‘ಪುಕ್ಸಟ್ಟೆ ಲೈಫು’ ವಿಮರ್ಶೆ: ಭರಪೂರ ನಗಿಸಿ ಚೆಂದದ ಸಂದೇಶ ಕೊಟ್ಟುಹೋದ ಸಂಚಾರಿ ವಿಜಯ್​

|

Updated on: Sep 24, 2021 | 3:44 PM

ಹೆಚ್ಚೇನೂ ಅಬ್ಬರವಿಲ್ಲದೇ, ಹೇಳಬೇಕಾದ ವಿಷಯವನ್ನು ತುಂಬ ಸರಳವಾಗಿ ಹೇಳಿದ್ದಾರೆ ನಿರ್ದೇಶಕರು. ತಾವು ಆಯ್ದುಕೊಂಡ ಗಂಭೀರವಾದ ಕಥೆಗೆ ಹಾಸ್ಯದ ಲೇಪನ ಮಾಡಿ, ಎರಡು ಗಂಟೆಗಳ ಅವಧಿಯಲ್ಲಿ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದಾರೆ.

‘ಪುಕ್ಸಟ್ಟೆ ಲೈಫು’ ವಿಮರ್ಶೆ: ಭರಪೂರ ನಗಿಸಿ ಚೆಂದದ ಸಂದೇಶ ಕೊಟ್ಟುಹೋದ ಸಂಚಾರಿ ವಿಜಯ್​
‘ಪುಕ್ಸಟ್ಟೆ ಲೈಫು’ ಸಿನಿಮಾ ವಿಮರ್ಶೆ
Follow us on

ಸಿನಿಮಾ: ಪುಕ್ಸಟ್ಟೆ ಲೈಫು
ನಿರ್ದೇಶನ: ಅರವಿಂದ್​ ಕುಪ್ಳಿಕರ್​
ನಿರ್ಮಾಣ: ನಾಗರಾಜ್​ ಸೋಮಯಾಜಿ
ಪಾತ್ರವರ್ಗ: ಸಂಚಾರಿ ವಿಜಯ್​, ರಂಗಾಯಣ ರಘು, ಮಾತಂಗಿ ಪ್ರಸನ್ನ, ಅಚ್ಯುತ್​ ಕುಮಾರ್​ ಮುಂತಾದವರು.

ಸ್ಟಾರ್​: 3.5 / 5

—–

ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲ ಕಲಾವಿದನಾಗಿದ್ದರು ಸಂಚಾರಿ ವಿಜಯ್​. ಇಂದು ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ತಾವು ಜೀವ ತುಂಬಿದ ಪಾತ್ರಗಳ ಮೂಲಕ ಅವರು ಎಂದೆಂದಿಗೂ ಅಮರ ಎಂಬುದನ್ನು ‘ಪುಕ್ಸಟ್ಟೆ ಲೈಫು’ ಸಿನಿಮಾ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಶುಕ್ರವಾರ (ಸೆ.24) ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಅರವಿಂದ್​ ಕುಪ್ಳೀಕರ್​ ನಿರ್ದೇಶನ, ನಾಗರಾಜ್​ ಸೋಮಯಾಜಿ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಸಂಚಾರಿ ವಿಜಯ್​ ಭರಪೂರ ನಗಿಸುತ್ತಾರೆ. ಭಾವುಕ ದೃಶ್ಯಗಳಲ್ಲಿ ಅಳಿಸುತ್ತಾರೆ. ಯಾವುದೇ ಪಾಠ ಮಾಡದೆಯೂ ಮನಮುಟ್ಟುವ ಒಂದು ಸಂದೇಶ ಕೊಟ್ಟು ಮೌನವಾಗುತ್ತಾರೆ.

ಜನಸಾಮಾನ್ಯನ ಪಾತ್ರವಾದರಂತೂ ಅದಕ್ಕೆ ಸಂಚಾರಿ ವಿಜಯ್​ಗಿಂತ ಹೆಚ್ಚು ಸೂಕ್ತವಾಗುವ ಮತ್ತೊಬ್ಬ ನಟನಿಲ್ಲ ಎಂದರೆ ಅತಿಶಯೋಕ್ತಿ ಅಲ್ಲ. ‘ಪುಕ್ಸಟ್ಟೆ ಲೈಫು’ ಸಿನಿಮಾದಲ್ಲಿ ಅವರಿಗೆ ಸಿಕ್ಕಿದ್ದು ಅಂಥದ್ದೇ ಪಾತ್ರ. ಬೀಗದ ಕೀ ರಿಪೇರಿ ಮಾಡುವ ಶಹಜಹಾನ್​ ಎಂಬ ಪಾತ್ರದಲ್ಲಿ ವಿಜಯ್​ ಕಾಣಿಸಿಕೊಂಡಿದ್ದಾರೆ. ಒಬ್ಬ ಬಡಕುಟುಂಬದ ಶಹಜಹಾನ್​ ತೊಂದರೆಗೆ ಸಿಲುಕುತ್ತಾರೆ. ಅದು ಕೂಡ ಪೊಲೀಸರಿಗೆ ಸಹಾಯ ಮಾಡಿದ ತಪ್ಪಿಗೆ! ಇದೇ ಕಹಾನಿಯ ಟ್ವಿಸ್ಟ್​. ಅದೇನು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ತಿಳಿದುಕೊಳ್ಳಬೇಕು.

ಹೆಚ್ಚೇನೂ ಅಬ್ಬರವಿಲ್ಲದೇ, ಹೇಳಬೇಕಾದ ವಿಷಯವನ್ನು ತುಂಬ ಸರಳವಾಗಿ ಹೇಳಿದ್ದಾರೆ ನಿರ್ದೇಶಕರು. ತಾವು ಆಯ್ದುಕೊಂಡ ಗಂಭೀರವಾದ ಕಥೆಗೆ ಹಾಸ್ಯದ ಲೇಪನ ಮಾಡಿ, ಎರಡು ಗಂಟೆಗಳ ಅವಧಿಯಲ್ಲಿ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದಾರೆ. ಭ್ರಷ್ಟರ ಗಾಳಕ್ಕೆ ಅಮಾಯಕರು ಹೇಗೆ ಬಲಿಪಶುಗಳಾಗುತ್ತಾರೆ ಎಂಬ ವಿಷಯವನ್ನು ಮನಮುಟ್ಟುವಂತೆ ವಿವರಿಸಲಾಗಿದೆ. ನಿಜಜೀವನದಲ್ಲಿ ಇಂಥ ಎಷ್ಟೋ ಘಟನೆಗಳು ನಡೆದಿರಬಹುದು. ಅದನ್ನೇ ‘ಪುಕ್ಸಟ್ಟೆ ಲೈಫು’ ಚಿತ್ರ ತೆರೆಮೇಲೆ ಮೂಡಿಸಿದೆ.

ಹಣದ ಹಿಂದೆ ಬೀಳುವವರ ಕಥೆಯನ್ನು ಈಗಾಗಲೇ ಅನೇಕ ಸಿನಿಮಾಗಳಲ್ಲಿ ನೋಡಿರುತ್ತೇವೆ. ಬೇಲಿ ಆಗಬೇಕಿದ್ದ ಪೊಲೀಸರೇ ಹೊಲ ಮೇಯುವ ಕಥೆಯನ್ನೊಳಗೊಂಡು ಸಿನಿಮಾಗಳೂ ಸಾಕಷ್ಟು ಬಂದಿವೆ. ಆದರೆ ಅವುಗಳ ನಡುವೆಯೂ ‘ಪುಕ್ಸಟ್ಟೆ ಲೈಫು’ ತನ್ನ ಸ್ವಂತಿಕೆಯನ್ನು ಕಾಪಾಡಿಕೊಂಡಿದೆ. ಸಂಚಾರಿ ವಿಜಯ್​ ಮಾತ್ರವಲ್ಲದೇ ಎಲ್ಲ ಕಲಾವಿದರು ಕೂಡ ತಮ್ಮ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ರಂಗಾಯಣ ರಘು, ಮಾತಂಗಿ ಪ್ರಸನ್ನ​​, ಅಚ್ಯುತ್​ ಕುಮಾರ್​ ಮುಂತಾದ ಕಲಾವಿದರಿಂದಾಗಿ ಚಿತ್ರದ ತೂಕ ಹೆಚ್ಚಿದೆ.

ನಿರ್ದೇಶಕ ಅರವಿಂದ್​ ಕುಪ್ಲೀಕರ್​ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಯಾವ ಸೌಕರ್ಯಗಳು ಲಭ್ಯ ಇವೆಯೇ ಅವುಗಳನ್ನೇ ಬಳಸಿಕೊಂಡು ಸರಳತೆಯಲ್ಲೇ ಒಂದು ಕಥೆ ಕಟ್ಟಿಕೊಡುವುದನ್ನು ಅವರು ಕರಗತ ಮಾಡಿಕೊಂಡಂತಿದೆ. ಯಾವ ಅದ್ದೂರಿತನಕ್ಕೂ ಅವರು ಇಲ್ಲಿ ಜಾಗ ನೀಡಿಲ್ಲ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ, ವಾಸು ದೀಕ್ಷಿತ್​ ಸಂಗೀತ ನಿರ್ದೇಶನದ ಹಾಡುಗಳು, ಪೂರ್ಣಚಂದ್ರ ತೇಜಸ್ವಿ ಅವರ ಹಿನ್ನಲೆ ಸಂಗೀತ.. ಹೀಗೆ ಯಾವುದೂ ಕೂಡ ತಮ್ಮತಮ್ಮ ಪರಿಧಿಯನ್ನು ಮೀರದೇ ಚಿತ್ರದ ಕಥಾವಸ್ತುವನ್ನು ಮುನ್ನಲೆಗೆ ತಂದಿವೆ. ಎಲ್ಲರ ಕೆಲಸವೂ ಮೆಚ್ಚುವಂತಿದೆ.

ಒಂದು ಒಳ್ಳೆಯ ಸಿನಿಮಾ ಮಾಡಲು ದೊಡ್ಡ ಬಜೆಟ್​, ಸ್ಟಾರ್​ ಹೀರೋಗಳು, ಬೃಹತ್​ ಸೆಟ್​ಗಳು, ವಿದೇಶದಲ್ಲಿ ಹಾಡಿನ ಶೂಟಿಂಗ್ ಅವಶ್ಯಕವೇನಲ್ಲ ಎಂಬುದನ್ನು ‘ಪುಕ್ಸಟ್ಟೆ ಲೈಫು’ ಮತ್ತೆ ಸಾರಿ ಹೇಳುವಂತಿದೆ. ಸಂಚಾರಿ ವಿಜಯ್​ ಅವರು ಇಂದು ನಮ್ಮೊಂದಿಗಿಲ್ಲ ಎಂಬ ಸಿಂಪಥಿಯನ್ನು ಬದಿಗಿಟ್ಟು ನೋಡಿದರೂ ಕೂಡ ಇದೊಂದು ಮೆಚ್ಚುವಂತಹ ಪ್ರಯತ್ನ.

ಇದನ್ನೂ ಓದಿ:

ಅಗಲಿದ ಗೆಳೆಯ ಸಂಚಾರಿ ವಿಜಯ್​ಗಾಗಿ ‘ಪುಕ್ಸಟ್ಟೆ ಲೈಫು’ ಚಿತ್ರದ ಟಿಕೆಟ್​ ಖರೀದಿಸಿ, ಪತ್ರ ಬರೆದ ಮಂಸೋರೆ

ಸದನದಲ್ಲೂ ಚರ್ಚೆ ಆಯ್ತು ಸಂಚಾರಿ ವಿಜಯ್​ ಸಾಧನೆ; ಹಾಡಿ ಹೊಗಳಿದ ಸಿದ್ದರಾಮಯ್ಯ

Published On - 3:42 pm, Fri, 24 September 21