AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೆಸಿ’ ಸಿನಿಮಾ ವಿಮರ್ಶೆ: ಮಾಸ್ ಮಸಾಲ; ಭೂಗತ ಲೋಕ ತುಂಬ ಕರಾಳ

‘ಜೆಸಿ’ ಸಿನಿಮಾ ವಿಮರ್ಶೆ: ಮಾಸ್ ಮಸಾಲ; ಭೂಗತ ಲೋಕ ತುಂಬ ಕರಾಳ
ಜೆಸಿ ವಿಮರ್ಶೆ
ಜೆಸಿ: ದಿ ಯೂನಿವರ್ಸಿಟಿ
A
  • Time - 161 Minutes
  • Released - ಫೆಬ್ರವರಿ 06, 2026
  • Language - ಕನ್ನಡ
  • Genre - ಆ್ಯಕ್ಷನ್, ಕ್ರೈಮ್, ಡ್ರಾಮಾ
Cast - ಸೂರ್ಯ ಪ್ರಖ್ಯಾತ್, ರಂಗಾಯಣ ರಘು, ಥ್ರಿಲ್ಲರ್ ಮಂಜು
Director - ಚೇತನ್ ಜಯರಾಮ್
3
Critic's Rating
ರಾಜೇಶ್ ದುಗ್ಗುಮನೆ
|

Updated on:Feb 06, 2026 | 2:12 PM

Share

ಕೊಲೆ, ರಕ್ತಪಾತಗಳ ಸಿನಿಮಾಗಳು ಸಾಕಷ್ಟು ಬಂದು ಹೋಗಿವೆ. ಇದಕ್ಕೆ ದೊಡ್ಡದಾದ ಅಭಿಮಾನಿ ಬಳಗವೇ ಇದೆ. ಸೂರ್ಯ ಪ್ರಖ್ಯಾತ್ ನಟನೆಯ ‘ಜೆಸಿ: ದಿ ಯೂನಿವರ್ಸಿಟಿ’ ಸಿನಿಮಾ ಕೂಡ ಇದೇ ಶೈಲಿಯಲ್ಲಿ ಮೂಡಿ ಬಂದಿದೆ ಎಂಬುದು ಟ್ರೇಲರ್ ನೋಡಿದವರಿಗೆ ಗೊತ್ತಾಗುತ್ತದೆ. ಈ ಸಿನಿಮಾಗೆ ಡಾಲಿ ಧನಂಜಯ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ವಿಮರ್ಶೆ ಇಲ್ಲಿದೆ.

ಮ್ಯಾಡಿ (ಸೂರ್ಯ ಪ್ರಖ್ಯಾತ್) ಕಾಲೇಜು ಓದೋ ವಿದ್ಯಾರ್ಥಿ. ತಾನಾಯ್ತು, ತನ್ನ ಕಾಲೇಜಾಯ್ತು ಎಂದು ಹಾಯಾಗಿ ಇರುತ್ತಾನೆ. ಬೆಂಗಳೂರಿನ ಭೂಗತ ಜಗತ್ತು ಹೀಗಿರುತ್ತದೆ ಎಂಬುದನ್ನು ಕನಸಲ್ಲೂ ಆತ ಕಂಡವನಲ್ಲ. ಆದರೂ ಆತ ಜೈಲು ಸೇರಬೇಕಾದ ಪರಿಸ್ಥಿತಿ ಬರುತ್ತದೆ. ಅಲ್ಲಿ ನರಕಯಾತನ ಅನುಭವಿಸುತ್ತಾನೆ. ಇದಕ್ಕೆ ಕಾರಣ ಏನು? ಮುಂದೆ ಜೀವನ ಹೇಗೆ ಸಾಗುತ್ತದೆ ಎಂಬುದು ಚಿತ್ರದ ಕಥೆ. ‘ಜೆಸಿ’ ಸಿನಿಮಾ ಆರಂಭ ಆದ ಕೆಲವೇ ನಿಮಿಷಗಳಲ್ಲಿ ಹಿಂದೆ ನಡೆದಿದ್ದು, ಮುಂದೆ ನಡೆಯಬೇಕಾಗಿದ್ದನ್ನು ತೋರಿಸಿಯಾಗುತ್ತದೆ. ಪ್ರಮುಖ ವಿಲನ್ ಎಂದೆನಿಸಿಕೊಂಡವನ ಕೊಲೆ ಆಗಿದೆ ಎಂಬುದು ಬೆಂಗಳೂರಿನ ಭೂಗತಲೋಕದಲ್ಲಿ ಕಾಡ್ಗಿಚ್ಚಿನಂತೆ ಹಬ್ಬುವಾಗ ಕಥೆ ಪ್ರಸ್ತುತ ದಿನಕ್ಕೆ ತೆರೆದುಕೊಳ್ಳುತ್ತದೆ.

‘ನಡುವೆ ಅಂತರವಿರಲಿ’ ಹೆಸರಿನ ಸಿನಿಮಾದಲ್ಲಿ ರೊಮ್ಯಾಂಟಿಕ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಸೂರ್ಯ ಪ್ರಖ್ಯಾತ್, ಜೆಸಿ ಸಿನಿಮಾದಲ್ಲಿ ಚೂರಿಗಳ ಜೊತೆ, ಗನ್​​ಗಳ ಜೊತೆ ಆಟ ಆಡಿದ್ದಾರೆ. ರಕ್ತದಲ್ಲೇ ಸ್ನಾನ ಮಾಡಿದ್ದಾರೆ. ಕೆನ್ನೆಗೆ ಬಿದ್ದ ಏಟೊಂದನ್ನು ಗಂಭೀರವಾಗಿ ತೆಗೆದುಕೊಂಡು, ಕನಸಿನಲ್ಲೂ ಕಾಣದ ದಾರಿ ತುಳಿಯುತ್ತಾನೆ ಕಥಾ ನಾಯಕ. ಅಲ್ಲಿಂದ ಆತನ ಓಟ ಶುರು. ಲವರ್ ಬಾಯ್ ಆಗಿ, ಅಪ್ಪನ ಮುದ್ದಿನ ಮಗನಾಗಿದ್ದ ಕಥಾ ನಾಯಕ, ಎದುರುಗಿದ್ದವರನ್ನು ಮನಸೋ ಇಚ್ಛೆ ಕೊಚ್ಚೋ ರಾಕ್ಷಸನಾಗುತ್ತಾನೆ. ಅವರ ನಟನೆ ಗಮನ ಸೆಳೆಯುತ್ತದೆ. ಸಿನಿಮಾ ಉದ್ದಕ್ಕೂ ಅವರು ಆವರಿಸಿಕೊಂಡಿದ್ದಾರೆ.

ಪ್ರಖ್ಯಾತ್ ಪ್ರೇಯಸಿ ಪಾತ್ರದಲ್ಲಿ ಭಾವನಾ ರೆಡ್ಡಿ ಕಾಣಿಸಿಕೊಂಡಿದ್ದು, ಮುದ್ದಾಗಿ ಕಾಣಿಸುತ್ತಾರೆ. ನಟನೆಯ ವಿಷಯದಲ್ಲಿ ಅವರು ಮತ್ತಷ್ಟು ಪಳಗಬೇಕಿದೆ. ಥ್ರಿಲ್ಲರ್ ಮಂಜು ಪಾತ್ರಕ್ಕೆ ಮತ್ತಷ್ಟು ತೂಕ ಬೇಕಿತ್ತು. ರಂಗಾಯಣ ರಘು ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿಲನ್​​ಗಳ ದಂಡೇ ಇದ್ದು, ಕವಳ, ರಾಕಾ ಪಾತ್ರಗಳು ಹೈಲೈಟ್ ಆಗಿವೆ. ಟ್ವಿನ್ಸ್ ಪಾತ್ರ ಕೂಡ ಮೆಚ್ಚುಗೆ ಪಡೆಯುತ್ತದೆ.

ಕೆಟ್ಟ ಕೆಲಸ ಮಾಡಿ ಜೈಲು ಸೇರಿದರೆ ಅದು ನಮ್ಮನ್ನು ಕಾಡುವ ಪಶ್ಚತಾಪಕ್ಕಿಂತಲೂ ಕ್ರೂರವಾಗಿರುತ್ತದೆ ಎಂಬುದನ್ನು ನಿರ್ದೇಶಕರು ಮನದಟ್ಟು ಮಾಡೋ ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಆಗಾಗ ಅಕ್ರಮಗಳ ಬಗ್ಗೆ ವರದಿ ಆಗುತ್ತಲೇ ಇರುತ್ತವೆ. ಈ ರೀತಿಯ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ನಿರ್ದೇಶಕ ಚೇತನ್ ಜಯರಾಮ್ ಬರೆದಿದ್ದಾರೆ. A-Z, ಟ್ವಿನ್ಸ್, ಕವಳ, ರಾಕಾ ರೀತಿಯ ಪಾತ್ರದ ಹೆಸರುಗಳು ಗಮನ ಸೆಳೆಯುತ್ತವೆ. ಇದೊಂದು ಪಕ್ಕಾ ರಾ ಚಿತ್ರ. ಇಲ್ಲಿ ಸಾಕಷ್ಟು ರಕ್ತ ಹರಿಯುತ್ತವೆ. ಕೊಲೆಗಳಾಗುತ್ತವೆ. ಈ ಕಾರಣದಿಂದಲೇ ಚಿತ್ರಕ್ಕೆ ಎ ಪ್ರಮಾಣ ಪತ್ರ ನೀಡಲಾಗಿದೆ. ಹೀಗಾಗಿ, ಆ ಬಗ್ಗೆ ಯಾರೂ ತಕರಾರು ತೆಗೆಯುವಂತಿಲ್ಲ.

ಹಾಗಾದರೆ ಇದು ಪರ್ಫೆಕ್ಟ್ ಚಿತ್ರನಾ? ಇಲ್ಲ. ಭೂತಕಾಲ, ಭವಿಷ್ಯತ್ ಕಾಲ, ಪ್ರಸ್ತುತಗಳ ನಡುವೆ ಮೊದಲಾರ್ಧದ ಕಥೆ ಪ್ರೇಕ್ಷಕನ ನೋಡಿಸಿಕೊಂಡು ಸಾಗುತ್ತದೆ. ಇಂಟರ್​​​ವಲ್ ಬ್ಲಾಕ್ ಚಿತ್ರವನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯುತ್ತದೆ. ಆದರೆ, ದ್ವಿತೀಯಾರ್ಧದದಲ್ಲಿ ಕತ್ತರಿ ಹಾಕುವ ಅವಕಶ ಇತ್ತು.  ಇದನ್ನು ಮಾಡಿದ್ದರೆ ಸಿನಿಮಾ ಮತ್ತಷ್ಟು ಸುಂದರವಾಗುತ್ತಿತ್ತು. ಸಿನಿಮಾದಲ್ಲಿ ನಾಲ್ಕೈದು ಹಾಡುಗಳು ಬರುತ್ತವೆಯಾದರೂ ಸಂಗೀತ ಕಿವಿಯಲ್ಲಿ, ಸಾಹಿತ್ಯ ಮನಸ್ಸಿನಲ್ಲಿ ಉಳಿದುಕೊಳ್ಳುವುದಿಲ್ಲ. ಮಾಸ್ತಿ ಡೈಲಾಗ್ ಚಿತ್ರಕ್ಕೆ ಕೆಲವು ಕಡೆ ಪ್ಲಸ್ ಆದರೆ, ಇನ್ನೂ ಕೆಲವು ಕಡೆ ಮೈನಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:24 pm, Fri, 6 February 26