Yuddhakaanda Movie Review: ಕೋರ್ಟ್ ಕಲಾಪದ ಎಮೋಷನಲ್ ‘ಯುದ್ಧಕಾಂಡ’

ನಟ ಅಜಯ್ ರಾವ್ ಅವರು ಮುಖ್ಯ ಭೂಮಿಕೆ ನಿಭಾಯಿಸಿ, ನಿರ್ಮಿಸಿರುವ ‘ಯುದ್ಧಕಾಂಡ’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅವರು ಲಾಯರ್ ಪಾತ್ರ ಮಾಡಿದ್ದಾರೆ. ಪವನ್ ಭಟ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

Yuddhakaanda Movie Review: ಕೋರ್ಟ್ ಕಲಾಪದ ಎಮೋಷನಲ್ ‘ಯುದ್ಧಕಾಂಡ’
Prakash Belawadi

Updated on: Apr 18, 2025 | 3:35 PM

ಸಿನಿಮಾ: ಯುದ್ಧಕಾಂಡ. ನಿರ್ಮಾಣ: ಅಜಯ್ ರಾವ್. ನಿರ್ದೇಶನ: ಪವನ್ ಭಟ್. ಪಾತ್ರವರ್ಗ: ಅಜಯ್ ರಾವ್, ಪ್ರಕಾಶ್ ಬೆಳವಾಡಿ, ಅರ್ಚನಾ ಜೋಯಿಸ್, ರಾಧ್ನ್ಯಾ ಮುಂತಾದವರು. ಸ್ಟಾರ್​: 3/5

ಕೋರ್ಟ್ ವಿಚಾರಣೆಗಳನ್ನೇ ಕೇಂದ್ರವಾಗಿಟ್ಟುಕೊಂಡು ಬಂದಿರುವ ಅನೇಕ ಸಿನಿಮಾಗಳಿವೆ. ಇಂಥ ಸಿನಿಮಾಗಳು ಥ್ರಿಲ್ಲಿಂಗ್ ಆಗಿರುತ್ತವೆ. ಹಾಗಾಗಿ ಈ ಪ್ರಕಾರದ ಸಿನಿಮಾಗಳಿಗೆ ಪ್ರತ್ಯೇಕವಾದ ಪ್ರೇಕ್ಷಕವರ್ಗವಿದೆ. ಅಂಥವರಿಗಾಗಿ ‘ಯುದ್ಧಕಾಂಡ’ ಸಿನಿಮಾ ಮೂಡಿಬಂದಿದೆ. ಹಾಗಂತ ಇದು ಬರೀ ಕೋರ್ಟ್​ ಕಲಾಪದ ಕಹಾನಿ ಅಲ್ಲ. ಮನಕಲಕುವ ತಾಯಿ-ಮಗಳ ಕಥೆ ಕೂಡ ಹೌದು. ಈ ಸಿನಿಮಾದಲ್ಲಿ ಅಜಯ್ ರಾವ್ ಅವರು ಲಾಯರ್​ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಎದುರಾಳಿಯಾಗಿ ಪ್ರಕಾಶ್ ಬೆಳವಾಡಿ ನಟಿಸಿದ್ದಾರೆ. ಮಗಳಿಗೆ ಆದ ಅನ್ಯಾಯದ ವಿರುದ್ಧ ಹೋರಾಡುವ ತಾಯಿಯಾಗಿ ನಟಿ ಅರ್ಚನಾ ಜೋಯಿಸ್ ಅಭಿನಯಿಸಿದ್ದಾರೆ.

7 ವರ್ಷದ ಬಾಲಕಿ ಮೇಲೆ ಶಾಸಕನ ತಮ್ಮನಿಂದ ಅತ್ಯಾಚಾರ ಆಗುತ್ತದೆ. ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತುವ ತಾಯಿಗೆ ನ್ಯಾಯ ಸಿಗುವುದು ತಡವಾಗುತ್ತದೆ. ಹಾಗಾಗಿ ಆಕೆಯೇ ಕಾನೂನನ್ನು ಕೈಗೆ ತೆಗೆದುಕೊಂಡು ಕೋರ್ಟ್​ ಆವರಣದಲ್ಲಿ, ಎಲ್ಲರ ಎದುರಲ್ಲೇ ಅತ್ಯಾಚಾರಿಯ ಹತ್ಯೆ ಮಾಡುತ್ತಾಳೆ. ಹಾಗಾಗಿ, ಆಕೆ ಕೊಲೆಗಾರ್ತಿ ಸ್ಥಾನದಲ್ಲಿ ನಿಲ್ಲುತ್ತಾಳೆ. ಈ ಪ್ರಕರಣದಲ್ಲಿ ಆಕೆಯ ತಪ್ಪು ಖಂಡಿತಾ ಇಲ್ಲ ಎಂದು ವಾದ ಮಾಡುತ್ತಾನೆ ಕಥಾನಾಯಕ! ಅಂತಿಮವಾಗಿ ಆಕೆಯನ್ನು ನಿರಪರಾಧಿ ಎಂದು ಅವನು ಹೇಗೆ ಸಮರ್ಥಿಸಿಕೊಳ್ಳುತ್ತಾನೆ ಎಂಬುದು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಇದನ್ನೂ ಓದಿ
Agnyathavasi Review: ಕೊಲೆಯ ಮಧ್ಯೆ ‘ಅಜ್ಞಾತದ’ ಕಥೆ; ಬಗೆದಷ್ಟು ವಿಶೇಷತೆ
ನಾಗಭೂಷಣ-ಧನಂಜಯ್ ನಟನೆಯ ‘ವಿದ್ಯಾಪತಿ’ ಚಿತ್ರದ ವಿಮರ್ಶೆ
Manada Kadalu Review: ಮತ್ತದೇ ಶೈಲಿಯಲ್ಲಿ ಮೂಡಿಬಂದ ಯೋಗರಾಜ್ ಭಟ್ ಸಿನಿಮಾ
Movie Review: ನಿಧಿ ಹುಡುಕುವವರಿಗೆ ಹಾಸ್ಯದ ಜೊತೆ ಶ್ರೀಕೃಷ್ಣನ ನೀತಿ ಪಾಠ

ಅತ್ಯಾಚಾರ ಪ್ರಕರಣಗಳಲ್ಲಿ ಎಷ್ಟೋ  ಹೆಣ್ಮಕ್ಕಳಿಗೆ ನ್ಯಾಯ ಸಿಕ್ಕಿಲ್ಲ. ಇನ್ನೂ ಕೆಲವರಿಗೆ ನ್ಯಾಯ ಸಿಗುವುದು ತುಂಬ ತಡವಾಗಿದೆ. ಅಂಥವರ ಮನಸ್ಥಿತಿ ಯಾವ ರೀತಿ ಇರುತ್ತದೆ ಎಂಬುದನ್ನು ‘ಯುದ್ಧಕಾಂಡ’ ಸಿನಿಮಾ ಮೂಲಕ ತೋರಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಾಯಿ ಪಾತ್ರದಲ್ಲಿ ಅರ್ಚನಾ ಜೋಯಿಸ್ ಅವರು ಚೆನ್ನಾಗಿ ನಟಿಸಿದ್ದಾರೆ. ಆ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಕೋರ್ಟ್​ ಒಳಗೆ ಪ್ರಕಾಶ್ ಬೆಳವಾಡಿ ಮತ್ತು ಅಜಯ್ ರಾವ್ ಅವರ ಮುಖಾಮುಖಿ ದೃಶ್ಯಗಳು ಉತ್ತಮವಾಗಿ ಮೂಡಿಬಂದಿವೆ.

ಈಗತಾನೇ ಕಾಲೇಜು ಮುಗಿಸಿ ಲಾಯರ್ ಆಗಿರುವ ವ್ಯಕ್ತಿಗೆ ಹೈಪ್ರೊಫೈಲ್ ಕೇಸ್ ಸಿಕ್ಕರೆ ಅದನ್ನು ನಿಭಾಯಿಸುವುದು ಸುಲಭವಲ್ಲ. ಆದರೂ ಕೂಡ ಕಥಾನಾಯಕ ಅದನ್ನು ಒಂದು ಸವಾಲಾಗಿ ಸ್ವೀಕರಿಸುತ್ತಾನೆ. ಅದು ಪ್ರೇಕ್ಷಕರಿಗೂ ಒಂದು ಥ್ರಿಲ್ಲಿಂಗ್ ಅನುಭವ ನೀಡುತ್ತದೆ. ಈಗಾಗಲೇ ಹಲವಾರು ಕೋರ್ಟ್ ರೂಮ್ ಡ್ರಾಮಾ ಸಿನಿಮಾಗಳನ್ನು ನೋಡಿದ ಪ್ರೇಕ್ಷಕರಿಗೆ ‘ಯುದ್ಧಕಾಂಡ’ ಸ್ವಲ್ಪ ಸಪ್ಪೆ ಎನಿಸಬಹುದು. ಆದರೂ ಕೂಡ ಒಮ್ಮೆ ನೋಡಿಸಿಕೊಂಡು ಹೋಗುವ ಗುಣ ಈ ಸಿನಿಮಾಗೆ ಇದೆ.

ಸಿನಿಮಾದ ಆರಂಭದಲ್ಲಿ ತುಸು ಕಾಮಿಡಿ ಬೆರೆಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಅಲ್ಲದೇ, ಪ್ರೀತಿ ಪ್ರೇಮದ ಸಿಂಚನ ಕೂಡ ಆಗುತ್ತದೆ. ಆದರೆ ಈ ಯಾವ ಅಂಶಗಳು ಕೂಡ ಈ ಕಥೆಗೆ ಮುಖ್ಯವಾಗುವುದಿಲ್ಲ. ಅವೆಲ್ಲರೂ ಇದ್ದೂ ಇಲ್ಲದಂತಿವೆ. ಪ್ರೇಕ್ಷಕರ ಗಮನ ಇರುವುದು ಕೋರ್ಟ್ ಕೇಸ್ ಏನಾಗುತ್ತದೆ ಎಂಬುದರ ಕಡೆಗೆ ಮಾತ್ರ. ಅಜಯ್ ರಾವ್ ಅವರು ನಟನಾಗಿ, ನಿರ್ಮಾಪಕನಾಗಿ ಈ ಸಿನಿಮಾ ಮೂಲಕ ಬೇರೊಂದು ಪ್ರಯತ್ನ ಮಾಡಿದ್ದಾರೆ. ಮನರಂಜನೆಗಿಂತಲೂ ಹೆಚ್ಚಾಗಿ, ಒಂದು ಗಂಭೀರ ವಿಷಯವನ್ನು ಪ್ರೇಕ್ಷಕರಿಗೆ ತಿಳಿಸಲು ಅವರು ಈ ಸಿನಿಮಾ ಮಾಡಿದ್ದಾರೆ.

ಇದನ್ನೂ ಓದಿ: ‘ಯುದ್ಧಕಾಂಡ’ ವೇದಿಕೆಯಲ್ಲಿ ಅಪ್ಪನ ತ್ಯಾಗದ ವಿಷಯ ತೆರೆದಿಟ್ಟ ರವಿಚಂದ್ರನ್

ಕೋರ್ಟ್​​ನಲ್ಲಿ ಕಣ್ಣೀರು, ಕರುಣೆಗಿಂತಲೂ ಮುಖ್ಯವಾಗಿ ಬೇಕಿರುವುದು ಸಾಕ್ಷಿಗಳು. ಆದರೆ ‘ಯುದ್ಧಕಾಂಡ’ ಸಿನಿಮಾದ ಕೊನೆಯಲ್ಲಿ ಸಾಕ್ಷಿಗಳಿಗಿಂತಲೂ ಎಮೋಷನ್ ಹೆಚ್ಚು ಕೆಲಸ ಮಾಡಿದಂತಿದೆ. ಅಂತಿಮ ಹಂತದಲ್ಲಿ ಕಥಾನಾಯಕ ಭಾವುಕವಾಗಿ ವಾದ ಮಂಡಿಸುತ್ತಾನೆ. ‘ಸಂಭವಾಮಿ ಯುಗೇ ಯುಗೇ..’ ಎನ್ನುತ್ತಾ ಕಂಬನಿ ಮಿಡಿಯುತ್ತಾನೆ. ತುಂಬಾ ಪ್ರಾಕ್ಟಿಕಲ್ ಆಗಿ ಸಿನಿಮಾ ನೋಡುವವರಿಗೆ ಇದು ಕೊಂಚ ಅಸಹಜ ಎನಿಸಬಹುದು. ಆದರೂ ತನ್ನದೇ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆಯಲು ‘ಯುದ್ಧಕಾಂಡ’ ಚಿತ್ರತಂಡ ಪ್ರಯತ್ನಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.