
ತಮಿಳು ಚಿತ್ರರಂಗದ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಭಾರಿ ಸೌಂಡು ಮಾಡುತ್ತಿದೆ. ಚೆನ್ನೈ ಮಾಧ್ಯಮಗಳಲ್ಲಿ ಅವರ ಮದುವೆಯ ತಯಾರಿಯ ಬಗ್ಗೆ ಸರಣಿ ವರದಿಗಳು ಬಿತ್ತರವಾಗುತ್ತಿವೆ. ಈ ಬೆನ್ನಲ್ಲೇ ತಮಿಳು ಚಿತ್ರರಂಗದಲ್ಲಿ ಮತ್ತೊಂದು ಕುತೂಹಲಕಾರಿ ಚರ್ಚೆ ಹುಟ್ಟಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
ಕಾಲಿವುಡ್‌ನ ಪ್ರತಿಯೊಬ್ಬ ನಟ-ನಟಿಯರಿಗೂ ಮದುವೆಯ ಆಹ್ವಾನ ಪತ್ರಿಕೆ ತಲುಪಿದೆ ಎನ್ನಲಾಗಿದೆ. ಆದರೆ ನಟ ಧನುಷ್ ಅವರಿಗೆ ಮಾತ್ರ ಆಹ್ವಾನ ನೀಡಿಲ್ಲ ಎಂಬ ವರದಿಗಳು ಹರಿದಾಡುತ್ತಿವೆ. ಈ ವಿಷಯದ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ. ಮಾಧ್ಯಮಗಳ ವರದಿಯಿಂದಾಗಿ ತಮಿಳು ಸಿನಿಮಾ ಅಭಿಮಾನಿಗಳಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಅನಿರುದ್ಧ್ ರವಿಚಂದರ್ ಅವರಿಗೆ ಸೂಪರ್‌ಸ್ಟಾರ್ ರಜನಿಕಾಂತ್ ಕುಟುಂಬದ ಜೊತೆ ಅತ್ಯಂತ ನಿಕಟ ಸಂಬಂಧವಿದೆ. ಅವರು ಸಂಬಂಧಿಗಳೂ ಹೌದು. ರಜನಿಕಾಂತ್ ಕುಟುಂಬದ ಅನುಕೂಲಕ್ಕೆ ತಕ್ಕಂತೆ ಮದುವೆ ಸಮಾರಂಭ ನಡೆಯಲಿದೆ ಎಂಬ ವದಂತಿಗಳಿವೆ. ಮದುವೆಯ ನಿಜವಾದ ವಿವರಗಳು ಮತ್ತು ಅತಿಥಿಗಳ ಪಟ್ಟಿ ಇನ್ನು ಅಧಿಕೃತವಾಗಿ ಹೊರಬಿದ್ದಿಲ್ಲ. ಎಲ್ಲವೂ ರಹಸ್ಯವಾಗಿಯೇ ಉಳಿದಿದೆ.
ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರನ್ನು ಧನುಷ್ ಹಿಂದೆ ಮದುವೆಯಾಗಿದ್ದರು. 2022ರಲ್ಲಿ ಈ ಜೋಡಿ ಬೇರ್ಪಡುವುದಾಗಿ ಘೋಷಿಸಿ, ಬಳಿಕ ವಿಚ್ಛೇದನ ಪಡೆದುಕೊಂಡಿತ್ತು. ಈ ಹಳೆಯ ಸಂಬಂಧದಿಂದಾಗಿ ಧನುಷ್ ಮದುವೆಗೆ ಬರುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಆದರೆ ಅನೇಕ ಅಭಿಮಾನಿಗಳು ಈ ವದಂತಿಗಳನ್ನು ನಂಬಲು ತಯಾರಿಲ್ಲ.
ಇದನ್ನೂ ಓದಿ: ‘ನೀನು ನನ್ನ ಪಾಲಿಗೆ ಸತ್ತು ಹೋಗಿದ್ದೀಯಾ’; ಧನುಷ್‌ಗೆ ನೇರವಾಗಿ ಹೇಳಿದ ಸೌಂದರ್ಯಾ
ಧನುಷ್ ಖಂಡಿತವಾಗಿಯೂ ಮದುವೆಗೆ ಬಂದೇ ಬರುತ್ತಾರೆ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಂದು ವೇಳೆ ಧನುಷ್ ಮದುವೆಗೆ ಬಂದರೆ ಸೋಶಿಯಲ್ ಮೀಡಿಯಾ ಖಾತೆ ಡಿಲೀಟ್ ಮಾಡುವುದಾಗಿಯೂ ಸವಾಲು ಹಾಕಿದ್ದಾರೆ. ಅನಿರುದ್ಧ್ ಮತ್ತು ಧನುಷ್ ಸಿನಿಮಾರಂಗದಲ್ಲಿ ಸೂಪರ್ ಹಿಟ್ ಜೋಡಿಯಾಗಿದ್ದು, ಸತ್ಯಾಸತ್ಯತೆ ತಿಳಿಯಲು ಅಧಿಕೃತ ಮಾಹಿತಿ ಬರುವವರೆಗೆ ಕಾಯಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.