Kothalavadi Movie Review: ‘ಕೊತ್ತಲವಾಡಿ’; ಅಪೂರ್ಣತೆಯ ಮಧ್ಯೆ ಹರಿಯುವ ಕಣ್ಣೀರ ಕೋಡಿ

- Time - 144 Minutes
- Released - ಆಗಸ್ಟ್ 1, 2025
- Language - ಕನ್ನಡ
- Genre - Action, Drama
ಯಶ್ ಅವರು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆ ಕೂಡ ಹೊಂದಿದ್ದಾರೆ. ಅವರ ತಂದೆ ಅರುಣ್ ಹಾಗೂ ತಾಯಿ ಪುಷ್ಪ ಕೂಡ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇವರು ನಿರ್ಮಾಣ ಮಾಡಿರೋ ಚೊಚ್ಚಲ ಸಿನಿಮಾ ‘ಕೊತ್ತಲವಾಡಿ’ ಇಂದು (ಆಗಸ್ಟ್ 1) ರಿಲೀಸ್ ಆಗಿದೆ. ಸಿನಿಮಾ ಹೇಗಿದೆ ಎಂಬುದರ ವಿಮರ್ಶೆ ಟಿವಿ9 ಕನ್ನಡ ಡಿಜಿಟಲ್ನಲ್ಲಿ.
‘ಕೊತ್ತಲವಾಡಿ’ ಹೆಸರಿನ ಗ್ರಾಮ ಹಚ್ಚ ಹಸಿರಿನ ಮಧ್ಯೆ ಹುದುಗಿ ಹೋಗಿದೆ. ಇದರ ಸಮೀಪವೇ ಕಾವೇರಿ ನದಿ ಹಾದು ಹೋಗಿದೆ. ಆ ಹಳ್ಳಿಗೂ ನದಿಗೂ ಅವಿನಾಭಾವ ಸಂಬಂಧ. ಈ ಊರಿನಲ್ಲಿ ಗುಜುರಿ ಬಾಬು (ಗೋಪಾಲ್ ದೇಶಪಾಂಡೆ) ಗುಜುರಿ ಆಯ್ದುಕೊಂಡು ಜೀವನ ಮಾಡುತ್ತಿರುತ್ತಾನೆ. ಎಲ್ಲರೂ ಕಸದಿಂದ ರಸ ತೆಗೆದರೆ ಈತ ರಾಮರಸ ತೆಗೆಯುವಷ್ಟು ಚಾಲಾಕಿ. ಕಥಾ ನಾಯಕ ಮೋಹನ (ಪೃಥ್ವಿ ಅಂಬರ್) ಕೆಲಸಕ್ಕೆ ಜರನ್ನು ಒಟ್ಟು ಮಾಡಿ ಕಳಿಸೋ ಕಾಯಕ ಮಾಡುತ್ತಾನೆ. ಇಬ್ಬರ ಮಧ್ಯೆ ಅವಿನಾಭಾವ ಸಂಬಂಧ ಬೆರೆತಿರುತ್ತದೆ. ಈ ಊರಿಗೆ ಒಂದು ಸಮಸ್ಯೆ ಎದುರಾಗುತ್ತದೆ. ಎಲ್ಲರೂ ಕಣ್ಣೀರಿನಲ್ಲಿ ಕೈ ತೊಳಿಯೋ ಪರಿಸ್ಥಿತಿ ಬರುತ್ತದೆ. ಆ ಸಮಸ್ಯೆಯನ್ನು ಎದುರಿಸಲು ಹೋದಾಗ ಕಥೆ ನಾನಾ ತಿರುವು ಪಡೆದುಕೊಳ್ಳುತ್ತದೆ. ನಂತರ ಏನಾಗುತ್ತದೆ, ಆ ಊರು ಹೇಗೆ ಕಾಪಾಡಲ್ಪಡುತ್ತದೆ ಎಂಬುದೇ ಚಿತ್ರದ ಕಥೆ.
‘ಕೊತ್ತಲವಾಡಿ’ ಸಿನಿಮಾದಲ್ಲಿ ಪೃಥ್ವಿ ಅಂಬರ್ ಹೀರೋ ಆದರೂ ಇಡೀ ಚಿತ್ರವನ್ನು ಆವರಿಸಿಕೊಳ್ಳೋದು ಗೋಪಾಲ ಕೃಷ್ಣ ದೇಶಪಾಂಡೆ. ಅವರ ಮಾಗಿದ ನಟನೆ ಎಲ್ಲರಿಗೂ ಇಷ್ಟ ಆಗುತ್ತದೆ. ಜನ ಸೇವಕನಾಗಿ, ಕುತಂತ್ರಿಯಾಗಿ, ಅಣ್ಣನಾಗಿ, ಸಮಯ ಸಾಧಕನಾಗಿ ಹಲವು ಶೇಡ್ಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರಿಂದ ಚಿತ್ರದ ತೂಕ ಹೆಚ್ಚಿದೆ. ಪೃಥ್ವಿ ಅಂಬರ್ ಅವರು ಕೂಡ ತಮಗೆ ಕೊಟ್ಟ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ರೊಮ್ಯಾಂಟಿಕ್ ಹೀರೋ ಆಗಿ ಮಿಂಚಿದ್ದ ಅವರು, ಈ ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳಲ್ಲಿ ಮೆಚ್ಚುಗೆ ಪಡೆಯುತ್ತಾರೆ. ಕಾವ್ಯ ಶೈವ ನಾಯಕಿಯಾಗಿ, ರಾಜೇಶ್ ನಟನರಂಗ ಅವರು ಪೊಲೀಸ್ ಅಧಿಕಾರಿಯಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಬಾಲ ರಾಜ್ವಾಡಿ, ಅವಿನಾಶ್ ಪಾತ್ರಗಳು ಕೆಲವೇ ದೃಶ್ಯಗಳಿಗೆ ಸೀಮಿತ ಆಗಿವೆ.
ನಿರ್ದೇಶಕ ಶ್ರೀ ರಾಜು ಅವರಿಗೆ ‘ಕೊತ್ತಲವಾಡಿ’ ಎರಡನೇ ಅನುಭವ. ಇದು ತೆರೆಮೇಲೆ ಪ್ರತಿ ಹಂತದಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ. ಚಿತ್ರಕಥೆ ಹಾಗೂ ನಿರೂಪಣೆಯಲ್ಲಿ ಜಾಳುತನ ಎದ್ದು ಕಾಣಿಸುತ್ತದೆ. ಇದನ್ನು ಮತ್ತಷ್ಟು ಬಿಗಿ ಮಾಡಿದ್ದರೆ ಸಿನಿಮಾ ಮತ್ತಷ್ಟು ಸುಂದರವಾಗಿ ಕಾಣಿಸುತ್ತಿತ್ತು. ಕಥಾ ನಾಯಕ ಹಾಗೂ ನಾಯಕಿಯ ಲವ್ ಸ್ಟೋರಿಯಲ್ಲಿ ಇನ್ನಷ್ಟು ಗಾಢತೆ ಬೇಕಿತ್ತು.
ವಿಧಾನಸಭೆ ಚುನಾವಣೆ ನಡೆಯುವ ರೀತಿ, ಮತ ಎಣಿಕೆ, ಶಾಸಕನಾದವನು ಇರೋ ರೀತಿ, ಪೊಲೀಸ್ ವ್ಯವಸ್ಥೆಯನ್ನು ತೀರಾ ಸಿಲ್ಲಿಯಾಗಿ ತೋರಿಸಲಾಗಿದೆ. ಇಲ್ಲಿ ನಿರ್ದೇಶಕರು ಹೆಚ್ಚಿನ ಗಮನ ಹರಿಸಬೇಕಿತ್ತು. ಕಥೆ ಫ್ಲ್ಯಾಶ್ಬ್ಯಾಕ್ನಲ್ಲಿ ಸಾಗುತ್ತಿದೆಯೇ ಅಥವಾ ಪ್ರಸ್ತುತದಲ್ಲಿ ನಡೆಯುತ್ತಿದೆಯೇ ಎಂಬ ಗೊಂದಲ ಮೂಡಿಸುವಂತಿದೆ ದೃಶ್ಯಗಳ ಕಾಂಬಿನೇಷನ್. ಸಿನಿಮಾ ಮೂಲಕ ಏನನ್ನು ಹೇಳ ಹೊರಟಿದ್ದೇನೆ ಎಂಬುದರ ಸ್ಪಷ್ಟತೆ ನಿರ್ದೇಶಕರಿಗೆ ಇರಬೇಕಿತ್ತು. ಇಲ್ಲಿ ಕೆಲ ಹೊತ್ತು ಪ್ರಕೃತಿ ಉಳುವಿನ ಬಗ್ಗೆ ಹೇಳಿದರೆ, ಇನ್ನೂ ಸ್ವಲ್ಪ ಹೊತ್ತು ರಾಜಕೀಯದ ಹೊಲಸುಗಳು ಬಗ್ಗೆ ನಿರ್ದೇಶಕರು ಹೇಳುತ್ತಾರೆ. ಆದರೆ, ಯಾವುದನ್ನೂ ಪೂರ್ಣಗೊಳಿಸಿಲ್ಲ.
ಸಿನಿಮಾ ಹಾಡುಗಳಲ್ಲಿ, ಡ್ಯಾನ್ಸ್ ವಿಚಾರದಲ್ಲಿ ಹಳೆಯ ಶೈಲಿಯನ್ನು ಫಾಲೋ ಮಾಡಲಾಗಿದೆ. ಹಳ್ಳಿ ಭಾಷಾ ಸೊಗಡು ಕೂಡ ಇಲ್ಲಿ ಸರಿಯಾದ ರೀತಿಯಲ್ಲಿ ಬಳಕೆ ಆಗಿಲ್ಲ. ರಘು ನಿಡುವಳ್ಳಿ ಬರೆದ ಸಂಭಾಷಣೆ ಕಥೆಯನ್ನೂ ಮೀರಿದ ತೂಕ ಪಡೆದುಕೊಳ್ಳುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:02 am, Fri, 1 August 25




