
ಚಿತ್ರ:ಲವ್ ಮಾಕ್ಟೇಲ್ 2
ನಿರ್ಮಾಣ: ಮಿಲನಾ ನಾಗರಾಜ್
ನಿರ್ದೇಶನ: ಡಾರ್ಲಿಂಗ್ ಕೃಷ್ಣ
ಪಾತ್ರವರ್ಗ: ಡಾರ್ಲಿಂಗ್ ಕೃಷ್ಣ, ರೇಚಲ್ ಡೇವಿಡ್, ಮಿಲನಾ ನಾಗರಾಜ್, ಖುಷಿ, ರಚನಾ ಇಂದರ್, ಅಭಿಲಾಷ್ ಮುಂತಾದವರು.
ಸ್ಟಾರ್: 3.5 / 5
ಚಿತ್ರರಂಗದಲ್ಲಿ ‘ಪಾರ್ಟ್ 2’ ಸಿನಿಮಾಗಳು ಸಾಕಷ್ಟು ಬಂದಿವೆ. ಅವುಗಳಲ್ಲಿ ಕೆಲವು ಸಿನಿಮಾಗಳು ಕೇವಲ ಶೀರ್ಷಿಕೆ ಜೊತೆ ‘ಭಾಗ-2’ ಎಂಬುದನ್ನು ಇಟ್ಟುಕೊಂಡು ಸಂಬಂಧವೇ ಇಲ್ಲದ ಬೇರೆ ಕಥೆಯನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತವೆ. ಮೊದಲ ಪಾರ್ಟ್ನಲ್ಲಿ ಇದ್ದ ಕಥೆಯನ್ನೇ 2ನೇ ಪಾರ್ಟ್ನಲ್ಲಿ ಮುಂದುವರಿಸಿದರೆ ಆಗ ಸೀಕ್ವೆಲ್ ಎಂಬುದಕ್ಕೆ ಅರ್ಥ ಸಿಕ್ಕಂತಾಗುತ್ತದೆ. ಸದ್ಯ ಕನ್ನಡದಲ್ಲಿ ರಿಲೀಸ್ ಆಗಿರುವ ‘ಲವ್ ಮಾಕ್ಟೇಲ್ 2’ (Love Mocktail 2) ಸಿನಿಮಾ ಕೂಡ ಸೀಕ್ವೆಲ್ ಎಂಬ ಕಾರಣಕ್ಕೆ ಹೆಚ್ಚು ಹೈಪ್ ಸೃಷ್ಟಿಸಿದೆ. ಮೊದಲನೇ ಪಾರ್ಟ್ನಲ್ಲಿ ಇದ್ದ ಬಹುತೇಕ ಎಲ್ಲ ಪಾತ್ರಗಳು ಈಗ ಎರಡನೇ ಪಾರ್ಟ್ನಲ್ಲಿ ಮುಂದುವರಿದಿವೆ. ಕಥೆಯನ್ನು ಕೂಡ ನಿರ್ದೇಶಕ ಡಾರ್ಲಿಂಗ್ ಕೃಷ್ಣ (Darling Krishna) ಅವರು ಅಚ್ಚುಕಟ್ಟಾಗಿ ಮುಂದುವರಿಸಿದ್ದಾರೆ. ಹಾಗಾದರೆ ಒಟ್ಟಾರೆಯಾಗಿ ‘ಲವ್ ಮಾಕ್ಟೇಲ್ 2’ ಸಿನಿಮಾ ಹೇಗಿದೆ? ಮಿಲನಾ ನಾಗರಾಜ್ (Milana Nagaraj) ನಿರ್ಮಾಣ ಮಾಡಿರುವ ಈ ಚಿತ್ರದ ಪ್ಲಸ್ ಏನು? ಮೈನಸ್ ಏನು? ಯಾರ ಅಭಿನಯ ಹೇಗಿದೆ? ಈ ಎಲ್ಲ ಕೌತುಕದ ಪ್ರಶ್ನೆಗೆ ಈ ವಿಮರ್ಶೆಯಲ್ಲಿದೆ ಉತ್ತರ.
‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ನಿಧಿಮಾ (ಮಿಲನಾ ನಾಗರಾಜ್) ನಿಧನದ ನಂತರ ಆದಿ (ಡಾರ್ಲಿಂಗ್ ಕೃಷ್ಣ) ಒಂಟಿಯಾಗುತ್ತಾನೆ. ಆ ರೀತಿಯ ಸ್ಯಾಡ್ ಎಂಡಿಂಗ್ ನೋಡಿದವರು ‘ಅಯ್ಯೋ ಕಥೆ ಮುಗಿಯಿತಲ್ಲ’ ಅಂತ ಭಾವುಕತೆ ವ್ಯಕ್ತಪಡಿಸಿದ್ದರು. ಅಂಥ ಮುಗಿದ ಕಥೆಗೆ ‘ಲವ್ ಮಾಕ್ಟೇಲ್ 2’ ಸಿನಿಮಾ ಮೂಲಕ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮರುಜೀವ ನೀಡಿದ್ದಾರೆ.
ಆದಿಗೆ ಮರುಮದುವೆ?
ಪತ್ನಿಯನ್ನು ಕಳೆದುಕೊಂಡು ಡಿಪ್ರೆಷನ್ಗೆ ಹೋಗಿರುವ ಆದಿಗೆ ಈಗ ಮರುಮದುವೆಯ ತಯಾರಿ ನಡೆಯುತ್ತಿದೆ. ಈ ಅಂಶವನ್ನು ನಿರ್ದೇಶಕರು ಟ್ರೇಲರ್ನಲ್ಲೇ ಬಿಟ್ಟುಕೊಟ್ಟಿದ್ದರು. ಈ ಮರುಮದುವೆಗೆ ಇರುವ ಸಮಸ್ಯೆಗಳೇನು? ಆದಿಗೆ ಸೂಕ್ತವಾಗುವಂತಹ ಹುಡುಗಿ ಯಾರು? ಕಡೆಗೂ ಆದಿ ಎರಡನೇ ಮದುವೆ ಆಗುತ್ತಾನಾ? ಇಂಥ ಹಲವು ಕುತೂಹಲದ ಪ್ರಶ್ನೆಗಳಿಗೆ ಹಂತಹಂತವಾಗಿ ಉತ್ತರ ನೀಡುತ್ತ ಸಾಗುತ್ತದೆ ‘ಲವ್ ಮಾಕ್ಟೇಲ್ 2’ ಚಿತ್ರದ ಕಥೆ.
ನಿಧಿಮಾ ಅಭಿಮಾನಿಗಳಿಗೆ ಗುಡ್ ನ್ಯೂಸ್:
ನಿಧಿಮಾ ಪಾತ್ರವನ್ನು ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ತುಂಬ ಚೆನ್ನಾಗಿ ಕಟ್ಟಿಕೊಡಲಾಗಿತ್ತು. ಆ ಪಾತ್ರ ಇಲ್ಲದೇ ‘ಲವ್ ಮಾಕ್ಟೇಲ್ 2’ ನೋಡೋದು ಹೇಗೆ ಎಂದು ಕೆಲವು ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದಿರಬಹುದು. ಆದರೆ ಆ ವಿಚಾರದಲ್ಲಿ ಕೃಷ್ಣ ಒಂದು ಸರ್ಪ್ರೈಸ್ ನೀಡಿದ್ದಾರೆ. ಸೀಕ್ವೆಲ್ನಲ್ಲಿಯೂ ನಿಧಿಮಾ ಪಾತ್ರವನ್ನು ಅವರು ತೆರೆಗೆ ತಂದಿದ್ದಾರೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ಸವಿಯಬೇಕು. ನಿಧಿ ಪಾತ್ರಕ್ಕೆ ಮರುಜೀವ ನೀಡಲು ಕೃಷ್ಣ ತೋರಿಸಿರುವ ಬುದ್ಧಿವಂತಿಕೆ ಚೆನ್ನಾಗಿದೆ.
ನಗುವಿಗೆ ಕೊರತೆ ಇಲ್ಲ:
ಕಚಗುಳಿ ಇಡುವ ಡೈಲಾಗ್ಗಳ ಮೂಲಕ ನಗಿಸುವುದು ‘ಲವ್ ಮಾಕ್ಟೇಲ್’ ಸಿನಿಮಾದ ಟ್ರೇಡ್ಮಾರ್ಕ್. ಸೀಕ್ವೆಲ್ನಲ್ಲಿಯೂ ಆ ಗುಣವನ್ನು ಕಾಯ್ದುಕೊಳ್ಳಲಾಗಿದೆ. ಮುದ್ದಿನ ಹೆಂಡತಿಯನ್ನು ಕಳೆದುಕೊಂಡು ನೋವಿನಲ್ಲಿ ಮುಳುಗಿರುವ ಆದಿ ಬದುಕಿನ ಕಥೆಯನ್ನು ನೋಡಲು ಬರುವ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸುವುದು ಹೇಗೆ? ಇದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ಕೃಷ್ಣ ಅವರು ತುಂಬ ಚೆನ್ನಾಗಿ ನಿಭಾಯಿಸಿದ್ದಾರೆ. ಅದಕ್ಕಾಗಿ ಅವರು ಕೆಲವು ತಂತ್ರಗಾರಿಕೆಯನ್ನು ಬಳಸಿಕೊಂಡಿದ್ದಾರೆ.
‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ತುಂಬ ಚಿಕ್ಕದು ಎನಿಸಿಕೊಂಡಿದ್ದ ಅಂಶಗಳೆಲ್ಲ ‘ಲವ್ ಮಾಕ್ಟೇಲ್ 2’ ಚಿತ್ರದಲ್ಲಿ ದೊಡ್ಡದಾಗಿ ಕಾಣಿಸಿಕೊಂಡಿವೆ. ಅಂಥ ಬೆಸುಗೆಯನ್ನು ಸಾಧ್ಯವಾಗಿಸಲು ಕೃಷ್ಣ ತುಂಬ ಹೋಮ್ವರ್ಕ್ ಮಾಡಿದ್ದಾರೆ. ಅದು ಅವರಿಗೆ ಫಲ ನೀಡಿದೆ. ಈ ಬಾರಿ ಕೂಡ ಅವರು ಕಚಗುಳಿ ಇಡುವಂತಹ ಡೈಲಾಗ್ಗಳ ಮೂಲಕ ಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಪ್ರೇಕ್ಷಕರ ನಾಡಿ ಮಿಡಿತವನ್ನು ಅರಿತು ಅವರು ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
ಆದಿ ಜೊತೆ ಭಾವನಾತ್ಮಕ ಪಯಣ:
ಕೃಷ್ಣ ಅವರು ಈ ಸಿನಿಮಾದ ಪ್ರತಿ ದೃಶ್ಯದಲ್ಲೂ ಭಾವನೆಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಎಮೋಷನಲ್ ಆಗಿ ಸಾಗುವ ಕಥೆ ಮರುಕ್ಷಣವೇ ಹಾಸ್ಯದ ಹೊಳೆ ಹರಿಸುತ್ತೆ. ಹಾಸ್ಯ ಮುನ್ನೆಲೆಗೆ ಬರುತ್ತಿರುವಾಗಲೇ ಮತ್ತೆ ಭಾವುಕತೆ ತೀವ್ರವಾಗುತ್ತದೆ. ಹೀಗೆ ಪ್ರೇಕ್ಷಕರಿಗೆ ಅವರು ಒಂದು ಭಾವನಾತ್ಮಕವಾದ ಚಿತ್ರಣವನ್ನು ಪರಿಚಯಿಸಿದ್ದಾರೆ.
ಎಲ್ಲ ಪಾತ್ರಗಳಿಗೂ ಸಿಕ್ಕಿದೆ ಮಹತ್ವ:
ಸುಷ್ಮಾ-ವಿಜಯ್ ಎಂಬೆರಡು ಪಾತ್ರಗಳನ್ನು ಮಾಡಿರುವ ಖುಷಿ ಮತ್ತು ಅಭಿಲಾಷ್ ಅವರಿಗೆ ‘ಲವ್ ಮಾಕ್ಟೇಲ್ 2’ ಸಿನಿಮಾದಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಹೊಸ ನಟಿ ರೇಚಲ್ ಡೇವಿಡ್ ಅವರು ಗಮನಾರ್ಹ ಅಭಿನಯ ನೀಡಿದ್ದಾರೆ. ಚಿಕ್ಕ ಹುಡುಗಿಯಾಗಿ ಮತ್ತು ಮುಗ್ಧ ಪ್ರೇಮಿಯಾಗಿ ಅವರು ಎರಡು ಶೇಡ್ನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಕೆಲವು ಪಾತ್ರಗಳು ಸ್ವಲ್ಪ ಹೊತ್ತು ಮಾತ್ರ ಕಾಣಿಸಿಕೊಂಡರೂ ಕೂಡ ಮಹತ್ವದ ಮೆಸೇಜ್ ನೀಡಿ ಪ್ರೇಕ್ಷಕರಿಗೆ ಇಷ್ಟ ಆಗುತ್ತವೆ. ಜೋ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಮೃತಾ ಅಯ್ಯಂಗಾರ್ ಅವರು ಕೂಡ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಮಿಲನಾ ನಾಗರಾಜ್ ಸರ್ಪ್ರೈಸ್ ನೀಡುತ್ತಾರೆ. ಆದಿ-ನಿಧಿ ನಡುವಿನ ಪ್ರೀತಿ-ಜಗಳ ಈ ಬಾರಿಯೂ ಕಾಣಲು ಸಿಗುತ್ತದೆ!
ಮೇಕಿಂಗ್ ದೃಷ್ಟಿಯಿಂದಲೂ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಹೆಚ್ಚು ಆಡಂಬರ ಇಲ್ಲದೇ ಕಥೆಗೆ ಏನೋ ಬೇಕೋ ಅದೆಲ್ಲವನ್ನೂ ಪೂರೈಸುತ್ತ ಉತ್ತಮವಾಗಿ ಚಿತ್ರವನ್ನು ತೆರೆಗೆ ತರಲಾಗಿದೆ. ನಕುಲ್ ಅಭ್ಯಂಕರ್ ಅವರ ಸಂಗೀತದಿಂದಾಗಿ ಚಿತ್ರದ ತೂಕ ಹೆಚ್ಚಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಸಹ ಮೆಚ್ಚುವಂತಿದೆ.
ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ಕೆಲವು ದೃಶ್ಯಗಳು ಎಳೆದಾಡಿದಂತೆ ಅನಿಸುತ್ತವೆ. ಆದರೆ ಅವು ಚಿತ್ರದ ವೇಗಕ್ಕೆ ಹೆಚ್ಚೇನೂ ತೊಂದರೆ ಮಾಡಿಲ್ಲ. ಅದರ ಬಗ್ಗೆ ಸ್ವಲ್ಪ ಗಮನ ಹರಿಸಿದ್ದರೆ ‘ಲವ್ ಮಾಕ್ಟೇಲ್ 2’ ಇನ್ನಷ್ಟು ಮಾರ್ಕ್ಸ್ ಪಡೆದುಕೊಳ್ಳುತ್ತಿತ್ತು. ಜೋ ಮತ್ತು ಆದಿ ಪಾತ್ರ ಜೊತೆಯಾಗಿ ಕಾಣಿಸಿಕೊಂಡ ದೃಶ್ಯಗಳ ಬಗ್ಗೆ ಇನ್ನೂ ಸ್ವಲ್ಪ ಸ್ಪಷ್ಟತೆಯನ್ನು ನೀಡಲು ನಿರ್ದೇಶಕರು ಪ್ರಯತ್ನಿಸಬಹುದಿತ್ತು. ಉಳಿದಂತೆ ಇದೊಂದು ಭರಪೂರ ಮನರಂಜನೆ ನೀಡುವ ಸಿನಿಮಾ ಎನ್ನಬಹುದು.
ಇದನ್ನೂ ಓದಿ:
‘ಲವ್ ಮಾಕ್ಟೇಲ್ 2’ ನಟಿ ಸುಷ್ಮಿತಾ ಮದುವೆ; ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜಂಕಿ
ವೇದಿಕೆ ಮೇಲೆ ‘ಲವ್ ಮಾಕ್ಟೇಲ್ 2’ ನಟಿಯ ಕಣ್ಣೀರು; ಅಪ್ಪ ಮತ್ತು 5 ವರ್ಷದ ಕಷ್ಟ ನೆನೆದ ನಟಿ
Published On - 1:01 pm, Fri, 11 February 22