ಸಿನಿಮಾ: ಮರ್ಯಾದೆ ಪ್ರಶ್ನೆ. ನಿರ್ದೇಶನ: ನಾಗರಾಜ್ ಸೋಮಯಾಜಿ. ನಿರ್ಮಾಣ: ಶ್ವೇತಾ ಪ್ರಸಾದ್. ಕಥೆ: ಆರ್ಜೆ ಪ್ರದೀಪ. ಸಂಗೀತ ಸಂಯೋಜನೆ: ಅರ್ಜುನ್ ರಾಮು. ತಾರಾಗಣ: ರಾಕೇಶ್ ಅಡಿಗ, ಸುನಿಲ್ ರಾವ್, ಶೈನ್ ಶೆಟ್ಟಿ, ತೇಜು ಬೆಳವಾಡಿ, ರೇಖಾ ಕುಡ್ಲಗಿ, ಪೂರ್ಣಚಂದ್ರ ಮೈಸೂರು ಮೊದಲಾದವರು. ರೇಟಿಂಗ್: 3.5/5.
ಸೂರಿ (ರಾಕೇಶ್), ಸತೀಶ್ (ಸುನೀಲ್), ಮಂಜು (ಪೂರ್ಣಚಂದ್ರ) ಪಕ್ಕಾ ಮಧ್ಯಮ ವರ್ಗದ ಹುಡುಗರು. ಇವರು ಸಣ್ಣ ವಯಸ್ಸಿನಿಂದಲೂ ಗೆಳೆಯರು. ಒಬ್ಬರ ಕಷ್ಟಕ್ಕೆ ಒಬ್ಬರು ಆಗುತ್ತಾರೆ. ಇವರೆಲ್ಲರಿಗೂ ದುಡ್ಡು ಮಾಡಬೇಕು ಎಂಬ ಕನಸು. ಹೇಗಾದರೂ ಹಣ ಮಾಡಲೇಬೇಕು ಎಂದರೂ ಯಾವುದೂ ಕೈಗೂಡುವುದಿಲ್ಲ. ಇದರ ಜೊತೆಗೆ ಮರ್ಯಾದೆ ಬಗ್ಗೆ ಏಳುವ ಪ್ರಶ್ನೆಯ ಬಗ್ಗೆ ಅಂಜಿಕೆ. ಇವರ ಜೀವನದಲ್ಲಿ ಒಂದು ದೊಡ್ಡ ತಿರುವು ಸಿಗುತ್ತದೆ. ಅಲ್ಲಿಂದ ಸಿನಿಮಾದ ಪ್ರತಿ ಪಾತ್ರಗಳೂ ತಿರುವು ಪಡೆದುಕೊಂಡು ಬಿಡುತ್ತದೆ. ನಂತರ ಏನಾಗುತ್ತದೆ? ಇವರು ಹಣ ಮಾಡುತ್ತಾರಾ? ಈ ಪ್ರಶ್ನೆಗಳಿಗೆ ಸಿನಿಮಾದಲ್ಲೇ ಉತ್ತರ ಕಂಡುಕೊಳ್ಳಬೇಕು.
‘ಮರ್ಯಾದೆ ಪ್ರಶ್ನೆ’ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಹೀರೋಗಳು ಇಲ್ಲ. ಆದರೆ, ನಟಿಸಿದ ಎಲ್ಲರೂ ದೊಡ್ಡ ಹೀರೋಗಳಿಗೇನು ಕಡಿಮೆ ಇಲ್ಲ ಎಂಬಂತೆ ನಟಿಸಿದ್ದಾರೆ. ಎಲ್ಲರೂ ನಟನೆಯಲ್ಲಿ ಫುಲ್ ಮಾರ್ಕ್ಸ್ ಪಡೆದಿದ್ದಾರೆ. ಪ್ರತಿ ಪಾತ್ರಗಳ ಆಯ್ಕೆಯೂ ಉತ್ತಮವಾಗಿ ಮಾಡಿದ್ದಾರೆ ನಿರ್ದೇಶಕರು. ರಾಕೇಶ್ ಅವರು ನಟನೆಯಲ್ಲಿ ಎಲ್ಲರಿಂದ ಚಪ್ಪಾಳೆ ಪಡೆಯುತ್ತಾರೆ. ಸುನಿಲ್, ಪೂರ್ಣಚಂದ್ರ ಅವರು ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ವಿಲನ್ ಪಾತ್ರದಲ್ಲಿ ನಟಿಸಿರೋ ಪ್ರಭು ಅವರು ಕೆಲವು ದೃಶ್ಯಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡು ಬಿಡುತ್ತಾರೆ. ತಮ್ಮ ಡೈಲಾಗ್ ಡೆಲಿವರಿ ಹಾಗೂ ಅದ್ಭುತ ನಟನೆಯ ಮೂಲಕ ಭೇಷ್ ಎನಿಸಿಕೊಳ್ಳುತ್ತಾರೆ.
ನಾಗೇಂದ್ರ ಶಾ, ರೇಖಾ ಕುಡ್ಲಿಗಿ ಅವರು ಸತೀಶ್ನ ತಂದೆ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆರೆಯ ಮೇಲೆ ಇದ್ದಷ್ಟು ಹೊತ್ತು ಅವರು ಭಾವನಾತ್ಮಕವಾಗಿ ಆವರಿಸಿಕೊಳ್ಳುತ್ತಾರೆ. ನಾಗೇಂದ್ರ ಶಾ ಹೇಳುವ ಕೆಲವೇ ಡೈಲಾಗ್ಗಳು ಕರುಳನ್ನು ಚುರುಕ್ ಎನಿಸುತ್ತದೆ. ಸತೀಶ್ನ ಸಹೋದರಿಯ ಪಾತ್ರದಲ್ಲಿರೋ ತೇಜು ಬೆಳವಾಡಿ ಅವರು ಒಂದು ನವಿರಾದ ಪ್ರೇಮಕಥೆಯ ರುವಾರಿಯಾಗಿದ್ದಾರೆ. ಅವರು ತಂಗಿಯಾಗಿ, ಪ್ರೇಮಿಯಾಗಿ ಇಷ್ಟ ಆಗುತ್ತಾರೆ. ಶೈನ್ ಶೆಟ್ಟಿ ಅವರು ಶೆಟ್ಟಿ ಪಾತ್ರದ ಮೂಲಕ ಭೇಷ್ ಎನಿಸಿಕೊಳ್ಳುತ್ತಾರೆ.
ಇದನ್ನೂ ಓದಿ:ಈ ವಾರ ಮರ್ಯಾದೆ ಪ್ರಶ್ನೆ, ಟೆನಂಟ್, ಅಂಶು, ಜೀಬ್ರಾ ಮುಂತಾದ ಸಿನಿಮಾ; ಪ್ರೇಕ್ಷಕರ ಆಯ್ಕೆ ಯಾವುದು?
ನಾಗರಾಜ್ ಸೋಮಯಾಜಿ ಅವರದ್ದು ಇದು ಮೊದಲ ನಿರ್ದೇಶನ. ಮೊದಲ ಚಿತ್ರದಲ್ಲೇ ಅವರು ಅದ್ಭುತ ಕೆಲಸ ಮಾಡಿ ತೋರಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಒಂದು ಒಳ್ಳೆಯ ನಿರ್ದೇಶಕ ಸಿಕ್ಕ ಎನ್ನಬಹುದು. ಮಧ್ಯಮ ವರ್ಗದವರ ತೊಳಲಾಟವನ್ನು, ಅಸಹಾಯಕತೆಯನ್ನು ಅತ್ಯುತ್ತಮವಾಗಿ ತೋರಿಸಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಕಣ್ಣು ತುಂಬುವಂತೆ ಮಾಡುತ್ತಾರೆ ನಿರ್ದೇಶಕರು. ಎಲ್ಲಿಯೂ ಆಡಂಬರವಿಲ್ಲದೆ, ಮಧ್ಯಮವರ್ಗದ ಸಹಜ ಜೀವನವನ್ನು ಕಟ್ಟಿಕೊಟ್ಟಿದ್ದಾರೆ. ವೀಕ್ಷಕರು ಏನು ಊಹಿಸುತ್ತಾರೋ ಅದಕ್ಕೆ ವಿರುದ್ಧವಾಗಿಯೇ ಕಥೆ ನಡೆಯುತ್ತದೆ. ಒಂದು ನವಿರಾದ ಪ್ರೇಮ ಕಥೆಯನ್ನು ಅದ್ಭುತವಾಗಿ ಹೆಣೆದಿದ್ದಾರೆ. ಮಧ್ಯಂತರದಲ್ಲೇ ಕ್ಲೈಮ್ಯಾಕ್ಸ್ ರೇಂಜ್ನ ಎಗ್ಸೈಟ್ಮೆಂಟ್ ನೀಡುತ್ತಾರೆ. ಅರ್ಜುನ್ ರಾಮು ಅವರು ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಮೂಲಕ ಕಾಡುತ್ತಾರೆ. ಕ್ಲೈಮ್ಯಾಕ್ಸ್ನ ಫ್ಲ್ಯಾಟ್ ಮಾಡುವ ಬದಲು ಇನ್ನೂ ಎಗ್ಸೈಟ್ ಆಗಿ ಮಾಡಬಹುದಿತ್ತು ಎಂದು ಥಿಯೇಟರ್ನಿಂದ ಹೊರ ಬರುವ ಪ್ರೇಕ್ಷಕರಿಗೆ ಅನಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:53 am, Fri, 22 November 24