Kalki 2898 AD Review: ಕಲಿಯುಗದೊಂದಿಗೆ ದ್ವಾಪರಯುಗದ ಬೆಸುಗೆ ಈ ‘ಕಲ್ಕಿ’

ಕಲ್ಕಿ 2898 ಎಡಿ ಚಿತ್ರ ವಿಮರ್ಶೆ: ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಅಂಥಹಾ ದಿಗ್ಗಜ ನಟರು ನಟಿಸಿರುವ ಬಹುಕೋಟಿ ಬಜೆಟ್​ ಸಿನಿಮಾ ‘ಕಲ್ಕಿ 2898 ಎಡಿ’ ಇಂದು ಬಿಡುಗಡೆ ಆಗಿದೆ. ಸಿನಿಮಾ ಹೇಗಿದೆ?

Kalki 2898 AD Review: ಕಲಿಯುಗದೊಂದಿಗೆ ದ್ವಾಪರಯುಗದ ಬೆಸುಗೆ ಈ ‘ಕಲ್ಕಿ’
ಕಲ್ಕಿ 2898 ಎಡಿ ಚಿತ್ರ ವಿಮರ್ಶೆ
Follow us
|

Updated on: Jun 27, 2024 | 11:40 AM

ಚಿತ್ರ: ಕಲ್ಕಿ 2898 ಎಡಿ

ನಿರ್ಮಾಣ: ವೈಜಯಂತಿ ಮೂವೀಸ್

ನಿರ್ದೇಶನ: ನಾಗ್ ಅಶ್ವಿನ್

ಪಾತ್ರವರ್ಗ: ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾಣಿ

ಗಂಗೆ ಬತ್ತಿ ಹೋಗಿದ್ದಾಳೆ, ವಿಶ್ವದ ಮೊದಲ ನಗರ ಕಾಶಿ, ಈಗ ಭೂಮಿಯ ಮೇಲೆ ಉಳಿದಿರುವ ಕೊನೆಯ ನಗರವಾಗಿದೆ. ಕಾಶಿಯಲ್ಲೀಗ ದೇವರುಗಳಿಗೆ ಜಾಗವಿಲ್ಲ, ಅಲ್ಲೇನಿದ್ದರೂ ಶೈತಾನ್​ ದೊರೆ ಯಾಸ್ಕಿನ್​ನದ್ದೇ ರಾಜ್ಯಭಾರ. ಭೂಮಿಯ ಮೇಲೆ ಹಸಿರೆಂಬುದೇ ಇಲ್ಲ. ನೀರಿಗಾಗಿ ತ್ರಾಹಿ-ತ್ರಾಹಿ ಎನ್ನುತ್ತಿದ್ದಾರೆ. ಜನ ಉಸಿರಾಡಲು ಸಹ ಕಷ್ಟಪಡುತ್ತಿದ್ದಾರೆ. ಮನುಷ್ಯ ತನ್ನ ಪಾಪಕರ್ಮಗಳಿಂದ ಸೃಷ್ಟಿಸಿಕೊಂಡಿರುವ ಈ ಸಂಕಟದಿಂದ ಪಾರು ಮಾಡಲು ದೇವರೇ ಜನಿಸಿ ಬರಬೇಕು, ಆ ಸಮಯವೂ ಬಂದಿದೆ. ಕಲಿಯುಗದ ಅಂತ್ಯದಲ್ಲಿ ‘ಕಲ್ಕಿ’ಯ ಆಗಮನಕ್ಕೆ ಸಮಯ ಸನ್ನದ್ಧವಾಗಿದೆ. ‘ಕಲ್ಕಿ’ಯ ಜನನ ತಡೆಯಲು ಯಾಸ್ಕಿನ್ ಅಣಿಯಾಗಿದ್ದಾನೆ. ದೇವರನ್ನು ಗರ್ಭದಲ್ಲಿ ಹೊತ್ತ ಮಾತೆಯನ್ನು ಕಾಯಲು ಸ್ವತಃ ದ್ರೋಣಾಚಾರ್ಯ ಪುತ್ರ ಅಶ್ವತ್ಥಾಮ ದೇವಮಾತೆಯ ಜೊತೆಗೆ ನಿಂತಿದ್ದಾನೆ. ಆದರೆ ಸಾವೇ ಇಲ್ಲದ ಮಹಾ ಯೋಧ ಅಶ್ವತ್ಥಾಮನಿಗೆ ಎದುರು ಬಿದ್ದಿರುವುದು ಅಪ್ರತಿಮ ವೀರ ಕರ್ಣ!

ಮೇಲಿನದು ‘ಕಲ್ಕಿ’ ಸಿನಿಮಾದ ಕತೆಯ ಹೊರತಿರುಳು, ಕತೆ ಎಷ್ಟು ರೋಮಾಂಚನಕಾರಿಯಾಗಿದೆಯೋ ಅದನ್ನು ದೃಶ್ಯ ರೂಪದಲ್ಲಿ ಪ್ರಸ್ತುತ ಪಡಿಸಿರುವ ರೀತಿಯೂ ಅಷ್ಟೆ ಅತ್ಯದ್ಭುತವಾಗಿದೆ. ಮಹಾಭಾರತದ ಪಾತ್ರಗಳು, ಅವುಗಳನ್ನು ತೋರಿಸಿರುವ ರೀತಿ, ಆ ಪಾತ್ರಗಳನ್ನು ಕಲಿಯುಗದ ಕಾಲ್ಪನಿಕ ಲೋಕದಲ್ಲಿ ಇರಿಸಿ ಕತೆಯೊಂದಿಗೆ ಹೊಂದಿಸಿರುವ ರೀತಿ ಅತ್ಯದ್ಭುತ. ವಿಶೇಷತೆ ಗಮನಿಸಿ, ಮಹಾಭಾರತದಲ್ಲಿ ಅನೀತಿ ಪರ (ಕೌರವರ ಪರ) ನಿಂತಿದ್ದ ಅಶ್ವತ್ಥಾಮ ಹಾಗೂ ಕರ್ಣ, ‘ಕಲ್ಕಿ’ ಕತೆಯಲ್ಲಿ ಧರ್ಮದ ಪರ ನಿಂತಿದ್ದಾರೆ, ಈ ಯೋಚನೆಯೇ ಅದ್ಭುತವಾಗಿದೆ. ಇಂಥಹಾ ಮೈನವಿರೇಳಿಸುವ ಹಲವು ಅಂಶಗಳು ಸಿನಿಮಾಗಳಿವೆ. ಅವನ್ನು ನೋಡಿಯೆ ರೋಮಾಂಚನಗೊಳ್ಳಬೇಕು.

ನಿರ್ದೇಶಕ ನಾಗ್ ಅಶ್ವಿನ್ ‘ಕಲ್ಕಿ’ ಸಿನಿಮಾ ಪ್ರಾರಂಭಿಸಿರುವುದೇ ಕುರುಕ್ಷೇತ್ರ ಯುದ್ಧದ ಅಂತ್ಯದ ಮೂಲಕ. ಕುರುಕ್ಷೇತ್ರದಲ್ಲಿ ಎತ್ತ ನೋಡಿದರೂ ಹೆಣಗಳ ರಾಶಿ, ತನ್ನವರನ್ನೆಲ್ಲ ಕಳೆದುಕೊಂಡ ಕ್ರೋಧದಲ್ಲಿರುವ ಅಶ್ವತ್ಥಾಮನಿಗೆ ಅಮರವಾಗುವ ಶಾಪ ನೀಡುತ್ತಾನೆ ಕೃಷ್ಣ, ಅಲ್ಲಿಂದ ಕತೆಯ ಪುಟ ಬದಲಾಗುವುದು 6000 ಸಾವಿರ ವರ್ಷಗಳ ನಂತರಕ್ಕೆ. ಅಂದರೆ ಕಲಿಯುಗದ ಅಂತ್ಯದ ಸಮಯಕ್ಕೆ. ಅರಾಜಕತೆ ಮೇರೆ ಮೀರಿದೆ. ಕಾಶಿ ನಗರ ದುಷ್ಟರ ಕೈ ಸೇರಿದೆ. ದೇವರುಗಳೇ ಇಲ್ಲವಾಗಿದ್ದಾರೆ. ಒಳಿತಿನ ವಿರೋಧಿ ಯಾಸ್ಕಿನ್, ಕಾಂಪ್ಲೆಕ್ಸ್ ಹೆಸರಿನ ಭವ್ಯ, ಸುಸಜ್ಜಿತ ಪ್ರಪಂಚವನ್ನೇ ಕಟ್ಟಿಕೊಂಡಿದ್ದಾನೆ. ಅಲ್ಲಿ ಅವನಿಗಾಗಿ ದುಡಿಯುವ ಸೈನ್ಯವಿದೆ, ರೋಬೋಟ್​ಗಳಿವೆ. ವಿಜ್ಞಾನಿಗಳಿದ್ದಾರೆ. ಪ್ರಯೋಗ ಶಾಲೆಯಿದೆ. ಗರ್ಭ ಧರಿಸಬಲ್ಲ ಯುವತಿಯರನ್ನು ಕರೆದುಕೊಂಡು ಬಂದು ಪ್ರಯೋಗಶಾಲೆ ಮೂಲಕ ಕೃತಕ ಗರ್ಭಧಾರಣೆ ಮಾಡಿಸಲಾಗುತ್ತದೆ. ಯಾರ ಗರ್ಭದಲ್ಲಿ ‘ಕಲ್ಕಿ’ ಜನಿಸಲಿದ್ದಾನೆಯೋ ಆ ಗರ್ಭದ ಅಂಶವನ್ನು ಯಾಸ್ಕಿನ್​ ತನ್ನ ದೇಹಕ್ಕೆ ಇಂಜೆಕ್ಟ್​ ಮಾಡಿಕೊಂಡು ಅಮರತ್ವ ಪಡೆವ ಆಲೋಚನೆಯಲ್ಲಿದ್ದಾನೆ. ಈಗಾಗಲೇ ಆತ 2500 ಸಾವಿರ ವರ್ಷ ಬದುಕಿದ್ದಾನೆ. ಆದರೆ ಎಲ್ಲವೂ ಯಾಸ್ಕಿನ್ ಅಂದುಕೊಂಡಂತೆ ನಡೆಯುವುದಿಲ್ಲ. ‘ಕಲ್ಕಿ’ಯನ್ನು ಗರ್ಭದಲ್ಲಿ ಇರಿಸಿಕೊಂಡಿರುವ ಸುಮತಿ (ದೀಪಿಕಾ ಪಡುಕೋಣೆ) ‘ಕಾಂಪ್ಲೆಕ್ಸ್​’ನಿಂದ ತಪ್ಪಿಸಿಕೊಳ್ಳುತ್ತಾಳೆ. ಮುಂದೆ ನಡೆಯುವ ಕತೆ ರೋಚಕ.

ಇದನ್ನೂ ಓದಿ:Prabhas: ಹೇಗಿದೆ ‘ಕಲ್ಕಿ 2898 ಎಡಿ’ ಸಿನಿಮಾ? ಇಲ್ಲಿದೆ ಮೊದಲಾರ್ಧದ ವಿಮರ್ಶೆ

ಸಿನಿಮಾದಲ್ಲಿ ಪ್ರಭಾಸ್ ಭೈರವನ ಪಾತ್ರದಲ್ಲಿ ನಟಿಸಿದ್ದಾರೆ. ಕಾಶಿ ನಗರದಲ್ಲಿ ಪ್ರಭಾಸ್ ಒಬ್ಬ ಬೌಂಟಿ ಹಂಟರ್. ಹಣಕ್ಕಾಗಿ ಯಾವುದೇ ಕೆಲಸ ಮಾಡಲು ಸಿದ್ಧ. ಒಳ್ಳೆಯ ಫೈಟರ್, ಈ ವರೆಗೆ ಒಂದೂ ಸಹ ಫೈಟ್ ಸೋತಿಲ್ಲದವ. ಎಲ್ಲವೂ ದೊರೆಯುವ ಭವ್ಯ ಕಾಂಪ್ಲೆಕ್ಸ್ ಸೇರಬೇಕೆಂಬ ಆಸೆ ಅವನದ್ದು. ಕಾಂಪ್ಲೆಕ್ಸ್​ನಿಂದ ತಪ್ಪಿಸಿಕೊಂಡ ಗರ್ಭಿಣಿ ಸುಮತಿಯನ್ನು ಹುಡುಕಿಕೊಟ್ಟರೆ ಭೈರವನಿಗೆ ಕಾಂಪ್ಲೆಕ್ಸ್​ಗೆ ಪ್ರವೇಶ ದೊರೆಯುತ್ತದೆ. ಆದರೆ ಅದು ಸುಲಭವಲ್ಲ, ಸುಮತಿಗೆ ಕಾವಲಿರುವುದು ಸಾಕ್ಷಾತ್ ದ್ರೋಣಚಾರ್ಯ ಪುತ್ರ ಅಶ್ವತ್ಥಾಮ. ಅಂತಿಮ ವಿಜಯ ಯಾರಿಗೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು.

ಪ್ರಭಾಸ್​ರಷ್ಟೆ ಅಥವಾ ಅವರಿಗಿಂತಲೂ ತುಸು ಹೆಚ್ಚು ತೂಕದ ಪಾತ್ರವೇ ಅಮಿತಾಬ್ ಬಚ್ಚನ್ ಅವರಿಗಿದೆ. ಸಿನಿಮಾದ ಬಹುತೇಕ ಭಾಗದಲ್ಲಿ ಪ್ರಭಾಸ್​ಗಿಂತಲೂ ಹೆಚ್ಚು ಚಪ್ಪಾಳೆ ಗಿಟ್ಟಿಸುತ್ತಾರೆ ಬಚ್ಚನ್. ದೀಪಿಕಾ ಪಡುಕೋಣೆಯವರದ್ದು ಮೆದುವಾದ ಪಾತ್ರ, ಅದಕ್ಕೆ ತಕ್ಕಂತೆ ದೀಪಿಕಾ ನಟಿಸಿದ್ದಾರೆ. ಯಾಸ್ಕಿನ್ ಪಾತ್ರದಲ್ಲಿ ಕಮಲ್ ಹಾಸನ್ ಇದ್ದಾರಾದರೂ ಕಾಣಿಸಿಕೊಳ್ಳುವುದು ಕೇವಲ ಎರಡು ದೃಶ್ಯಗಳಲ್ಲಿ ಮಾತ್ರ. ಆದರೆ ಎರಡನೇ ದೃಶ್ಯ, ಮುಂಬರಲಿರುವ ಯುದ್ಧ ಎಷ್ಟು ಭೀಕರವಾಗಿರುತ್ತದೆ ಎಂಬುದರ ಸುಳಿವು ನೀಡುತ್ತದೆ. ಯಾಸ್ಕಿನ್​ನ ಕಮಾಂಡರ್ ಪಾತ್ರದಲ್ಲಿ ಸಾಸ್ವತ್ ಚಟರ್ಜಿ ನಟಿಸಿದ್ದು, ಅವರ ನಟನೆ ಅದ್ಭುತವಾಗಿದೆ. ಪಾತ್ರಕ್ಕೆ ಅದ್ಭುತವಾಗಿ ಅವರು ಒಗ್ಗಿದ್ದಾರೆ. ದಿಶಾ ಪಟಾಣಿ ಒಂದು ಹಾಡಿಗೆ ಮಾತ್ರವೇ ಸೀಮಿತವಾಗಿದ್ದಾರೆ. ಸಿನಿಮಾದಲ್ಲಿ ಅತಿಥಿ ಪಾತ್ರಗಳ ದೊಡ್ಡ ಪಟ್ಟಿಯೇ ಇದೆ. ಅದು ಯಾರ್ಯಾರು ಯಾವ ಪಾತ್ರ ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು.

ಇದನ್ನೂ ಓದಿ:ಪ್ರಭಾಸ್​ಗೆ ಸೂಪರ್​ ಸಕ್ಸಸ್​ ನೀಡಲಿರುವ ‘ಕಲ್ಕಿ 2898 ಎಡಿ’ ಸಿನಿಮಾ

ಸಿನಿಮಾದಲ್ಲಿ ನಾಗ್ ಅಶ್ವಿನ್ ಗ್ರಾಫಿಕ್ಸ್​ ಬಳಸಿರುವ ರೀತಿ ಅತ್ಯದ್ಭುತ. ಸೆಟ್​ಗಳು, ಬಳಸಿರುವ ಕಲರ್ ಗ್ರೇಡಿಂಗ್ ಎಲ್ಲವೂ ಹಾಲಿವುಡ್ ಸಿನಿಮಾದ ಸಮಕ್ಕಿದೆ. ಕೊನೆಯಲ್ಲಿ ಬರುವ ಕುರುಕ್ಷೇತ್ರದ ದೃಶ್ಯವಂತೂ ಇಡೀ ಸಿನಿಮಾದ ಹೈಲೈಟ್. ಯಂತ್ರಯುಗವನ್ನು ಸಹ ಅತ್ಯುತ್ತಮವಾಗಿ ನಾಗ್ ಅಶ್ವಿನ್ ಕಟ್ಟಿಕೊಟ್ಟಿದ್ದಾರೆ. ಯೋಧರು, ಯೋಧರ ಸಮವಸ್ತ್ರ, ಅವರು ಬಳಸುವ ಆಯುಧಗಳು, ಅವರ ವಾಹನಗಳು ಎಲ್ಲವನ್ನೂ ಶ್ರಮಪಟ್ಟು ಕಟ್ಟಿಕೊಟ್ಟಿರುವುದು ಕಾಣುತ್ತದೆ. ಕುರುಕ್ಷೇತ್ರದ ದೃಶ್ಯಗಳನ್ನು ಹಿಂದೆಂದೂ ನೋಡಿರದ ರೀತಿ ನಾಗ್ ಅಶ್ವಿನ್ ಕಟ್ಟಿಕೊಟ್ಟಿದ್ದಾರೆ.

ಸಿನಿಮಾದಲ್ಲಿ ಕೆಲವು ಕೊರತೆಗಳು ಸಹ ಇವೆ. ಗ್ರಾಫಿಕ್ಸ್, ಕಲರ್ ಗ್ರೇಡಿಂಗ್, ಸೆಟ್ ಇತರೆ ವಿಷಯಗಳ ಬಗ್ಗೆ ಅತೀವ ಕಾಳಜಿ ವಹಿಸಿರುವ ನಿರ್ದೇಶಕ ನಾಗ್ ಅಶ್ವಿನ್, ಎಡಿಟಿಂಗ್ ವಿಷಯದಲ್ಲಿ ಇನ್ನಷ್ಟು ಜಾಗೃತೆ ವಹಿಸಬೇಕಿತ್ತು ಎನಿಸುತ್ತದೆ. ದೃಶ್ಯಗಳನ್ನು ಇಂಟರ್​ಕಟ್ ಮಾಡಿರುವ ರೀತಿ ಸೂಕ್ತವಾಗಿಲ್ಲ ಎನಿಸುತ್ತದೆ. ನೋಡುಗನಿಗೆ ಗೊಂದಲ ಮೂಡಿಸುವಂತಿದೆ ಕೆಲವು ಕಟ್​ಗಳು. ಕೆಲವು ದೃಶ್ಯಗಳಲ್ಲಿ ನಟರ ನಟನೆ ಅಸಹಜ ಎನಿಸುತ್ತದೆ. ದೃಶ್ಯದ ಸಂಯೋಜನೆ ಹದವಾಗಿಲ್ಲ ಎನಿಸುತ್ತದೆ. ಕೆಲವು ದೃಶ್ಯಗಳನ್ನು ಅನಾವಶ್ಯಕವಾಗಿ ಎಳೆಯಲಾಗಿದೆ. ಸಂಗೀತವನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಹಾಡುಗಳಂತೂ ನೆನಪಿನಲ್ಲಿಯೇ ಉಳಿಯುವುದಿಲ್ಲ. ದಿಶಾ ಪಟಾಣಿ-ಪ್ರಭಾಸ್ ನಟಿಸಿರುವ ಒಂದು ಹಾಡಿನ ಕೊರಿಯೋಗ್ರಫಿ ಸಹ ಉತ್ಕೃಷ್ಟವಾಗಿಲ್ಲ. ಆದರೆ ಈ ಕೊರತೆಗಳ ನಡುವೆಯೂ ಸಿನಿಮಾ ಗಮನ ಸೆಳೆಯುತ್ತದೆ. ಸಿನಿಮಾ ಮುಗಿದ ಬಳಿಕವೂ ಕೆಲವು ದೃಶ್ಯಗಳು ನೆನಪಿನಲ್ಲಿ ಉಳಿಯುತ್ತವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ