ಸಿನಿಮಾ: ಗೇಮ್ ಚೇಂಜರ್. ನಿರ್ಮಾಣ: ದಿಲ್ ರಾಜು. ನಿರ್ದೇಶನ: ಶಂಕರ್. ಪಾತ್ರವರ್ಗ: ರಾಮ್ ಚರಣ್, ಕಿಯಾರಾ ಅಡ್ವಾಣಿ, ಎಸ್ಜೆ ಸೂರ್ಯ, ಜಯರಾಮ್, ಸುನಿಲ್, ಅಂಜಲಿ ಮುಂತಾದವರು. ಸ್ಟಾರ್: 3/5
ಒಮ್ಮೆ ರಾಜಮೌಳಿ ಜೊತೆ ಸಿನಿಮಾ ಮಾಡಿ ಸೂಪರ್ ಸಕ್ಸಸ್ ಕಾಣುವ ಹೀರೋಗಳು ನಂತರದ ಸಿನಿಮಾದಲ್ಲಿ ಬೇರೆ ನಿರ್ದೇಶಕರ ಜೊತೆ ಕೈ ಜೋಡಿಸಿದರೆ ಸೋಲು ಖಚಿತ ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ ಅದನ್ನು ಸುಳ್ಳು ಮಾಡಬೇಕು ಎಂಬ ಪ್ರಯತ್ನ ಎಲ್ಲ ಹೀರೋಗಳಿಂದಲೂ ಆಗುತ್ತದೆ. ರಾಮ್ ಚರಣ್ ನಟಿಸಿದ್ದ ‘ಆರ್ಆರ್ಆರ್’ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಚಿತ್ರದ ನಂತರ ರಾಮ್ ಚರಣ್ ಅವರ ಖಾತೆಯಿಂದ ಬಂದಿರುವ ಸಿನಿಮಾ ‘ಗೇಮ್ ಚೇಂಜರ್’. ಆದ್ದರಿಂದ ಈ ಸಿನಿಮಾ ಮಾಡುವಾಗ ಅವರ ಮೇಲೆ ಹೆಚ್ಚುವರಿ ನಿರೀಕ್ಷೆ ಮೂಡಿತ್ತು. ಈಗ ‘ಗೇಮ್ ಚೇಂಜರ್’ ಬಿಡುಗಡೆಯಾಗಿ ಪ್ರೇಕ್ಷಕರ ಎದುರು ಬಂದಿದೆ.
ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡ ನಿರ್ದೇಶಕ ಶಂಕರ್ ಅವರು ‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಜೊತೆ ಕೈ ಜೋಡಿಸಿದ್ದಾರೆ. ಅವರಿಬ್ಬರ ಕಾಂಬಿನೇಷನ್ಗೆ ನಿರ್ಮಾಪಕ ದಿಲ್ ರಾಜು ಅವರು ನೂರಾರು ಕೋಟಿ ರೂಪಾಯಿ ಬಂಡವಾಳ ಸುರಿದಿದ್ದಾರೆ. ಮೇಕಿಂಗ್ ಗುಣಮಟ್ಟದಲ್ಲಿ ಕಿಂಚಿತ್ತೂ ರಾಜಿ ಮಾಡಿಕೊಳ್ಳಲದೇ ಈ ಸಿನಿಮಾವನ್ನು ಮಾಡಲಾಗಿದೆ. ರಾಮ್ ಚರಣ್ ಅವರಿಗೆ ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರು ಇದ್ದಾರೆ. ಎರಡೂ ವರ್ಗಕ್ಕೆ ಇಷ್ಟ ಆಗುವಂತಹ ಸಿನಿಮಾವನ್ನು ಶಂಕರ್ ಅವರು ಕಟ್ಟಿಕೊಟ್ಟಿದ್ದಾರೆ.
ರಾಮ್ ಚರಣ್ ಅವರಿಗೆ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ದ್ವಿಪಾತ್ರವಿದೆ. ತಂದೆಯಾಗಿ ಹಾಗೂ ಮಗನಾಗಿ ಅವರು ಕಾಣಿಸಿಕೊಂಡಿದ್ದಾರೆ. ಎರಡೂ ಪಾತ್ರಕ್ಕೂ ಅದರದ್ದೇ ಆದ ಶೇಡ್ಗಳು ಇವೆ. ಒಂದು ಶೇಡ್ನಲ್ಲಿ ಬಿಕ್ಕಳಿಸುತ್ತ ಮಾತನಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡ ರಾಮ್ ಚರಣ್ ಅವರು ಇನ್ನೊಂದು ಪಾತ್ರದಲ್ಲಿ ಆ್ಯಕ್ಷನ್ ಹೀರೋ ಆಗಿ ಮಿಂಚುತ್ತಾರೆ. ಪೊಲೀಸ್ ಆಗಿಯೂ, ಜಿಲ್ಲಾಧಿಕಾರಿ ಆಗಿಯೂ ಗಮನ ಸೆಳೆಯುತ್ತಾರೆ.
ಅಷ್ಟೇ ಅಲ್ಲದೇ, ಲವರ್ ಬಾಯ್ ಗೆಟಪ್ನಲ್ಲಿ ಕೂಡ ಅಭಿಮಾನಿಗಳಿಗೆ ರಾಮ್ ಚರಣ್ ಇಷ್ಟ ಆಗುತ್ತಾರೆ. ಅವರಿಗೆ ನಟಿ ಕಿಯಾರಾ ಅಡ್ವಾಣಿ ಜೋಡಿಯಾಗಿದ್ದಾರೆ. ಕಿಯಾರಾ ಅಡ್ವಾಣಿ ಪಾತ್ರಕ್ಕೆ ಹೆಚ್ಚು ಸ್ಕ್ರೀನ್ ಸ್ಪೇಸ್ ಇಲ್ಲದಿದ್ದರೂ ಕಥೆಗೆ ಬಹಳ ಮಹತ್ವ ಎನಿಸುವಂತಹ ಪಾತ್ರ ಅವರದ್ದಾಗಿದೆ. ಶಂಕರ್ ಅವರು ಎಂದಿನಂತೆ ಹಾಡುಗಳ ಮೂಲಕ ಅದ್ದೂರಿತನವನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ.
ಆ್ಯಕ್ಷನ್ ದೃಶ್ಯಗಳಿಗೆ ಈ ಸಿನಿಮಾದಲ್ಲಿ ಯಾವುದೇ ಕೊರತೆ ಇಲ್ಲ. ಒಬ್ಬ ಜಿಲ್ಲಾಧಿಕಾರಿಗೆ ಇರುವ ಅಧಿಕಾರಗಳು ಏನು? ಆತ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು? ರಾಜಕೀಯದಲ್ಲಿ ಸರಿಯಾಗಬೇಕಿರುವ ವಿಷಯಗಳು ಏನು? ಮತದಾನ ಹೇಗೆ ನಡೆಯಬೇಕು ಎಂಬಿತ್ಯಾದಿ ಗಂಭೀರ ವಿಚಾರಗಳೇ ‘ಗೇಮ್ ಚೇಂಜರ್’ ಸಿನಿಮಾದ ಪ್ರಮುಖ ಟಾಪಿಕ್. ಅದನ್ನು ಸಾಧ್ಯವಾದಷ್ಟು ಮಾಸ್ ಶೈಲಿಯಲ್ಲಿ ಜನರಿಗೆ ತಲುಪಿಸಿ ಪಾಠ ಮಾಡಲು ನಿರ್ದೇಶಕ ಶಂಕರ್ ಪ್ರಯತ್ನಿಸಿದ್ದಾರೆ. ದುಡ್ಡಿಗಾಗಿ ಮತ ಮಾರಿಕೊಳ್ಳಬಾರದು ಎಂಬ ಸಂದೇಶವೂ ಈ ಚಿತ್ರದಲ್ಲಿದೆ.
ಇದನ್ನೂ ಓದಿ: ಗೇಮ್ ಚೇಂಜರ್ ಬಿಡುಗಡೆ: ಹೇಗಿದೆ ರಾಮ್ ಚರಣ್ ಸಿನಿಮಾದ ಫಸ್ಟ್ ಹಾಫ್?
ತಿರು ಅವರ ಛಾಯಾಗ್ರಹಣ, ಎಸ್. ಥಮನ್ ಅವರ ಸಂಗೀತದಿಂದ ‘ಗೇಮ್ ಚೇಂಜರ್’ ಸಿನಿಮಾದ ತೂಕ ಹೆಚ್ಚಿದೆ. ಈ ಚಿತ್ರದ ಮೊದಲಾರ್ಧ ಸಾಗಿದ್ದೇ ತಿಳಿಯುವುದಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಕಥೆ ಇದ್ದಲ್ಲೇ ಗಿರಕಿ ಹೊಡೆಯುತ್ತದೆ. ನಾಯಕ ಮತ್ತು ಖಳನಾಯಕನ ನಡುವಿನ ಜಟಾಪಟಿಯಲ್ಲೇ ಸೆಕೆಂಡ್ ಹಾಫ್ ಹೆಚ್ಚು ಮುಳುಗಿದೆ. ಕಥೆಯಲ್ಲಿ ಒಂದರಮೇಲೊಂದು ಟ್ವಿಸ್ಟ್ಗಳು ಎದುರಾಗುತ್ತವೆಯಾದರೂ ಎಷ್ಟೋ ದೃಶ್ಯಗಳಲ್ಲಿ ಲಾಜಿಕ್ ಇಲ್ಲವೇ ಇಲ್ಲ. ಇಡೀ ಸಮಾಜವನ್ನು ಸರಿಪಡಿಸಲು ಹೊರಟ ನಾಯಕ ತನಗೆ ಎದುರಾದ ಎಲ್ಲ ಅಡೆತಡೆಗಳನ್ನು ಮ್ಯಾಜಿಕ್ ಮಾಡಿದ ರೀತಿಯಲ್ಲಿ ಸರಿಪಡಿಸಿಬಿಡುತ್ತಾನೆ. ಇಂಥ ದೃಶ್ಯಗಳಿಂದ ‘ಗೇಮ್ ಚೇಂಜರ್’ ಸಾಧಾರಣ ಎನಿಸಿಕೊಳ್ಳುತ್ತದೆ. ಉಳಿದಂತೆ ಒಂದು ಕಮರ್ಷಿಯಲ್ ಚಿತ್ರವಾಗಿ ಎಂಜಾಯ್ ಮಾಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.