Jamaligudda Review: ಜಮಾಲಿಗುಡ್ಡ ಸಹಜ-ಸುಂದರ; ಪ್ರೇಕ್ಷಕ ನಿರೀಕ್ಷಿಸೋದು ಅದಕ್ಕಿಂತಲೂ ಎತ್ತರ

|

Updated on: Dec 30, 2022 | 10:56 AM

Once Upon A Time In Jamaligudda: ‘ಒನ್ಸ್​​​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ’ ಚಿತ್ರ ಇಂದು (ಡಿ.30) ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ್​ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿದ್ದಾರೆ.

Jamaligudda Review: ಜಮಾಲಿಗುಡ್ಡ ಸಹಜ-ಸುಂದರ; ಪ್ರೇಕ್ಷಕ ನಿರೀಕ್ಷಿಸೋದು ಅದಕ್ಕಿಂತಲೂ ಎತ್ತರ
ಅದಿತಿ ಪ್ರಭುದೇವ, ಡಾಲಿ ಧನಂಜಯ್​
Follow us on

ಚಿತ್ರ: ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ

ನಿರ್ಮಾಣ: ಶ್ರೀ ಹರಿ

ನಿರ್ದೇಶನ: ಕುಶಾಲ್​ ಗೌಡ

ಇದನ್ನೂ ಓದಿ
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ಡಾಲಿ ಧನಂಜಯ್​, ಅದಿತಿ ಪ್ರಭುದೇವ, ಯಶ್​ ಶೆಟ್ಟಿ, ಪ್ರಾಣ್ಯ ಪಿ. ರಾವ್​ ಮುಂತಾದವರು.

ಸ್ಟಾರ್​: 2.5/5

ನಟ ಧನಂಜಯ್​ ಒಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂದರೆ ಅದರಲ್ಲಿ ಏನೋ ಒಂದು ವಿಶೇಷತೆ ಇದ್ದೇ ಇರುತ್ತದೆ ಎಂಬ ನಂಬಿಕೆ ಅವರ ಅಭಿಮಾನಿಗಳದ್ದು. ಅದು ಮಾಸ್​ ಆಗಿರಬಹುದು ಅಥವಾ ಕ್ಲಾಸ್​ ಆಗಿರಬಹುದು. ಯಾವುದೋ ಒಂದು ರೀತಿಯಲ್ಲಿ ಧನಂಜಯ್​ ಅಚ್ಚರಿ ನೀಡುತ್ತಾರೆ ಎಂಬ ನಂಬಿಕೆಯಲ್ಲಿ ಫ್ಯಾನ್ಸ್​ ಸಿನಿಮಾ ನೋಡುತ್ತಾರೆ. ‘ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ’ ಚಿತ್ರದಲ್ಲಿ ಧನಂಜಯ್​ ಅವರು ಕ್ಲಾಸ್​ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಒಳ್ಳೆಯತನವನ್ನು ಮೈತುಂಬ ಆವಾಹಿಸಿಕೊಂಡಿರುವ ಮುಗ್ಧ ಯುವಕನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಹೀಗೆ ಅವರನ್ನು ಡಿಫರೆಂಟ್​ ಆಗಿ ನೋಡಲು ಬಯಸುವ ಅಭಿಮಾನಿಗಳಿಗೆ ‘ಜಮಾಲಿಗುಡ್ಡ’ ರುಚಿಸುತ್ತದೆ. ಒಟ್ಟಾರೆ ಈ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

‘ಜಮಾಲಿಗುಡ್ಡ’ ಚಿತ್ರದ ಒನ್​ಲೈನ್​ ಕಥೆ:

ಈ ಚಿತ್ರದ ಕಥಾನಾಯಕ ಕೃಷ್ಣ ಅಲಿಯಾಸ್​ ಹಿರೋಶಿಮಾ ಸಿಕ್ಕಾಪಟ್ಟೆ ಮುಗ್ಧ ಯುವಕ. ಆದರೆ, ಅವರ ಹಿಂದೆ ಪೊಲೀಸರು ಬೆನ್ನು ಬಿದ್ದಿದ್ದಾರೆ. ಚುಕ್ಕಿ ಎಂಬ ಪುಟ್ಟ ಹುಡುಗಿ ಆತನನ್ನು ಪ್ರೀತಿಯಿಂದ ಮಾಮ ಅಂತ ಕರೆಯುತ್ತಾಳೆ. ಇಬ್ಬರೂ ಒಂದು ಕಾರಿನಲ್ಲಿ ಪ್ರವಾಸಕ್ಕೆ ಹೊರಟಿದ್ದಾರೆ. ಆದರೆ ಆ ಹುಡುಗಿಯನ್ನೇ ಕಿಡ್ನಾಪ್​ ಮಾಡಿದ ಆರೋಪ ಕೃಷ್ಣನ ಮೇಲಿದೆ! ಅದರ ಹಿಂದೆ ಒಂದು ಫ್ಲ್ಯಾಶ್​ ಬ್ಯಾಕ್​ ಇದೆ. ಅದೇನು ಅಂತ ತಿಳಿಯಲು ಸಿನಿಮಾ ನೋಡಬೇಕು.

ಇದು ಆ ಕಾಲದ ‘ಜಮಾಲಿಗುಡ್ಡ’:

‘ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ’ ಎಂದು ಶೀರ್ಷಿಕೆಯೇ ಹೇಳುವಂತೆ ಇದು ಹಳೇ ಕಾಲದ ಕಥೆ. 90ರ ದಶಕದ ರೆಟ್ರೋ ಅನುಭವವನ್ನು ಪ್ರೇಕ್ಷಕರಿಗೆ ನೀಡಲಾಗಿದೆ. ಅದಕ್ಕಾಗಿ ಇಡೀ ತಂಡ ಸಾಕಷ್ಟು ಶ್ರಮಪಟ್ಟಿದೆ. ಮೊಬೈಲ್​ ಫೋನ್​ಗಳು ಇಲ್ಲದ ದಿನಗಳನ್ನು ನೋಡುಗರ ಮುಂದೆ ತೆರೆದಿಡಲಾಗಿದೆ. ಅದೇ ರೀತಿ, ಈ ಕಾಲಕ್ಕೆ ಒಗ್ಗಿಕೊಳ್ಳಲು ಕೊಂಚ ಕಷ್ಟಪಟ್ಟಿದೆ. ಆದರೆ ಹೊಸತಾಗಿ ಏನನ್ನಾದರೂ ಬಯಸುವ ಪ್ರೇಕ್ಷಕರಿಗೆ ಈ ಚಿತ್ರದಲ್ಲಿ ಕೊರತೆ ಕಾಣಿಸುತ್ತದೆ.

ಧನಂಜಯ್​-ಯಶ್​ ಶೆಟ್ಟಿ ಕಾಂಬಿನೇಷನ್​:

ನಟ ಯಶ್​ ಶೆಟ್ಟಿ ಅವರು ಎಂದಿನಂತೆ ಈ ಸಿನಿಮಾದಲ್ಲಿ ನೆಗೆಟಿವ್​ ಶೇಡ್​ ಇರುವ ಪಾತ್ರ ಮಾಡಿದ್ದಾರೆ. ಕ್ರೂರವಾದ ಆ ಪಾತ್ರಕ್ಕೆ ಅವರ ಗೆಟಪ್​ ಕೂಡ ಸಾಥ್​ ನೀಡಿದೆ. ನಾಗಸಾಕಿ ಎಂಬ ಖೈದಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಹಿರೋಶಿಮಾ ಮತ್ತು ನಾಗಸಾಕಿ ನಡುವಿನ ಗೆಳೆತನ ಹಾಗೂ ಜಗಳ ಗಮನ ಸೆಳೆಯುತ್ತದೆ. ಸಾಹಸ ದೃಶ್ಯಗಳಲ್ಲಿ ಇಬ್ಬರೂ ಚೆನ್ನಾಗಿ ಸ್ಕೋರ್​ ಮಾಡಿದ್ದಾರೆ.

ಕರುಣೆ ಉಕ್ಕಿಸುವ ಪಾತ್ರಗಳ ಕಹಾನಿ:

ನಟಿ ಅದಿತಿ ಪ್ರಭುದೇವ ಅವರು ಈ ಸಿನಿಮಾದಲ್ಲಿ ರುಕ್ಕು ಎಂಬ ಹಳ್ಳಿ ಹುಡುಗಿಯ ಪಾತ್ರ ನಿಭಾಯಿಸಿದ್ದಾರೆ. ಕಡು ಬಡತನದಲ್ಲಿ ನೊಂದು-ಬೆಂದ ಆ ಹುಡುಗಿಯ ಕಥೆ ಕೇಳಿದರೆ ಅಯ್ಯೋ ಪಾಪ ಎನಿಸುವಂಥದ್ದು. ಅಂಥ ಹುಡುಗಿಯನ್ನು ಪ್ರೀತಿಸುವ ಕಥಾನಾಯಕ ಕೃಷ್ಣ ಕೂಡ ಸಿಕ್ಕಾಪಟ್ಟೆ ಮು​​ಗ್ಧ ಹುಡುಗ. ಇನ್ನು, ತಂದೆ-ತಾಯಿಯ ಜಗಳದ ಮಧ್ಯದಲ್ಲಿ ನಲುಗಿದ ಬಾಲಕಿಯ ಪಾತ್ರದಲ್ಲಿ ಪ್ರಾಣ್ಯ ಪಿ. ರಾವ್​ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಎಲ್ಲ ಪಾತ್ರಗಳು ಕರುಣೆ ಉಕ್ಕಿಸುವಲ್ಲಿ ಸಫಲವಾಗಿವೆ. ಆದರೆ ಮನರಂಜನೆ ನೀಡುವಲ್ಲಿ ಹಿಂದೇಟು ಹಾಕಿವೆ.

ಕಲಾವಿದರ ಅಭಿನಯಕ್ಕೆ ಚಪ್ಪಾಳೆ:

ನಟನೆ ವಿಚಾರದಲ್ಲಿ ಈ ಸಿನಿಮಾದ ಎಲ್ಲ ಕಲಾವಿದರು ಮೆಚ್ಚುಗೆಗೆ ಅರ್ಹರು. ಡಾಲಿ ಧನಂಜಯ್​ ಅವರು ಎಂದಿನಂತೆ ತಮ್ಮ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಅದಿತಿ ಪ್ರಭುದೇವ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೊದಲೇ ಹೇಳಿದಂತೆ ಯಶ್​ ಶೆಟ್ಟಿ ಅವರಿಗೂ ಚಪ್ಪಾಳೆ ಸಲ್ಲಲೇಬೇಕು. ಬಾಲ ನಟಿ ಪ್ರಾಣ್ಯ ಪಿ. ರಾವ್​ ಸಹ ಇಷ್ಟವಾಗುತ್ತಾರೆ. ಕೆಲವೇ ಪಾತ್ರಗಳಲ್ಲಿ ಬಂದರೂ ನಟಿ ಭಾವನಾ ಅಬ್ಬರಿಸುತ್ತಾರೆ.

90ರ ದಶಕದ ಫೀಲ್​ ನೀಡುವಂತೆ ತಾಂತ್ರಿಕವಾಗಿ ಸಿನಿಮಾ ಅಚ್ಚುಕಟ್ಟಾಗಿ ಮೂಡಿಬಂದಿದೆ. ಹಿನ್ನೆಲೆ ಸಂಗೀತ ಹಾಗೂ ಹಾಡುಗಳಲ್ಲಿ ಅನುಕ್ರಮವಾಗಿ ಅನೂಪ್​ ಸೀಳಿನ್​ ಮತ್ತು ಅರ್ಜುನ್​ ಜನ್ಯ ಕೈ ಜೋಡಿಸಿದ್ದಾರೆ. ಹಾಗಾಗಿ ಪ್ರೇಕ್ಷಕರ ನಿರೀಕ್ಷೆಯ ಮಟ್ಟ ಹೆಚ್ಚುವುದು ಸಹಜ. ಆದರೆ ಸಂಗೀತದ ದೃಷ್ಟಿಯಿಂದ ‘ಜಮಾಲಿಗುಡ್ಡ’ ಆ ಎತ್ತರವನ್ನು ತಲುಪಲು ಇನ್ನಷ್ಟು ಪ್ರಯತ್ನ ಬೇಕಿತ್ತು ಎನಿಸುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:56 am, Fri, 30 December 22