ಶಾರುಖ್ ನಟಿಸಿದ ಆ ಸಿನಿಮಾ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಸ್ಪಷ್ಟನೆ
‘ಕಭಿ ಅಲ್ವಿದಾ ನಾ ಕೆಹನಾ’ ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ರಾಣಿ ಮುಖರ್ಜಿ ನಡುವಿನ ಒಂದು ದೃಶ್ಯವನ್ನು ನೋಡಿ ಪ್ರೇಕ್ಷಕರು ಗರಂ ಆಗಿದ್ದರು. ಸಮಾಜಕ್ಕೆ ಈ ಸಿನಿಮಾ ಮಾರಕವಾಗಿದೆ ಎಂದು ಕೆಲವರು ತೀವ್ರವಾಗಿ ಟೀಕಿಸಿದ್ದರು. ಆ ಘಟನೆಯನ್ನು ಈಗ ನಿರ್ದೇಶಕ ಕರಣ್ ಜೋಹರ್ ನೆನಪು ಮಾಡಿಕೊಂಡಿದ್ದಾರೆ.

ಕರಣ್ ಜೋಹರ್ ನಿರ್ದೇಶನದ 2006ರ ಹಿಟ್ ಸಿನಿಮಾ ‘ಕಭಿ ಅಲ್ವಿದಾ ನಾ ಕೆಹನಾ’ (Kabhi Alvida Naa Kehna) ಬಿಡುಗಡೆಯಾಗಿ ಈಗ ಎರಡು ದಶಕಗಳನ್ನು ಪೂರೈಸಿದೆ. ಬಿಡುಗಡೆಯ ಸಮಯದಲ್ಲಿ ವಿಭಿನ್ನ ಹಾಗೂ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದ ಈ ಚಿತ್ರ, ಕಾಲಕ್ರಮೇಣ ಪ್ರೇಕ್ಷಕರ ನೆಚ್ಚಿನ ಕ್ಲಾಸಿಕ್ ಸಿನಿಮಾವಾಗಿ ಹೊರಹೊಮ್ಮಿತು. 20 ವರ್ಷ ಕಳೆದಿರುವ ಈ ಸಂದರ್ಭದಲ್ಲಿ ನಿರ್ದೇಶಕ ಕರಣ್ ಜೋಹರ್ (Karan Johar) ಅವರು ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಂದು ತಮಗೆ ಎದುರಾದ ವಿಚಿತ್ರ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ.
‘ಕಭಿ ಅಲ್ವಿದಾ ನಾ ಕೆಹನಾ’ ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ರಾಣಿ ಮುಖರ್ಜಿ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದರು. ಈಗ ಚಿತ್ರದ ಬಿಡುಗಡೆಯ ದಿನಗಳ ಅನುಭವವನ್ನು ಹಂಚಿಕೊಂಡ ಕರಣ್, ‘ಕಭಿ ಅಲ್ವಿದಾ ನಾ ಕೆಹನಾ ಚಿತ್ರಕ್ಕೆ 20 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ, ಈ ಸಿನಿಮಾದಿಂದ ನನಗೆ ಸಿಕ್ಕ ವಿಶಿಷ್ಟ ಅನುಭವಗಳು ಮತ್ತು ಅನುಭವಿಸಿದ ವಾಸ್ತವಗಳನ್ನು ಬರೆದಿಡುತ್ತಿದ್ದೇನೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಚಿತ್ರಮಂದಿರವೊಂದರಲ್ಲಿ ಪ್ರಿವ್ಯೂ ವೀಕ್ಷಿಸುತ್ತಿದ್ದಾಗ ನಡೆದ ಘಟನೆಯನ್ನು ಕರಣ್ ಜೋಹರ್ ನೆನಪಿಸಿಕೊಂಡಿದ್ದಾರೆ. ಶಾರುಖ್ ಖಾನ್ ಮತ್ತು ರಾಣಿ ಮುಖರ್ಜಿ ಅಭಿನಯದ ದೃಶ್ಯವೊಂದನ್ನು ನೋಡಿ ಪ್ರೇಕ್ಷಕರು ದಿಗ್ಭ್ರಮೆಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ. ‘ನನ್ನ ಮುಂದೆ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಮಧ್ಯಮ ವಯಸ್ಸಿನ ದಂಪತಿ ಕುಳಿತಿದ್ದರು. ಆ ದೃಶ್ಯವು ಯಾವುದೇ ಕನಸಿನ ಸನ್ನಿವೇಶವಲ್ಲ, ಬದಲಿಗೆ ನೈಜ ದೃಶ್ಯ ಎಂದು ತಿಳಿಯುತ್ತಿದ್ದಂತೆ ಆ ವ್ಯಕ್ತಿ ಕೋಪದಿಂದ ಹೆಂಡತಿಯನ್ನು ನೋಡುತ್ತಾ ತಕ್ಷಣವೇ ಚಿತ್ರಮಂದಿರದಿಂದ ಹೊರನಡೆದರು. ಅದನ್ನು ನೋಡಿ ನನ್ನ ಹೃದಯವೇ ನಿಂತಂತಾಯಿತು’ ಎಂದಿದ್ದಾರೆ ಕರಣ್ ಜೋಹರ್.
View this post on Instagram
ಇನ್ನೊಂದು ಘಟನೆಯಲ್ಲಿ, ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಬಂದು ಕರಣ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ‘ನಿಮ್ಮ ಸಿನಿಮಾ ಎಂದರೆ ಹಾಡು, ನೃತ್ಯ ಮತ್ತು ಕುಟುಂಬದ ಮೌಲ್ಯಗಳಿರುವ ಸಂತೋಷದ ಸಿನಿಮಾ ಎಂದು ಭಾವಿಸಿ ನನ್ನ ಮಗಳನ್ನು ಕರೆದುಕೊಂಡು ಬಂದಿದ್ದೆ. ಆದರೆ ಇಂದು ಆಕೆಗೆ ವಿಚ್ಛೇದನವಾಗಿದೆ, ಇಂತಹ ಸಮಯದಲ್ಲಿ ನಾನು ಇದನ್ನು ನೋಡಬೇಕಾಯಿತೇ? ನಿಮಗೇನು ನಾಚಿಕೆಯಾಗುವುದಿಲ್ಲವೇ ಅಂತ ಕಿರುಚಾಡಿದ್ದರು’ ಎಂದು ಆ ಘಟನೆಯನ್ನು ಕರಣ್ ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ:ರಾಮಾಯಣ ಚಿತ್ರಕ್ಕೆ ಕರಣ್ ಜೋಹರ್ ಡಿಸ್ಟ್ರಿಬ್ಯೂಟರ್; ಕೇವಲ 250 ಕೋಟಿ ರೂ.ಗೆ ಡೀಲ್
ಚಿತ್ರದಲ್ಲಿ ಕೆಲವು ಲೋಪದೋಷಗಳಿದ್ದವು ಎಂಬುದನ್ನು ಒಪ್ಪಿಕೊಂಡ ಕರಣ್, ‘ಈ ಸಿನಿಮಾ ಎಂದಿಗೂ ಅಕ್ರಮ ಸಂಬಂಧವನ್ನು ಬೆಂಬಲಿಸಲಿಲ್ಲ. ಅದು ನನ್ನ ಉದ್ದೇಶವೂ ಆಗಿರಲಿಲ್ಲ. ಆದರೆ, ಪ್ರೀತಿ ಅಥವಾ ಕಾಮಕ್ಕಾಗಿ ಮದುವೆಯ ಗಡಿ ದಾಟುವುದು ನಿಮ್ಮ ಕುಟುಂಬದ ಅಡಿಪಾಯವನ್ನೇ ಹೇಗೆ ನಾಶಪಡಿಸುತ್ತದೆ ಎಂಬುದನ್ನು ತೋರಿಸುವುದು ನನ್ನ ಉದ್ದೇಶವಾಗಿತ್ತು’ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




