ಚಿತ್ರ: ಮಾನ್ಸೂನ್ ರಾಗ
ನಿರ್ಮಾಣ: ಎ.ಆರ್. ವಿಖ್ಯಾತ್
ನಿರ್ದೇಶನ: ಎಸ್. ರವೀಂದ್ರನಾಥ್
ಪಾತ್ರವರ್ಗ: ಡಾಲಿ ಧನಂಜಯ್, ರಚಿತಾ ರಾಮ್, ಅಚ್ಯುತ್ ಕುಮಾರ್, ಸುಹಾಸಿನಿ, ಯಶಾ ಶಿವಕುಮಾರ್, ಶಿವಾಂಕ್ ಮುಂತಾದವರು.
ಸ್ಟಾರ್: 3/5
ಡಾಲಿ ಧನಂಜಯ್ (Daali Dhananjay) ಅವರು ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾದವರಲ್ಲ. ಯಾವುದೋ ಒಂದರಿಂದ ಯಶಸ್ಸು ಸಿಕ್ಕಿತು ಎಂದು ಅದಕ್ಕೆ ಗಂಟುಬಿದ್ದವರೂ ಅಲ್ಲ. ಈವರೆಗೂ ವೃತ್ತಿಜೀವನದಲ್ಲಿ ಕಾಣಿಸಿಕೊಳ್ಳದ ರೀತಿಯಲ್ಲಿ ಅವರು ‘ಮಾನ್ಸೂನ್ ರಾಗ’ (Monsoon Raaga) ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಾಂಪ್ರದಾಯಿಕವಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಇರುವ ಹೀರೋ ಎಂಬ ಇಮೇಜ್ ಅನ್ನು ಸಂಪೂರ್ಣವಾಗಿ ಹೊಡೆದು ಹಾಕುವಂತಹ ಪಾತ್ರ ಅವರಿಗೆ ಈ ಚಿತ್ರದಲ್ಲಿ ಸಿಕ್ಕಿದೆ. ಒಂದು ಡಿಫರೆಂಟ್ ಸಿನಿಮಾವನ್ನು ನಿರ್ದೇಶಕ ರವೀಂದ್ರನಾಥ್ ಕಟ್ಟಿಕೊಟ್ಟಿದ್ದಾರೆ. ಅವರ ಪ್ರಯತ್ನಕ್ಕೆ ರಚಿತಾ ರಾಮ್ (Rachita Ram), ಸುಹಾಸಿನಿ ಮಣಿರತ್ನಂ, ಅಚ್ಯುತ್ ಕುಮಾರ್ ಅವರಂತಹ ಸ್ಟಾರ್ ಕಲಾವಿದರು ಸಾಥ್ ನೀಡಿದ್ದಾರೆ.
ಮಳೆಗೂ ಪ್ರೇಮಕ್ಕೂ ಅದೇನು ನಂಟಿದೆಯೋ ತಿಳಿಯದು. ಈ ಸಿನಿಮಾದ ಶೀರ್ಷಿಕೆಗೆ ಹೊಂದಿಕೆ ಆಗುವ ರೀತಿಯೇ ಮಳೆಗಾಲದ ಹಿನ್ನೆಲೆಯಲ್ಲಿ ಪೂರ್ತಿ ಕಥೆಯನ್ನು ವಿವರಿಸಲಾಗಿದೆ. ಒಂದು ಲವ್ಸ್ಟೋರಿ ನೋಡಬೇಕು ಎಂದು ಚಿತ್ರಮಂದಿರದ ಒಳಹೊಕ್ಕವರಿಗೆ ನಾಲ್ಕು ಪ್ರೇಮಕಥೆಗಳು ಸಿಗುತ್ತವೆ. ಅದು ಈ ಸಿನಿಮಾದ ಸ್ಪೆಷಾಲಿಟಿ. ಒಂದಕ್ಕಿಂತಲೂ ಮತ್ತೊಂದು ಸಖತ್ ಡಿಫರೆಂಟ್. ಆದರೂ ಕೂಡ ಎಲ್ಲೋ ಒಂದು ಕಡೆ ಆ ನಾಲ್ಕೂ ಕಥೆಗಳು ಸಂಧಿಸುತ್ತವೆ. ಆ ನಾಲ್ಕು ಅನುರಾಗಗಳ ಸಂಗಮವನ್ನು ಮಿಸ್ ಮಾಡಿಕೊಳ್ಳದೇ ಸಿನಿಮಾ ನೋಡಿದರೆ ‘ಮಾನ್ಸೂನ್ ರಾಗ’ ಹೆಚ್ಚು ಹಿಡಿಸುತ್ತದೆ.
ಚಿತ್ರದ ಒನ್ ಲೈನ್ ಕಥೆ ಏನು ಎಂದು ಹೇಳಿಬಿಟ್ಟರೆ ಕುತೂಹಲ ಮಾಯವಾಗುತ್ತದೆ. ಹಾಗಾಗಿ ಅದನ್ನು ಚಿತ್ರಮಂದಿರದಲ್ಲಿ ನೋಡಿ ತಿಳಿದರೆ ಹೆಚ್ಚು ಮಜಾ ಸಿಗುತ್ತದೆ. ಪ್ರೇಮಕ್ಕೆ ಯಾವುದೇ ವಯಸ್ಸು ಇಲ್ಲ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಪ್ರೇಮದ ಸ್ವರೂಪವು ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ರೀತಿ ಆಗುತ್ತದೆ. ಆ ಎಲ್ಲ ಹಂತಗಳನ್ನು ಇಲ್ಲಿ ಅಚ್ಚುಕಟ್ಟಾಗಿ ತೋರಿಸಲಾಗಿದೆ.
ಜಾತಿ-ಧರ್ಮಗಳ ಸಂಕೋಲೆ, ಮನುಷ್ಯ-ದೇವರ ಸಂಬಂಧ ಇತ್ಯಾದಿ ವಿಷಯಗಳನ್ನು ಈ ಚಿತ್ರದಲ್ಲಿ ಚರ್ಚಿಸಲಾಗಿದೆ. ಆದರೆ ಯಾವುದೂ ಕೂಡ ಉಪದೇಶ ಮಾಡಿದ ರೀತಿಯಲ್ಲಿ ಇಲ್ಲ. ಒಟ್ಟಾರೆ ಸಿನಿಮಾದ ನಿರೂಪಣೆ ನಿಧಾನಗತಿಯಲ್ಲಿ ಇದೆ. ಅದು ಈ ಸಿನಿಮಾದ ಪ್ಲಸ್ ಮತ್ತು ಮೈನಸ್ ಎರಡೂ ಹೌದು. ಎಲ್ಲವನ್ನೂ ತಾಳ್ಮೆಯಿಂದ ನೋಡುವ ಪ್ರೇಕ್ಷಕರಿಗೆ ಈ ಚಿತ್ರ ಹೆಚ್ಚು ಆಪ್ತವಾಗುತ್ತದೆ.
ಸಂಪೂರ್ಣ ಹೊಸ ಧನಂಜಯ್ ಇಲ್ಲಿ ನಿಮಗೆ ಕಾಣಿಸುತ್ತಾರೆ. ಅದೇ ರೀತಿ ರಚಿತಾ ರಾಮ್ ಕೂಡ ವೇಶ್ಯೆಯ ಪಾತ್ರದಲ್ಲಿ ಅಚ್ಚರಿ ಮೂಡಿಸುತ್ತಾರೆ. ಎಲ್ಲ ಇಮೇಜ್ನ ಹಂಗು ತೊರೆದು ಅವರಿಬ್ಬರು ಪಾತ್ರಕ್ಕೆ ಶರಣಾಗಿದ್ದಾರೆ. ಇಷ್ಟೆಲ್ಲ ಮಾಡಿರುವ ಧನಂಜಯ್ ಅವರು ಒಂದೆರಡು ಅನಗತ್ಯ ಫೈಟಿಂಗ್ ದೃಶ್ಯಗಳನ್ನು ಕೈಬಿಟ್ಟಿದ್ದರೆ ಚಿತ್ರದ ಸಹಜತೆಗೆ ಇನ್ನಷ್ಟು ಅಂದ ಬರುತ್ತಿತ್ತು ಎನಿಸುತ್ತದೆ. ಇಡೀ ಸಿನಿಮಾದಲ್ಲಿ ರಚಿತಾ ಮತ್ತು ಧನಂಜಯ್ ಪಾತ್ರಗಳೇ ಆವರಿಸಿಕೊಂಡಿಲ್ಲ. ಯಶಾ ಶಿವಕುಮಾರ್, ಶಿವಾಂಕ್, ಸುಹಾಸಿನಿ, ಅಚ್ಯುತ್ ಕುಮಾರ್, ಬಾಲ ಕಲಾವಿದರಾದ ನಿಹಾಲ್, ಸಿಂಚನಾ ಕೂಡ ಸೂಕ್ತ ಸ್ಕ್ರೀನ್ ಸ್ಪೇಸ್ ಪಡೆದುಕೊಂಡಿದ್ದಾರೆ. ಎಲ್ಲವನ್ನೂ ಬ್ಯಾಲೆನ್ಸ್ ಮಾಡುವ ರೀತಿಯಲ್ಲಿ ರವೀಂದ್ರನಾಥ್ ಅವರು ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
ಇದು ತೆಲುಗಿನ ‘ಕೇರ್ ಆಫ್ ಕಂಚಾರಪಾಲೆಂ’ ಚಿತ್ರದ ರಿಮೇಕ್. ಮೂಲದಲ್ಲಿ ತುಂಬ ಸರಳ ಮತ್ತು ಸಹಜವಾಗಿ ಮೂಡಿಬಂದಿದ್ದ ಸಿನಿಮಾವನ್ನು ಕನ್ನಡಕ್ಕೆ ತರುವಾಗ ನಿರ್ದೇಶಕ ರವೀಂದ್ರನಾಥ್ ಅವರು ತಮ್ಮದೇ ಫ್ಲೇವರ್ ಸೇರಿಸಿದ್ದಾರೆ. ಎಲ್ಲ ದೃಶ್ಯಗಳನ್ನೂ ಅವರು ರಂಗುರಂಗಾಗಿ ಚಿತ್ರಿಸಲು ಪ್ರಯತ್ನಿಸಿದ್ದಾರೆ. ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಮೂಲಕ ಹೆಚ್ಚು ಮೆಲೋಡ್ರಾಮಾ ಬೆರೆಸಿದ್ದಾರೆ. ಈ ಪ್ರಯತ್ನದಲ್ಲಿ ಅವರಿಗೆ ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಹಾಗೂ ಛಾಯಾಗ್ರಾಹಕ ಎಸ್.ಕೆ. ರಾವ್ ಸಾಥ್ ನೀಡಿದ್ದಾರೆ. ಗುರು ಕಶ್ಯಪ್ ಅವರ ಸಂಭಾಷಣೆಯಿಂದ ಈ ಸಿನಿಮಾಗೆ ಬೇರೆಯದೇ ಮೆರುಗು ಸಿಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.