Coolie movie review: ಟ್ವಿಸ್ಟುಗಳೇ ತುಂಬಿರುವ ‘ಕೂಲಿ’ಯಲ್ಲಿ ಮಿಂಚುವ ಸ್ಟಾರ್ಗಳು

- Time - 249 Minutes
- Released - August 14, 2025
- Language - Tamil
- Genre - Action, Thriller
ರಜನೀಕಾಂತ್ (Rajinikanth) ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕೂಲಿ’ ಸಿನಿಮಾ ಇಂದು (ಆಗಸ್ಟ್ 14) ಬಿಡುಗಡೆ ಆಗಿದೆ. ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸಿರುವ ನಟ ಅಕ್ಕಿನೇನಿ ನಾಗಾರ್ಜುನ ಕೆಲ ದಿನಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ‘ಕೂಲಿ’ ಸಿನಿಮಾ ಬಗ್ಗೆ ಒಂದು ವಾಕ್ಯದಲ್ಲಿ ಹೇಳಿ ಎಂದಾಗ ‘ವಿಷಲ್ ವಿಷಲ್ ವಿಷಲ್’ ಎಂದಿದ್ದರು. ನಾಗಾರ್ಜುನ ಹೇಳಿರುವುದು ಅಪ್ಪಟ ಸತ್ಯ. ‘ಕೂಲಿ’ ಸಿನಿಮಾ ನೋಡುವಾಗ ಪ್ರೇಕ್ಷಕನ ಕೈ-ಬಾಯಿಗೆ ಬಿಡುವಿಲ್ಲದಂತೆ ಮಾಡಿದ್ದಾರೆ ನಿರ್ದೇಶಕ ಲೋಕೇಶ್ ಕನಗರಾಜ್. ರಜನೀಕಾಂತ್ ಮಾತ್ರವಲ್ಲದೆ ಸಿನಿಮಾದಲ್ಲಿ ಬರುವ ಎಲ್ಲ ಮುಖ್ಯ ಪಾತ್ರಗಳಿಗೆ ಚಪ್ಪಾಳೆ, ವಿಷಲ್ ಸಮಾನವಾಗಿ ಹಂಚಿಕೆ ಆಗುವಂತೆ ಮಾಡಿರುವುದು ನಿರ್ದೇಶಕ ಲೋಕೇಶ್ ಕನಗರಾಜ್ ಜಾಣ್ಮೆ. ಒಟ್ಟಾರೆಯಾಗಿ ಒಂದು ಪಕ್ಕಾ ಮಾಸ್ ಸಿನಿಮಾ ಮಾಡಿ ರಜನಿ ಅಭಿಮಾನಿಗಳಿಗೆ ಉಡುಗೊರೆ ಕೊಟ್ಟಿದ್ದಾರೆ.
ಲೋಕೇಶ್ ಅವರ ಈ ಹಿಂದಿನ ಸಿನಿಮಾಗಳಲ್ಲಿ ಇರುವಂತೆಯೇ ಇಲ್ಲಿಯೂ ಒಂದು ಮಾಫಿಯಾ ಇದೆ, ಅದಕ್ಕೊಂದು ಸಿಂಡಿಕೇಟ್ ಇದೆ, ಡಾನ್ ಇದ್ದಾನೆ, ಅವನ ಮೇಲೊಬ್ಬ ಡಾನ್ ಇದ್ದಾನೆ. ಮಾಫಿಯಾದವರೆಲ್ಲ ಸೇರಿ ಏನೋ ಕುಕೃತ್ಯದಲ್ಲಿ ತೊಡಗಿದ್ದಾರೆ. ಅಸಲಿಗೆ ಅವರು ಯಾವ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಇಲ್ಲಿ ಅಮುಖ್ಯ, ಅದರ ಸುತ್ತ ನಡೆಯುವ ರಾಜಕೀಯ, ಪಿತೂರಿಗಳೇ ಸಿನಿಮಾದ ಮೂಲ ವಸ್ತುವಾಗಿವೆ. ಸಿನಿಮಾ ನೋಡುವಾಗ ನಿಜಕ್ಕೂ ವಿಲನ್ಗಳು ಮಾಡುತ್ತಿರುವುದೇನು ಎಂಬ ಅನುಮಾನವೂ ಮೂಡುತ್ತದೆ. ಆ ನಂತರ ಅದಕ್ಕೂ ಸ್ಪಷ್ಟ ಉತ್ತರವನ್ನು ನಿರ್ದೇಶಕರು ನೀಡಿದ್ದಾರೆ.
ಸಿನಿಮಾದ ಮೊದಲಾರ್ಧದಲ್ಲಿ ಪಾತ್ರಗಳ ಪರಿಚಯಕ್ಕೆ ತುಸು ಸಮಯ ತೆಗೆದುಕೊಂಡಿದ್ದಾರೆ ನಿರ್ದೇಶಕ ಲೋಕೇಶ್ ಕನಗರಾಜ್. ರಜನೀಕಾಂತ್ ಎಂಟ್ರಿ ಅದಕ್ಕೊಂದು ಹಾಡು ತುಸು ಸಾಮಾನ್ಯವಾಗಿಯೇ ಇವೆ. ಆದರೆ ಸಿನಿಮಾ ಮುಂದುವರೆದಂತೆ ಒಂದರ ಹಿಂದೊಂದರಂತೆ ಎಲಿವೇಷನ್ ಸೀನ್ಗಳು, ಮಾಸ್ ಸೀನ್ಗಳು ಇವೆ. ಮೊದಲಾರ್ಧದರಲ್ಲಿ ರಜನೀಕಾಂತ್ ತಮ್ಮ ಆಕ್ಷನ್ ಜೊತೆಗೆ ಹಾಸ್ಯದಿಂದಲೂ ಗಮನ ಸೆಳೆಯುತ್ತಾರೆ. ಸಿನಿಮಾದ ಕತೆ ಗಂಭೀರವಾಗುವುದು ರಜನೀಯ ಗೆಳೆಯನ ಪಾತ್ರದ ನಿಧನದ ಬಳಿಕ. ರಜನೀ ತನ್ನ ಗೆಳೆಯನ ಕೊಲೆಗಾರರನ್ನು ಹುಡುಕಿಕೊಂಡು ಮಾಫಿಯಾ ಲೋಕಕ್ಕೆ ಎಂಟ್ರಿ ಕೊಡುತ್ತಾರೆ, ಅಲ್ಲಿ ಅವರಿಗೆ ಯಾರ್ಯಾರು ಎದುರಾಗುತ್ತಾರೆ? ಯಾರ್ಯಾರು ಸಿಗುತ್ತಾರೆ? ಅವರ ಗೆಳೆಯನ ಕೊಲ್ಲಲು ಕಾರಣ ಏನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳುತ್ತಾರೆ.‘
ಇದನ್ನೂ ಓದಿ:War 2 Review: ಆ್ಯಕ್ಷನ್ ಅಬ್ಬರದ ನಡುವೆ ಮಂಕಾದ ‘ವಾರ್ 2’ ಕಥೆ
ಮೊದಲಾರ್ಧದಲ್ಲಿ ನಾಗಾರ್ಜುನ, ಸೌಬಿನ್ ಪಾತ್ರಗಳನ್ನು ರಜನೀ ಪಾತ್ರಕ್ಕಿಂತಲೂ ಬಲು ಅದ್ಧೂರಿಯಾಗಿ ಪರಿಚಯಿಸುತ್ತಾರೆ ನಿರ್ದೇಶಕ. ಮೋನಿಕಾ ಹಾಡು ವಿನಾಕಾರಣ ಬರುತ್ತದಾದರೂ ಸೌಬಿನ್ ಹಾಗೂ ಪೂಜಾ ಹೆಗ್ಡೆಯ ಡ್ಯಾನ್ಸು, ಅನಿರುದ್ಧ್ ಸಂಗೀತ ಕಾಲು ಕುಣಿಸುವಂತೆ ಮಾಡುತ್ತದೆ. ಮೊದಲಾರ್ಧದ ಕೊನೆಯ ಹೊತ್ತಿದೆ ಟ್ವಿಸ್ಟುಗಳ ಮೇಲೆ ಟ್ವಿಸ್ಟುಗಳು ಬರಲು ಆರಂಭವಾಗುತ್ತವೆ. ಪ್ರೇಕ್ಷಕರಿಗೆ ಶಾಕ್ ನೀಡಲೆಂದೇ ಹೀಗೆ ಅರ್ಥವಿಲ್ಲದ ಸಡನ್ ಟ್ವಿಸ್ಟುಗಳನ್ನು ನಿರ್ದೇಶಕರು ನೀಡುತ್ತಿದ್ದಾರೆ ಎಂದೆನಿಸುತ್ತದೆ. ಆದರೆ ಈ ಟ್ವಿಸ್ಟುಗಳು ಗೊಂದಲಗಳನ್ನು ಕೆಲ ಪ್ರಶ್ನೆಗಳನ್ನೂ ಸಹ ಹುಟ್ಟುಹಾಕುತ್ತವೆ. ಘಟನೆಗಳು ಚಕ-ಚಕನೆ ನಡೆಯುತ್ತವೆ. ಇದು ತುಸು ಕಿರಿ-ಕಿರಿ ಸಹ ತರಿಸುತ್ತದೆ.
ಕನ್ನಡದ ಸ್ಟಾರ್ ನಟ ಉಪೇಂದ್ರ ಮತ್ತು ರಚಿತಾ ರಾಮ್ ಅವರು ಸಹ ಸಿನಿಮಾನಲ್ಲಿ ನಟಿಸಿದ್ದಾರೆ. ರಚಿತಾ ರಾಮ್ ಪಾತ್ರ ಮೊದಲಾರ್ಧದಲ್ಲೇ ಕಾಣಿಸಿಕೊಳ್ಳುತ್ತದೆ. ಆದರೆ ಅವರ ಪಾತ್ರಕ್ಕೆ ಯಾವುದೇ ಸಂಭಾಷಣೆ ಇಲ್ಲ, ವಿಶೇಷ ಎಂಟ್ರಿ ಸಹ ಇಲ್ಲ. ಆದರೆ ದ್ವಿತೀಯಾರ್ಧದಲ್ಲಿ ಆ ಪಾತ್ರದ ವಿರಾಟ್ ಸ್ವರೂಪವನ್ನು ತೋರಿಸಿದ್ದಾರೆ ನಿರ್ದೇಶಕ ಲೋಕೇಶ್. ಅದರಂತೆಯೇ ಉಪೇಂದ್ರ ಪಾತ್ರಕ್ಕೂ ಸಹ ಬಲು ಅದ್ಧೂರಿ ಎಂಟ್ರಿ ಮತ್ತು ಆಕ್ಷನ್ ದೃಶ್ಯಗಳನ್ನು ನೀಡಿದ್ದಾರೆ. ಆಮಿರ್ ಖಾನ್ ಅತಿಥಿ ಪಾತ್ರದ ಬಗ್ಗೆ ಸಾಕಷ್ಟು ಹೈಪ್ ನೀಡಲಾಗಿತ್ತು. ಆದರೆ ಆಮಿರ್ ಅವರ ಎಂಟ್ರಿಯೇ ತುಸು ಡಲ್ ಎನ್ನಬಹುದು.
ಇದನ್ನೂ ಓದಿ:ಹೇಗಿದೆ ‘ಕೂಲಿ’ ಸಿನಿಮಾ ಮೊದಲಾರ್ಧ? ಇಂಟರ್ವೆಲ್ವರೆಗೆ ಏನಿದೆ? ಏನಿಲ್ಲ?
ಸಿನಿಮಾದಲ್ಲಿ ಫ್ಲ್ಯಾಷ್ ಬ್ಯಾಕ್ ಸೀನ್ಗಳನ್ನು ಅದ್ಭುತವಾಗಿ ಬಳಸಲಾಗಿದೆ. ಆರಂಭದಲ್ಲಿ ಸಣ್ಣ ಸುಳಿವು ನೀಡುವ ನಿರ್ದೇಶಕ ಕೊನೆಯಲ್ಲಿ ಫ್ಲ್ಯಾಷ್ಬ್ಯಾಕ್ ದೃಶ್ಯಗಳನ್ನು ಕತೆಗೆ ಅನುಗುಣವಾಗಿ ಪ್ರೇಕ್ಷಕನಿಗೆ ಥ್ರಿಲ್ ಆಗುವಂತೆ ತಂದಿದ್ದಾರೆ. ಫ್ಲ್ಯಾಷ್ಬ್ಯಾಕ್ ದೃಶ್ಯಗಳಲ್ಲಿ ವಿಂಟೇಜ್ ರಜಿನಿಯ ದರ್ಶನವಾಗುತ್ತದೆ. ಜೊತೆಗೆ ಫ್ಲ್ಯಾಷ್ಬ್ಯಾಕ್ನಲ್ಲಿಯೂ ಉಪ್ಪಿ ಕಾಣಿಸಿಕೊಳ್ಳುವುದು ಇನ್ನಷ್ಟು ಥ್ರಿಲ್ ನೀಡುತ್ತದೆ.
ಎಲ್ಲ ಪ್ರತಿಭಾವಂತ ನಟರನ್ನೇ ಬಳಸಿಕೊಂಡಿರುವ ಕಾರಣ ಒಬ್ಬರಿಗಿಂತಲೂ ಒಬ್ಬರು ಅದ್ಭುತ ನಟನೆ ನೀಡಿದ್ದಾರೆ. ನಾಗಾರ್ಜುನ ಸ್ಟೈಲ್ನಿಂದ ಸೆಳೆದರೆ ರಜನೀಕಾಂತ್ ಸ್ಟೈಲ್ ಜೊತೆಗೆ ಭಾವುಕ ಸನ್ನಿವೇಶಗಳಲ್ಲಿಯೂ ಗಮನ ಸೆಳೆಯುತ್ತಾರೆ. ಸೌಬಿನ್ ಅದ್ಭುತವಾಗಿ ನಟಿಸಿದ್ದಾರೆ. ನಟನೆಯ ವಿಷಯದಲ್ಲಿ ಎಲ್ಲರಿಗಿಂತಲೂ ಅವರಿಗೇ ಹೆಚ್ಚು ಅಂಕ. ನಟಿ ಶ್ರುತಿ ಹಾಸನ್ ಅವರಿಗೆ ಹಲವು ಭಾವುಕ ಸನ್ನಿವೇಶಗಳಿಗೆ ಅವುಗಳನ್ನು ಚೆನ್ನಾಗಿ ಅವರು ನಿಭಾಯಿಸಿದ್ದಾರೆ. ಸಣ್ಣ ಪಾತ್ರದಲ್ಲೇ ಸಖತ್ ಇಂಪ್ಯಾಕ್ಟ್ ಸೃಷ್ಟಿ ಮಾಡುತ್ತಾರೆ ನಟಿ ರಚಿತಾ ರಾಮ್. ಉಪ್ಪಿಯ ಮಾಸ್ ಸ್ವಾಗ್ಗೆ ಶಿಳ್ಳೆಗಳ ಸುರಿಮಳೆಯೇ ಆಗುತ್ತದೆ.
ಅದಾಗಲೇ ವೇಗವಾಗಿರುವ ಚಿತ್ರಕತೆಯನ್ನು ಇನ್ನಷ್ಟು ಥ್ರಿಲ್ಲಿಂಗ್ ಆಗಿಸಿರುವುದು ಅನಿರುದ್ಧ್ ಸಂಗೀತ. ಆಕ್ಷನ್ ದೃಶ್ಯಗಳಲ್ಲಿ, ಪಾತ್ರಗಳ ಪರಿಚಯದ ದೃಶ್ಯಗಳಲ್ಲಿ ಅನಿರುದ್ಧ್ ಹಿನ್ನೆಲೆ ಸಂಗೀತ ಅತ್ಯದ್ಭುತವಾಗಿದೆ. ಉಪ್ಪಿ ಮತ್ತು ರಜನೀ ಅವರ ಆಕ್ಷನ್ ದೃಶ್ಯದ ಹಿನ್ನೆಲೆ ಸಂಗೀತವಂತೂ ಅದ್ಭುತ ಫೀಲ್ ನೀಡುತ್ತದೆ. ನಾಗಾರ್ಜುನ ಅವರಿಗೆ ಬಳಸಿರುವ ಇಂಗ್ಲೀಷ್ ಮ್ಯೂಸಿಕ್ ಸಹ ಅವರ ಪಾತ್ರವನ್ನು ಸಾಕಷ್ಟು ಎಲಿವೇಟ್ ಮಾಡಿದೆ. ಸಿನಿಮಾದ ಕ್ಯಾಮೆರಾಮ್ಯಾನ್ ಸಹ ಅದ್ಭುತ ಕೆಲಸ ಮಾಡಿದ್ದಾರೆ. ಒಟ್ಟಾರೆಯಾಗಿ ಲೋಕೇಶ್ ಕನಗರಾಜ್ ರಜನೀ ಅಭಿಮಾನಿಗಳಿಗೆ ನಿರಾಸೆಯಾಗದಂತೆ ಒಂದೊಳ್ಳೆ ಮಾಸ್ ಸಿನಿಮಾ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Thu, 14 August 25




