‘ರಾ’ ಸಂಸ್ಥಾಪಕ ಆರ್.ಎನ್. ಕಾವ್ ಬಯೋಪಿಕ್ ಘೋಷಿಸಿದ ಕರಣ್ ಜೋಹರ್
ಆರ್.ಎನ್. ಕಾವ್ ಕುರಿತ ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿದೆ. ಚಿತ್ರದ ತಾರಾಗಣ, ನಿರ್ದೇಶಕರು ಹಾಗೂ ತಾಂತ್ರಿಕ ವರ್ಗದ ವಿವರಗಳನ್ನು ಮುಂಬರುವ ದಿನಗಳಲ್ಲಿ ಬಹಿರಂಗಪಡಿಸುವುದಾಗಿ ಚಿತ್ರತಂಡ ತಿಳಿಸಿದೆ. ಪ್ರಸಿದ್ಧ ರಕ್ಷಣಾ ವಿಶ್ಲೇಷಕ ಹಾಗೂ ಪತ್ರಕರ್ತ ನಿತಿನ್ ಗೋಖಲೆ ಬರೆದಿರುವ ‘ಜಂಟಲ್‌ಮ್ಯಾನ್ ಸ್ಪೈಮಾಸ್ಟರ್’ ಪುಸ್ತಕವನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗುತ್ತಿದೆ.

ಭಾರತದ ಬೇಹುಗಾರಿಕಾ ಸಂಸ್ಥೆಯಾದ ‘ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್’ ಸಂಸ್ಥಾಪಕ ಹಾಗೂ ದೇಶದ ದಂತಕಥೆಯಂತಿರುವ ಗೂಢಚಾರಿ ರಾಮೇಶ್ವರ್ ನಾಥ್ ಕಾವ್ ಅವರ ಜೀವನ ಮತ್ತು ಸಾಧನೆಗಳನ್ನು ಆಧರಿಸಿದ ಬಿಗ್ ಬಜೆಟ್ ಸಿನಿಮಾವನ್ನು ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಘೋಷಿಸಿದ್ದಾರೆ. ಬಹುನಿರೀಕ್ಷಿತ ಈ ಬಯೋಪಿಕ್ 2028ರ ಆಗಸ್ಟ್ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಹಂಚಿಕೊಂಡ ಕರಣ್ ಜೋಹರ್, ಆರ್.ಎನ್. ಕಾವ್ ಅವರನ್ನು ‘ದಿ ಮ್ಯಾನ್, ದಿ ಮಿಥ್, ದಿ ಲೆಜೆಂಡ್’ ಎಂದು ಬಣ್ಣಿಸಿದ್ದಾರೆ.
ಚಿತ್ರದ ಕುರಿತು ಬರೆದುಕೊಂಡಿರುವ ಕರಣ್ ಜೋಹರ್, ‘ಆರ್.ಎನ್. ಕಾವ್ – ಭಾರತ ಕಂಡ ಅಪ್ರತಿಮ ಗೂಢಚಾರಿ. 1971ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ಐತಿಹಾಸಿಕ ಮತ್ತು ಅಭೂತಪೂರ್ವ ಗೆಲುವು ತಂದುಕೊಡುವಲ್ಲಿ ಕಾವ್ ಅವರ ಪಾತ್ರ ನಿರ್ಣಾಯಕವಾಗಿತ್ತು. ಆರ್.ಎನ್. ಕಾವ್ ಅವರ ಜೀವನ, ರಾ ಸ್ಥಾಪನೆಯ ಕಥೆ ಹಾಗೂ ಸಂಸ್ಥೆಯ ಮೊದಲ ರಹಸ್ಯ ಕಾರ್ಯಾಚರಣೆಯ ರೋಮಾಂಚಕ ಕಥಾನಕ 2028ರ ಆಗಸ್ಟ್ 11ರಂದು ಬೆಳ್ಳಿತೆರೆಯ ಮೇಲೆ ಅನಾವರಣಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.
ಆರ್.ಎನ್. ಕಾವ್ ಸಿನಿಮಾ ಬಗ್ಗೆ ಕರಣ್ ಜೋಹರ್ ಪೋಸ್ಟ್:
‘ಅವರು ಕಣ್ಣಿಗೆ ಕಾಣದಂತೆ ದೊಡ್ಡ ಸಂಸ್ಥೆಯನ್ನೇ ಕಟ್ಟಿದರು. ಆದರೆ ಇತಿಹಾಸ ಅವರ ಐತಿಹಾಸಿಕ ಸಾಧನೆಗಳನ್ನು ಸದಾ ನೆನಪಿಸಿಕೊಳ್ಳುತ್ತದೆ. ರಾ ಸಂಸ್ಥೆಗೆ 58 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ, ತೆರೆಮರೆಯಲ್ಲಿದ್ದುಕೊಂಡು ನಾವಿಂದು ಕಾಣುತ್ತಿರುವ ರಾ ಸಂಸ್ಥೆಯನ್ನು ರೂಪಿಸಿದ ಆರ್.ಎನ್. ಕಾವ್ ಅವರ ಕಥೆಯನ್ನು ಆಧರಿಸಿದ ಸಿನಿಮಾವನ್ನು ಘೋಷಿಸಲು ನಮಗೆ ಹೆಮ್ಮೆಯಾಗುತ್ತಿದೆ. ನಿತಿನ್ ಗೋಖಲೆ ಅವರ ಜಂಟಲ್‌ಮ್ಯಾನ್ ಸ್ಪೈಮಾಸ್ಟರ್ ಆಧಾರಿತ ಈ ಚಿತ್ರ 2028ರ ಆಗಸ್ಟ್ 11ರಂದು ಪ್ರದರ್ಶನಗೊಳ್ಳಲಿದೆ’ ಎಂದು ಕರಣ್ ಜೋಹರ್ ಪೋಸ್ಟ್ ಮಾಡಿದ್ದಾರೆ.
View this post on Instagram
8 ವರ್ಷಗಳ ಕಾಯುವಿಕೆ ಬಳಿಕ ಸಿಕ್ಕ ಬಿಡುಗಡೆ ದಿನಾಂಕ:
‘ಧರ್ಮಾ ಪ್ರೊಡಕ್ಷನ್ಸ್’ ಹಾಗೂ ‘ಸ್ಟಿಲ್ ಆ್ಯಂಡ್ ಸ್ಟಿಲ್ ಮೀಡಿಯಾ ಕಲೆಕ್ಟಿವ್’ ಸಂಸ್ಥೆಗಳು ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ. ಕರಣ್ ಜೋಹರ್ ಅವರು ಈ ಪ್ರಾಜೆಕ್ಟ್ ಅನ್ನು ಮೊದಲ ಬಾರಿಗೆ 2020ರ ಜನವರಿಯಲ್ಲೇ ಅಧಿಕೃತವಾಗಿ ಘೋಷಿಸಿದ್ದರು. ಆದರೆ, ವಿವಿಧ ಕಾರಣಗಳಿಂದಾಗಿ ವಿಳಂಬವಾಗಿದ್ದ ಈ ಸಿನಿಮಾ, ಘೋಷಣೆಯಾದ ಎಂಟು ವರ್ಷಗಳ ಬಳಿಕ ಅಂತಿಮವಾಗಿ ಬಿಡುಗಡೆ ದಿನಾಂಕವನ್ನು ತಿಳಿಸಿದೆ.
ಇದನ್ನೂ ಓದಿ: ಶಾರುಖ್ ನಟಿಸಿದ ಆ ಸಿನಿಮಾ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಸ್ಪಷ್ಟನೆ
ಆರ್.ಎನ್. ಕಾವ್ ಯಾರು?
ರಾಮೇಶ್ವರ್ ನಾಥ್ ಕಾವ್ ಅವರು ಭಾರತದ ಅತ್ಯಂತ ಪ್ರಭಾವಿ ಮತ್ತು ಕಾರ್ಯತಂತ್ರ ಚತುರ ಬೇಹುಗಾರಿಕಾ ಅಧಿಕಾರಿಯಾಗಿದ್ದರು. 1968ರಲ್ಲಿ ಇಂದಿರಾ ಗಾಂಧಿ ಅವರು ಆರ್.ಎನ್. ಕಾವ್ ಅವರನ್ನು ಭಾರತದ ನೂತನ ಬೇಹುಗಾರಿಕಾ ಸಂಸ್ಥೆ ರಾ (R&AW)ನ ಮೊದಲ ಮುಖ್ಯಸ್ಥರಾಗಿ ನೇಮಕ ಮಾಡಿದ್ದರು. 1977ರವರೆಗೆ ಅಧಿಕಾರ ಹೊಂದಿದ್ದ ಕಾವ್, ಭಾರತೀಯ ಬೇಹುಗಾರಿಕಾ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




