
ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ನಲ್ಲಿ ಈ ಮೊದಲು ‘ಮ್ಯಾಕ್ಸ್’ ಸಿನಿಮಾ ಬಂದಿತ್ತು. ಈಗ ಅದೇ ಕಾಂಬಿನೇಷನ್ನಲ್ಲಿ ‘ಮಾರ್ಕ್’ ಸಿನಿಮಾ (Mark Movie) ಮಾಡಲಾಗಿದೆ. ಡಿಸೆಂಬರ್ 25ರಂದು ಬಿಡುಗಡೆ ಆಗಿರುವ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇತ್ತು. ಹಾಗಾದರೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ‘ಮಾರ್ಕ್’ ಚಿತ್ರ ಮೂಡಿಬಂದಿದೆಯಾ? ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಯಾವ ರೀತಿಯ ಮನರಂಜನೆ ಸಿಗಲಿದೆ? ಈ ವಿಮರ್ಶೆಯಲ್ಲಿದೆ ಉತ್ತರ..
‘ಮಾರ್ಕ್’ ಸಿನಿಮಾದ ಟ್ರೇಲರ್ ಬಿಡುಗಡೆ ಆದಾಗ ಈ ಚಿತ್ರದ ಕಥೆ ಏನು ಎಂಬ ಬಗ್ಗೆ ಸುಳಿವು ಸಿಕ್ಕಿತ್ತು. ಈ ಬಾರಿ ಕೂಡ ಕಿಚ್ಚ ಸುದೀಪ್ ಮತ್ತು ಡೈರೆಕ್ಟರ್ ವಿಜಯ್ ಕಾರ್ತಿಕೇಯ ಅವರು ‘ಮ್ಯಾಕ್ಸ್’ ರೀತಿಯ ಸಿನಿಮಾವನ್ನೇ ಮಾಡಿರಬಹುದು ಎಂಬ ಅಭಿಪ್ರಾಯ ಮೂಡಿತ್ತು. ಅದು ನಿಜವಾಗಿದೆ. ‘ಮಾರ್ಕ್’ ಕೂಡ ‘ಮ್ಯಾಕ್ಸ್’ ರೀತಿಯೇ ಇದೆ. ಆರಂಭದಿಂದ ಕೊನೇ ತನಕ ಎರಡೂ ಸಿನಿಮಾಗಳ ನಡುವೆ ಸಾಮ್ಯತೆ ಕಾಣುತ್ತದೆ.
ನೀವು ‘ಮ್ಯಾಕ್ಸ್’ ನೋಡಿ ಇಷ್ಟಪಟ್ಟ ಪ್ರೇಕ್ಷಕರಾಗಿದ್ದರೆ ನಿಮಗೆ ‘ಮಾರ್ಕ್’ ಕೂಡ ಇಷ್ಟ ಆಗುತ್ತದೆ. ಬಹುತೇಕ ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯನ್ನು ‘ಮ್ಯಾಕ್ಸ್’ ಚಿತ್ರದಲ್ಲಿ ತೋರಿಸಲಾಗಿತ್ತು. ಈಗ ಒಂದೂವರೆ ದಿನದಲ್ಲಿ ನಡೆಯುವ ಕಥೆಯನ್ನು ‘ಮಾರ್ಕ್’ ಸಿನಿಮಾ ತೆರೆದಿಟ್ಟಿದೆ. ಕಲಾವಿದರು ಬೇರೆ ಆದರೂ ಬಹುತೇಕ ಅದೇ ತಂತ್ರಜ್ಞರು ಎರಡೂ ಸಿನಿಮಾಗೆ ಕೆಲಸ ಮಾಡಿರುವುದರಿಂದ ಒಂದೇ ರೀತಿಯ ಫೀಲ್ ಮುಂದುವರಿದಿದೆ.
‘ಮಾರ್ಕ್’ ಮತ್ತು ‘ಮ್ಯಾಕ್ಸ್’ ಸಿನಿಮಾಗಳಿಗೆ ಹೋಲಿಸಿದರೆ ‘ಮಾರ್ಕ್’ ಕಥೆ ಹೊಸದಾಗಿದೆ. ಆದರೆ ಪ್ಯಾಟರ್ನ್ ಒಂದೇ ರೀತಿ ಇದೆ. ಡ್ರಗ್ಸ್ ಮಾಫಿಯಾ, ರಾಜಕೀಯದ ಪಿತೂರಿ ಹಾಗೂ ಮಕ್ಕಳ ಅಪಹರಣದ ಗ್ಯಾಂಗ್. ಈ ಮೂರು ಅಂಶಗಳು ಪೊಲೀಸ್ ಇಲಾಖೆಗೆ ಸವಾಲಾಗುತ್ತದೆ. ಅದನ್ನು ಎದುರಿಸಲು ಕಥಾನಾಯಕನಿಗೆ ಕೆಲವೇ ಗಂಟೆಗಳ ಸಮಯ ಇರುತ್ತದೆ. ಅಂತಿಮವಾಗಿ ಅವನು ದುಷ್ಟರ ವಿರುದ್ಧ ಹೇಗೆಲ್ಲ ಹೋರಾಡುತ್ತಾನೆ? ಒಳ್ಳೆಯವರನ್ನು ಹೇಗೆ ಕಾಪಾಡುತ್ತಾನೆ ಎಂಬುದೇ ‘ಮಾರ್ಕ್’ ಕಥೆಯ ಸಾರಾಂಶ.
ಕಿಚ್ಚ ಸುದೀಪ್ ಅವರು ‘ಮಾರ್ಕ್’ ಸಿನಿಮಾದಲ್ಲಿ ಸಂಪೂರ್ಣ ಮಾಸ್ ಅವತಾರ ತಾಳಿದ್ದಾರೆ. ಅವರ ಗೆಟಪ್ ಬದಲಾಗಿದೆ. ಸಸ್ಪೆಂಡ್ ಆಗಿರುವ ಪೊಲೀಸ್ ಅಧಿಕಾರಿಯ ಪಾತ್ರವನ್ನು ಅವರು ಮಾಡಿದ್ದಾರೆ. ಆ ಪಾತ್ರಕ್ಕೆ ತನ್ನದೇ ಆದ ಇತಿಮಿತಿಗಳಿವೆ. ಅವುಗಳ ನಡುವೆ ಸುದೀಪ್ ಅವರು ಚೆನ್ನಾಗಿ ಅಭಿನಯಿಸಿದ್ದಾರೆ. ಹೊಡಿಬಡಿ ದೃಶ್ಯಗಳಿಂದ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಅಲ್ಲಲ್ಲಿ ಮಾಸ್ ಡೈಲಾಗ್ ಹೇಳುತ್ತಾ ಅಬ್ಬರಿಸಿದ್ದಾರೆ.
‘ಮಾರ್ಕ್’ ಸಿನಿಮಾದಲ್ಲಿ ಕಲಾವಿದರ ದಂಡು ಇದೆ. ಸುದೀಪ್ ಜೊತೆ ಗೋಪಾಲಕೃಷ್ಣ ದೇಶಪಾಂಡೆ, ರೋಶಿನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಪ್ರತಾಪ್ ನಾರಾಯಣ್, ಅಶ್ವಿನ್ ಹಾಸನ್ ಮುಂತಾದವರು ಅಭಿನಯಿಸಿದ್ದಾರೆ. ವಿಲನ್ ಗ್ಯಾಂಗ್ನಲ್ಲಿ ನವೀನ್ ಚಂದ್ರ, ಗುರು ಸೋಮಸುಂದರಂ, ವಿಕ್ರಾಂತ್, ಯೋಗಿ ಬಾಬು, ಶೈನ್ ಟಾಮ್ ಚಾಕೋ ಮುಂತಾದ ಕಲಾವಿದರು ನಟಿಸಿದ್ದಾರೆ. ಎಲ್ಲ ಪಾತ್ರಗಳು ಗಮನ ಸೆಳೆಯುವಂತಿವೆ.
ತಾಂತ್ರಿಕವಾಗಿ ‘ಮಾರ್ಕ್’ ಚೆನ್ನಾಗಿದೆ. ಕಲಾ ನಿರ್ದೇಶಕ ಶಿವಕುಮಾರ್ ಅವರ ಕೆಲಸ ಎದ್ದು ಕಾಣುತ್ತದೆ. ಸಂಗೀತ ನಿರ್ದೇಶನ ಅಜನೀಶ್ ಲೋಕನಾಥ್ ಅವರು ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತದಿಂದಲೂ ಸಿನಿಮಾದ ಮೆರುಗು ಹೆಚ್ಚಿಸಲು ಸಾತ್ ನೀಡಿದ್ದಾರೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಕೂಡ ಗಮನ ಸೆಳೆಯುತ್ತದೆ.
ಕಾಮಿಡಿ, ರೊಮ್ಯಾನ್ಸ್ ಇತ್ಯಾದಿ ಅಂಶಗಳು ಈ ಸಿನಿಮಾದಲ್ಲಿ ಇಲ್ಲ. ಹಾಗಾಗಿ ಎಲ್ಲಿಯೂ ಸಮಯ ವ್ಯರ್ಥ ಮಾಡದೇ ಕಥೆ ಪಟಪಟನೆ ಸಾಗುವಂತೆ ನೋಡಿಕೊಂಡಿದ್ದಾರೆ ನಿರ್ದೇಶಕ ವಿಜಯ್ ಕಾರ್ತಿಕೇಯ. ಅದು ಈ ಸಿನಿಮಾಗೆ ಪ್ಲಸ್ ಆಗಿದೆ. ಅನೇಕ ಕಡೆಗಳಲ್ಲಿ ಲಾಜಿಕ್ ಇಲ್ಲದಿದ್ದರೂ ಕೂಡ ಆ ಬಗ್ಗೆ ಆಲೋಚಿಸಲು ಪ್ರೇಕ್ಷಕರಿಗೆ ಸಮಯವನ್ನೇ ನೀಡದಂತೆ ಕಥೆ ಮುಂದೆ ಸಾಗುತ್ತದೆ. ಮುಂದೇನು ಎಂಬ ಕುತೂಹಲವನ್ನು ಪ್ರತಿ ದೃಶ್ಯದಲ್ಲೂ ಮೂಡಿಸುವ ಗುಣ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಈ ವಾರ ಅಖಾಡಕ್ಕೆ ‘ಮಾರ್ಕ್’, ‘45’: ಇನ್ನೂ ಕಡಿಮೆ ಆಗುತ್ತಾ ‘ದಿ ಡೆವಿಲ್’ ಕಲೆಕ್ಷನ್?
ಒಂದಷ್ಟು ಮೈನಸ್ ಅಂಶಗಳು ಕೂಡ ‘ಮಾರ್ಕ್’ ಸಿನಿಮಾದಲ್ಲಿವೆ. ಒಟ್ಟಾರೆ ಕಥೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಡುವಂತಹ ಎಮೋಷನ್ ಮಿಸ್ ಆಗಿದೆ ಎನಿಸುತ್ತದೆ. ಸೂಪರ್ ಹೀರೋ ರೀತಿಯಲ್ಲಿ ಕಥಾನಾಯಕನ ಪಾತ್ರವನ್ನು ತೋರಿಸಲಾಗಿದೆ. ಅದರಿಂದಾಗಿ ನೈಜತೆಯ ಫೀಲ್ ಕಾಣೆಯಾಗಿದೆ. ‘ಮ್ಯಾಕ್ಸ್’ ಚಿತ್ರಕ್ಕಿಂತಲೂ ಏನೋ ಭಿನ್ನವಾಗಿದ್ದು ಬೇಕು ಎಂದು ಬಯಸುವ ಅಭಿಮಾನಿಗಳಿಗೆ ‘ಮಾರ್ಕ್’ ಕೊಂಚ ನಿರಾಸೆ ಮಾಡಬಹುದು. ಆದರೆ ಅಪ್ಪಟ ಸುದೀಪ್ ಅಭಿಮಾನಿಗಳಿಗೆ ಈ ಸಿನಿಮಾ ಖಂಡಿತ ಇಷ್ಟ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:58 am, Thu, 25 December 25