Martin Review: ಆರ್ಭಟಕ್ಕೆ, ಅದ್ದೂರಿತನಕ್ಕೆ, ಆ್ಯಕ್ಷನ್​ಗೆ ಆದ್ಯತೆ ನೀಡಿದ ಮಾರ್ಟಿನ್

|

Updated on: Oct 11, 2024 | 3:01 PM

ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣ ಆದ ‘ಮಾರ್ಟಿನ್​’ ಸಿನಿಮಾ ಇಂದು (ಅಕ್ಟೋಬರ್​ 11) ಬಿಡುಗಡೆ ಆಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ತೆರೆಕಂಡಿದೆ. ನಿರ್ದೇಶಕ ಎ.ಪಿ. ಅರ್ಜುನ್ ಮತ್ತು ನಟ ಧ್ರುವ ಸರ್ಜಾ ಕಾಂಬಿನೇಷನ್​ನಲ್ಲಿ ಮೂಡಿಬಂದ ಎರಡನೇ ಸಿನಿಮಾ ಇದು. ಸಿನಿಮಾ ಹೇಗಿದೆ ಎಂಬ ವಿಮರ್ಶೆ ಇಲ್ಲಿದೆ ಓದಿ..

Martin Review: ಆರ್ಭಟಕ್ಕೆ, ಅದ್ದೂರಿತನಕ್ಕೆ, ಆ್ಯಕ್ಷನ್​ಗೆ ಆದ್ಯತೆ ನೀಡಿದ ಮಾರ್ಟಿನ್
ಧ್ರುವ ಸರ್ಜಾ
Follow us on

ಸಿನಿಮಾ: ಮಾರ್ಟಿನ್​. ನಿರ್ಮಾಣ: ಉದಯ್​ ಕೆ. ಮೆಹ್ತಾ. ನಿರ್ದೇಶನ: ಎ.ಪಿ. ಅರ್ಜುನ್. ಪಾತ್ರವರ್ಗ: ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್​, ನಿಕಿತಿನ್ ಧೀರ್​, ಚಿಕ್ಕಣ್ಣ, ಕಾವ್ಯಾ ಶಾಸ್ತ್ರಿ ಮುಂತಾದವರು. ಸ್ಟಾರ್​: 3/5

ಅಭಿಮಾನಿಗಳಿಂದ ‘ಆ್ಯಕ್ಷನ್​ ಪ್ರಿನ್ಸ್​’ ಎಂದು ಕರೆಸಿಕೊಳ್ಳುವ ಧ್ರುವ ಸರ್ಜಾ ಅವರು ಪ್ರತಿ ಸಿನಿಮಾದಲ್ಲೂ ಸಾಹಸ ದೃಶ್ಯಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಲು ಪ್ರಯತ್ನಿಸುತ್ತಾರೆ. ‘ಮಾರ್ಟಿನ್​’ ಸಿನಿಮಾದಲ್ಲೂ ಇದು ಮುಂದುವರಿದಿದೆ. ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಧ್ರುವ ಸರ್ಜಾ ನಟನೆಯ ಅತಿ ಅದ್ದೂರಿಯಾದ ಸಿನಿಮಾ ಇದು. ಆ ಕಾರಣದಿಂದಲೂ ಈ ಚಿತ್ರ ಹೈಪ್ ಸೃಷ್ಟಿ ಮಾಡಿತ್ತು. ಈಗ ಈ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಎ.ಪಿ. ಅರ್ಜುನ್​ ಅವರು ಪಕ್ಕಾ ಕಮರ್ಷಿಯಲ್​, ಮಸಾಲಾ ಶೈಲಿಯಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಹೊಡಿಬಡಿ ದೃಶ್ಯದ ಮೂಲಕವೇ ‘ಮಾರ್ಟಿನ್​’ ಸಿನಿಮಾದ ಕಥೆ ಆರಂಭ ಆಗುತ್ತದೆ. ಹೀರೋ ಎಂಟ್ರಿ ಆಗುತ್ತಿದ್ದಂತೆಯೇ ಆ್ಯಕ್ಷನ್​ ಆರ್ಭಟ ಇನ್ನಷ್ಟು ಜಾಸ್ತಿ ಆಗುತ್ತದೆ. ಕಥೆಯ ಶುರುವಿನಿಂದ ಕೊನೆಯ ತನಕ ಈ ಸಿನಿಮಾದಲ್ಲಿ ಆ್ಯಕ್ಷನ್​ಗೆ ಕೊರತೆ ಇಲ್ಲ. ಎಲ್ಲವನ್ನೂ ಗ್ರ್ಯಾಂಡ್​ ಆಗಿ ತೋರಿಸಬೇಕು ಎಂದು ನಿರ್ದೇಶಕ ಎ.ಪಿ. ಅರ್ಜುನ್​ ತೀರ್ಮಾನಿಸಿದಂತಿದೆ. ಹಾಗಾಗಿ ಅದ್ದೂರಿತನ, ಆರ್ಭಟ ಹಾಗೂ ಆ್ಯಕ್ಷನ್​ ಮೇಲೆ ಅವರು ಹೆಚ್ಚಿನ ಗಮನ ಹರಿಸಿದ್ದಾರೆ.

‘ಮಾರ್ಟಿನ್​’ ಸಿನಿಮಾದ ಕಥೆಯ ಬಗ್ಗೆ ಹೇಳುವುದಾದರೆ, ಪಾಕಿಸ್ತಾನದಲ್ಲಿ ಸೆರೆಸಿಕ್ಕ ಭಾರತೀಯನಾಗಿ ಹೀರೋ ಕಾಣಿಸಿಕೊಳ್ಳುತ್ತಾನೆ. ಆದರೆ ಆತನಿಗೆ ತಾನು ಯಾರು ಎಂಬುದೇ ನೆನಪಿರುವುದಿಲ್ಲ. ತನ್ನ ಐಡೆಂಟಿಟಿ ಏನು ಎಂಬುದನ್ನು ಹುಡುಕಿಕೊಂಡು ಹೊರಟಾಗ ಅನೇಕ ಸಂಗತಿಗಳು ಮತ್ತು ಸವಾಲುಗಳು ಎದುರಾಗುತ್ತವೆ. ತನಗೆ ಎದುರಾದ ಕಷ್ಟಗಳಿಗೆಲ್ಲ ಮಾರ್ಟಿನ್​ ಎಂಬುವವನು ಕಾರಣ ಎಂಬುದು ತಿಳಿಯುತ್ತದೆ. ಹಾಗಾದ್ರೆ ಆ ಮಾರ್ಟಿನ್ ಯಾರು? ಆತ ಎಲ್ಲಿದ್ದಾನೆ? ಆತನ ಹಿನ್ನೆಲೆ ಏನು ಎಂಬುದನ್ನು ವಿವರಿಸುತ್ತಾ ಸಾಗುತ್ತದೆ ಈ ಸಿನಿಮಾದ ಕಥೆ.

ನಿರ್ಮಾಪಕ ಉದಯ್​ ಕೆ. ಮೆಹ್ತಾ ಅವರು ‘ಮಾರ್ಟಿನ್​’ ಸಿನಿಮಾಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ. ಅದರ ಪರಿಣಾಮವಾಗಿ ಈ ಸಿನಿಮಾದ ಎಲ್ಲ ದೃಶ್ಯಗಳು ಅದ್ದೂರಿಯಾಗಿ ಮೂಡಿಬಂದಿದೆ. ಆ್ಯಕ್ಷನ್​ ಸನ್ನಿವೇಶಗಳಿಗಾಗಿ ಸಾಕಷ್ಟು ಹಣವನ್ನು ಸುರಿಯಲಾಗಿದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣದಿಂದ ಎಲ್ಲ ಫ್ರೇಮ್​ಗಳು ರಿಚ್​ ಆಗಿವೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತದಲ್ಲಿ ಅಬ್ಬರ ಹೆಚ್ಚಿದೆ. ಗ್ರಾಫಿಕ್ಸ್​ ವಿಚಾರದಲ್ಲಿ ಪ್ರೇಕ್ಷಕರ ನಿರೀಕ್ಷೆ ಇನ್ನೂ ಜಾಸ್ತಿ ಇತ್ತು. ಅಲ್ಲಿ ಚಿತ್ರತಂಡ ಕೊಂಚ ಎಡವಿದಂತಿದೆ.

ಇದನ್ನೂ ಓದಿ: ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ

ಧ್ರುವ ಸರ್ಜಾ ಅವರು ಈ ಸಿನಿಮಾದಲ್ಲಿ ಎರಡು ಭಿನ್ನವಾದ ಪಾತ್ರ​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಶೇಡ್​ನಲ್ಲಿ ತುಂಬ ನಟೋರಿಯಸ್​ ಆಗಿ ಕಾಣಿಸುವ ಅವರು ಇನ್ನೊಂದರಲ್ಲಿ ಪೂರ್ತಿ ವಿರುದ್ಧವಾದ ಪಾತ್ರವನ್ನು ಮಾಡಿದ್ದಾರೆ. ಕಥೆಯಲ್ಲಿ ಪ್ರೀತಿ, ಪ್ರೇಮ, ರೊಮ್ಯಾನ್ಸ್​ಗೆ ಹೆಚ್ಚಿನ ಜಾಗ ಇಲ್ಲ. ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದುಕೊಳ್ಳುವಂತನ ಮೆಲೋಡ್ರಾಮಾ ಕೂಡ ಇಲ್ಲ. ಅದರ ಬದಲು ಸಂಪೂರ್ಣ ಆ್ಯಕ್ಷನ್​ಮಯವಾಗಿದೆ ‘ಮಾರ್ಟಿನ್​’ ಪ್ರಪಂಚ.

ನಟ ಚಿಕ್ಕಣ್ಣ ಅವರು ಈ ಸಿನಿಮಾದಲ್ಲಿ ಹಾಸ್ಯದ ಬದಲು ಒಂದು ಗಂಭೀರವಾದ ಪಾತ್ರವನ್ನು ಮಾಡಿದ್ದಾರೆ. ನಟಿ ಅನ್ವೇಷಿ ಜೈನ್​ ಆಗಾಗ ಕಾಣಿಸಿಕೊಂಡು ಟ್ವಿಸ್ಟ್ ನೀಡಿದ್ದಾರೆ. ವೈಭವಿ ಶಾಂಡಿಲ್ಯ ಅವರಿಗೆ ತಕ್ಕಮಟ್ಟಿಗಿನ ಸ್ಕ್ರೀನ್​ ಸ್ಪೇನ್​ ಸಿಕ್ಕಿದೆ. ಇನ್ನುಳಿದಂತೆ ಪೂರ್ತಿ ಸಿನಿಮಾವನ್ನು ಧ್ರುವ ಸರ್ಜಾ ಅವರೇ ಆವರಿಸಿಕೊಂಡಿದ್ದಾರೆ. ಅವರ ಅಪ್ಪಟ ಅಭಿಮಾನಿಗಳಿಗಾಗಿಯೇ ಸಿನಿಮಾವನ್ನು ಮಾಡಿದಂತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:58 pm, Fri, 11 October 24