ತುಂಟತನ ತುಂಬಿರುವ ಪಡ್ಡೆ ಹುಡುಗನಾಗಿ ಅವರು ಕಾಣಿಸಿಕೊಂಡಿದ್ದಾರೆ. ಈ ನಾಲ್ಕೂ ಶೇಡ್ಗಳಿಗೆ ಅವರು ಜೀವ ತುಂಬಿದ್ದಾರೆ. ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಅವರು ಈ ಸಿನಿಮಾದಲ್ಲಿ ಹೇರಳ ಅವಕಾಶ ಸಿಕ್ಕಿದೆ. ಅನುಭವಿ ನಟಿ ಆಶಿಕಾ ರಂಗನಾಥ್ ಜೊತೆ ದುಶ್ಯಂತ್ ಅವರ ಕೆಮಿಸ್ಟ್ರೀ ಚೆನ್ನಾಗಿ ಮೂಡಿಬಂದಿದೆ.
ತಾಂತ್ರಿಕವಾಗಿ ‘ಗತವೈಭವ’ ಸಿನಿಮಾ ಶ್ರೀಮಂತವಾಗಿದೆ. ಜೂಡಾ ಸ್ಯಾಂಡಿ ಅವರ ಸಂಗೀತ, ವಿಲಿಯಂ ಡೇವಿಡ್ ಅವರ ಛಾಯಾಗ್ರಹಣದಿಂದ ಸಿನಿಮಾಗೆ ವೈಭವ ಬಂದಿದೆ. ಸಿನಿಮಾದಲ್ಲಿ ನಾಲ್ಕು ಕಥೆಗಳ ಪೈಕಿ ಕಂಬಳದ ಕತೆ ಹೆಚ್ಚು ಸ್ಕ್ರೀನ್ ಸ್ಪೇಸ್ ಪಡೆದುಕೊಂಡಿದೆ. ಅಲ್ಲದೇ, ಸಿನಿಮಾದಲ್ಲಿ ಈ ಕಥೆಯೇ ಪ್ರಮುಖವಾಗಿದೆ. ನಟ ದುಷ್ಯಂತ್ ಅವರು ಕಂಬಳದ ದೃಶ್ಯಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಅನುಭವಿ ನಟನಂತೆ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಇದನ್ನೂ ಓದಿ: Love OTP Movie Review: ಪ್ರೇಮಿಗಳಿಗೂ, ಪೋಷಕರಿಗೂ ಇಷ್ಟವಾಗುವ ಸಿನಿಮಾ ಲವ್ ಒಟಿಪಿ
ಪುನರ್ಜನ್ಮ ಎಂಬುದು ನಿಜವೋ ಅಲ್ಲವೋ ಎಂಬ ಪ್ರಶ್ನೆ ಕೂಡ ಈ ಸಿನಿಮಾದಲ್ಲಿ ಇದೆ. ಪ್ರೇಕ್ಷಕರ ತಲೆಗೆ ಕೆಲಸ ಕೊಡುವ ರೀತಿಯಲ್ಲಿ ಕ್ಲೈಮ್ಯಾಕ್ಸ್ ಬರುತ್ತದೆ. ಇದೆಲ್ಲವೂ ಸಿನಿಮಾಗೆ ಪ್ಲಸ್ ಆಗಿದೆ. ಮೂರು ಕಥೆಗಳಲ್ಲಿ ಪೋರ್ಚುಗೀಸ್ ಕಥೆಗೆ ತೂಕ ಕಡಿಮೆ ಇದೆ. ಆ ಎಪಿಸೋಡ್ನಲ್ಲಿ ಪ್ರೇಕ್ಷಕರನ್ನು ನಗಿಸುವ ಪ್ರಯತ್ನಕ್ಕೆ ಹೆಚ್ಚು ಫಲ ಸಿಕ್ಕಿಲ್ಲ. ಅದರಿಂದ ಸಿನಿಮಾಗೆ ಕೊಂಚ ಮೈನಸ್ ಆಗಿದೆ. ಅಷ್ಟನ್ನು ಬದಿಗಿಟ್ಟರೆ ಸಿನಿಮಾ ರುಚಿಸುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




