Hebbuli Cut Review: ನಕ್ಕು ನಗಿಸುತ್ತಲೇ ಕರಾಳ ಸತ್ಯ ತೆರೆದಿಡುವ ಹೆಬ್ಬುಲಿ ಕಟ್

Hebbuli Cut Review: ನಕ್ಕು ನಗಿಸುತ್ತಲೇ ಕರಾಳ ಸತ್ಯ ತೆರೆದಿಡುವ ಹೆಬ್ಬುಲಿ ಕಟ್
Hebbuli Cut Poster
Hebbuli Cut
UA
  • Time - 110 Minutes
  • Released - 04 July 2025
  • Language - Kannada
  • Genre - Drama
Cast - ಮೌನೇಶ್ ನಟರಂಗ, ಅನನ್ಯಾ ನಿಹಾರಿಕಾ, ಮಹದೇವ್ ಹಡಪದ, ಪುನೀತ್ ಶೆಟ್ಟಿ, ಉಮಾ ವೈ.ಜಿ., ಮಹಂತೇಶ್ ಹಿರೇಮಠ ಮುಂತಾದವರು.
Director - ಭೀಮರಾವ್ ಪಿ.
4
Critic's Rating
Updated By: Digi Tech Desk

Updated on: Jul 18, 2025 | 5:38 PM

ಹೊಸ ಪ್ರತಿಭೆಗಳು ಸಿನಿಮಾ ಮಾಡಿದರೆ ಖಂಡಿತವಾಗಿಯೂ ಹೊಸತನ ಕಾಣಿಸುತ್ತದೆ. ಹೊಸ ತಂಡದವರು ಅಪರೂಪದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಪ್ರೇಕ್ಷಕರಿಗೆ ಇದೆ. ಆ ನಂಬಿಕೆಯನ್ನು ‘ಹೆಬ್ಬುಲಿ ಕಟ್’ ಸಿನಿಮಾ ತಂಡ ಉಳಿಸಿಕೊಂಡಿದೆ. ನಿಜ ಜೀವನದಲ್ಲಿ ನಡೆಯುವಂತಹ ಘಟನೆಗಳನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ನಿರ್ದೇಶಕ ಭೀಮರಾವ್ ಅವರು ಈ ಸಿನಿಮಾ ಮಾಡಿದ್ದಾರೆ. ಅವರ ಪ್ರಯತ್ನಕ್ಕೆ ಎಲ್ಲ ಕಲಾವಿದರು ಮತ್ತು ತಂತ್ರಜ್ಞರು ಸಾಥ್ ನೀಡಿದ್ದಾರೆ.

‘ಹೆಬ್ಬುಲಿ ಕಟ್’ ಸಿನಿಮಾದಲ್ಲಿ ಒಂದು ಗಂಭೀರವಾದ ವಿಷಯ ಇದೆ. ಕೆಲವು ಜಾತಿಯ ಜನರನ್ನು ಕ್ಷೌರದ ಅಂಗಡಿಯೊಳಗೆ ಬಿಟ್ಟುಕೊಳ್ಳುವುದಿಲ್ಲ. ಗ್ರಾಮೀಣ ಭಾಗದಲ್ಲಿ ಆ ರೀತಿಯ ಅಸ್ಪೃಶ್ಯತೆಯ ಆಚರಣೆ ಇಂದಿಗೂ ಜೀವಂತವಾಗಿದೆ. ಅದನ್ನೇ ಕೇಂದ್ರವಾಗಿಸಿಕೊಂಡು ಈ ಸಿನಿಮಾ ಮಾಡಲಾಗಿದೆ. ಇದು ಬಹಳ ಗಂಭೀರ ವಿಷಯ ಆಗಿದ್ದರೂ ಕೂಡ ನಿರ್ದೇಶಕ ಭೀಮರಾವ್ ಅವರು ತುಂಬ ಲವಲವಿಕೆಯಿಂದ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಉತ್ತರ ಕರ್ನಾಟಕದ ಗ್ರಾಮೀಣ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಹೈಸ್ಕೂಲ್ ಓದುತ್ತಿರುವ ಕೆಳ ಜಾತಿಯ ಬಾಲಕನೊಬ್ಬನಿಗೆ ತನ್ನ ಹೇರ್ ಸ್ಟೈಲ್ ಬಗ್ಗೆ ಅಪಾರ ಪ್ರೀತಿ ಇರುತ್ತದೆ. ಆತ ಕಿಚ್ಚ ಸುದೀಪ್ ಅಭಿಮಾನಿ. ‘ಹೆಬ್ಬುಲಿ’ ಸಿನಿಮಾದಲ್ಲಿ ಸುದೀಪ್ ಹೇರ್ ಸ್ಟೈಲ್ ಹೇಗಿದೆಯೋ ತಾನು ಕೂಡ ಅದೇ ರೀತಿ ಕಟಿಂಗ್ ಮಾಡಿಸಿಕೊಳ್ಳಬೇಕು ಎಂಬ ಆಸೆ ಅವನ ಮನಸ್ಸಲ್ಲಿ ಚಿಗುರುತ್ತದೆ. ಅದಕ್ಕಾಗಿ ಅವನು ಏನೆಲ್ಲ ಸರ್ಕಸ್ ಮಾಡುತ್ತಾನೆ ಎಂಬುದನ್ನು ತೋರಿಸುತ್ತಲೇ ಹಲವು ಪ್ರಮುಖ ವಿಚಾರಗಳನ್ನು ಈ ಸಿನಿಮಾ ತೆರೆದಿಡುತ್ತದೆ.

ಬಾಲಕನ ಹೇರ್ ಸ್ಟೈಲ್ ಪ್ರಹಸನದಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಲು ಬೇಕಾದ ಎಲ್ಲ ಅಂಶಗಳು ಇವೆ. ಎಲ್ಲಿಯೂ ಬೋರ್ ಆಗದ ರೀತಿಯಲ್ಲಿ ನೋಡುಗರನ್ನು ಸೆಳೆದುಕೊಳ್ಳುವ ಗುಣ ಈ ಕಥೆಗೆ ಇದೆ. ಅದಕ್ಕೆ ಕಾರಣವೇ ಹಾಸ್ಯ. ಜೊತೆಗೆ ಒಂದು ಪ್ರೇಮಕಥೆ. ಮೇಲ್ಜಾತಿಯ ಹುಡುಗಿಯನ್ನು ಒನ್ ಸೈಡ್ ಆಗಿ ಪ್ರೀತಿಸುವ ಆ ಬಾಲಕನ ತೊಳಲಾಟಗಳು ಕೂಡ ನಗು ಉಕ್ಕಿಸುತ್ತವೆ. ಕಥೆ ಮುಂದೆ ಸಾಗುತ್ತಿದ್ದಂತೆಯೇ ಸಿನಿಮಾದ ತಿರುಳು ತೆರೆದುಕೊಳ್ಳುತ್ತದೆ.

ಆರಂಭದಿಂದಲೂ ನಗಿಸುತ್ತ ಸಾಗುವ ಈ ಸಿನಿಮಾ, ಕ್ಲೈಮ್ಯಾಕ್ಸ್ ಹಂತದಲ್ಲಿ ನೋಡುಗರನ್ನು ಎಮೋಷನಲ್ ಆಗಿಸುತ್ತದೆ. ಅಸ್ಪೃಶ್ಯತೆ ಆಚರಣೆಯ ಕರಾಳ ಮುಖವನ್ನು ಪ್ರೇಕ್ಷಕರ ಎದುರು ತೆರೆದಿಡುತ್ತದೆ. ಇಂತಹ ಕರಾಳ ಸತ್ಯವನ್ನು ನಿರ್ದೇಶಕ ಭೀಮರಾವ್ ಅವರು ಮನರಂಜನೆಯ ಹದವಾದ ಮಿಶ್ರಣದ ಮೂಲಕ ತೋರಿಸಿದ್ದಾರೆ. ಅದೇ ಈ ಸಿನಿಮಾದ ಪ್ಲಸ್ ಪಾಯಿಂಟ್ ಆಗಿದೆ. ಸಂಗೀತ ನಿರ್ದೇಶಕ ನವನೀತ್ ಶಾಮ್, ಛಾಯಾಗ್ರಾಹಕ ದೀಪಕ್ ಅವರ ಕೆಲಸದಿಂದಾಗಿ ಸಿನಿಮಾದ ತೂಕ ಹೆಚ್ಚಿದೆ.

ಇದನ್ನೂ ಓದಿ: ಕನ್ನಡತಿ ಚೈತ್ರಾ ಆಚಾರ್ ಮೊದಲ ತಮಿಳು ಸಿನಿಮಾಕ್ಕೆ ಭರಪೂರ ಪ್ರಶಂಸೆ

‘ಹೆಬ್ಬುಲಿ ಕಟ್’ ಸಿನಿಮಾದ ಕಲಾವಿದರ ನಟನೆಯ ಪೂರ್ಣಾಂಕ ಸಲ್ಲಬೇಕು. ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೌನೇಶ್ ನಟರಂಗ ಅವರು ಆ ಪಾತ್ರವನ್ನೇ ಜೀವಿಸಿದಂತಿದೆ. ಅತ್ಯಂತ ಸಹಜ ಅಭಿನಯದ ಮೂಲಕ ಅವರು ಗಮನ ಸೆಳೆದಿದ್ದಾರೆ. ಮಹದೇವ್ ಹಡಪದ, ಉಮಾ, ಅನನ್ಯಾ, ಮಹಂತೇಶ್ ಮುಂತಾದ ಕಲಾವಿದರು ಕೂಡ ಅಷ್ಟೇ ಚೆನ್ನಾಗಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:05 pm, Fri, 4 July 25