ಚಿತ್ರ: ಶಿವಾಜಿ ಸುರತ್ಕಲ್ 2
ನಿರ್ಮಾಣ: ರೇಖಾ ಕೆ.ಎನ್., ಅನೂಪ್ ಗೌಡ
ನಿರ್ದೇಶನ: ಆಕಾಶ್ ಶ್ರೀವತ್ಸ
ಪಾತ್ರವರ್ಗ: ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಪೂರ್ಣ ಮೈಸೂರು, ನಾಸರ್, ರಘು ರಾಮನಕೊಪ್ಪ, ಮೇಘನಾ ಗಾಂವ್ಕರ್, ಆರಾಧ್ಯಾ ಮುಂತಾದವರು.
ಸ್ಟಾರ್: 3/5
ಆಕಾಶ್ ಶ್ರೀವತ್ಸ ನಿರ್ದೇಶನದ ‘ಶಿವಾಜಿ ಸುರತ್ಕಲ್’ ಸಿನಿಮಾ 2020ರ ಫೆಬ್ರವರಿಯಲ್ಲಿ ಬಿಡುಗಡೆ ಆಗಿತ್ತು. ಸಸ್ಪೆನ್ಸ್ ಕಹಾನಿ ಹೊಂದಿದ್ದ ಆ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ರಮೇಶ್ ಅರವಿಂದ್ ಅವರ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದರು. ಬಾಕ್ಸ್ ಆಫೀಸ್ನಲ್ಲಿ ಆ ಸಿನಿಮಾ ಗೆದ್ದಿದ್ದರಿಂದ ನಿರ್ಮಾಪಕರು ಅದಕ್ಕೆ ಸೀಕ್ವೆಲ್ ಘೋಷಿಸಿದರು. ಇಂದು (ಏಪ್ರಿಲ್ 14) ‘ಶಿವಾಜಿ ಸುರತ್ಕಲ್ 2’ ಚಿತ್ರ ಬಿಡುಗಡೆ ಆಗಿದೆ. ಇದು ಮೊದಲ ಚಿತ್ರದ ಮುಂದುವರಿದ ಕಥೆ. ಆದರೆ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಶಿವಾಜಿ ಸುರತ್ಕಲ್ ಭೇದಿಸುವ ಕೇಸ್ ಬೇರೆ. ಒಂದಲ್ಲ ಎರಡಲ್ಲ.. ನಾಲ್ಕೈದು ಕೊಲೆಗಳ ಹಿಂದಿರುವ ರಾಕ್ಷಸನನ್ನು ಕಂಡು ಹಿಡಿಯುವ ಕಾರ್ಯದಲ್ಲಿ ಶಿವಾಜಿ ಹೇಗೆ ಯಶಸ್ವಿ ಆಗುತ್ತಾನೆ ಎಂಬುದನ್ನು ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಕೌತುಕಮಯವಾಗಿ ವಿವರಿಸಿದ್ದಾರೆ.
‘ಶಿವಾಜಿ ಸುರತ್ಕಲ್ 2’ ಚಿತ್ರದ ಟ್ರೇಲರ್ ನೋಡಿದವರಿಗೆ ಹಲವು ಕಲ್ಪನೆಗಳು ಮೂಡಿದ್ದವು. ಕಥಾನಾಯಕನೇ ಕೊಲೆಗಾರ ಆಗಿರಬಹುದೇ ಎಂಬ ಪ್ರಶ್ನೆ ಉದ್ಘವ ಆಗಿತ್ತು. ಅದೇ ರೀತಿಯ ಫೀಲ್ನೊಂದಿಗೆ ಈ ಸಿನಿಮಾದ ಕಥೆ ಆರಂಭ ಆಗುತ್ತದೆ. ತಾನೇ ಕೊಲೆ ಮಾಡುತ್ತಿರುವ ರೀತಿಯಲ್ಲಿ ಸ್ವತಃ ಶಿವಾಜಿಗೆ ಕನಸು ಬೀಳುತ್ತದೆ. ಪ್ರೇಕ್ಷಕರ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿಯ ಅನೇಕ ತಂತ್ರಗಳನ್ನು ಬಳಸಿಕೊಂಡಿದ್ದಾರೆ ನಿರ್ದೇಶಕರು. ಆದರೆ ಅಸಲಿ ಕಥೆ ಬೇರೆಯೇ ಇರುತ್ತದೆ.
ಮೊದಲ ಪಾರ್ಟ್ನಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದ ಶಿವಾಜಿ ಎರಡನೇ ಪಾರ್ಟ್ನಲ್ಲಿ ಆಕೆಯ ನೆನಪಿನಲ್ಲೇ ಕಳೆದುಹೋಗುತ್ತಾನೆ. ಅದೊಂದು ರೀತಿಯ ಮಾನಸಿಕ ಕಾಯಿಲೆಯಾಗಿ ಪರಿಣಮಿಸುತ್ತದೆ. ಇದನ್ನು ಕಥಾನಾಯಕನ ವೀಕ್ನೆಸ್ ರೀತಿ ತೋರಿಸಲಾಗಿದೆ. ಅದರ ಜೊತೆಗೆ ಮಗಳ ಪಾತ್ರದ ಎಂಟ್ರಿ ಕೂಡ ಆಗುತ್ತದೆ. ಅಲ್ಲದೇ, ತಂದೆ-ಮಗನ ಫ್ಲ್ಯಾಶ್ಬ್ಯಾಕ್ ಸಹ ನುಸುಳುತ್ತದೆ. ಅದರಿಂದ ಫ್ಯಾಮಿಲಿ ಸೆಂಟಿಮೆಂಟ್ನ ಭಾರ ಸೇರಿಕೊಳ್ಳುತ್ತದೆ. ಹಾಗಾಗಿ ನೋಡುಗರಿಗೆ ಶಿವಾಜಿ ಮೇಲೆ ಒಂದು ಬಗೆಯ ಮರುಕ ಹುಟ್ಟುತ್ತದೆ. ಈ ಸೆಂಟಿಮೆಂಟ್ನ ಸೆಳೆತಕ್ಕೆ ಸಿಕ್ಕಿಬಿಟ್ಟರೆ ಶಿವಾಜಿಯ ಸಣ್ಣಪುಟ್ಟ ಲೋಪಗಳನ್ನು ಅಡ್ಜೆಸ್ಟ್ ಮಾಡಿಕೊಂಡು ಪ್ರೇಕ್ಷಕ ಮುಂದೆ ಸಾಗುತ್ತಾನೆ.
ಇದನ್ನೂ ಓದಿ: Hoysala Review: ಹೆಚ್ಚಿಗೆ ಸುತ್ತಾಡಿದರೂ ಮೆಚ್ಚುಗೆ ಗಳಿಸುವ ಹೊಯ್ಸಳ; ಆ್ಯಕ್ಷನ್ ಜೊತೆ ಜಾತಿ, ಪ್ರೀತಿ, ನೀತಿ ಇತ್ಯಾದಿ..
ಪತ್ತೇದಾರಿ ಕಥೆಗಳಲ್ಲಿ ಸಾಮಾನ್ಯವಾಗಿ ಎಲ್ಲ ಪಾತ್ರಗಳ ಮೇಲೆ ಅನುಮಾನ ಮೂಡುವಂತೆ ಮಾಡಲಾಗುತ್ತದೆ. ಆ ಸೂತ್ರವನ್ನು ‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲೂ ಬಳಸಿಕೊಳ್ಳಲಾಗಿದೆ. ಶಿವಾಜಿಯ ಸುತ್ತಮುತ್ತ ಇರುವ ಎಲ್ಲ ಪಾತ್ರಗಳ ಮೇಲೂ ಪ್ರೇಕ್ಷಕರಿಗೆ ಒಮ್ಮೆಯಾದರೂ ಅನುಮಾನ ಮೂಡುತ್ತದೆ. ಆದರೆ ಅಸಲಿ ಕೊಲೆಗಾರ ಯಾರು ಎಂಬುದು ತಿಳಿಯಬೇಕಾದರೆ ಕ್ಲೈಮ್ಯಾಕ್ಸ್ ತನಕ ಕಾಯಲೇಬೇಕು.
ಶಿವಾಜಿ ಮದುವೆ ಆಗಿದ್ದು ಹೇಗೆ ಎಂಬ ಫ್ಲ್ಯಾಶ್ ಬ್ಯಾಕ್ ಕಹಾನಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರಸ್ತುತ ಕಾಲಘಟದ ಕಥೆಯ ನಡುನಡುವೆ ಫ್ಲ್ಯಾಶ್ಬ್ಯಾಕ್ ದೃಶ್ಯಗಳು ಆಗಾಗ ಬರುತ್ತವೆ. ಆದಷ್ಟು ಬೇಗ ಕೊಲೆಗಾರ ಸಿಗಲಿ ಎಂದು ಕಾಯುತ್ತಿರುವ ಪ್ರೇಕ್ಷಕರಿಗೆ ಈ ಫ್ಲ್ಯಾಶ್ಬ್ಯಾಕ್ನಿಂದ ಸ್ವಲ್ಪ ಕಿರಿಕಿರಿ ಎನಿಸಬಹುದು. ಹಾಗಿದ್ದರೂ ಕೂಡ ಆ ದೃಶ್ಯಗಳು ಕಥೆಗೆ ಪೂರಕವಾಗಿಯೇ ಇವೆ.
ಇದನ್ನೂ ಓದಿ: Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ
ಎಂದಿನಂತೆ ರಮೇಶ್ ಅರವಿಂದ್ ಅವರು ಲವಲವಿಕೆಯಿಂದ ನಟಿಸಿದ್ದಾರೆ. ರಾಧಿಕಾ ನಾರಾಯಣ್ ಅವರ ಪಾತ್ರಕ್ಕೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ಇರುವ ಅವಕಾಶದಲ್ಲೇ ಅವರು ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಮೇಘನಾ ಗಾಂವ್ಕರ್ ಮಾಡಿರುವ ಪಾತ್ರಕ್ಕೂ ಈ ಮಾತು ಅನ್ವಯ. ಒಂದು ಹಾಡಿಗೆ ಮಾತ್ರ ಸೀಮಿತವಾಗಿದ್ದಾರೆ ಸಂಗೀತಾ ಶೃಂಗೇರಿ. ಬಾಲ ನಟಿ ಆರಾಧ್ಯ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾಳೆ.
ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ
ಜ್ಯೂಡಾ ಸ್ಯಾಂಡಿ ಅವರಿಗೆ ಸಂಗೀತದ ಮೂಲಕ ಸೆಳೆಯುವ ಅವಕಾಶ ಇತ್ತು. ಹಾಡುಗಳಲ್ಲಿ ಹಾಗೂ ಹಿನ್ನೆಲೆ ಸಂಗೀತದಲ್ಲಿ ಅವರು ಹೊಸತನ ಪ್ರಯತ್ನಿಸಿದ್ದರೆ ಚೆನ್ನಾಗಿರುತ್ತಿತ್ತು. ನಿರ್ದೇಶಕರೇ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿರುವುದರಿಂದ ಹೆಚ್ಚೇನೂ ಎಳೆದಾಡದೇ 2 ಗಂಟೆ 3 ನಿಮಿಷ ಅವಧಿಯಲ್ಲಿ ಕಥೆ ವಿವರಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:04 pm, Fri, 14 April 23