KGF Chapter 2 Review: ಕೆಜಿಎಫ್ ಚಾಪ್ಟರ್ 2 ವಿಮರ್ಶೆ; ಪ್ರಶಾಂತ್ ನೀಲ್ ಕೈಚಳಕ, ಯಶ್ ಫ್ಯಾನ್ಸ್ಗೆ ಧಮಾಕ
‘ಕೆಜಿಎಫ್ ಚಾಪ್ಟರ್ 2’ ವಿಮರ್ಶೆ: ದೊಡ್ಡ ತಾರಾ ಬಳಗ, ಬೆಟ್ಟದಷ್ಟು ನಿರೀಕ್ಷೆ, ಯಶ್ ನಟನೆ, ಪ್ರಶಾಂತ್ ನೀಲ್ ನಿರ್ದೇಶನ, ಖಡಕ್ ವಿಲನ್ ಆಗಿ ಸಂಜಯ್ ದತ್. ಇಷ್ಟೊಂದು ವಿಶೇಷತೆಗಳೊಂದಿಗೆ ತೆರೆಕಂಡಿದ್ದು ‘ಕೆಜಿಎಫ್ ಚಾಪ್ಟರ್ 2’. ‘ಈ ಸಿನಿಮಾ ಹೇಗಿದೆ?’ ಎಂಬ ಪ್ರಶ್ನೆಗೆ ಈ ವಿಮರ್ಶೆಯಲ್ಲಿದೆ ಉತ್ತರ.
ಸಿನಿಮಾ: ಕೆಜಿಎಫ್ ಚಾಪ್ಟರ್ 2
ಪಾತ್ರವರ್ಗ: ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ರಾವ್ ರಮೇಶ್ ಮುಂತಾದವರು
ನಿರ್ದೇಶನ: ಪ್ರಶಾಂತ್ ನೀಲ್
ನಿರ್ಮಾಣ: ವಿಜಯ್ ಕಿರಗಂದೂರು
ಸ್ಟಾರ್: 4/5
‘ಕೆಜಿಎಫ್’ ಸಿನಿಮಾ ತೆರೆಕಂಡು ಮೂರುವರೆ ವರ್ಷಗಳ ಬಳಿಕ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ತೆರೆಗೆ ಬಂದಿದೆ. ಇದೊಂದು ತಪಸ್ಸು ಎಂಬಂತೆ ಪ್ರಶಾಂತ್ ನೀಲ್ ಅವರು ಸಿನಿಮಾ ಮಾಡಿದ್ದಾರೆ. ಚಾಪ್ಟರ್ ಒಂದರಲ್ಲಿ ನರಾಚಿಗೆ ಎಂಟ್ರಿ ಕೊಡುವ ರಾಕಿ, ಗರುಡನ ಹತ್ಯೆ ಮಾಡಿ ಇಡಿ ಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ. ಒಂದನೇ ಚಾಪ್ಟರ್ ಅಂತ್ಯದಿಂದ, ಎರಡನೇ ಚಾಪ್ಟರ್ ಆರಂಭಗೊಳ್ಳುತ್ತದೆ.
‘ನರಾಚಿ’. ‘ಕೆಜಿಎಫ್’ನಲ್ಲಿ ಇದು ಅಕ್ಷರಶಃ ನರಕವಾಗಿತ್ತು. ಇಲ್ಲಿ ಜನರು ತುತ್ತು ಅನ್ನಕ್ಕೆ ಒದ್ದಾಡುತ್ತಿದ್ದರು. ಉಳಿಯಲು ಸರಿಯಾದ ಜಾಗವಿರಲಿಲ್ಲ. ಹೆಣ್ಣು ಮಗು ಹುಟ್ಟಿದರೆ ಅವಳಿಗೆ ಬದುಕಲು ಅವಕಾಶವೇ ಇರಲಿಲ್ಲ. ಅಲ್ಲಿ ವಾಸ ಮಾಡುವವರ ಪಾಡಂತೂ ಹೇಳ ತೀರದು. ಆದರೆ, ‘ಚಾಪ್ಟರ್ 2’ನಲ್ಲಿ ನರಾಚಿ ಬದಲಾಗಿದೆ. ಒಂದು ನಾಗರೀಕತೆ ಬಂದಿದೆ. ಇಲ್ಲಿ ಉಳಿದುಕೊಳ್ಳುವ ಜನರಿಗೆ ಹೊಟ್ಟೆ ತುಂಬ ಊಟ ಸಿಗುತ್ತಿದೆ. ಉಳಿದುಕೊಳ್ಳಲು ಮನೆ ಸಿಕ್ಕಿದೆ. ಇದಕ್ಕೆಲ್ಲ ಕಾರಣವಾಗಿದ್ದು ರಾಕಿ.
ಗರುಡನನ್ನು ಹತ್ಯೆ ಮಾಡಿದ ನಂತರ ರಾಕಿ (ಯಶ್) ನರಾಚಿಯನ್ನು ವಶಕ್ಕೆ ಪಡೆಯುತ್ತಾನೆ. ಎಲ್ಲರನ್ನು ತನ್ನ ಮುಷ್ಟಿಗೆ ತೆಗೆದುಕೊಳ್ಳುತ್ತಾನೆ. ಅದ್ಯಾವ ಮಟ್ಟಿಗೆ ಎಂದರೆ ದೆಹಲಿ ಸಂಸತ್ತಿನಲ್ಲಿರುವ ಎಂಪಿಗಳು ರಾಕಿ ಭಾಯ್ ಆದೇಶ ಪಾಲಿಸುತ್ತಾರೆ. ಬಹುಮತ ಸಾಬೀತು ಆಗಬೇಕು, ಆಗಬಾರದು ಎಂಬುದು ನಿರ್ಧಾರ ಆಗೋದು ರಾಕಿ ಭಾಯ್ನ ಆಣತಿ ಮೇರೆಗೆ. ಆತ ಎಲ್ಲರಿಗೂ ಒಂದು ಜೀವನ ಕೊಟ್ಟಿದ್ದಾನೆ. ವೈರಿಗಳನ್ನು ಮತ್ತಷ್ಟು ಚಾಕಚಕ್ಯತೆಯಿಂದ ಹ್ಯಾಂಡಲ್ ಮಾಡುತ್ತಾನೆ. ಕೈಗೆ ಬೇಕಾದಷ್ಟು ಚಿನ್ನ, ಗನ್, ಹಣ ಮೂರು ಸಿಗುತ್ತಿದೆ. ಅಧಿಪತ್ಯ ದೊಡ್ಡದಾದಂತೆ ವೈರಿಗಳು ಜಾಸ್ತಿ ಆಗಿದ್ದಾರೆ. ರಾಕಿಯ ಆಸೆಗೆ ಮಿತಿ ಇಲ್ಲ. ಒಂದು ಗೋಡೌನ್ ತುಂಬ ಚಿನ್ನ ಇದ್ದರೂ ರಾಕಿಗೆ ಅದು ಸಾಲುತ್ತಿಲ್ಲ. ರಾಕಿ ಇಷ್ಟೆಲ್ಲ ಮಾಡುತ್ತಿರೋದೇಕೆ? ಇಷ್ಟೆಲ್ಲ ಚಿನ್ನ ಒಟ್ಟು ಮಾಡಿ ಆತ ಮಾಡೋದು ಏನು? ಅಧೀರನನ್ನು (ಸಂಜಯ್ ದತ್) ಆತ ಹೇಗೆ ಎದುರಿಸುತ್ತಾನೆ ಅನ್ನೋದು ‘ಕೆಜಿಎಫ್ 2’ನ ಕಥೆ.
ಯಶ್ ಅಕ್ಷರಶಃ ರಾಕಿಂಗ್ ಸ್ಟಾರ್ ಆಗಿ ಮೆರೆದಿದ್ದಾರೆ. ಇಡೀ ಸಿನಿಮಾದುದ್ದಕ್ಕೂ ರಾಕಿಯದ್ದೇ ಹವಾ. ಮಾಸ್ ಡೈಲಾಗ್, ಹೀರೋನ ಪಾತ್ರಕ್ಕೆ ಬೇಕಿರುವ ಗತ್ತು, ಮೊದಲ ಪಾರ್ಟ್ಗಿಂತ ಎರಡನೇ ಪಾರ್ಟ್ನಲ್ಲಿ ಹೆಚ್ಚಿದೆ. ರಾಕಿ ಯುದ್ಧವನ್ನು ತಪ್ಪಿಸೋಕೆ ನೋಡುವವನು. ಆದರೆ, ಅಪ್ಪಿ ತಪ್ಪಿ ಯುದ್ಧ ನಡೆದರೆ ಗೆಲುವು ಅವನದ್ದೇ. ತಲೆ ಶಾಶ್ವತವಲ್ಲ ಕಿರೀಟಿ ಶಾಶ್ವತ ಎಂದು ಬದುಕುತ್ತಿರುವ ರಾಕಿಗೆ, ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಮಾತು ಅನ್ವಯ ಆಗುವುದಿಲ್ಲ. ಆತ ಏನಿದ್ದರೂ ಹಾಸಿಗೆಯನ್ನೇ ಉದ್ದ ಮಾಡಿ ಮಲಗುವವನು. ಈ ಆಸೆ ದುರಾಸೆಗೆ ತಿರುಗುತ್ತದೆ. ರಾಕಿ ಹೀಗೇಕೆ ಎನ್ನುವ ಪ್ರಶ್ನೆಗೆ ಆತ ಕೊಡೋದು ಒಂದೇ ಉತ್ತರ, ‘ಕೊಟ್ಟ ಮಾತು ಉಳಿಸಿಕೊಳ್ಳೋಕೆ ನಾನು ಸ್ವಾರ್ಥಿ ಆಗೋಕೂ ರೆಡಿ, ಕೊಲೆಗಾರ ಆಗೋಕೂ ಸೈ’. ಯಶ್ ಆ್ಯಕ್ಷನ್ ದೃಶ್ಯಗಳಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಆರಂಭದಲ್ಲೇ ಬರುವ ಕಾರ್ ಚೇಸಿಂಗ್ ದೃಶ್ಯಗಳು ಮೈ ನವಿರೇಳಿಸುತ್ತವೆ. ಪ್ರೀ-ಕ್ಲೈಮ್ಯಾಕ್ಸ್ನ ಒಂದು ದೃಶ್ಯದಲ್ಲಿ ಬರುವ ಕೆಲ ಕ್ಷಣಗಳ ಮೌನ ಪ್ರೇಕ್ಷಕರ ಉಸಿರನ್ನು ಬಿಗಿ ಹಿಡಿಯುವಂತೆ ಮಾಡುತ್ತದೆ.
ಅಧೀರನಾಗಿ ಸಂಜಯ್ ದತ್ ಮೆಚ್ಚುಗೆ ಪಡೆದುಕೊಳ್ಳುತ್ತಾರೆ. ಯಶ್ ಹಾಗೂ ಸಂಜಯ್ ದತ್ ಮುಖಾಮುಖಿ ದೃಶ್ಯಗಳು ಚಿತ್ರದ ರಂಗನ್ನು ಹೆಚ್ಚಿಸಿದೆ. ಆದರೆ, ಸಂಜಯ್ ದತ್ ಪಾತ್ರಕ್ಕೆ ಇನ್ನೂ ಹೆಚ್ಚಿನದ್ದು ಏನೋ ಬೇಕಿತ್ತು ಅನಿಸುತ್ತದೆ. ‘ಕೆಜಿಎಫ್’ನಲ್ಲಿ ತಾಯಿ ಸೆಂಟಿಮೆಂಟ್ ಹೈಲೈಟ್ ಆಗಿತ್ತು. ಎರಡನೇ ಪಾರ್ಟ್ನಲ್ಲೂ ತಾಯಿ ಸೆಂಟಿಮೆಂಟ್ ಹೈಲೈಟ್ ಆಗಿದೆ. ರಮಿಕಾ ಸೇನ್ ಆಗಿ ರವೀನಾ ಟಂಡನ್ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಶ್ರೀನಿಧಿ ಶೆಟ್ಟಿ, ರಾವ್ ರಮೇಶ್, ಮಾಳವಿಕಾ ಸೇರಿ ಎಲ್ಲರೂ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನಂತ್ ನಾಗ್ ಬದಲು ಪ್ರಕಾಶ್ ರಾಜ್ ಅವರು ಇಡೀ ಕಥೆಯನ್ನು ನರೇಟ್ ಮಾಡುತ್ತಾರೆ. ಅವರನ್ನು ಚಿತ್ರದಲ್ಲಿ ಕರೆತರಲು ನಿರ್ದೇಶಕರು ಬಳಸಿದ ಜಾಣ್ಮೆಯನ್ನು ಮೆಚ್ಚಲೇ ಬೇಕು. ಶ್ರೀನಿಧಿ ಶೆಟ್ಟಿ ಅವರು ಹೆಚ್ಚು ಹೊತ್ತು ಕಾಣಿಸಿಕೊಳ್ಳುತ್ತಾರೆ. ಅಚ್ಯುತ್ ಕುಮಾರ್ ಪಾತ್ರಕ್ಕೆ ಹೆಚ್ಚು ತೂಕವಿದೆ.
ಕೆಜಿಎಫ್ 2ನಲ್ಲಿ ಅದ್ದೂರಿತನ ಹೆಚ್ಚೇ ಇದೆ. ಪ್ರಶಾಂತ್ ನೀಲ್ ಅವರು ಸಣ್ಣಸಣ್ಣ ವಿಚಾರಕ್ಕೂ ಹೆಚ್ಚು ಒತ್ತುಕೊಟ್ಟು ಸಿನಿಮಾವನ್ನು ಸುಂದರ ಮೂರ್ತಿಯನ್ನಾಗಿ ಮಾಡಿದ್ದಾರೆ. ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರ್ ಹಿನ್ನೆಲೆ ಸಂಗೀತ, ಶಿವಕುಮಾರ್ ಅವರ ಕಲಾ ನಿರ್ದೇಶನ ಚಿತ್ರದ ಮೆರುಗನ್ನು ಹೆಚ್ಚಿಸಿದ್ದಾರೆ. ಆದರೆ, ಕೆಲವ ಕೊರೆತೆಗಳು ಇದ್ದೇ ಇದೆ. ಆದರೆ, ಗುಂಡಿನ ಮೊರೆತಗಳು ಕೊಂಚ ಹೆಚ್ಚೇ ಇದ್ದು, ಇದು ಸ್ವಲ್ಪ ಅತಿಯಾಯಿತು ಎನಿಸಬಹುದು. ಕೆಲವು ಕಡೆಗಳಲ್ಲಿ ಲಾಜಿಕ್ ಮಿಸ್ ಆಗಿದೆ. ಅಧೀರನ ಪಾತ್ರಕ್ಕೆ ಇನ್ನಷ್ಟು ಜೀವಂತಿಕೆ ತುಂಬಲು ನಿರ್ದೇಶಕರು ಪ್ರಯತ್ನಿಸಬಹುದಿತ್ತು. ಅಂದಹಾಗೆ, ಸಿನಿಮಾ ಕೊನೆಯಲ್ಲಿ ಬರುವ ಒಂದು ದೃಶ್ಯ ‘ಕೆಜಿಎಫ್ 3’ ಬರುತ್ತಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕದೆ ಇರದು.
ಇದನ್ನೂ ಓದಿ: KGF Chapter 2 First Half Review: ಹೇಗಿದೆ ‘ಕೆಜಿಎಫ್ ಚಾಪ್ಟರ್ 2’ ಮೊದಲಾರ್ಧ? ಅಬ್ಬರಿಸಿದ ಯಶ್
Published On - 8:34 am, Thu, 14 April 22